ಕೆರೆ ಒತ್ತುವರಿ ತೆರವುಗೊಳಿಸಿ, ನೀರು ಮಲಿನ ತಪ್ಪಿಸಿ

Contributed bymadhugirinews@gmail.com|Vijaya Karnataka

ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌ ಅವರು ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಗುರುತಿಸಲಾದ ಒತ್ತುವರಿಗಳ ನಿಖರ ವಿವರಗಳನ್ನು ಮುಂದಿನ ಸಭೆಗೆ ಸಲ್ಲಿಸಬೇಕು. ಕೆರೆಗಳಿಗೆ ರಾಸಾಯನಿಕ ತ್ಯಾಜ್ಯ ಮತ್ತು ಮಲಿನ ನೀರು ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಮಾನಿಕೆರೆಗೆ ಕಲುಷಿತ ನೀರು ಸೇರುತ್ತಿರುವುದಕ್ಕೆ ಮಹಾನಗರ ಪಾಲಿಕೆಗೆ ತಕ್ಷಣ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ. ರೈತರು ಹೊಲಗಳಿಗೆ ಮಣ್ಣು ಸಾಗಾಣಿಕೆ ಮಾಡಲು ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಪೂರ್ವಾನುಮತಿ ಕಡ್ಡಾಯವಾಗಿದೆ.

lake encroachment clearance work begins in tumakuru

ಕೆರೆ ಒತ್ತುವರಿ ತೆರವುಗೊಳಿಸಿ, ನೀರು ಮಲಿನ ತಪ್ಪಿಸಿ

ಜಿಲ್ಲಾಮಟ್ಟದ ಅಪೆಕ್ಸ್ ಸಮಿತಿ ಸಭೆಯಲ್ಲಿಡಿಸಿ ಶುಭಾ ಕಲ್ಯಾಣ್ ಸೂಚನೆ

ವಿಕ ಸುದ್ದಿಲೋಕ ತುಮಕೂರು

ಕೆರೆಗಳ ಒತ್ತುವರಿ ತೆರವು ಕಾರ್ಯವನ್ನು ತ್ವರಿತಗೊಳಿಸುವುದರ ಜತೆಗೆ, ಗುರುತಿಸಲಾದ ಒತ್ತುವರಿ ಪ್ರದೇಶಗಳ ನಿಖರ ವಿವರಗಳನ್ನು ಮುಂದಿನ ಸಭೆಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿಅಪೆಕ್ಸ್ ಸಮಿತಿ ಜಿಲ್ಲಾಧ್ಯಕ್ಷರ ಅಧ್ಯಕ್ಷತೆಯಲ್ಲಿನಡೆದ ಜಿಲ್ಲಾಮಟ್ಟದ ಅಪೆಕ್ಸ್ ಸಮಿತಿ ಸಭೆಯಲ್ಲಿಮಾತನಾಡಿದ ಅವರು, ಜಿಲ್ಲೆಯ ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯ ಒಟ್ಟು 2,047 ಕೆರೆಗಳ ಸ್ಥಿತಿಗತಿಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗಿದೆ ಎಂದರು.

ಕೆರೆಗಳ ಸರ್ವೆ ಪ್ರಗತಿ, ಸರ್ವೆ ಬಾಕಿ ಇರುವ ಕೆರೆಗಳ ವಿವರ, ಒತ್ತುವರಿ ಪ್ರದೇಶಗಳ ಗುರುತಿಸುವಿಕೆ, ಈಗಾಗಲೇ ತೆರವುಗೊಳಿಸಿರುವ ಹಾಗೂ ಇನ್ನೂ ತೆರವುಗೊಳಿಸಬೇಕಿರುವ ಒತ್ತುವರಿಗಳ ಕುರಿತು ಇಲಾಖಾವಾರು ಮಾಹಿತಿ ಪಡೆದುಕೊಳ್ಳಲಾಯಿತು. ಈಗಾಗಲೇ ಗುರುತಿಸಲಾದ ಕೆರೆಗಳನ್ನು ರಕ್ಷಣಾತ್ಮಕ ಕ್ರಮಗಳ ಮೂಲಕ ಇಲಾಖೆಗಳು ಸಂಪೂರ್ಣ ವಶಕ್ಕೆ ಪಡೆದು ಸಂರಕ್ಷಿಸಬೇಕು ಎಂದರು.

ಕೆರೆಗಳಿಗೆ ರಾಸಾಯನಿಕ ತ್ಯಾಜ್ಯ, ಮಲಿನ ನೀರು ಹಾಗೂ ಇತರೆ ಮಾಲಿನ್ಯಕಾರಿ ಅಂಶಗಳು ಸೇರುವುದನ್ನು ಕಟ್ಟುನಿಟ್ಟಾಗಿ ತಡೆಯುವಂತೆ ಸೂಚಿಸಲಾಯಿತು. ತುಮಕೂರು ಅಮಾನಿಕೆರೆಗೆ ಕಲುಷಿತ ನೀರು ಸೇರುತ್ತಿರುವುದು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿಮಹಾನಗರ ಪಾಲಿಕೆಗೆ ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಲು ಸೂಚನೆ ನೀಡಿದರು.

ಕುಡಿಯುವ ನೀರಿನ ಮೂಲಗಳ ಸಂರಕ್ಷಣೆ ಹಾಗೂ ನೀರಿನ ಗುಣಮಟ್ಟ ಕಾಪಾಡುವ ವಿಚಾರದಲ್ಲಿಆಯಾ ಇಲಾಖೆ, ಪ್ರಾಧಿಕಾರಗಳು ನಿಯಮಾನುಸಾರ ಕ್ರಮಕೈಗೊಳ್ಳಬೇಕು. ರೈತರು ಹೊಲಗಳಿಗೆ ಮಣ್ಣು ಸಾಗಾಣಿಕೆ ಮಾಡುವ ಸಂಬಂಧ ಪ್ರಸ್ತುತ ಜಾರಿಯಲ್ಲಿರುವ ನಿಯಮಾನುಸಾರ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದರು.

ಸಭೆಯಲ್ಲಿಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್ , ಅಪರ ಜಿಲ್ಲಾಧಿಕಾರಿ ಡಾ. ಎನ್ .ತಿಪ್ಪೇಸ್ವಾಮಿ, ಹೇಮಾವತಿ, ಎತ್ತಿನಹೊಳೆ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತಿತರೆ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

28ಕೆಜಿಎಚ್ 18: ತುಮಕೂರು ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿಅಪೆಕ್ಸ್ ಸಮಿತಿ ಜಿಲ್ಲಾಧ್ಯಕ್ಷರ ಅಧ್ಯಕ್ಷತೆಯಲ್ಲಿನಡೆದ ಜಿಲ್ಲಾಮಟ್ಟದ ಅಪೆಕ್ಸ್ ಸಮಿತಿ ಸಭೆ.