ವಿದ್ಯಾರ್ಥಿ ಆತ್ಮಹತ್ಯೆ: ಮೂವರು ಕಾನ್ಸ್ ಟೆಬಲ್ ಗಳು ಸಸ್ಪೆಂಡ್

Contributed bynijaguni.dindalkoppa@timesofindia.com|Vijaya Karnataka

ಧಾರವಾಡದಲ್ಲಿ ನಡೆದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಗಾಂಜಾ ಪ್ರಕರಣದಲ್ಲಿ ಸಿಲುಕಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿದೆ. ಈ ಬಗ್ಗೆ ಡಿಸಿಪಿ ತನಿಖೆ ನಡೆಸುತ್ತಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

student suicide three constables suspended in dharwad

ವಿಕ ಸುದ್ದಿಲೋಕ ಧಾರವಾಡ

ಧಾರವಾಡ : ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ವಿದ್ಯಾಗಿರಿ ಠಾಣೆಯ ಮೂವರು ಕಾನ್ಸ್ ಟೆಬಲ್ ಗಳನ್ನು ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಎನ್ . ಶಶಿಕುಮಾರ ಅಮಾನತುಗೊಳಿಸಿದ್ದಾರೆ.

ಹೆಡ್ ಕಾನ್ಸ್ ಟೆಬಲ್ ಗಳಾದ ಕಿರಣ್ ಡೊಕ್ಕನ್ನವರ, ಚಂದ್ರು ನಡುವಿನಮನಿ, ಕಾನ್ಸ್ ಟೆಬಲ್ ಸಯ್ಯದ್ ತಹಸೀಲ್ದಾರ್ ಅಮಾನತುಗೊಂಡವರು.

ಬಿಎಸ್ಸಿ ಕಲಿಯುತ್ತಿದ್ದ ವಿದ್ಯಾರ್ಥಿ ಆದಿತ್ಯ ಮ್ಯಾಗೇರಿಯನ್ನು ಗಾಂಜಾ ಸೇವಿಸಿದ ಆರೋಪದ ಮೇಲೆ ಪೊಲೀಸರು ಏ. 25ರಂದು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ವೈದ್ಯಕೀಯ ಪರೀಕ್ಷೆ ನಡೆಸಿದಾಗ ನೆಗಟಿವ್ ರಿಪೋರ್ಟ್ ಬಂದಿತ್ತು. ಪ್ರಕರಣದಿಂದ ಕೈಬಿಡಬೇಕಾದರೆ 2 ಸಾವಿರ ರೂ.ಗೆ ಪೊಲೀಸರು ಬೇಡಿಕೆ ಇಟ್ಟಿದ್ದರು ಎಂದು ವಿದ್ಯಾರ್ಥಿಯು ಸೋಮವಾರ ಮನೆಯಲ್ಲಿನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಆರೋಪಿಸಲಾಗಿತ್ತು. ಪ್ರಕರಣ ಕುರಿತಂತೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಗೆ ಸೂಚಿಸಿದ್ದರು. ಪ್ರಾಥಮಿಕ ವರದಿ ಆಧರಿಸಿ ಈಗ ಅಮಾನತುಗೊಳಿಸಿದ್ದಾರೆ.

ಕೋಟ್ ..

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಡಿಸಿಪಿ ತನಿಖೆ ನಡೆಸುತ್ತಿದ್ದಾರೆ. ಇಲ್ಲಿಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರೆ ಅವರ ಮೇಲೂ ಕ್ರಮ ಜರುಗಿಸಲಾಗುವುದು.

- ಎನ್ . ಶಶಿಕುಮಾರ, ಹು-ಧಾ ಪೊಲೀಸ್ ಆಯುಕ್ತ

....................................

ನ್ಯಾಯ ಸಿಗುವವರೆಗೆ ಹೋರಾಟ: ಜೋಶಿ

ಹುಬ್ಬಳ್ಳಿ: ಧಾರವಾಡದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲಿಆ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,‘‘ಧಾರವಾಡಕ್ಕೆ ಓದಲು ಬಂದಿದ್ದ ಬಾಗಲಕೋಟೆ ಮೂಲದ ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ಅತ್ಯಂತ ನೋವಿನ ಸಂಗತಿ ’’ಎಂದು ತೀವ್ರ ಬೇಸರ ವ್ಯಕ್ತಪಡಿಸಿರುವ ಸಚಿವರು, ‘‘ಅಮಾಯಕ ವಿದ್ಯಾರ್ಥಿಯನ್ನು ಗಾಂಜಾ ಸೇವನೆ ಪ್ರಕರಣದಲ್ಲಿಸಿಲುಕಿಸುವ ಪ್ರಯತ್ನ ಪೊಲೀಸ್ ಇಲಾಖೆಯಿಂದ ನಡೆದಿದೆ ’’ಎಂದು ಆರೋಪಿಸಿದ್ದಾರೆ.

‘‘ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಶೀಘ್ರವೇ ನ್ಯಾಯಯುತ ತನಿಖೆ ನಡೆಸುವಂತೆ ಹಾಗೂ ಪ್ರಕರಣದಲ್ಲಿಭಾಗಿಯಾದ ತಪ್ಪಿತಸ್ಥ ಪೊಲೀಸ್ ಇನ್ಸಪೆಕ್ಟರ್ ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ಸೂಚಿಸಲಾಗಿದೆ’’ ಎಂದು ತಿಳಿಸಿದ್ದಾರೆ.‘‘ಕರ್ನಾಟಕದಲ್ಲಿಕಾನೂನು ಸುವ್ಯವಸ್ಥೆ ತೀವ್ರ ಹದಗೆಟ್ಟಿದ್ದು, ರಾಜ್ಯ ಸರಕಾರ ಇಡೀ ಪ್ರಕರಣದ ನೈತಿಕ ಹೊಣೆ ಹೊರಬೇಕು ಮತ್ತು ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಪರಿಹಾರ ನೀಡಬೇಕು’’ಎಂದು ಸಚಿವರು ಆಗ್ರಹಿಸಿದ್ದಾರೆ.