ಎತ್ತಿನಹೊಳೆ ಏನು? ಎತ್ತ? | ನಿಮ್ಮೆಲ್ಲಾಸಲಹೆ-ಸಂದೇಹಗಳಿಗೆ ನೇರ ಉತ್ತರ | ಮುರಳೀಧರ ಹಾಲಪ್ಪ ನೇತೃತ್ವದಲ್ಲಿ‘ಜಲಧ್ವನಿ’ಯ ಮತ್ತೊಂದು ಸುತ್ತಿನ ಅಭಿಯಾನ
ವಿಕ ಸುದ್ದಿಲೋಕ ತುಮಕೂರು
ಕೇಂದ್ರ ಸರಕಾರ ಎತ್ತಿನಹೊಳೆ ಯೋಜನೆಗೆ ಅಡ್ಡಿಯುಂಟು ಮಾಡುತ್ತಿದೆ ಎಂದು ‘ಎತ್ತಿನಹೊಳೆ ಯೋಜನೆ ಉಳಿಸಿ’ ಅಭಿಯಾನ ನಡೆಸಿ ಯಶಸ್ವಿಯಾಗಿದ್ದ ಸ್ವಾಭಿಮಾನಿ ಎತ್ತಿನಹೊಳೆ ಹೋರಾಟಗಾರರು ಇದೀಗ ಎತ್ತಿನಹೊಳೆ ವಿಚಾರದಲ್ಲಿಎರಡನೇ ಸುತ್ತಿನ ‘ಜಲಧ್ವನಿ’ ಅಭಿಯಾನಕ್ಕೆ ಸಿದ್ಧರಾಗಿದ್ದಾರೆ. ಏಪ್ರಿಲ್ 18ರಂದು ‘ಅನ್ನದಾತರ ನಡೆ ಹೇಮಾವತಿ ಯೋಜನಾ ಕಚೇರಿ ಕಡೆ’ ಸಾಗಲಿದೆ. ಈ ಅಭಿಯಾನ ವಿಶೇಷವಾಗಿ ಜನತೆಗೆ ಎತ್ತಿನಹೊಳೆ ಏನು? ಎತ್ತ? ಎಂಬುದನ್ನು ತಿಳಿಸಿ ಕೊಡುವ ವಿನೂತನ ಪರಿಕಲ್ಪನೆ.
ಹೌದು ; ಕೆಪಿಸಿಸಿ ಉಪಾಧ್ಯಕ್ಷ, ಕೌಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ನೇತೃತ್ವದಲ್ಲಿಎತ್ತಿನಹೊಳೆ ಜಲಧ್ವನಿಯ ಮುಂದುವರಿದ ಭಾಗವಾಗಿ ‘ಅನ್ನದಾತರ ನಡೆ ಹೇಮಾವತಿ ಯೋಜನಾ ಕಚೇರಿ ಕಡೆ’ಗೆ ಸಿದ್ಧತೆ ನಡೆದಿದೆ. ‘ನಮ್ಮ ಕನಸು-ನಮ್ಮ ತುಮಕೂರು’ ಹೆಸರಲ್ಲಿಅಭಿಯಾನ ನಡೆಯುತ್ತಿದೆ.
ಸಲಹೆ-ಸಂದೇಹಗಳಿಗೆ ಉತ್ತರ: ಎತ್ತಿನಹೊಳೆ ಯೋಜನೆ ಕುರಿತ ಚರ್ಚೆ, ಆತಂಕ ಮತ್ತು ನಿರೀಕ್ಷೆಗಳ ಸುತ್ತ ಹೆಣೆದ ಭಾವನಾತ್ಮಕ ಹೋರಾಟವಾಗಿ ಈ ಅಭಿಯಾನ ರೂಪುಗೊಂಡಿದೆ. ನೀರಿಗಾಗಿ ದಶಕಗಳಿಂದ ಕಾಯುತ್ತಿರುವ ಜನರ ಬದುಕಿನ ನಿಜ ಚಿತ್ರಣವೇ ಈ ಕಾರ್ಯಕ್ರಮದ ಹೃದಯವಾಗಿದೆ.
