‘ಟಾಕ್ಸಿಕ್ ’ ಮುಂದಕ್ಕೆ, ಇಂಡಸ್ಟ್ರಿ ಅದರ ಹಿಂದಕ್ಕೆ
----
ಇಂಟ್ರೋ
ದೇಶವೇ ಎದುರು ನೋಡುತ್ತಿರುವ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್ ’ ರಿಲೀಸ್ ಮತ್ತೆ ಮುಂದಕ್ಕೆ ಹೋಗಿದೆ. ಜೂನ್ 4ರಂದು ಟಾಕ್ಸಿಕ್ ತೆರೆಗೆ ಬರುತ್ತಿಲ್ಲ. ಈ ನಿರ್ಧಾರ ಸ್ಯಾಂಡಲ…ವುಡ್ ಸೇರಿದಂತೆ ಕೆಲವು ಚಿತ್ರರಂಗಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ.
---
ಕಿರಣ್ ಚಂದ್ರ
ನಟ ಯಶ್ ಈಚೆಗಷ್ಟೇ ನಡೆದ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಸಮ್ಮೇಳನ ಸಿನಿಮಾಕಾನ್ ನಲ್ಲಿ‘ರಾಮಾಯಣ’ ಸಿನಿಮಾದ ಪ್ರಚಾರದ ಜತೆಗೆ ‘ಟಾಕ್ಸಿಕ್ ’ ಸಿನಿಮಾದ ಬಗೆಗೆ ಒಂಭತ್ತು ನಿಮಿಷದ ವಿಡಿಯೋ ಪ್ರದರ್ಶನ ಮಾಡಿದ್ದರು. ಈ ಸಮಯದಲ್ಲಿಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಹಾಗೂ ನಿರೀಕ್ಷೆಗೂ ಮೀರಿ ಬಿಝಿನೆಸ್ ಆಗುವ ಮುನ್ಸೂಚನೆ ಸಿಕ್ಕ ಕಾರಣ, ಸಿನಿಮಾವನ್ನು ಜಾಗತಿಕವಾಗಿ ರಿಲೀಸ್ ಮಾಡಲು ದೊಡ್ಡ ಪ್ಲಾನಿಂಗ್ ನ ಅವಶ್ಯಕತೆ ಇದ್ದು, ಸದ್ಯಕ್ಕೆ ಇರುವ ಸಮಯದಲ್ಲಿಅದು ಸಾದ್ಯವಾಗದ ಕಾರಣ ಬಿಡುಗಡೆ ಮುಂದಕ್ಕೆ ಹೋಗಲಿದೆ ಎಂದಿದೆ ಚಿತ್ರತಂಡ.
ಸ್ಯಾಂಡಲ್ ವುಡ್ ಗೆ ಲಾಸ್
‘ಟಾಕ್ಸಿಕ್ ’ ಸಿನಿಮಾ ಪದೇ ಪದೆ ಮುಂದಕ್ಕೆ ಹೋಗುವುದರಿಂದ ಅಭಿಮಾನಿಗಳಿಗೆ ಬೇಸರವಾಗಬಹುದು. ಆದರೆ, ಅಭಿಮಾನಿಗಳ ಬೇಸರ, ಸಿನಿಮಾ ಟೀಮ್ ಗಾಗುವ ಲಾಭ-ನಷ್ಟಗಳ ಮಾತಿಗಿಂತಲೂ ಮುಖ್ಯವಾಗಿ ಚಿತ್ರರಂಗಕ್ಕೆ ನಷ್ಟವಾಗುತ್ತಿದೆ. ಈ ಹಿಂದೆ ಮಾರ್ಚ್ನಲ್ಲಿ‘ಟಾಕ್ಸಿಕ್ ’ ಸಿನಿಮಾ ಬರುವುದೆಂದು ಒಂದಷ್ಟು ಸಿನಿಮಾಗಳು ಬಿಡುಗಡೆ ಮುಂದಕ್ಕೆ ಹಾಕಿಕೊಂಡವು. ಈ ಸಿನಿಮಾ ಬಾರದ ಕಾರಣ ಒಂದಿಡೀ ತಿಂಗಳು ಸಿನಿಮಾಗಳಿಲ್ಲದೆ ಥಿಯೇಟರ್ ಗಳು ಖಾಲಿ ಉಳಿದವು. ಇನ್ನು ಕೆಲವು ಸಿನಿಮಾಗಳು ಪ್ರಚಾರವಿಲ್ಲದೆ ತರಾತುರಿಯಲ್ಲಿತೆರೆಕಂಡು ಸೋತವು.
