ಪ್ರೀತಿಯ ತುಮಕೂರು ಜಿಲ್ಲೆಯ ತಾಯಂದಿರೇ ಮತ್ತು ಹೋರಾಟದ ದಾರಿಯುದ್ದಕ್ಕೂ ನೆರಳಾಗಿ ನಿಂತ ಸಹಯಾತ್ರಿಗಳೇ...
ಇಂದಿಗೂ ನೆನಪಿದೆ-ಒಬ್ಬ ವೃದ್ಧ ರೈತ ನನ್ನ ಕೈ ಹಿಡಿದು ನಾವು ಬದುಕಿರುವಷ್ಟರಲ್ಲಿನಮ್ಮ ಕೆರೆಗೆ ನೀರು ಬರುತ್ತಾ? ಎಂದು ಕೇಳಿದ ಕ್ಷಣ. ಆ ಪ್ರಶ್ನೆ ನನ್ನ ಮನಸ್ಸಿನಲ್ಲಿಅಚ್ಚಾಗಿ ಉಳಿದಿದೆ. ಇಂದಿನ ಈ ಬೆಳವಣಿಗೆ ಅಂತ್ಯವಲ್ಲ-ಹೊಸ ಆರಂಭ. ಈ ಪತ್ರ ಬರೆಯುವಾಗ ಒಂದು ಹೊಸ ಆಶಯದ ಬೆಳಕು ಮನಸ್ಸನ್ನು ತುಂಬಿದೆ. ಕೇವಲ ಹೋರಾಟಕ್ಕಾಗಿ ಅಲ್ಲ; ಈ ಮಣ್ಣಿನ ಮಗ, ನಿಮ್ಮ ಮನೆಯ ಮಗನಾಗಿ. ಈ ನೆಲ ನಮ್ಮನ್ನು ಬೆಳೆಸಿದೆ, ನಿಮ್ಮ ನೋವು ನಮ್ಮದು, ನಿಮ್ಮ ಕಣ್ಣೀರು ನಮ್ಮ ಆತ್ಮವನ್ನು ಕಲುಕುವ ಶಕ್ತಿ ಹೊಂದಿದೆ. ಮನೆ ಮಗನಾಗಿ ನಿಮ್ಮೆಲ್ಲರ ಜತೆ ಹಕ್ಕಿಗಾಗಿ ಧ್ವನಿಯಾಗುವುದು ಜವಾಬ್ದಾರಿ ಎಂದೇ ನಂಬಿದ್ದೇನೆ.
ಕಳೆದ ಹಲವು ವರ್ಷಗಳಿಂದ ನಮ್ಮ ಬಯಲು ಸೀಮೆಯ ಬದುಕು ಎಂತಹ ಕಠಿಣ ಹಾದಿಯಲ್ಲಿಸಾಗುತ್ತಿದೆ ಎಂಬುದು ಗೊತ್ತಿದೆ. ಮಳೆಯ ನಿರೀಕ್ಷೆಯಲ್ಲಿಆಕಾಶದತ್ತ ಕಣ್ಣಿಟ್ಟು ದಿನಗಟ್ಟಲೆ ಕಾದ ರೈತರ ಮುಖಗಳು, ಬತ್ತಿದ ಬಾವಿಗಳು, ಒಣಗಿದ ಹೊಲಗಳು, ಜೀವ ಕಳೆದುಕೊಂಡಂತಿರುವ ತೆಂಗು,ಅಡಕೆಯ ತೋಟಗಳು ; ಇವು ಕೇವಲ ದೃಶ್ಯಗಳಲ್ಲ, ನಮ್ಮ ಬದುಕಿನ ಕಠೋರ ಸತ್ಯಗಳು. ಕುಡಿಯುವ ನೀರಿಗಾಗಿ ಮೈಲಿಗಟ್ಟಲೆ ನಡೆಯುವ ತಾಯಂದಿರ ಹೆಜ್ಜೆಗಳು, ಅವರ ಕಣ್ಣೀರು ;- ಈ ನೋವೇ ನಮ್ಮೊಳಗೆ ಒಂದು ಸಂಕಲ್ಪವನ್ನು ಹುಟ್ಟಿಸಿತು. ಅದಕ್ಕಾಗಿಯೇ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಗಾಗಿ ನಾವು ‘ಧಿ‘ಜಲಧ್ವನಿ’ಧಿ’ ಎಂಬ ಹೋರಾಟದ ಧ್ವನಿಯನ್ನು ಎತ್ತಿದೆವು. ಇದು ರಾಜಕೀಯದ ವಿಚಾರವಾಗಿರಲಿಲ್ಲ, ಇದು ನಮ್ಮ ಬದುಕಿನ ಪ್ರಶ್ನೆಯಾಗಿತ್ತು. ನಾವು ನಮ್ಮ ಮಣ್ಣಿನ ಹಕ್ಕಿಗಾಗಿ, ನಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಹೋರಾಡಿದ್ದೇವೆ.
ನಾನು ಪ್ರತಿ ತಾಲೂಕಿನ ಹಳ್ಳಿಗಳಲ್ಲಿನಿಮ್ಮನ್ನು ಭೇಟಿ ಮಾಡಿದಾಗ, ನಿಮ್ಮ ಕಣ್ಣಿನಲ್ಲಿಕಂಡ ಆಶಯ ಮತ್ತು ಆತಂಕ ಮನಸ್ಸಿನಲ್ಲಿಇನ್ನೂ ಜೀವಂತವಾಗಿದೆ. ನಮ್ಮ ಕೆರೆಗಳಿಗೆ ನೀರು ಯಾವಾಗ ಬರುತ್ತೆ?, ನಮ್ಮ ಭೂಮಿ ಕೊಟ್ಟಿದ್ದೇವೆ, ನಮಗೆ ನ್ಯಾಯ ಸಿಗುತ್ತಾ? ಎಂಬ ಪ್ರಶ್ನೆಗಳು ಕೇವಲ ಮಾತಲ್ಲ, ಅವು ನಿಮ್ಮ ಬದುಕಿನ ಅಳಲು. ನಿಮ್ಮ ಕೈ ಹಿಡಿದು ಕೇಳಿದ ಆ ಕಥೆಗಳು ನಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿ ಮಾಡಿವೆ.
