ರಾಷ್ಟ್ರೀಯ ನಾಗರಿಕ ಸೇವಾ ದಿನ
ದೇಶದ ಅಭಿವೃದ್ಧಿಯ ಬೆನ್ನೆಲುಬಾಗಿರುವ ನಾಗರಿಕ ಸೇವಕರ ಶ್ರಮವನ್ನು ಗೌರವಿಸುವ ಸಲುವಾಗಿ ಏಪ್ರಿಲ್ 21ನ್ನು ದೇಶದಾದ್ಯಂತ ‘ರಾಷ್ಟ್ರೀಯ ನಾಗರಿಕ ಸೇವಾ ದಿನ’ವನ್ನಾಗಿ ಆಚರಿಸಲಾಗುತ್ತದೆ. 1947ರ ಏಪ್ರಿಲ… 21ರಂದು ಸ್ವತಂತ್ರ ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನಾಗರಿಕ ಸೇವಕರನ್ನು ‘ಭಾರತದ ಉಕ್ಕಿನ ಚೌಕಟ್ಟು’ ಎಂದು ಬಣ್ಣಿಸಿದ್ದರು. ಆ ಐತಿಹಾಸಿಕ ದಿನದ ನೆನಪಿಗಾಗಿ ಪ್ರತಿ ವರ್ಷ ಈ ದಿನವನ್ನು ರಾಷ್ಟ್ರೀಯ ನಾಗರಿಕ ಸೇವಾ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರಸಕ್ತ ವರ್ಷದ ಆಚರಣೆಯು 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ‘ವಿಕಸಿತ ಭಾರತ’ ಸಂಕಲ್ಪಕ್ಕೆ ಹೆಚ್ಚಿನ ಒತ್ತು ನೀಡಲಿದೆ.
ಮಹತ್ವ ಮತ್ತು ದೂರದೃಷ್ಟಿ:
ದೂರದ ಹಳ್ಳಿಗಳಿಂದ ಮೆಟ್ರೊ ನಗರಗಳವರೆಗೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿಹಾಗೂ ರಾಷ್ಟ್ರೀಯ ಬಿಕ್ಕಟ್ಟುಗಳ ಸಂದರ್ಭದಲ್ಲಿಮುಂಚೂಣಿಯಲ್ಲಿನಿಂತು ಕೆಲಸ ಮಾಡುವ ನಾಗರಿಕ ಸೇವಾ ಅಧಿಕಾರಿಗಳ ಸೇವೆ ಅನನ್ಯವಾದುದು. ನಾಗರಿಕ ಸೇವಕರು ಕೇವಲ ಸರಕಾರದ ಆದೇಶಗಳನ್ನು ಪಾಲಿಸುವ ಅಧಿಕಾರಿಗಳಷ್ಟೇ ಆಗಿರದೇ, ಅವರು ದೇಶದ ಆಡಳಿತ ಯಂತ್ರದ ಜೀವನಾಡಿ ಹಾಗೂ ಅಭಿವೃದ್ಧಿಯ ಹರಿಕಾರರೆನಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಚುನಾಯಿತ ಪ್ರತಿನಿಧಿಗಳು ನೀತಿಗಳನ್ನು ರೂಪಿಸಿದರೆ, ಅವುಗಳನ್ನು ಕಾರ್ಯರೂಪಕ್ಕೆ ತಂದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಜವಾಬ್ದಾರಿ ನಾಗರಿಕ ಸೇವಾ ಅಧಿಕಾರಿಗಳ ಮೇಲಿರುತ್ತದೆ. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಮತ್ತು ಸಾಮಾಜಿಕ ನ್ಯಾಯದಂತಹ ಪ್ರಮುಖ ಕ್ಷೇತ್ರಗಳಲ್ಲಿಸರಕಾರದ ಯೋಜನೆಗಳು ಯಶಸ್ವಿಯಾಗುವುದು ಈ ಅಧಿಕಾರಿಗಳ ದಕ್ಷತೆ ಮತ್ತು ಪ್ರಾಮಾಣಿಕತೆಯ ಮೇಲೆ ಅವಲಂಬಿತವಾಗಿದೆ. ಅವರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ‘ರಾಷ್ಟ್ರೀಯ ನಾಗರಿಕ ಸೇವಾ ದಿನ’ವನ್ನು ಆಚರಿಸಲಾಗುತ್ತಿದೆ.
‘ಜನಸೇವೆಯೇ ಜನಾರ್ದನ ಸೇವೆ’ ಎಂಬ ತತ್ತ್ವದಡಿ, ರಾಜಕೀಯ ತಟಸ್ಥತೆಯನ್ನು ಕಾಯ್ದುಕೊಂಡು ರಾಷ್ಟ್ರದ ಹಿತದೃಷ್ಟಿಯಿಂದ ಕೆಲಸ ಮಾಡುವ ಪ್ರತಿಜ್ಞೆಯನ್ನು ಈ ದಿನದಂದು ಪುನರುಚ್ಚರಿಸಲಾಗುತ್ತದೆ. ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತವನ್ನು ನೀಡುವ ಮೂಲಕ ಸಾಮಾನ್ಯ ಜನರಲ್ಲಿಸರಕಾರದ ಮೇಲೆ ವಿಶ್ವಾಸ ಮೂಡಿಸುವುದು ಈ ದಿನದ ಆಚರಣೆಯ ಪ್ರಮುಖ ಆಶಯವಾಗಿದೆ. 2047ರ ಹೊತ್ತಿಗೆ ‘ವಿಕಸಿತ ಭಾರತ’ವನ್ನು ನಿರ್ಮಿಸುವ ಕನಸನ್ನು ನನಸು ಮಾಡಲು ನಾಗರಿಕ ಸೇವಕರು ಶಿಸ್ತುಬದ್ಧವಾದ ಮತ್ತು ದೂರದೃಷ್ಟಿಯುಳ್ಳ ನಾಯಕತ್ವವನ್ನು ಪ್ರದರ್ಶಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
ಬಾಕ್ಸ್ :
2026ರ ಧ್ಯೇಯವಾಕ್ಯ: ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿ
ಈ ಬಾರಿಯ ಆಚರಣೆಯು ‘ವಿಕಸಿತ ಭಾರತ: ನಾಗರಿಕ ಕೇಂದ್ರಿತ ಆಡಳಿತ ಮತ್ತು ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿ’ ಎಂಬ ವಿಷಯದ ಅಡಿಯಲ್ಲಿನಡೆಯುತ್ತಿದೆ. ಸರಕಾರದ ಯೋಜನೆಗಳು ಕೇವಲ ನಗರಗಳಿಗೆ ಸೀಮಿತವಾಗದೆ, ಹಳ್ಳಿಯ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬುದು ಈ ದಿನದ ಪ್ರಮುಖ ಆಶಯವಾಗಿದೆ.