ಆ ಬಳಿಕ ಮತ್ತೆ ಟಾಕ್ಸಿಕ್ ಜೂನ್ ನಲ್ಲಿತೆರೆಗೆ ಬರುತ್ತದೆ ಎಂದಾಗ, ಅದಕ್ಕೆ ತಕ್ಕಂತೆ ಐಪಿಎಲ್ ಹಾವಳಿಯನ್ನೂ ತಪ್ಪಿಸಿಕೊಂಡು ಹಲವು ಸಿನಿಮಾಗಳು ತಮ್ಮ ರಿಲೀಸ್ ಅನ್ನು ವರ್ಷದ ದ್ವಿತಿಯಾರ್ಧದಲ್ಲಿಪ್ಲಾನ್ ಮಾಡಿಕೊಂಡಿದ್ದವು. ಈಗ ಟಾಕ್ಸಿಕ್ ಮುಂದಕ್ಕೆ ಹೋಗಿರುವುದರಿಂದ, ಜತೆಗೆ ಯಶ್ ಅವರ ಮತ್ತೊಂದು ಸಿನಿಮಾ ಅಕ್ಟೋಬರ್ ನಲ್ಲಿತೆರೆಗೆ ಬರಲು ಸಜ್ಜಾಗಿರುವುದರಿಂದ ಯಾವಾಗ ಸಿನಿಮಾ ಬಿಡುಗಡೆ ಮಾಡುವುದು ಎಂಬ ಗೊಂದಲ ಸೃಷ್ಟಿಯಾಗಿದೆ. ಇದಲ್ಲದೆ ದೊಡ್ಡ ಸಿನಿಮಾಗಳ ರಿಲೀಸನ್ನೇ ನೆಚ್ಚಿಕೊಳ್ಳುವಂಥಾ ಪರಿಸ್ಥಿತಿ ಸದ್ಯದ ಥಿಯೇಟರ್ ಗಳು, ಮಲ್ಟಿಪ್ಲೆಕ್ಸ್ ಗಳಿಗಿದ್ದು, ಹೀಗೆ ರಿಲೀಸ್ ಮುಂದಕ್ಕೆ ಹೋದರೆ ಥಿಯೇಟರ್ ಗಳನ್ನು ಮುನ್ನಡೆಸುವುದು ಕಷ್ಟವಾಗುತ್ತದೆ.
ಯಶ್ ಹೇಳುವುದೇನು?
‘ಕೆಲವು ಸಿನಿಮಾಗಳು ನಾವು ಚಿತ್ರರಂಗಕ್ಕೆ ಬಂದುದೇಕೆ, ಇಲ್ಲೇ ಸಾಧಿಸಬೇಕು ಅಂದುಕೊಂಡಿದ್ದೇಕೆ ಎಂಬುದನ್ನು ನೆನಪಿಸುತ್ತವೆ. ‘ಟಾಕ್ಸಿಕ್ ’ ಅಂತಹ ಒಂದು ಪಯಣ. ಸಿನೆಮಾಕಾನ್ ನಲ್ಲಿನಮ್ಮ ಚಿತ್ರವನ್ನು ಪ್ರದರ್ಶಿಸಿದಾಗ ಸಿಕ್ಕ ಅದ್ಭುತ ಪ್ರತಿಕ್ರಿಯೆಯಿಂದಾಗಿ ಈ ಚಿತ್ರವು ವಿಶ್ವಾದ್ಯಂತ ತನ್ನ ಪೂರ್ಣ ಸಾಮರ್ಥ್ಯದೊಂದಿಗೆ ತಲುಪಬೇಕು ಅಂದುಕೊಂಡೆವು. ‘ಟಾಕ್ಸಿಕ್ ’ ಸಿದ್ಧವಾಗಿದೆ. ಆಂತಾರಾಷ್ಟ್ರೀಯ ಮಟ್ಟದಲ್ಲಿಡಿಸ್ಟ್ರಿಬ್ಯೂಷನ್ ಹಾಗೂ ಕೊಲಾಬೊರೇಷನ್ ಕಾರ್ಯಗಳಲ್ಲಿತೊಡಗಿದ್ದೇವೆ. ಈ ಹಿನ್ನೆಲೆಯಲ್ಲಿ, ನಾವು ಚಿತ್ರದ ಬಿಡುಗಡೆಯನ್ನು ಇನ್ನಷ್ಟು ದಿನಗಳವರೆಗೆ ಮುಂದಕ್ಕೆ ಹಾಕಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ ಯಶ್ . ‘ಟಾಕ್ಸಿಕ್ ಗ್ಲೋಬಲ್ ಮಾರುಕಟ್ಟೆಗೆ ಪೂರಕವಾದ ದಿನಾಂಕದಂದು ವಿಶ್ವದಾದ್ಯಂತ ತೆರೆಕಾಣಲಿದೆ. ಭಾರತೀಯ ಚಿತ್ರರಂಗವು ಗ್ಲೋಬಲ್ ಸಿನಿಮಾ ವೇದಿಕೆಯಲ್ಲಿದೊಡ್ಡದಾಗಿ ಗುರುತಿಸಿಕೊಳ್ಳುತ್ತಿರುವ ಸಮಯದಲ್ಲಿ, ನಮ್ಮ ಸಿನಿಮಾಗಳ ಗುಣಮಟ್ಟವನ್ನು ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿ. ನಮ್ಮ ಸಿನಿಮಾ ಜಾಗತಿಕ ಮಟ್ಟದಲ್ಲಿಅಂದುಕೊಂಡ ಪ್ರಭಾವವನ್ನು ಬೀರುವಂತೆ ಮಾಡಲು ಈ ಸಮಯವನ್ನು ತೆಗೆದುಕೊಳ್ಳುತ್ತಿದ್ದೇನೆ. ಇದು ಭಾರತೀಯ ಚಿತ್ರರಂಗಕ್ಕೆ ನಾನು ನೀಡುವ ಸಣ್ಣ ಕೊಡುಗೆ’ ಎಂಬುದು ಅವರ ಹೇಳಿಕೆ.
