ಪುರವಣಿಗೆಗೆ ಉದ್ಯೋಗಗಳ ತವರು ಬೆಂಗಳೂರು ಗ್ರಾಮಾಂತರ

Contributed byadarshkodi15@gmail.com|Vijaya Karnataka
hub of employment inspiration for professional development in bangalore rural district
ಪುರವಣಿಗೆಗೆ

ಉದ್ಯೋಗಗಳ ತವರು ಬೆಂಗಳೂರು ಗ್ರಾಮಾಂತರ
ಕೃಷಿ, ತೋಟಗಾರಿಕೆ, ರೇಷ್ಮೆ, ನೇಕಾರಿಕೆಯೇ ಪ್ರಮುಖ ವೃತ್ತಿಗಳು | 10ಸಾವಿರ ಎಕರೆಯಲ್ಲಿಕೈಗಾರಿಕೆಗಳ ಅಭಿವೃದ್ಧಿ

ವಿಕ ವಿಶೇಷ ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ ಜಿಲ್ಲೆರಾಜಧಾನಿ ಪಕ್ಕದಲ್ಲಿಯೇ ಇದ್ದು, ಪರಂಪರೆಯಿಂದ ಬಂದ ವೃತ್ತಿಗಳ ಜತೆಗೆ ಕೈಗಾರಿಕೆಗಳಲ್ಲೂಉದ್ಯೋಗ ಸೃಷ್ಟಿಯಾಗಿದೆ.

ಕೃಷಿಯನ್ನೇ ಪ್ರಧಾನ ಜೀವನಾಧಾರವಾಗಿಸಿಕೊಂಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇಂದು ಹಲವು ಬಗೆಯ ವೃತ್ತಿ ಮತ್ತು ಉದ್ಯೋಗಗಳ ತವರಾಗಿ ರೂಪುಗೊಳ್ಳುತ್ತಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ, ಹೈನುಗಾರಿಕೆ, ನೇಕಾರಿಕೆ, ಸಣ್ಣ ಕೈಗಾರಿಕೆ, ವ್ಯಾಪಾರ, ಸಾರಿಗೆ, ಸೇವಾ ವಲಯ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳವರೆಗೆ ಜಿಲ್ಲೆಯ ಉದ್ಯೋಗ ವಲಯ ವಿಸ್ತರಿಸಿದೆ. ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಭೌಗೋಳಿಕ ಸ್ಥಾನಮಾನ ಜಿಲ್ಲೆಯ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಒಂದು ಕಡೆ ಗ್ರಾಮೀಣ ಭಾಗದಲ್ಲಿಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆಗಳು ಮುಂದುವರಿದಿದ್ದರೆ, ಮತ್ತೊಂದೆಡೆ ಕೈಗಾರಿಕಾ ಪ್ರದೇಶಗಳು, ಸೇವಾ ಕ್ಷೇತ್ರ ಹಾಗೂ ತಂತ್ರಜ್ಞಾನ ಆಧಾರಿತ ಉದ್ಯೋಗಗಳು ಬೆಳೆಯುತ್ತಿವೆ. ಜಿಲ್ಲೆಯಲ್ಲಿದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ನಾಲ್ಕು ತಾಲೂಕುಗಳಿದ್ದು, ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವೃತ್ತಿ ವೈಶಿಷ್ಟತ್ರ್ಯಗಳನ್ನು ಹೊಂದಿದೆ.

ರೇಷ್ಮೆ ಕೃಷಿಗೆ ವಿಶೇಷ ಆದ್ಯತೆ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪರಂಪರೆಯ ವೃತ್ತಿಗಳಲ್ಲಿರೇಷ್ಮೆ ಕೃಷಿ ಪ್ರಮುಖವಾದದ್ದು. ಹಿಪ್ಪುನೇರಳೆ ಬೆಳೆಯುವುದು, ರೇಷ್ಮೆಹುಳು ಸಾಕಣೆ ಹಾಗೂ ರೇಷ್ಮೆ ಗೂಡುಗಳ ಉತ್ಪಾದನೆಯೊಂದಿಗೆ ಹಲವು ಕುಟುಂಬಗಳು ನೇರ ಹಾಗೂ ಪರೋಕ್ಷವಾಗಿ ಉದ್ಯೋಗ ಪಡೆದಿದ್ದಾರೆ. 5000ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿಹಿಪ್ಪು ನೇರಳೆ ಸೊಪ್ಪನ್ನು ಬೆಳೆಯಲಾಗುತ್ತಿದೆ. 8000ಕ್ಕೂ ಹೆಚ್ಚು ಕುಟುಂಬಗಳು ಇದರಲ್ಲಿತೊಡಗಿವೆ. ಜಿಲ್ಲೆಯ ಮಣ್ಣು ಮತ್ತು ಹವಾಮಾನ ರೇಷ್ಮೆ ಕೃಷಿಗೆ ಪೂರಕವಾಗಿರುವುದು ಈ ವೃತ್ತಿಯ ಬೆಳವಣಿಗೆಗೆ ಕಾರಣವಾಗಿದೆ. ಇತ್ತೀಚಿನ ವರ್ಷಗಳಲ್ಲಿರೇಷ್ಮೆ ಗೂಡಿಗೆ ಉತ್ತಮ ದರ ಸಿಗುತ್ತಿದೆ. ಮಾರುಕಟ್ಟೆ ವ್ಯಾಪ್ತಿ ಕೂಡ ಹೆಚ್ಚಾಗುತ್ತಿದೆ. ಇದರಿಂದ ನೇಕಾರಿಕೆಯಲ್ಲಿತೊಡಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಹೈನುಗಾರಿಕೆ ಮತ್ತೊಂದು ಆಧಾರ:

