ಬೆಂಗಳೂರಿನ ಪ್ರತಿಷ್ಠಿತ 26 ಸ್ಟಾರ್ ಹೋಟೆಲ್ ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನಡೆಸಿರುವ ದಿಢೀರ್ ದಾಳಿಯು, ‘ಹೊಳೆಯುವುದೆಲ್ಲಾಚಿನ್ನವಲ್ಲ’ ಎಂಬ ನಾಣ್ಣುಡಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಜನಸಾಮಾನ್ಯರು ಐಷಾರಾಮಿ ವಾತಾವರಣ ಮತ್ತು ಬ್ರ್ಯಾಂಡ್ ಹೆಸರನ್ನು ನಂಬಿ ಲಕ್ಷಾಂತರ ರೂಪಾಯಿ ಹಣ ತೆತ್ತು ಸೇವಿಸುವ ಆಹಾರವೇ ವಿಷಕಾರಿಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಈ ದಾಳಿಯ ವೇಳೆ ಅವಧಿ ಮೀರಿದ ಮಾಂಸ, ಕೊಳೆತ ತರಕಾರಿಗಳು, ಮಾಂಸಾಹಾರಿ ಹಾಗೂ ಸಸ್ಯಾಹಾರಿ ಪದಾರ್ಥಗಳ ಜತೆ ಸಂಗ್ರಹಣೆ ಮತ್ತು ಮಾಂಸದಲ್ಲಿಹುಳುಗಳು ಪತ್ತೆಯಾಗಿರುವುದು ಹೋಟೆಲ್ ಮಾಲೀಕರ ಹಣದಾಹ ಹಾಗೂ ನಿರ್ಲಕ್ಷ್ಯವನ್ನು ಬೆತ್ತಲೆಗೊಳಿಸಿದೆ.
ಸ್ಟಾರ್ ಹೋಟೆಲ್ ಗಳ ಹೊಣೆ ಕೇವಲ ವ್ಯಾಪಾರ ಕೇಂದ್ರಗಳಾಗುವುದಲ್ಲ, ಅವು ಸಾರ್ವಜನಿಕ ಆರೋಗ್ಯದ ಪಾಲಕರಾಗುವುದೂ ಮುಖ್ಯ. ಆದರೆ, ಪರವಾನಗಿ ಮಾನ್ಯತೆ, ನೈರ್ಮಲ್ಯ ಮಾನದಂಡಗಳು, ಕ್ಯಾಲರಿ ಮಾಹಿತಿ ಹಾಗೂ ಕಚ್ಚಾ ಸಾಮಗ್ರಿ ಪೂರೈಕೆದಾರರ ನೋಂದಣಿ ಕಡ್ಡಾಯವಾಗಿದ್ದರೂ, ಪ್ರಮುಖ ಸಂಸ್ಥೆಗಳೇ ನಿಯಮಗಳನ್ನು ಗಾಳಿಗೆ ತೂರಿರುವುದು ಕಾನೂನಿನ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಲ್ಯಾಬ್ ವರದಿಗಾಗಿ ಕಾಯುವ ಅಗತ್ಯವಿಲ್ಲದಷ್ಟು ಸ್ಪಷ್ಟವಾಗಿ ಬರಿಗಣ್ಣಿಗೆ ಕಾಣುವ ಇಂಥ ಹಸಿಬಿಸಿ ಪ್ರಮಾದಗಳು ಗ್ರಾಹಕರ ನಂಬಿಕೆಗೆ ಎಸಗುವ ಮಹಾದ್ರೋಹವೇ ಸರಿ.
ವ್ಯಾಪಾರ ಧರ್ಮಕ್ಕೆ ಕಳಂಕ ತರುವ ಇಂಥ ಅಕ್ರಮಗಳಿಗೆ ಕೇವಲ ಎಚ್ಚರಿಕೆ ಅಥವಾ ನಾಮಮಾತ್ರದ ದಂಡ ಸಾಲದು. ಗ್ರಾಹಕರ ಜೀವದೊಂದಿಗೆ ಚೆಲ್ಲಾಟವಾಡುವ ಆಹಾರ ಘಟಕಗಳ ಲೈಸೆನ್ಸ್ ಅನ್ನು ಶಾಶ್ವತವಾಗಿ ರದ್ದುಪಡಿಸಬೇಕು. ಆಹಾರ ಸುರಕ್ಷತಾ ಇಲಾಖೆಯು ಈ ಕಾರ್ಯಾಚರಣೆಯನ್ನು ಕೇವಲ ಸಾಂದರ್ಭಿಕ ದಾಳಿಗೆ ಸೀಮಿತಗೊಳಿಸದೆ, ನಿರಂತರ ತಪಾಸಣೆ ಮತ್ತು ಕಠಿಣ ಕಾನೂನು ಕ್ರಮಗಳ ಮೂಲಕ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕಿದೆ. ಆರೋಗ್ಯವೇ ಭಾಗ್ಯ ಎನ್ನುವ ತತ್ವದಡಿ, ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ವಿಚಾರದಲ್ಲಿಯಾವುದೇ ರಾಜಿ ಇಲ್ಲಎಂಬ ಕಠಿಣ ಸಂದೇಶವನ್ನು ಸರಕಾರ ರವಾನಿಸಬೇಕಾದ ಅನಿವಾರ್ಯತೆ ಇದೆ.