2027ರಲ್ಲಿಟಾಕ್ಸಿಕ್ ?
‘ಟಾಕ್ಸಿಕ್ ’ ಸಿನಿಮಾ ಸ್ವಾತಂತ್ರ್ಯಪೂರ್ವದಲ್ಲಿ, ಪೋರ್ಚುಗೀಸರ ಅಧೀನದಲ್ಲಿದ್ದ ಗೋವಾದ ಹಿನ್ನೆಲೆಯಲ್ಲಿನಡೆಯುವ ಒಂದು ಗ್ಯಾಂಗ್ ಸ್ಟರ್ ಆ್ಯಕ್ಷನ್ ಸಿನಿಮಾ. ಅಪ್ಪ ಮಗನ ವಿಂಟೇಜ್ ರಿವೇಂಜ್ ಇದರ ಕಥಾವಸ್ತು. ಸಿನಿಮಾದ ಮೇಕಿಂಗ್ , ಮೆಗಾ ಸ್ಟಾರ್ ಕಾಸ್ಟ್ , ಮೊದಲಿನಿಂದಲೂ ಸಿಗುತ್ತಿರುವ ಹೈಪ್ ನಿಂದಾಗಿ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿರಿಲೀಸ್ ಮಾಡಲು ಚಿತ್ರತಂಡದ ಪ್ರಯತ್ನ ಸಾಗಿದೆ. ಸಿನಿಮಾ ಸಾಕಷ್ಟು ಬಾರಿ ಬದಲಾವಣೆ- ರಿಶೂಟ್ ಗಳನ್ನು ಕಂಡಿದ್ದು, ಅಂತಾರಾಷ್ಟ್ರೀಯ ಸಿನಿಮಾಗಳ ಕ್ವಾಲಿಟಿಗೆ ತಕ್ಕಂತೆ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡದ್ದು.
ಆದರೆ ಈ ಸಿನಿಮಾಗೆ ಸದ್ಯ ನೆಗೆಟಿವ್ ಆಗಿಯೂ ಕೆಲವು ವಿವಾದಗಳು ಸೃಷ್ಟಿಯಾಗಿವೆ. ಈ ನಡುವೆ ಈ ಸಿನಿಮಾದ ಸೋಲು ಗೆಲುವು ‘ರಾಮಾಯಣ’ ಸಿನಿಮಾದ ಮೇಲೂ ಪ್ರಭಾವ ಬೀರಬಹುದೆಂಬ ಲೆಕ್ಕಾಚಾರವೂ ಇದೆ. ಅಕ್ಟೋಬರ್ ನಲ್ಲೇ ರಾಮಾಯಣ ಬರುವ ಕಾರಣ, ಅದಕ್ಕೂ ಮೊದಲ ಎರಡು ತಿಂಗಳು ಅಥವ ನಂತರದ ಎರಡು ತಿಂಗಳು ‘ಟಾಕ್ಸಿಕ್ ’ ರಿಲೀಸ್ ಮಾಡುವುದು ಯಶ್ ಅವರಿಗೆ ನಷ್ಟ ಮಾಡಲಿದೆ. ಈ ಕಾರಣಕ್ಕೆ ಸಿನಿಮಾ 2027ರಲ್ಲಿತೆರೆಗೆ ಬರುತ್ತದಾ ಎಂಬುದು ಈಗಿರುವ ಪ್ರಶ್ನೆ.

