ಮಕ್ಕಳ ಪ್ರತಿಭೆ ಬೆಳಕಿಗೆ ಬೇಸಿಗೆ ಶಿಬಿರ ಎರಡನೇ ವೇದಿಕೆ | ನ್ಯಾ. ನೂರುನ್ನೀಸ
ವಿಕ ಸುದ್ದಿಲೋಕ ತುಮಕೂರು
ಬೇಸಿಗೆ ಕಾಲದಲ್ಲಿಹೆಚ್ಚಿನ ಬಿಸಿಲಿರುವ ಕಾರಣ ಮಕ್ಕಳನ್ನು ಆಚೆ ಆಟವಾಡಲು ಬಿಡಲು ಸಾಧ್ಯಾವಾಗುತ್ತಿಲ್ಲ. ಇದರಿಂದ ಮಕ್ಕಳು ಮನೆಯಲ್ಲೇ ಉಳಿದು ಮೊಬೈಲ್ ನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಮಕ್ಕಳ ಕೈಯಲ್ಲಿರುವ ಮೊಬೈಲ್ ನ್ನು ಪೋಷಕರು ತೆಗೆದುಕೊಂಡರೆ ಮಕ್ಕಳಿಗೆ ಸಿಟ್ಟು, ಜಿಗುಪ್ಸೆ, ಹಠ ಮಾಡುವುದು ಕಂಡುಬರುತ್ತಿದೆ ಎಂದು ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸ ಹೇಳಿದರು.
ನಗರದ ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಪಂ, ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಬಾಲಭವನ ಸಮಿತಿ ಸಹಭಾಗಿತ್ವದಲ್ಲಿ15 ದಿನಗಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊಬೈಲ್ ಬಳಕೆ ಕಡಿಮೆ ಮಾಡಲು ಮತ್ತು ಮಕ್ಕಳನ್ನು ಚಟುವಟಿಕೆಯಿಂದ ಇರುವಂತೆ ಮಾಡಲು ಬೇಸಿಗೆ ಶಿಬಿರಗಳಿಗೆ ಕಳುಹಿಸಬೇಕು. ಇಂತಹ ಬೇಸಿಗೆ ಶಿಬಿರವನ್ನು ಜಿಲ್ಲಾಬಾಲಭವನ ವತಿಯಿಂದ ಆಯೋಜಿಸಿದ್ದು, ಈ ಬೇಸಿಗೆ ಶಿಬಿರದಲ್ಲಿಕರಾಟೆ, ಚಿತ್ರಕಲೆ, ಕರಕುಶಲತೆ, ವರ್ಲಿ ಆರ್ಟ್ , ಮುಖವಾಡ ತಯಾರಿಕೆ, ಯಕ್ಷಗಾನ ನೃತ್ಯ ಪ್ರದರ್ಶನ, ಸಮೂಹ ನೃತ್ಯ, ನಾಟಕ ಈ ರೀತಿಯ ವಿವಿಧ ಚಟುವಟಿಕೆಗಳನ್ನು ಒಳಗೊಂಡಿರುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು.
ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಬೇಸಿಗೆ ಶಿಬಿರ ಎರಡನೇ ವೇದಿಕೆಯಾಗಿದೆ. ಈ ಬೇಸಿಗೆ ಶಿಬಿರದಲ್ಲಿಬೆಳಗ್ಗೆ-10 ಗಂಟೆಯಿಂದ ಸಂಜೆ 4ರ ವರೆಗೆ ಚಟುವಟಿಕೆಗಳು ಇರುವುದರಿಂದ ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಲು ಇದೊಂದು ಸುವರ್ಣ ಅವಕಾಶವೆಂದು ಹೇಳಬಹುದು. ಸರಕಾರಿ ನೌಕರಿಯಲ್ಲಿರುವ ಪೋಷಕರಿಗೆ ಮಕ್ಕಳ ರಜೆ ಒಂದು ಸಜೆಯಾಗಿರುತ್ತದೆ. ಆದರೆ ಅವರುಗಳಿಗೆ ಇಂತಹ ಬೇಸಿಗೆ ಶಿಬಿರಗಳು ತುಂಬಾ ಅನುಕೂಲಕರವಾಗಿದೆ. ಹಿಂದೆ ಅವಿಭಕ್ತ ಕುಟುಂಬಗಳು ಜಾಸ್ತಿ ಇದ್ದು, ಮಕ್ಕಳನ್ನು ಅಜ್ಜಿ-ತಾತ, ಚಿಕ್ಕಪ್ಪ-ಚಿಕ್ಕಮ್ಮ ಹೀಗೆ ಊರುಗಳಿಗೆ ಕಳುಹಿಸಲಾಗುತ್ತಿತ್ತು. ಆದರೆ ಈಗ ವಿಭಕ್ತ ಕುಟುಂಬಗಳು ಜಾಸ್ತಿಯಾಗಿರುವ ನಿಟ್ಟಿನಲ್ಲಿಇಂತಹ ಬೇಸಿಗೆ ಶಿಬಿರಗಳು ಮಕ್ಕಳಿಗೆ ಸೂಕ್ತವಾಗಿವೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉನಿರ್ದೇಶಕ ಡಾ. ಎಸ್ . ಸಿದ್ದರಾಮಣ್ಣ ಮಾತನಾಡಿ, ಬೇಸಿಗೆ ರಜೆಯಲ್ಲಿಮಕ್ಕಳು ಆದಷ್ಟು ಖುಷಿಯಾಗಿ, ಆಡುತ್ತಾ, ಕುಣಿಯುತ್ತಾ, ನೆಗೆಯುತ್ತಾ ಕಾಲ ಕಳೆಯಬೇಕು. ಮಕ್ಕಳನ್ನು ಬೇಸಿಗೆ ರಜೆಯಲ್ಲಿಊರುಗಳಿಗೆ ಕಳುಹಿಸುವುದು ಮತ್ತು ಹಳ್ಳಿ ಸೊಗಡು ಆಟಗಳನ್ನು ಆಡುವುದು ಇತ್ತೀಚಿಗೆ ದಿನಗಳಲ್ಲಿಕಣ್ಮರೆಯಾಗುತ್ತಿದೆ. ನಗರ ಪ್ರದೇಶಗಳಲ್ಲಿಮಕ್ಕಳನ್ನು ಆಡವಾಡಲು ಆಚೆ ಕಳುಹಿಸಲು ಪೋಷಕರು ತುಂಬಾ ಭಯಪಡುವಂತಹ ಪರಿಸ್ಥಿತಿ ಎದುರಾಗಿದೆ. ಈಗ ಜಿಲ್ಲಾಬಾಲಭವನದಲ್ಲಿನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ5ರಿಂದ 16 ವರ್ಷದೊಳಗಿನ ಮಕ್ಕಳಿಗೆ ಅನೇಕ ರೀತಿಯ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ದಿನೇೕಶ್ ಆರ್ .ಎಂ., ತರಬೇತುದಾರರಾದ ಪ್ರಕಾಶ್ , ಸೌಮ್ಯ, ಚೇತನ್ , ಕಾಂತರಾಜು, ಕೌತಮಾರನಹಳ್ಳಿ, ಮಮತ ಪಿ., ಶಿಲ್ಪ ಜಿ.ಎಸ್ . ಹಾಜರಿದ್ದರು.
ಫೋಟೋ 15ಕೆಜಿಎಚ್ 9: ತುಮಕೂರು ನಗರದ ರಾಜ್ಯ ಬಾಲಭವನ ಸೊಸೈಟಿಯಲ್ಲಿಆಯೋಜಿಸಿದ್ದ 15 ದಿನಗಳ ಬೇಸಿಗೆ ಶಿಬಿರಕ್ಕೆ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸ ಚಾಲನೆ ನೀಡಿದರು.