ಕೃಷಿಯ ಜತೆಗೆ ಹೈನುಗಾರಿಕೆಯೂ ಗ್ರಾಮೀಣ ಕುಟುಂಬಗಳ ಆದಾಯಕ್ಕೆ ಪೂರಕವಾಗಿದೆ. ಹಸು, ಎಮ್ಮೆ, ಕುರಿ, ಮೇಕೆ ಹಾಗೂ ಕೋಳಿ ಸಾಕಣೆಯಂತಹ ಚಟುವಟಿಕೆಗಳು ಗ್ರಾಮೀಣ ಆರ್ಥಿಕತೆಯ ಭಾಗವಾಗಿವೆ. ವೈಜ್ಞಾನಿಕ ಪಶುಸಂಗೋಪನೆ, ಹೈನುಗಾರಿಕೆ ಹಾಗೂ ಕೋಳಿ ಸಾಕಣೆಗೆ ಸಂಬಂಧಿಸಿದ ತರಬೇತಿ ಮತ್ತು ಸೇವೆಗಳನ್ನು ಇಲಾಖೆಗಳು ಒದಗಿಸುತ್ತಿವೆ. ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ1ಲಕ್ಷಕ್ಕೂ ಹೆಚ್ಚು ಜಾನುವಾರುಗಳಿವೆ. ಪ್ರತಿನಿತ್ಯ ಲಕ್ಷಾಂತರ ಲೀಟರ್ ಗಳಷ್ಟು ಹಾಲು ಪೂರೈಕೆ ಮಾಡಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿಕೃಷಿಯೊಂದಿಗೆ ಹೈನುಗಾರಿಕೆಯೇ ಆದಾಯ ಮೂಲವಾಗಿದೆ.

ಕೃಷಿಯಲ್ಲೂವೃತ್ತಿಗಳ ವೈವಿಧ್ಯ:

ರಾಗಿ, ಮೇವು ಜೋಳ, ತೊಗರಿ, ಅಲಸಂದೆ, ಅವರೆ ಸೇರಿದಂತೆ ಹಲವು ಬೆಳೆಗಳನ್ನು ಜಿಲ್ಲೆಯ ರೈತರು ಬೆಳೆಯುತ್ತಿದ್ದಾರೆ.

ಕೃಷಿಯೊಂದಿಗೆ ತೋಟಗಾರಿಕೆ, ಕೃಷಿ ಯಂತ್ರೋಪಕರಣಗಳ ಸೇವೆ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಸಾಗಣೆ ಮತ್ತು ಮಾರುಕಟ್ಟೆ ಚಟುವಟಿಕೆಗಳೂ ಉದ್ಯೋಗ ಸೃಷ್ಟಿಸುತ್ತಿವೆ. ಜಿಲ್ಲೆಯಲ್ಲಿ74ಸಾವಿರ ಹೆಕ್ಟೇರ್ ಮುಂಗಾರು ಬಿತ್ತನೆ ವ್ಯಾಪ್ತಿಯಿದೆ. ಇದಲ್ಲದೇ ತೋಟಗಾರಿಕೆ ಬೆಳೆಗಳಾದ ಮಾವು, ಹಲಸು, ತರಕಾರಿ, ಹೂಗಳು ಸೇರಿದಂತೆ ನಾನಾ ಬೆಳೆಗಳು ಒಟ್ಟು 30ಸಾವಿರ ಹೆಕ್ಟೇರ್ ಪ್ರದೇಶದಲ್ಲಿವಿಸ್ತರಿಸಿದೆ.

