ಸ್ಮಶಾನ ಜಾಗ ಒತ್ತುವರಿ ತೆರವಿಗೆ ಆಗ್ರಹ
((ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ))
ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರದ ನಗರದ ವೀರಭದ್ರನಪಾಳ್ಯದ ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳ ಸ್ಮಶಾನ ಜಾಗ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒತ್ತುವರಿ ಜಾಗ ತೆರವುಗೊಳಿಸಬೇಕೆಂದು ಆಗ್ರಹಿಸಿ ತಾಲೂಕು ಕೆಮ್ಮಣ್ಣುಗುಂಡಿ ಸ್ಮಶಾನ ಭೂಮಿ ಹಿತರಕ್ಷಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು, ವೀರಭದ್ರನಪಾಳ್ಯ ಗ್ರಾಮದ ಸರ್ವೆ ನಂ.51ರಲ್ಲಿನ ಸ್ಮಶಾನ ಜಾಗವನ್ನು ಹಲವಾರು ವರ್ಷಗಳಿಂದ ಪರಿಶಿಷ್ಟ ಹಾಗೂ ಹಿಂದುಳಿದ ವರ್ಗಗಳು ತಮ್ಮ ಕುಟುಂಬದ ಜನರು ಮರಣ ಹೊಂದಿದಾಗ ಅಂತ್ಯಕ್ರಿಯೆಗಾಗಿ ಬಳಕೆ ಮಾಡುತ್ತಿದ್ದಾರೆ. ನಗರದ ದಕ್ಷಿಣ ಹಾಗೂ ಪಶ್ಚಿಮ ಭಾಗದ ಬಡ ಕುಟುಂಬದ ಜನರ ಅಂತ್ಯಕ್ರಿಯೆಗೆ ಇದೊಂದೇ ಸ್ಮಶಾನವಿದೆ. ಇತ್ತೀಚಿಗೆ ಕೆಲ ಭೂಗಳ್ಳರು ಜಮೀನನ್ನು ಈ ಹಿಂದೆಯೇ ನಮಗೆ ಭೂ ಮಂಜೂರಾತಿ ಆಗಿದೆಯೆಂದು ಇಲ್ಲಿರುವ ಸಮಾಧಿಗಳನ್ನು ನೆಲಸಮ ಗೊಳಿಸಿದ್ದು, ಸ್ಮಶಾನದ ರಸ್ತೆಯನ್ನು ಮುಚ್ಚಿ ಕಾಂಪೌಂಡ್ ನಿರ್ಮಿಸಿದ್ದಾರೆ. ಈ ವಿಷಯವಾಗಿ ಹಲವಾರು ಜನಾಂಗಗಳ ಪ್ರಮುಖರು ಪೂರ್ವಿಕರ ಸಮಾಧಿಗಳನ್ನು ನೆಲಸಮಗೊಳಿಸಿರುವ ಬಗ್ಗೆ ಆತಂಕಗೊಂಡು ಕಾಂಪೌಂಡ್ ನಿರ್ಮಿಸುತ್ತಿರುವವರನ್ನು ವಿಚಾರಿಸಿದಾಗ, ಈ ಜಮೀನು ಈ ಹಿಂದೆಯೇ ಮಂಜೂರಾತಿಯಾಗಿ ಪೋಡಿಯಾಗಿದೆ. ಇದರಲ್ಲಿನಿಮಗೆ ಯಾವುದೇ ಹಕ್ಕಿಲ್ಲಎನ್ನುತ್ತಿದ್ದಾರೆ. ಆದರೆ, ಈ ಜಾಗದಲ್ಲಿಪೋಡಿಯಾಗಿ ವ್ಯವಸಾಯ ಮಾಡಿರುವ ಯಾವುದೇ ಪುರಾವೆ ಇಲ್ಲ. ಎಂದರು.
