ಕಾಸರಗೋಡು: ವಂದೇ ಮಾತರಂ ರಾಷ್ಟ್ರೀಯ ಗೀತೆಯನ್ನು ಪೂರ್ಣವಾಗಿ ಹಾಡುವುದಿಲ್ಲವೆಂದು ಹೇಳುವ ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ನೇತೃತ್ವದ ಸರಕಾರದ ನಿಲುವು ದೇಶದ ಏಕತೆಗೆ ಬೆದರಿಕೆಯಾಗಿದೆ. ಮಾತ್ರವಲ್ಲದೆ ಇದು ಮುಂದಿನ ವಿಭಜನೆಗೆ ಬೀಜ ಬಿತ್ತುವಂತ ನಿಲುವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಹೇಳಿದರು.
ಅವರು ಮಂಗಳವಾರ ಬಿಜೆಪಿ ಜಿಲ್ಲಾಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ಭಾರತವನ್ನು ಇಬ್ಭಾಗವಾಗಿ ಹಾಗೂ ಹದಿನೇಳಾಗಿ ವಿಭಜಿಸಬೇಕೆಂದು ಆಗ್ರಹಿಸಿದ್ದ ಮುಸ್ಲಿಂ ಲೀಗ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ವಂದೇ ಮಾತರಂನ್ನು ವಿರೋಧಿಸುವ ನಿಲುವು ತಳೆದಿರುವುದನ್ನು ಅರ್ಥ ಮಾಡಿಕೊಳ್ಳಬಹುದು.ಆದರೆ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ದೊಡ್ಡ ಪರಂಪರೆಯನ್ನು ಹೊಂದಿರುವ ಕಾಂಗ್ರೆಸ್ ಈಗ ಮುಸ್ಲಿಂ ಲೀಗ್ ಗೆ ಸಂಪೂರ್ಣ ಶರಣಾಗಿರುವುದು ಅತ್ಯಂತ ಅಪಾಯಕಾರಿ ಎಂದು ಕೃಷ್ಣದಾಸ್ ಹೇಳಿದರು.ಕೇರಳದ ವಿವಿಧ ಪಿಎಸ್ ಸಿ ರಾರ ಯಂಕ್ ಹೋಲ್ಡರ್ ಗಳು ನಡೆಸುತ್ತಿರುವ ಹೋರಾಟಗಳ ಕುರಿತು ಅವರೊಂದಿಗೆ ಮಾತುಕತೆ ನಡೆಸಲು ಕೂಡಾ ಕೇರಳ ಮುಖ್ಯಮಂತ್ರಿ ಸಿದ್ಧರಿಲ್ಲ. ಅನೇಕ ಗಂಭೀರ ಆರೋಪಗಳು ಕೇಳಿಬಂದರೂ ಪಿಎಸ್ ಸಿಯನ್ನು ತನಿಖೆಗೆ ಒಳಪಡಿಸಲು ರಾಜ್ಯಸರಕಾರ ಸಿದ್ಧವಾಗದೇ ಇರುವುದು ಯುವಕರ ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳ ವಿಷಯದಲ್ಲಿ ಎರಡೂ ರಂಗಗಳು ಬೇರೆಬೇರೆಯಲ್ಲಎಂಬುದನ್ನು ತೋರಿಸುತ್ತದೆ ಎಂದು ಕೃಷ್ಣದಾಸ್ ಆರೋಪಿಸಿದರು. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಶಾಸಕರ ನಿಧಿ ಬಳಕೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಬದಲಿಗೆ ಮುಂದಿನ ಲೋಕಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಚರ್ಚಿಸಲಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್ . ಅಶ್ವಿನಿ, ಪ್ರಧಾನ ಕಾರ್ಯದರ್ಶಿ ಪಿ.ಆರ್ . ಸುನಿಲ್ , ಉಪಾಧ್ಯಕ್ಷ ಪಿ.ರಮೇಶ್ ಉಪಸ್ಥಿತರಿದ್ದರು.