ಹಿಸ್ಟರಿ ಮೆಲುಕು ಆಗಸ್ಟ್ 20

Contributed byDHEERAJ K|Vijaya Karnataka
creatures on the moon man bat the legendary newspaper revelation of 1835
ಅಮೆರಿಕದ ಪತ್ರಿಕೋದ್ಯಮದ ಇತಿಹಾಸದಲ್ಲೇ ಅತ್ಯಂತ ವಿಚಿತ್ರವಾದ ಘಟನೆ ನಡೆದ ದಿನ 1835ರ ಆಗಸ್ಟ್ 25. ಅದನ್ನು ‘ದಿ ಗ್ರೇಟ್ ಮೂನ್ ಹೋP್ಸ…’ ಎಂದು ಕರೆಯಲಾಗುತ್ತದೆ. ನ್ಯೂಯಾರ್ಕ್ ನಗರದ ಪ್ರಸಿದ್ಧ ಪತ್ರಿಕೆಯಾದ ‘ದಿ ನ್ಯೂಯಾರ್ಕ್ ಸನ್ ’ ಆಗಸ್ಟ್ 25ರಿಂದ ಚಂದ್ರನ ಮೇಲೆ ಜೀವಿಗಳು ಮತ್ತು ಮಾನವ ಸಹಿತ ನಾಗರಿಕತೆ ಇದೆ ಎಂದು ಪ್ರತಿಪಾದಿಸುವ ಆರು ಸರಣಿ ಲೇಖನಗಳನ್ನು ಪ್ರಕಟಿಸಲು ಪ್ರಾರಂಭಿಸಿತು. ಈ ಲೇಖನಗಳು ಆ ಕಾಲದ ಜನರ ಮನಸ್ಸಿನ ಮೇಲೆ ಪ್ರಚಂಡ ಪ್ರಭಾವ ಬೀರಿದವು ಮತ್ತು ವ್ಯಾಪಕವಾದ ಕುತೂಹಲವನ್ನು ಹುಟ್ಟುಹಾಕಿದವು. ಈ ಲೇಖನಗಳಲ್ಲಿಆಗಿನ ಕಾಲದ ಹೆಸರಾಂತ ಖಗೋಳಶಾಸ್ತ್ರಜ್ಞ ಸರ್ ಜಾನ್ ಹರ್ಷಲ್ ಅವರು ದಕ್ಷಿಣ ಆಫ್ರಿಕಾದಲ್ಲಿಹೊಸ ಮತ್ತು ಅತ್ಯಂತ ಶಕ್ತಿಶಾಲಿ ದೂರದರ್ಶಕವನ್ನು ಬಳಸಿ ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ದೂರದರ್ಶಕದ ಮೂಲಕ ಚಂದ್ರನ ಮೇಲಿರುವ ದೃಶ್ಯಗಳು ಸ್ಪಷ್ಟವಾಗಿ ಕಂಡಿವೆ ಎಂದು ಪತ್ರಿಕೆ ಬರೆದಿತ್ತು. ಲೇಖನದ ಪ್ರಕಾರ, ಚಂದ್ರನ ಮೇಲೆ ಸುಂದರವಾದ ಕಾಡುಗಳು, ಸಾಗರಗಳು, ನದಿಗಳು, ವಿಚಿತ್ರ ಪ್ರಾಣಿಗಳು ಮತ್ತು ರೆಕ್ಕೆಗಳಿರುವ ಮಾನವರಂತಹ ಜೀವಿಗಳು ವಾಸಿಸುತ್ತಿದ್ದಾರೆ ಎಂದು ವರ್ಣಿಸಲಾಗಿತ್ತು. ಈ ಜೀವಿಗಳನ್ನು ‘ಮ್ಯಾನ್ -ಬ್ಯಾಟ್ ’ ಅಂದರೆ ಬಾವಲಿ ರೆಕ್ಕೆಗಳಿರುವ ಮನುಷ್ಯರು ಎಂದು ಕರೆಯಲಾಗಿತ್ತು. ಈ ವರದಿಗಳು ಸಂಪೂರ್ಣವಾಗಿ ಕಲ್ಪಿತವಾಗಿದ್ದರೂ, ಅವುಗಳನ್ನು ಪ್ರಸ್ತುತಪಡಿಸಿದ ರೀತಿ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಹೆಚ್ಚಿನ ಜನರು ಅದನ್ನು ಸಂಪೂರ್ಣವಾಗಿ ನಂಬಿದರು. ಜನಸಾಮಾನ್ಯರು ಮಾತ್ರವಲ್ಲದೆ ಹಲವು ವಿಜ್ಞಾನಿ ಗಳು ಮತ್ತು ಶಿಕ್ಷಣ ತಜ್ಞರು ಕೂಡ ಈ ಸುದ್ದಿಯಿಂದ ಆಶ್ಚರ್ಯಚಕಿತರಾದರು. ನ್ಯೂಯಾರ್ಕ್ ಸನ್ ಪತ್ರಿಕೆಯ ಮಾರಾಟವು ದಿನದಿಂದ ದಿನಕ್ಕೆ ಗಗನಕ್ಕೇರಿತು. ಅಂದಿನ ಕಾಲಕ್ಕೆ ಇದು ಅತ್ಯಂತ ಹೆಚ್ಚಿನ ಪ್ರಸಾರ ಸಂಖ್ಯೆಯನ್ನು ಹೊಂದಿದ ಪತ್ರಿಕೆಯಾಗಿ ಹೊರಹೊಮ್ಮಿತು. ಜನರು ಪತ್ರಿಕೆಯ ಹೊಸ ಸಂಚಿಕೆಗಾಗಿ ದಿನಪೂರ್ತಿ ಕಾಯುತ್ತಿದ್ದರು. ಆದರೆ, ಕೆಲವು ವಾರಗಳ ನಂತರ ಈ ಸಂಪೂರ್ಣ ಸರಣಿಯು ರಿಚರ್ಡ್ ಆಡಮ್ಸ… ಲಾಕ್ ಎಂಬ ಪತ್ರಿಕೆಯ ಲೇಖಕನ ಕಲ್ಪನೆಯ ಕೂಸು ಎಂಬ ಸತ್ಯ ಹೊರಬಂದಿತು. ಈ ಲೇಖನಗಳ ಮುಖ್ಯ ಉದ್ದೇಶ ಆಗಿನ ಕಾಲದ ತೀವ್ರ ಧಾರ್ಮಿಕ ಮತ್ತು ಊಹಾತ್ಮಕ ವೈಜ್ಞಾನಿಕ ಸಿದ್ಧಾಂತಗಳನ್ನು ಹಾಸ್ಯ ಮಾಡುವು ದಾಗಿತ್ತು. ಆದಾಗ್ಯೂ, ಈ ಸತ್ಯ ಬಹಿರಂಗಗೊಂಡ ನಂತರವೂ ಜನರು ಪತ್ರಿಕೆಯ ಮೇಲೆ ಕೋಪಗೊಳ್ಳಲಿಲ್ಲ, ಬದಲಾಗಿ ಈ ವಿಚಿತ್ರ ಕಥೆಯನ್ನು ತಮಾಷೆಯಾಗಿ ಸ್ವೀಕರಿಸಿದರು.