ಸೀಸನಲ್ ಹಣ್ಣು ಸೇವನೆಗೆ ಇರಲಿ ಮಿತಿ
---
ಇಂಟ್ರೊ: ಋುತುಮಾನದ ಹಣ್ಣುಗಳೇ ಆರೋಗ್ಯದ ರಕ್ಷಣೆಗೆ ನಿಲ್ಲುತ್ತವೆ. ಆದರೆ ಇವುಗಳ ಅವಲಂಬನೆ ಅಪಾಯ ಉಂಟುಮಾಡಬಹುದು. ಯಾರು, ಯಾವಾಗ ಯಾವೆಲ್ಲಹಣ್ಣುಗಳನ್ನು ಸೇವಿಸಬಹುದು ಎಂಬ ವಿವರ ಇಲ್ಲಿದೆ.
--
ಶುಭಾ ವಿಕಾಸ್
ನೋಟದಿಂದಲೇ ಆಕರ್ಷಿಸುವ ಮಾವು, ವಾಸನೆಯಿಂದ ಹತ್ತಿರ ಸೆಳೆಯುವ ಹಲಸು, ಬಣ್ಣದಿಂದಲೇ ಮೋಡಿ ಮಾಡುವ ಕಲ್ಲಂಗಡಿ ನಡುವೆ ಅರಳುತ್ತದೆ ಸೇವಿಸುವ ಬಯಕೆ, ಹೊಟ್ಟೆ ತುಂಬಿಸಿಕೊಳ್ಳುವ ಹಸಿವು. ಇದನ್ನೂ ಮೀರಿ ಋುತುಮಾನದ ಹಣ್ಣುಗಳ ಸೇವನೆ ಜೀವನಶೈಲಿಯ ಟ್ರೆಂಡ್ ಆಗಿ ಹೊರಹೊಮ್ಮಿದೆ. ಇದರ ಭಾಗವಾಗಿ ಬಯಕೆಗೆಂದು ಕೇವಲ ಹಣ್ಣು ತಿನ್ನುವುದಕ್ಕಿಂತ, ಅದರಿಂದ ಸಿಗುವ ನಿರ್ದಿಷ್ಟ ಲಾಭಗಳ ಮೇಲೆ ಗಮನಹರಿಸುತ್ತಿದ್ದಾರೆ. ಬೇಸಿಗೆಯಲ್ಲಿಕಲ್ಲಂಗಡಿಯಂತಹ ಹಣ್ಣುಗಳನ್ನು ಎಲೆಕ್ಟ್ರೋಲೈಟ್ಸ್ ಗಾಗಿ ಬಳಸುತ್ತಾರೆ. ನಮ್ಮ ಮಣ್ಣಿನ ಮಾವು, ಹಲಸಿನಂತಹ ಸೀಸನಲ್ ಹಣ್ಣುಗಳು ಹೈಪರ್ ಲೋಕಲ್ ಜೀವನಶೈಲಿಯ ಭಾಗ. ಇಂದು ರಾಸಾಯನಿಕಮುಕ್ತ ನೈಸರ್ಗಿಕ ಹಣ್ಣು ಮಾತ್ರ ಕೊಳ್ಳುವ ಪ್ರವೃತ್ತಿ ಬೆಳೆದಿದೆ. ಇಷ್ಟೆಲ್ಲದರ ನಡುವೆಯೂ ಯಾವ ಹಣ್ಣನ್ನು ಯಾವಾಗ, ಯಾರು ಎಷ್ಟು ಸೇವಿಸಬೇಕು ಎಂಬ ಜ್ಞಾನದ ಕೊರತೆಯಿಂದಾಗಿ ದೇಹವನ್ನು ರೋಗದಿಂದ ರಕ್ಷಿಸಬೇಕಿದ್ದ ಹಣ್ಣುಗಳೇ ಮಾರಕವಾಗಿವೆ ಎನ್ನುತ್ತಾರೆ ತಜ್ಞರು.
ಅಪಾಯ ಯಾವಾಗ?