ಎತ್ತಿನಹೊಳೆ ಯೋಜನೆ ಕುರಿತು ಜನರಲ್ಲಿಮೂಡಿರುವ ಪ್ರಶ್ನೆಗಳು ಕೇವಲ ತಾಂತ್ರಿಕವಲ್ಲ, ಬದುಕಿನ ಅವಶ್ಯಕತೆಯ ಪ್ರಶ್ನೆಗಳಾಗಿವೆ. ಜಿಲ್ಲೆಗೆ ಊಟ-ಜೀವನ ನೀಡುವ ನೀರು ಯಾವಾಗ ಬರುತ್ತದೆ? ಯೋಜನೆಯಿಂದ ನಿಜವಾಗಿಯೂ ರೈತರಿಗೆ ಲಾಭವಾಗುತ್ತದೆಯೇ? ಹಣ ವ್ಯಯವಾಗುತ್ತಿರುವ ಪ್ರಮಾಣಕ್ಕೆ ತಕ್ಕ ಫಲಿತಾಂಶ ದೊರೆಯುತ್ತದೆಯೇ? ಎಂಬ ಸಂಶಯಗಳು ಗ್ರಾಮೀಣ ಪ್ರದೇಶಗಳಲ್ಲಿಕೇಳಿಬರುತ್ತಿವೆ. ನೀರಿನ ಅಭಾವದಿಂದ ಕೃಷಿ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ, ಈ ಯೋಜನೆ ಬಗ್ಗೆ ಜನರ ನಿರೀಕ್ಷೆ ಅತೀವ ಗಾಢವಾಗಿದೆ. ಇವೆಲ್ಲದರ ಬಗ್ಗೆ ರೈತರು ಸಂಬಂಧಿಸಿದ ಅಧಿಕಾರಿಗಳ ಜತೆ ಮುಕ್ತವಾಗಿ ಮಾತನಾಡಿ ಮಾಹಿತಿ ಪಡೆಯಲು ‘ಸ್ವಾಭಿಮಾನಿ ಎತ್ತಿನಹೊಳೆ ಹೋರಾಟ’ ವೇದಿಕೆ ಕಲ್ಪಿಸುತ್ತಿದೆ.
ಬಾಕ್ಸ್
4 ಅಂಶಗಳ ಮುಕ್ತ ಚರ್ಚೆ :
ಏಪ್ರಿಲ್ 18ರಂದು ಬೆಳಗ್ಗೆ 11 ಗಂಟೆಗೆ ರೈತರು, ಸಾರ್ವಜನಿಕರು ಸ್ವಾಭಿಮಾನಿ ಎತ್ತಿನಹೊಳೆ ಹೋರಾಟ ತಂಡದ ಜತೆ ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ ಹೇಮಾವತಿ ಯೋಜನಾ ಕಚೇರಿಗೆ ಹೆಜ್ಜೆ ಹಾಕಲಿದ್ದಾರೆ. ಅಲ್ಲಿಸಲಹೆ, ಸಂದೇಹಗಳಿಗೆ ಅಧಿಕಾರಿಗಳಿಂದ ಉತ್ತರ ಪಡೆಯಬಹುದು. ಅಭಿಯಾನದ ಈ ಭಾಗದಲ್ಲಿಪ್ರಮುಖವಾಗಿ 4 ಅಂಶಗಳ ಚರ್ಚೆ ನಡೆಯಲಿದೆ.
* ಜಿಲ್ಲೆಯ ಒಟ್ಟು ಕೆರೆಗಳಿಗೆ ನೀರು ಹರಿಯಲಿದೆ?
* ಎಷ್ಟು ಜನರಿಗೆ ಕುಡಿಯುವ ನೀರು ಪೂರೈಕೆ ಆಗಲಿದೆ?
* ಪ್ರತಿ ಊರಿಗೆ ಎಷ್ಟು ದಿವಸದಲ್ಲಿನೀರು ತಲುಪಲಿದೆ?
* ಭೂ ಸ್ವಾಧೀನದ ಪರಿಹಾರದ ಬಗ್ಗೆ ಚರ್ಚೆ
ಕೋಟ್ :
ಎತ್ತಿನಹೊಳೆ ಯೋಜನೆ ಪ್ರಯೋಜನದ ಬಗ್ಗೆ ನೇರವಾಗಿ ರೈತರು ತಿಳಿಯಲು, ನೀರು ಯಾವಾಗ ಜಿಲ್ಲೆಗೆ ಹರಿಯಲಿದೆ ಎಂಬ ಖಚಿತ ಮಾಹಿತಿ ಪಡೆಯಲು, ಭೂಸ್ವಾಧೀನ ಪರಿಹಾರ ಸೇರಿದಂತೆ ಎತ್ತಿನಹೊಳೆ ಯೋಜನೆ ಬಗ್ಗೆ ಏ.18ರಂದು ಹೇಮಾವತಿ ಯೋಜನಾ ಕಚೇರಿಗೆ ತೆರಳಿ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು. ರೈತರು, ಸಾರ್ವಜನಿಕರು ಯೋಜನೆ ಬಗ್ಗೆ ನೇರವಾಗಿ ಅಧಿಕಾರಿಗಳಿಂದ ಉತ್ತರ ಪಡೆಯುವ ಅವಕಾಶ ಈ ಅಭಿಯಾನದ್ದು.
- ಮುರಳೀಧರ ಹಾಲಪ್ಪ, ಸಂಚಾಲಕ, ಸ್ವಾಭಿಮಾನಿ ಎತ್ತಿನಹೊಳೆ ಹೋರಾಟ
ಫೋಟೋ
16ಟಿಯುಎಂ1 : ಎಐ ಚಿತ್ರ
16ಟಿಯುಎಂ2 : ಮುರಳೀಧರ ಹಾಲಪ್ಪ, ಸಂಚಾಲಕ, ಸ್ವಾಭಿಮಾನಿ ಎತ್ತಿನಹೊಳೆ ಹೋರಾಟ

