ಹೊಸದಿಲ್ಲಿ: ಭಾರತ ಮತ್ತು ಅಫಘಾನಿಸ್ತಾನ ನಡುವಿನ ಮುಂಬರುವ ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ )ಬುಧವಾರ ಖಚಿತಪಡಿಸಿದೆ.ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 13ರಂದು ನಡೆಯಲಿದ್ದು, 2ನೇ ಹಾಗೂ 3ನೇ ಪಂದ್ಯ ಕ್ರಮವಾಗಿ ಸೆ.15 ಮತ್ತು 17ರಂದು ನಡೆಯಲಿವೆ. ದೆಹಲಿಯ ಅರುಣ್ ಜೇಟ್ಲಿಕ್ರೀಡಾಂಗಣವು ಸರಣಿಯ ಎಲ್ಲಾ3 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಅಫಘಾನಿಸ್ತಾನವು ಆತಿಥೇಯ ತಂಡವಾಗಿ ಈ ಸರಣಿಯಲ್ಲಿಆಡಲಿದೆ. ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಅವರು ಈ ಬೆಳವಣಿಗೆಯನ್ನು ಖಚಿತಪಡಿಸಿದ್ದು, ಅಫಘಾನಿಸ್ತಾನ ಕ್ರಿಕೆಟ್ ಗೆ ಬೆಂಬಲ ನೀಡುವ ಬಿಸಿಸಿಐನ ಬದ್ಧತೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬಿಸಿಸಿಐ ಮತ್ತು ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ನಡುವಿನ ಸಂಬಂಧವನ್ನು ಈ ಸರಣಿ ಮತ್ತಷ್ಟು ಬಲಪಡಿಸಲಿದೆ ಎಂದು ಅವರು ಹೇಳಿದ್ದಾರೆ.
‘‘ಅಫಘಾನಿಸ್ತಾನದಲ್ಲಿಕ್ರಿಕೆಟ್ ಬೆಳವಣಿಗೆಗೆ ಬೆಂಬಲ ನೀಡಲು ಮತ್ತು ಆ ದೇಶದ ಆಟಗಾರರಿಗೆ ಉನ್ನತ ಮಟ್ಟದಲ್ಲಿಸ್ಪರ್ಧಿಸುವ ಅವಕಾಶಗಳನ್ನು ಒದಗಿಸಲು ಬಿಸಿಸಿಐ ಬದ್ಧವಾಗಿದೆ. ದ್ವಿಪಕ್ಷೀಯ ಕ್ರಿಕೆಟ್ ಇದರಲ್ಲಿಪ್ರಮುಖ ಪಾತ್ರ ವಹಿಸುತ್ತದೆ. ಗುಣಮಟ್ಟದ ಎದುರಾಳಿ ತಂಡಗಳ ವಿರುದ್ಧ ನಿಯಮಿತವಾಗಿ ಆಡುವುದರಿಂದ ತಂಡಗಳಿಗೆ ಅಮೂಲ್ಯವಾದ ಅನುಭವ ದೊರೆಯುತ್ತದೆ. ಈ ಸರಣಿಗಾಗಿ ಅಫಘಾನಿಸ್ತಾನ ಕ್ರಿಕೆಟ್ ಮಂಡಳಿಯನ್ನು ಭಾರತಕ್ಕೆ ಸ್ವಾಗತಿಸುತ್ತೇವೆ. ಸರಣಿಯನ್ನು ಯಶಸ್ವಿಗೊಳಿಸಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ಎರಡೂ ದೇಶಗಳ ಕ್ರಿಕೆಟ್ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ, ಒಟ್ಟಾಗಿ ಇನ್ನಷ್ಟು ಕೆಲಸ ಮಾಡುವ ಅವಕಾಶಗಳಿವೆ ಎಂಬ ನಂಬಿಕೆ ನಮಗಿದೆ,’’ ಎಂದು ಮನ್ಹಾಸ್ ಹೇಳಿದ್ದಾರೆ.
ಈ ಮಧ್ಯೆ, ಬಿಸಿಸಿಐ ಅಫಘಾನಿಸ್ತಾನ ವಿರುದ್ಧದ ಸರಣಿಯನ್ನು ಅಧಿಕೃತವಾಗಿ ಖಚಿತಪಡಿಸಿರುವ ಹಿನ್ನೆಲೆಯಲ್ಲಿ, ಭಾರತದ ಪ್ರಸ್ತಾವಿತ ಬಾಂಗ್ಲಾದೇಶ ಪ್ರವಾಸ ನಡೆಯುವ ಸಾಧ್ಯತೆ ಮತ್ತಷ್ಟು ಕಡಿಮೆಯಾಗಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಸೆ.1ರಿಂದ 13ರವರೆಗೆ ಆರು ಪಂದ್ಯಗಳ ವೈಟ್ -ಬಾಲ್ ಸರಣಿಗಾಗಿ ಸಮಯವನ್ನು ನಿಗದಿಪಡಿಸಿತ್ತು.