ಬೇಸಿಗೆಯಲ್ಲಿ ಮಾವು, ಹಲಸು, ಕಲ್ಲಂಗಡಿಯಂತಹ ರುಚಿಕರ ಹಣ್ಣುಗಳ ಸೀಸನ್ ಆದರೂ ಇವುಗಳ ಅತಿಯಾದ ಸೇವನೆಯಿಂದ ಅಡ್ಡ ಪರಿಣಾಮಗಳು ಹೆಚ್ಚುತ್ತಿವೆ. ಇದರಿಂದ ಉಂಟಾಗುವ ಅಲರ್ಜಿ, ತಲೆನೋವು, ಆಸಿಡಿಟಿ, ವಾಂತಿ ಸೇರಿದಂತೆ ಇತರೇ ಜೀರ್ಣ ಸಂಬಂಧಿ ಸಮಸ್ಯೆಗಳಿಂದ ವೈದ್ಯರನ್ನು ಸಂಪರ್ಕಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ಕುಟುಂಬ ಸಮೇತ ಮರಣ ಹೊಂದಿದ ಪ್ರಕರಣವೊಂದರಲ್ಲಿಕಲ್ಲಂಗಡಿ ಅಪರಾಧಿ ಸ್ಥಾನದಲ್ಲಿನಿಂತಿತ್ತು. ಹಣ್ಣುಗಳ ಅತೀ ಸೇವನೆ ಜೀವಕ್ಕೆ ಅಪಾಯ ಉಂಟು ಮಾಡುವ ಸಾಧ್ಯತೆ ಇಲ್ಲಎನ್ನುವ ತಜ್ಞರು, ‘ಸೇವಿಸುವ ಮೊದಲು ಶುದ್ಧಗೊಳಿಸುವಿಕೆ, ಸಂಗ್ರಹಿಸುವ ರೀತಿ, ಸೇವಿಸುವ ಪ್ರಮಾಣ ಹಾಗೂ ಸಮಯದತ್ತ ವಿಶೇಷ ಗಮನ ನೀಡಬೇಕು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿದ್ದರೆ ಹೊಸ ಹಣ್ಣನ್ನು ಆಹಾರಕ್ರಮಕ್ಕೆ ಸೇರಿಸುವ ಮೊದಲು ಪೌಷ್ಟಿಕತಜ್ಞರ ಸಲಹೆ ಪಡೆಯುವುದು ಉತ್ತಮ’ ಎಂದು ಸಲಹೆ ನೀಡಿದ್ದಾರೆ.
ಬಾಕ್ಸ್
ಯಾರಿಗೆ ಎಷ್ಟು ಹಣ್ಣು?
ಆರೋಗ್ಯದ ಸ್ಥಿತಿಗೆ ಅನುಗುಣವಾಗಿ ಹಣ್ಣುಗಳ ಪ್ರಮಾಣವನ್ನು ಬದಲಾಯಿಸಿಕೊಳ್ಳುವುದು ಮುಖ್ಯ. ಸಾಮಾನ್ಯ ಜನರು ನಿತ್ಯ 300 ಗ್ರಾಂ ಸೇವಿಸಬಹುದು. ಮಧುಮೇಹಿಗಳಿಗೆ 100ಗ್ರಾಂ ಸಾಕು. ಅದೂ ದೇಹದ ಸಕ್ಕರೆ ಮಟ್ಟ 200 ಒಳಗೆ ಇದ್ದರೆ ಮಾತ್ರ. ಕಿಡ್ನಿ ಸಮಸ್ಯೆ ಇರುವವರಿಗೆ ಸೀರಮ್ ಪೊಟ್ಯಾಷಿಯಂ ಸಾಮಾನ್ಯ ಮಟ್ಟದಲ್ಲಿದ್ದರೆ ವೈದ್ಯರ ಸಲಹೆಯಂತೆ ಕೆಲ ಹಣ್ಣುಗಳನ್ನು ಮಿತವಾಗಿ ಸೇವಿಸಬಹುದು. ಅದೇ ರೀತಿ ಹಣ್ಣಿನ ಸೇವನೆಯ ಸಮಯ ಮುಖ್ಯ. ರಾತ್ರಿಗಿಂತ ಮಧ್ಯಾಹ್ನ 11.30ರ ಸಮಯ ಸೂಕ್ತ. ಖಾಲಿ ಹೊಟ್ಟೆಯಲ್ಲಿಬೇಡ. ಇತರೇ ಆಹಾರಗಳ ಜೊತೆ ಸೇರಿಸಿ ಸೇವಿಸಬೇಡಿ. ಜ್ಯೂಸ್ ರೂಪದ ಸೇವನೆ ಬೇಡ. ಹಣ್ಣುಗಳ ಸ್ಮೂದಿ ಮಾಡುವುದಿದ್ದರೆ ಒಣಹಣ್ಣು, ಬೀಜಗಳನ್ನು ಸೇರಿಸಿ. ಸಕ್ಕರೆ ಬದಲು ಖರ್ಜೂರ ಬಳಸಿ ಎನ್ನುತ್ತಾರೆ ಪೌಷ್ಟಿಕ ಆಹಾರ ತಜ್ಞೆ ಶೈಲಶ್ರೀ.
