ವೇಗನ್ ಎನ್ನುವುದು ಕೇವಲ ಆಹಾರ ಪದ್ಧತಿಯಲ್ಲ, ಅದು ಪ್ರಾಣಿಜನ್ಯ ಉತ್ಪನ್ನಗಳನ್ನು ಸಂಪೂರ್ಣವಾಗಿ ತ್ಯಜಿಸುವ ಒಂದು ಜೀವನಶೈಲಿ. ಸಾಮಾನ್ಯವಾಗಿ ಸಸ್ಯಾಹಾರಿಗಳು ಮಾಂಸಾಹಾರ, ಮೊಟ್ಟೆ ತ್ಯಜಿಸುತ್ತಾರೆ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ವೇಗನ್ ಆಹಾರ ಪದ್ಧತಿಯಲ್ಲಿಮಾಂಸಾಹಾರ, ಮೊಟ್ಟೆ ಮಾತ್ರವಲ್ಲದೆ ಹಾಲು, ಮೊಸರು, ತುಪ್ಪ ಮತ್ತು ಜೇನುತುಪ್ಪವನ್ನೂ ಸಹ ಬಳಸುವುದಿಲ್ಲ. ಸಂಪೂರ್ಣವಾಗಿ ಧಾನ್ಯಗಳು, ಬೇಳೆ ಕಾಳು, ಹಣ್ಣುಗಳು ಮತ್ತು ತರಕಾರಿ ಬಳಸಲಾಗುತ್ತದೆ. ವೇಗನ್ ಆಹಾರ ಪದ್ಧತಿಯು ಆಧುನಿಕವಾದುದು. ಬ್ರಿಟನ್ ನ ಡೊನಾಲ್ಡ… ವ್ಯಾಟ್ಸನ್ ಎಂಬುವವರು 1944ರಲ್ಲಿಮೊದಲ ಬಾರಿ ‘ವೇಗನ್ ’ ಎನ್ನುವ ಪದವನ್ನು ಪರಿಚಯಿಸಿದರು. ಪ್ರಾಣಿಗಳ ಮೇಲಿನ ದೌರ್ಜನ್ಯವನ್ನು ತಡೆಯಲು ಮತ್ತು ಅವುಗಳ ಉತ್ಪನ್ನಗಳಿಂದ ಮುಕ್ತವಾದ ಬದುಕನ್ನು ಸಾಗಿಸಲು ಅವರು ‘ವೇಗನ್ ಸೊಸೈಟಿ’ಯನ್ನು ಸ್ಥಾಪಿಸಿದರು. ಅಂದಿನಿಂದ ಜಾಗತಿಕವಾಗಿ ಈ ಚಳವಳಿ ಬೆಳೆಯುತ್ತಿದೆ. ವೇಗನ್ ಆಹಾರದಲ್ಲಿನಾರಿನಂಶ ಮತ್ತು ಆಂಟಿ-ಆಕ್ಸಿಡೆಂಟ್ ಗಳು ಸಮೃದ್ಧವಾಗಿರುತ್ತವೆ. ಇದು ರಕ್ತದೊತ್ತಡ, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ ಎಂದು ಪರಿಣತರು ಅಭಿಪ್ರಾಯಪಡುತ್ತಾರೆ. ಆಹಾರಕ್ಕಾಗಿ ಅಥವಾ ಹಾಲಿನ ಉತ್ಪನ್ನಗಳಿಗಾಗಿ ಪ್ರಾಣಿಗಳನ್ನು ಶೋಷಿಸಬಾರದು ಎನ್ನುವುದು ವೇಗನ್ ಆಹಾರ ಪದ್ಧತಿಯ ಧ್ಯೇಯವಾಗಿದೆ.