ಪೋಡಿ ದುರಸ್ತಿ ರದ್ದುಪಡಿಸಿ:
ಒಂದು ವೇಳೆ ಭೂ ಮಂಜೂರಾತಿ ಆಗಿದ್ದರೂ, ಮಂಜೂರಾತಿ ನಿಯಮಾವಳಿಗಳ ಪ್ರಕಾರ ಈ ಜಾಗ ಸಕ್ರಮಕ್ಕೆ ಅರ್ಹವಲ್ಲ. ಈ ಪ್ರದೇಶ ಹಳ್ಳ ಕೊಳ್ಳದಿಂದ ಕೂಡಿದ್ದು, ವ್ಯವಸಾಯಕ್ಕೆ ಯೋಗ್ಯವಲ್ಲ. ಈ ಎಲ್ಲಾವಿಚಾರಗಳನ್ನು ಮಾರೆಮಾಚಿ ಭೂ ಮಂಜೂರಾತಿ ಸಮಿತಿಯ ಗಮನಕ್ಕೆ ಬಾರದಂತೆ ಈ ಕಾರ್ಯವಾಗಿದೆಯೆಂಬ ಸಂಶಯ ವ್ಯಕ್ತವಾಗುತ್ತಿದೆ. ಆದ್ದರಿಂದ, ಭೂಮಂಜೂರಾತಿ ಆಗಿದ್ದರೂ, ಅದನ್ನು ರದ್ದುಪಡಿಸಿ ಕ್ರಮವಹಿಸಬೇಕಿದೆ. ಸಾರ್ವಜನಿಕ ಸ್ಮಶಾನಕ್ಕಾಗಿ ಈ ಜಮೀನನ್ನು ಕಾಯ್ದಿರಿಸಬೇಕು. ಈ ಸ್ಮಶಾನವನ್ನು ಹೊರೆತುಪಡಿಸಿ ಇಲ್ಲಿನ ಬಡಜನರಿಗೆ ಅಂತ್ಯಕ್ರಿಯೆ ಮಾಡಲು ಬೇರೆಯಾವುದೇ ಕಾಯ್ದಿರಿಸಿದ ಜಾಗವಿಲ್ಲ. ಸ್ಮಶಾನ ಜಾಗದಲ್ಲಿಅಕ್ರಮವಾಗಿ ಭೂಮಂಜೂರಾತಿಯಾಗಿರುವುದನ್ನು ಮತ್ತು ಪೋಡಿ ದುರಸ್ತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ದೊಡ್ಡಬಳ್ಳಾಪುರ ತಾಲೂಕು ರಾಜ್ ಕುಮಾರ್ ಸಂಘ ಅಧ್ಯಕ್ಷ ಸು. ನರಸಿಂಹ ಮೂರ್ತಿ, ಮುಖಂಡರಾದ ಮೋಹನ್ , ಕೃಷ್ಣಪ್ಪ, ವಿ. ಪರಮೇಶ್ , ಡಿ.ಪಿ.ಆಂಜನೇಯ, ಎನ್ .ರವಿ, ಮಂಜು, ರಂಗಸ್ವಾಮಿ, ಅರುಣ್ ಕುಮಾರ್ , ಗಂಗಮ್ಮ , ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದ ಸಹ ಕಾರ್ಯದರ್ಶಿ ಮಹಲಾಕ್ಷ್ಮೀ ಹಳಗುಂಡಗಿ, ಕನ್ನಡ ಪಕ್ಷ ಅಧ್ಯಕ್ಷ ವೆಂಕಟೇಶ್ , ಜಿಲ್ಲಾಯುವ ಕುರಬರ ಸಂಘ ಪ್ರದಾನ ಕಾರ್ಯದರ್ಶಿ ಎನ್ . ರವಿ ಇದ್ದರು.
ಫೋಟೊ:1604ವಿಕೆ5: ದೊಡ್ಡಬಳ್ಳಾಪುರ ತಾಲೂಕು ಕಚೇರಿ ಬಳಿ ಸ್ಮಶಾನ ಜಾಗ ಒತ್ತುವರಿ ತೆರವುಗೊಳಿಸುವಂತೆ ಒತ್ತಯಿಸಿ ತಾಲೂಕು ಕೆಮ್ಮಣ್ಣುಗುಂಡಿ ಸ್ಮಶಾನ ಭೂಮಿ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

