ಎ.ಜೆ. ಮುಧೋಳರ ಹೋರಾಟ ಇಂದಿಗೂ ಆದರ್ಶವಿಕ ಸುದ್ದಿಲೋಕ ಹುಬ್ಬಳ್ಳಿ
ಹಿರಿಯ ಕಮ್ಯೂನಿಸ್ಟ್ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಾರ್ಮಿಕ ಮುಖಂಡರಾಗಿದ್ದ ಎ.ಜೆ.ಮುಧೋಳ ಅವರು ತಮ್ಮ ಇಡೀ ಬದುಕನ್ನು ಜನಸಾಮಾನ್ಯರು, ಕಾರ್ಮಿಕರು ಹಾಗೂ ಶೋಷಿತ ವರ್ಗಗಳ ಹಕ್ಕುಗಳಿಗಾಗಿ ಮುಡಿಪಾಗಿಟ್ಟ ಅಪರೂಪದ ಹೋರಾಟಗಾರರಾಗಿದ್ದರು ಎಂದು ಸ್ಲಂ ಬೋರ್ಡ್ ಅಧ್ಯಕ್ಷ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಹಳೇಹುಬ್ಬಳ್ಳಿ ಮ್ಯಾದಾರ ಓಣಿಯಲ್ಲಿಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿಮುಧೋಳ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣ ಚಳವಳಿಯಲ್ಲಿಎ.ಜೆ.ಮುಧೋಳ ಅವರು ಸಕ್ರಿಯವಾಗಿ ಭಾಗವಹಿಸಿ, ನಾಡಿನ ಏಕತೆ ಮತ್ತು ಸಮಗ್ರ ಅಭಿವೃದ್ಧಿಗಾಗಿ ಹೋರಾಡಿದ್ದರು. ಕಾರ್ಮಿಕರ ಶ್ರಮಕ್ಕೆ ತಕ್ಕ ಗೌರವ, ನ್ಯಾಯಯುತ ವೇತನ ಹಾಗೂ ಮೂಲಭೂತ ಹಕ್ಕುಗಳಿಗಾಗಿ ನಿರಂತರವಾಗಿ ಧ್ವನಿ ಎತ್ತಿದ ಅವರು, ಕಾರ್ಮಿಕ ಸಂಘಟನೆಗಳನ್ನು ಬಲಪಡಿಸುವಲ್ಲಿಮಹತ್ವದ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.
ಎ.ಜೆ.ಮುಧೋಳ ಅವರಂತಹ ಹಿರಿಯ ಹೋರಾಟಗಾರರ ತ್ಯಾಗ, ಬದ್ಧತೆ ಮತ್ತು ಜನಪರ ಚಿಂತನೆಗಳನ್ನು ಇಂದಿನ ಪೀಳಿಗೆ ತಿಳಿದುಕೊಳ್ಳಬೇಕು. ಕಾರ್ಮಿಕರು ಹಾಗೂ ದುರ್ಬಲ ವರ್ಗಗಳ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟ ಸದಾ ಸ್ಮರಣೀಯ. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಸುಸಜ್ಜಿತ ಮುಧೋಳ ಭವನ ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ ಇನ್ನೂ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು. ಗುತ್ತೆಗೆದಾರರು ಉತ್ತಮ ಕಾಮಗಾರಿಗೆ ಒತ್ತು ನೀಡಬೇಕು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸದಾ ಶ್ರಮಿಸುತ್ತಾ ಬರಲಾಗಿದೆ ಎಂದು ಹೇಳಿದರು.