ಕೈಗಾರಿಕೆ-ಸೇವಾ ಕ್ಷೇತ್ರದತ್ತ ಯುವಜನತೆ:

ಬೆಂಗಳೂರು ನಗರಕ್ಕೆ ಸಮೀಪವಿರುವುದರಿಂದ ಜಿಲ್ಲೆಯ ಯುವಜನರಲ್ಲಿಕೃಷಿಯ ಹೊರತಾದ ಉದ್ಯೋಗಗಳತ್ತಲೂ ಆಸಕ್ತಿ ಹೆಚ್ಚುತ್ತಿದೆ. ಕೈಗಾರಿಕಾ ಘಟಕಗಳು, ವಿಮಾನ ನಿಲ್ದಾಣ ಆಧಾರಿತ ಚಟುವಟಿಕೆಗಳು, ಸಾರಿಗೆ, ಲಾಜಿಸ್ಟಿಕ್ಸ್ , ಹೋಟೆಲ್ , ವ್ಯಾಪಾರ, ಶಿಕ್ಷಣ, ಆರೋಗ್ಯ ಮತ್ತು ಇತರ ಸೇವಾ ಕ್ಷೇತ್ರಗಳು ಉದ್ಯೋಗದ ಹೊಸ ಅವಕಾಶಗಳನ್ನು ಒದಗಿಸುತ್ತಿವೆ. ಗ್ರಾಮೀಣ ಯುವಕರನ್ನು ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳೊಂದಿಗೆ ಸಂಪರ್ಕಿಸುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳು ಉದ್ಯೋಗ ಮೇಳಗಳನ್ನೂ ಆಯೋಜಿಸುತ್ತಿವೆ.

2026ರಲ್ಲಿದೊಡ್ಡಬಳ್ಳಾಪುರದಲ್ಲಿನಡೆದ ಉದ್ಯೋಗ ಮೇಳದಲ್ಲಿಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಎಂಜಿನಿಯರಿಂಗ್ ಸೇರಿದಂತೆ ನಾನಾ ವಿದ್ಯಾರ್ಹತೆ ಹೊಂದಿದವರಿಗೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಕೇವಲ ಕೃಷಿ ಪ್ರಧಾನ ಜಿಲ್ಲೆಯಾಗಿ ಉಳಿಯದೆ, ಪರಂಪರೆಯ ಕಸುಬುಗಳ ಸಂರಕ್ಷಣೆ ಮತ್ತು ಆಧುನಿಕ ಉದ್ಯೋಗಗಳ ವಿಸ್ತರಣೆಯ ಮೂಲಕ ಬಹುಮುಖ ವೃತ್ತಿ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಹಳೆಯ ಕಸುಬುಗಳಿಗೆ ತಂತ್ರಜ್ಞಾನ, ಮಾರುಕಟ್ಟೆ ಹಾಗೂ ಕೌಶಲ ತರಬೇತಿಯ ಬೆಂಬಲ ದೊರೆತರೆ ಗ್ರಾಮೀಣ ಆರ್ಥಿಕತೆಗೆ ಮತ್ತಷ್ಟು ಬಲ ಬರಬಹುದು.

ನೇಕಾರಿಕೆಗೆ ದೊಡ್ಡಬಳ್ಳಾಪುರ ಫೇವåಸ್ :

ದೊಡ್ಡಬಳ್ಳಾಪುರದಲ್ಲಿಕಳೆದ ಅನೇಕ ದಶಕಗಳಿಂದ ನೇಕಾರಿಕೆ ನಡೆಯುತ್ತಿದೆ. ಈ ಹಿಂದೆ ಕೈಮಗ್ಗದಲ್ಲಿಆರಂಭವಾದ ನೇಕಾರಿಕೆ ಇದೀಗ ವಿದ್ಯುತ್ ಮಗ್ಗದ ತಲೆಮಾರು ಆರಂಭವಾಗಿದೆ. ಪ್ರತಿನಿತ್ಯ ದೊಡ್ಡಬಳ್ಳಾಪುರದಲ್ಲಿ20ರಿಂದ 25ಸಾವಿರ ಸೀರೆಗಳ ಉತ್ಪಾದನೆ ಮಾಡಲಾಗುತ್ತಿದೆ. ಇಲ್ಲಿನೋಂದಾಯಿತ 17000ಕ್ಕೂ ಹೆಚ್ಚು ನೇಕಾರರು ಇದ್ದು, 1ಲಕ್ಷಕ್ಕೂ ಹೆಚ್ಚು ಕುಟುಂಬಗಳು ನೇಕಾರಿಕೆಯನ್ನು ಅವಲಂಬಿಸಿವೆ. ಪ್ರತಿ ವಾರವೂ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ಇಲ್ಲಿನ ಸೀರೆಗಳಿಗೆ ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲದೇ, ಆಂಧ್ರ, ಮುಂಬೈ ಸೇರಿದಂತೆ ಹಲವು ಕಡೆಗಳಲ್ಲೂಬೇಡಿಕೆ ಇದೆ.

ಫೋಟೋ: ವಿಕೆ30: ಸಾಂದರ್ಭಿಕ ಚಿತ್ರ.

ವಿಕೆ31: ಸಾಂದರ್ಭಿಕ ಚಿತ್ರ.

ವಿಕೆ32: ಸಾಂದರ್ಭಿಕ ಚಿತ್ರ

ವಿಕೆ33: ಸಾಂದರ್ಭಿಕ ಚಿತ್ರ

ವಿಕೆ34: ಸಾಂದರ್ಭಿಕ ಚಿತ್ರ.