///////////////
ಋುತುಸಜ್ಜಿತ ಆಹಾರ ಕ್ರಮ ವ್ಯವಸ್ಥಿತವಾಗಿರಲಿ
ಡಾ. ಗಂಗಾಧರ ವರ್ಮ ಬಿ.ಆರ್
ಯಾವ ಸಮಯದಲ್ಲಿಯಾವುದು ಪ್ರಕೃತಿಯಲ್ಲಿಸಹಜವಾಗಿ ಬೆಳೆಯುತ್ತದೆಯೋ, ಅದನ್ನೇ ಆ ಸಮಯದಲ್ಲಿಸೇವಿಸುವುದೇ ಋುತುಸಜ್ಜಿತ ಆಹಾರ. ಆದರೆ ಇಲ್ಲಿಒಂದು ಸೂಕ್ಷ್ಮ ಸತ್ಯವಿದೆ. ಸರಿಯಾದ ಆಹಾರವೂ ಅತಿಯಾದರೆ ದೇಹಕ್ಕೆ ಭಾರವಾಗುತ್ತದೆ. ಹೆಚ್ಚು ತಿಂದರೆ ಹೆಚ್ಚು ಲಾಭ ಎಂಬ ತಪ್ಪು ಕಲ್ಪನೆಯಿಂದ ಋುತುಸಜ್ಜಿತ ಆಹಾರವನ್ನು ಅತಿಯಾಗಿ ಸೇವಿಸಿದರೆ ಇದು ಆರೋಗ್ಯದ ಬದಲು ಅಸಮತೋಲನಕ್ಕೆ ಕಾರಣವಾಗುತ್ತದೆ. ಬೇಸಿಗೆಯಲ್ಲಿಕಲ್ಲಂಗಡಿ, ಕರಬೂಜ, ಮಾವು ಈ ಋುತುವಿನ ಹವಾಮಾನಕ್ಕೆ ಅನುಗುಣವಾಗಿ ದೇಹದ ಅಗತ್ಯ ಪೂರೈಸುತ್ತವೆ. ಆದರೆ ಅವುಗಳ ಅತೀ ಸೇವನೆ ಒಬ್ಬೊಬ್ಬರ ದೇಹದ ಮೇಲೂ ಒಂದೊಂದು ರೀತಿ ಪ್ರತಿಕ್ರಿಯಿಸುತ್ತದೆ.
ಬೇಸಿಗೆ ಋುತುವಿನ ಹಲವು ಹಣ್ಣುಗಳು ಸಕ್ಕರೆ ಹೊಂದಿರುವುದರಿಂದ ಅತಿಯಾಗಿ ತಿಂದರೆ ರಕ್ತದ ಗ್ಲೂಕೋಸ್ ಏರಿಕೆ, ಇನ್ಸುಲಿನ್ ಪ್ರತಿರೋಧ ಉಂಟಾಗುತ್ತದೆ. ಇವು ಕಲ್ಲಂಗಡಿ, ಮಾವಿನಲ್ಲಿಹೆಚ್ಚು. ಹೆಚ್ಚು ಕ್ಯಾಲೊರಿ ಸೇರ್ಪಡೆಯಾಗಿ ದೇಹದ ತೂಕ ಹೆಚ್ಚಬಹುದು. ಹೆಚ್ಚು ಹುಳಿ ಅಥವಾ ಹೆಚ್ಚು ಸಿಹಿ ಹಣ್ಣು ಆ್ಯಸಿಡಿಟಿ, ಅಲ್ಸರ್ ಸಮಸ್ಯೆಯನ್ನು ಹೆಚ್ಚಿಸಬಹುದು. ಅತಿಯಾಗಿ ತಿನ್ನುವ ಅಭ್ಯಾಸದಿಂದ ದೇಹದ ಸ್ವಾಭಾವಿಕ ಸಂವೇದನೆಗಳೇ ಕುಂದಬಹುದು. ಆಹಾರ ನಿಯಂತ್ರಣ ಕಷ್ಟವಾಗುತ್ತದೆ. ಹೀಗಾಗಿ ಮಿತ ಪ್ರಮಾಣದಲ್ಲಿಸೇವಿಸಿ. ಒಂದೇ ಪದಾರ್ಥವನ್ನು ಹೆಚ್ಚು ಸೇವಿಸಬೇಡಿ. ಹಸಿವಿದ್ದಾಗ ಮಾತ್ರ ತಿನ್ನಿ. ಹಣ್ಣುಗಳನ್ನು ಊಟದಿಂದ ಬೇರ್ಪಡಿಸಿ ತಿನ್ನಿ. ದೇಹದ ಪ್ರತಿಕ್ರಿಯೆಯನ್ನು ಗಮನಿಸಿ.