‘ಧಿ‘ಜಲಧ್ವನಿ’ಧಿ’ಯ ಮೊದಲ ಹೆಜ್ಜೆಯಲ್ಲಿಎತ್ತಿನಹೊಳೆ ಯೋಜನೆಗೆ ಕೇಂದ್ರದ ಅಡ್ಡಿ ನಿವಾರಣೆ ಆಯಿತು. ಆ ನಂತರ ‘ಧಿ‘ನಾವು ಅನ್ನದಾತರ ನಡೆ ಹೇಮಾವತಿ ಯೋಜನಾ ಕಚೇರಿ ಕಡೆ’ಧಿ’ ಕಾರ್ಯಕ್ರಮ ರೂಪಿಸಿ, ಯೋಜನೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಅಧಿಕಾರಿಗಳ ಬಾಗಿಲಿಗೆ ಹೋಗಿ ನಾವು ಕೇಳಿದ ಹಕ್ಕೊತ್ತಾಯಗಳು, ನಮ್ಮ ಬದುಕಿಗೆ ಅತ್ಯಗತ್ಯವಾದವು-ಪ್ರತಿ ಕೆರೆಗೆ ನೀರು, ಶಾಶ್ವತ ಕುಡಿಯುವ ನೀರು ಮತ್ತು ಭೂಮಿ ಕಳೆದುಕೊಂಡವರಿಗೆ ನ್ಯಾಯ.
ಪ್ರೀತಿಯ ಸಹಯಾತ್ರಿಗಳೇ....
ನಮ್ಮ ಹೋರಾಟಕ್ಕೆ ಒಂದು ಮಹತ್ವದ ಗೆಲುವು ಸಿಕ್ಕಿರುವುದು ಗೊತ್ತೇಯಿದೆ. ಎತ್ತಿನಹೊಳೆ ಯೋಜನೆಗೆ ಅಡ್ಡಿಯಾಗಿದ್ದ ಅರಣ್ಯ ಭೂಮಿಯ ಬಳಕೆಗೆ ಅನುಮತಿ ದೊರೆತಿದೆ. ಇದು ನಿಮ್ಮೆಲ್ಲರ ಸಹನೆಯ ಗೆಲುವು, ನಿಮ್ಮ ನಂಬಿಕೆಯ ಜಯ.
ಅನುಮತಿ ಸಿಕ್ಕಿರುವುದು ಒಂದು ಹೆಜ್ಜೆ ಮಾತ್ರ. ನಮ್ಮ ಗುರಿ ನಮ್ಮ ಹಳ್ಳಿಗಳ ಕೆರೆಗಳಲ್ಲಿನೀರು ತುಂಬಿ ಹರಿಯುವ ದಿನ. ಆ ದಿನ, ನಮ್ಮ ರೈತ ನಗೆ ಬೀರುವ ದಿನ, ನಮ್ಮ ಮಕ್ಕಳ ಭವಿಷ್ಯ ಸುರಕ್ಷಿತವಾಗುವ ದಿನ.
ನಮ್ಮ ಕನಸು-ನಮ್ಮ ರೈತನು ತನ್ನ ಹೊಲದಲ್ಲಿನೆಮ್ಮದಿಯಿಂದ ಕೆಲಸ ಮಾಡಬೇಕು, ಮಳೆಗಾಗಿ ಕಾದು ಕುಳಿತುಕೊಳ್ಳುವ ದಿನಗಳು ಅಂತ್ಯವಾಗಬೇಕು. ನಿಮ್ಮ ಕಣ್ಣಿನ ಭರವಸೆ ನಮ್ಮ ಶಕ್ತಿ, ನಿಮ್ಮ ಬೆಂಬಲ ನಮ್ಮ ಹೋರಾಟದ ಇಂಧನ.
ನಾನು ನಿಮಗೆ ಒಂದು ಮಾತು ಕೊಡುತ್ತೇನೆ-ನೀರು ನಮ್ಮ ನೆಲವನ್ನು ತಲುಪುವವರೆಗೂ, ನಿಮ್ಮ ಕಣ್ಣೀರು ನಗುವಾಗಿ ಬದಲಾಗುವವರೆಗೂ, ನಿಮ್ಮ ಭವಿಷ್ಯಕ್ಕಾಗಿ ಈ ಹೋರಾಟ ಮುಂದುವರಿಯುತ್ತದೆ. ಜತೆಗಿರಿ...
ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಬೆಂಬಲ ಹೀಗೆಯೇ ಇರಲಿ. ನಾವು ಒಟ್ಟಾಗಿ ಈ ಬಯಲು ಸೀಮೆಯನ್ನು ಹಸಿರಾಗಿಸೋಣ, ಸಮೃದ್ಧಗೊಳಿಸೋಣ.
ವಂದನೆಗಳೊಂದಿಗೆ,
ನಿಮ್ಮ ಪ್ರೀತಿಯ,
ಮುರಳೀಧರ ಹಾಲಪ್ಪ
ಸಂಚಾಲಕರು,
ಸ್ವಾಭಿಮಾನಿ ಎತ್ತಿನಹೊಳೆ ಹೋರಾಟ

