ಏ.15ರಿಂದ ಸರಕಾರಿ ನೌಕರರ ವರ್ಗಾವಣೆ

Contributed byKENCHE GOWDA|Vijaya Karnataka

ರಾಜ್ಯ ಸರಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಏಪ್ರಿಲ್ 15 ರಿಂದ ಆರಂಭವಾಗಲಿದೆ. ಮೇ 31 ರವರೆಗೆ ನಡೆಯುವ ಈ ಪ್ರಕ್ರಿಯೆಯಲ್ಲಿ ಶೇ.6 ರಷ್ಟು ನೌಕರರ ವರ್ಗಾವಣೆಗೆ ಅವಕಾಶವಿದೆ. 'ಎ' ಮತ್ತು 'ಬಿ' ದರ್ಜೆ ಅಧಿಕಾರಿಗಳ ವರ್ಗಾವಣೆ ಅಧಿಕಾರ ಇಲಾಖಾ ಸಚಿವರಿಗೆ ನೀಡಲಾಗಿದೆ. ಪತಿ-ಪತ್ನಿ ಪ್ರಕರಣ, ಗಂಭೀರ ಕಾಯಿಲೆ, ನಿವೃತ್ತಿ ಅಂಚಿನಲ್ಲಿರುವವರಿಗೆ ವಿಶೇಷ ವಿನಾಯಿತಿ ನೀಡಲಾಗಿದೆ.

transfer process of government employees starts from april 15

-ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿ : ಗರಿಷ್ಠ ಶೇ.6ರಷ್ಟು ನೌಕರರ ಅದಲು-ಬದಲಿಗೆ ಅನುಮೋದನೆ

-ಇಲಾಖಾ ಸಚಿವರಿಗೆ ಎ, ಬಿ ದರ್ಜೆ ಅಧಿಕಾರಿಗಳ ಟ್ರಾನ್ಸ್ ಫರ್ ಅಧಿಕಾರ; ಮೇ 31ರವರೆಗೆ ಗಡುವು

-ಪತಿ-ಪತ್ನಿ ಪ್ರಕರಣ, ಗಂಭೀರ ಕಾಯಿಲೆ , ನಿವೃತ್ತಿ ಅಂಚಿನಲ್ಲಿರುವವರಿಗೆ ವಿಶೇಷ ವಿನಾಯಿತಿ

ವಿಕ ಸುದ್ದಿಲೋಕ ಬೆಂಗಳೂರು

ರಾಜ್ಯ ಸರಕಾರಿ ನೌಕರರ 2026 -27ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಗಳನ್ನು ಸರಕಾರ ಸೋಮವಾರ ಹೊರಡಿಸಿದ್ದು, ಎಲ್ಲವರ್ಗದ ಹುದ್ದೆಗಳಿಗೆ ಅನ್ವಯವಾಗುವಂತೆ ಆಯಾ ವೃಂದಗಳ ಕಾರ್ಯನಿರತ ಬಲದ ಗರಿಷ್ಠ ಶೇ.6ಕ್ಕೆ ಮೀರದಂತೆ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಏ.15 ಬುಧವಾರದಿಂದ ಮೇ 31ರವರೆಗೆ ಒಂದೂವರೆ ತಿಂಗಳ ಕಾಲ ಸಾರ್ವತ್ರಿಕ ವರ್ಗಾವಣೆ ಕಾಲಾವಧಿ ನಿಗದಿಯಾಗಿದೆ.

‘ಎ’ ಮತ್ತು ‘ಬಿ’ ವೃಂದದ ಅಧಿಕಾರಿಗಳು ಒಂದೇ ಸ್ಥಳದಲ್ಲಿ2 ವರ್ಷ, ‘ಸಿ’ ವರ್ಗದ ಹುದ್ದೆಗಳಲ್ಲಿ4 ವರ್ಷ ಹಾಗೂ ‘ಡಿ’ ಗುಂಪಿನಲ್ಲಿ7 ವರ್ಷಗಳ ಸೇವಾವಧಿ ಪೂರ್ಣಗೊಳಿಸಿದ ನೌಕರರನ್ನು ವರ್ಗಾವಣೆ ಮಾಡಬಹುದಾಗಿದೆ.

ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಕಾರವನ್ನು ಆಯಾ ಇಲಾಖಾ ಸಚಿವರಿಗೆ ನೀಡಲಾಗಿದೆ. ಗ್ರೂಪ್ ‘ಸಿ’ ಮತ್ತು ‘ಡಿ’ ವೃಂದದ ನೌಕರರ ವರ್ಗಾವಣೆ ಅಧಿಕಾರವನ್ನು ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ನೀಡಲಾಗಿದೆ.

ಆಡಳಿತಾತ್ಮಕ ದಕ್ಷತೆ ಮತ್ತು ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವರ್ಗಾವಣೆ ಮಾರ್ಗಸೂಚಿ ಹೊರಡಿಸಿದ್ದು, ಸಾರ್ವಜನಿಕ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಸಕ್ಷಮ ಪ್ರಾಧಿಕಾರಗಳು ಪಾರದರ್ಶಕವಾಗಿ ವರ್ಗಾವಣೆ ಪ್ರಕ್ರಿಯೆ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ವಿಧಾನಸಭೆ ಉಪ ಚುನಾವಣೆ ಕರ್ತವ್ಯದಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಚುನಾವಣೆ ಪ್ರಕ್ರಿಯೆ ಮುಗಿಯುವ ವರೆಗೆ ವರ್ಗಾವಣೆ ಮಾಡದಂತೆ ಸ್ಪಷ್ಟಪಡಿಸಲಾಗಿದೆ.

ಪ್ರಮುಖ ಸೂಚನೆ

* ವರ್ಗಾವಣೆಯಾದ ನೌಕರರು ಸ್ಥಳ ನಿಯುಕ್ತಿಗಾಗಿ ಕಾಯುವಂತೆ ಮಾಡಿ ಆರ್ಥಿಕ ಹೊರೆಗೆ ಕಾರಣವಾಗಬಾರದು. ಕಡ್ಡಾಯವಾಗಿ ಸ್ಥಳ ನಿಯುಕ್ತಿ ಮಾಡುವುದು.

* ಇಲಾಖಾ ವಿಚಾರಣೆ, ಕ್ರಿಮಿನಲ್ ಮೊಕದ್ದಮೆ ಬಾಕಿ ಹಾಗೂ ಗಂಭೀರ ಸ್ವರೂಪದ ಆರೋಪ ಎದುರಿಸುತ್ತಿರುವ ನೌಕರರನ್ನು ನಾನ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ನೇಮಿಸಬೇಕು. ಅವರು ಬಯಸಿದ ಹುದ್ದೆಗೆ ಸ್ಥಳ ನಿಯುಕ್ತಿ ಮಾಡಬಾರದು.

* ವರ್ಗಾವಣೆಗೊಂಡ ನೌಕರರು ಆಸ್ಪತ್ರೆಯಲ್ಲಿಒಳರೋಗೀಯಾಗಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿರಜೆ ಮಂಜೂರು ಬಗ್ಗೆ ಸಕ್ಷಮ ಪ್ರಾಧಿಕಾರ ದಾಖಲೆಗಳನ್ನು ಪರಿಶೀಲಿಸಿ ನಿರ್ಣಯಿಸಬೇಕು.

* ಸಚಿವಾಲಯದ ‘ಎ’, ‘ಬಿ’ ಮತ್ತು ‘ಸಿ’ ವರ್ಗದ ಅಧಿಕಾರಿ, ನೌಕರರು ಒಂದು ಇಲಾಖೆಯಲ್ಲಿನಿರ್ವಹಿಸಿದ ಸೇವಾವಧಿಯನ್ನು ಗರಿಷ್ಠ 5 ವರ್ಷಗಳಿಗೆ ಪರಿಗಣಿಸಬೇಕು.

* ಕಲ್ಯಾಣ ಕರ್ನಾಟಕ ಭಾಗದ ಕಚೇರಿಗಳಿಗೆ ನೇಮಕ ಹೊಂದಿದವರನ್ನು ಕನಿಷ್ಠ 10 ವರ್ಷಗಳ ವರೆಗೆ ಈ ಪ್ರದೇಶದಿಂದ ಹೊರಗೆ ವರ್ಗಾವಣೆ ಮಾಡಬಾರದು.

ವಿಶೇಷ ಪ್ರಕರಣ, ವಿನಾಯಿತಿ

* ಒಂದು ಸ್ಥಳದಲ್ಲಿಕನಿಷ್ಠ ಅವಧಿ ಪೂರ್ಣಗೊಳಿಸಿ ವರ್ಗಾವಣೆಗೆ ಅರ್ಹರಾಗಿರುವ ಸರಕಾರಿ ನೌಕರ ನಿವೃತ್ತಿಗೆ 2 ವರ್ಷಕ್ಕಿಂತ ಕಡಿಮೆ ಸೇವಾವಧಿ ಹೊಂದಿದ್ದರೆ ವಿನಾಯಿತಿ.

* ಪತಿ-ಪತ್ನಿ ಪ್ರಕರಣಗಳಲ್ಲಿಒಬ್ಬರು ವರ್ಗಾವಣೆಯಾದಲ್ಲಿ ಮತ್ತೊಬ್ಬರು ಕನಿಷ್ಠ ಸೇವಾವಧಿ ಪೂರೈಸದಿದ್ದರೂ ಖಾಲಿ ಹುದ್ದೆ ಲಭ್ಯತೆ ಆಧರಿಸಿ ಅದೇ ಸ್ಥಳ ಅಥವಾ ಹತ್ತಿರದ ಸ್ಥಳಕ್ಕೆ ವರ್ಗಾಯಿಸಬಹುದು.

* ವಿಶೇಷ ತಾಂತ್ರಿಕ ವಿದ್ಯಾರ್ಹತೆ ಮತ್ತು ಅನುಭವ ಹೊಂದಿದ್ದು, ಆ ಹುದ್ದೆಗೆ ನೇಮಕಕ್ಕೆ ಬದಲಿ ನೌಕರ ಲಭ್ಯವಿಲ್ಲದಿದ್ದಲ್ಲಿವರ್ಗಾವಣೆಯಿಂದ ವಿನಾಯಿತಿ.

* ನೌಕರರ ಪತಿ, ಪತ್ನಿ ಅಥವಾ ಅವಲಂಬಿತ ಮಕ್ಕಳು ಗಂಭೀರ ಕಾಯಿಲೆಗೆ ತುತ್ತಾಗಿದ್ದು, ಚಿಕಿತ್ಸೆ ಲಭ್ಯವಿರುವ ಸ್ಥಳಕ್ಕೆ ವೈದ್ಯ ಮಂಡಳಿ ಪ್ರಮಾಣಪತ್ರ ಸಲ್ಲಿಸಿದರೆ ಪರಿಗಣಿಸಬಹುದು.

* ಅವಿವಾಹಿತೆ, ವಿಧವೆ, ವಿಚ್ಛೇದಿತ ಮಹಿಳಾ ನೌಕರರಿಗೆ ಹುದ್ದೆಯ ಲಭ್ಯತೆ ಆಧರಿಸಿ ಆಕೆ ಕೋರಿದ ಸ್ಥಳಕ್ಕೆ ವರ್ಗಾಯಿಸಬಹುದು.

* ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗೆ ಅವಧಿ ಮುಗಿಯುವ ವರೆಗೆ ವರ್ಗಾವಣೆಯಿಂದ ವಿನಾಯಿತಿ.

* ವಿಶೇಷ ಚೇತನರ ವರ್ಗಾವಣೆ ಅವಶ್ಯಕವಾಗಿದ್ದಲ್ಲಿಸಾಧ್ಯವಾದಷ್ಟು ಹತ್ತಿರದ ಸ್ಥಳಕ್ಕೆ ಸ್ಥಳ ನಿಯುಕ್ತಿ ಮಾಡಬೇಕು.

* ನೌಕರರ ಪತಿ/ಪತ್ನಿ, ಅವಲಂಬಿತರು ತೀವ್ರತರದ ಅಂಗವಿಕಲತೆ ಹೊಂದಿದ್ದಲ್ಲಿನಿಯತಕಾಲಿಕ ವರ್ಗಾವಣೆಯಿಂದ ವಿನಾಯಿತಿ ನೀಡಬಹುದು.