1ರಿಂದ 19 ವರ್ಷದ ಮಕ್ಕಳಿಗೆ ಉಚಿತ ಮಾತ್ರೆ ವಿತರಣೆ | ಜಂತುಹುಳು ಸೋಂಕಿನಿಂದ ರಕ್ತಹೀನತೆ, ಅಪೌಷ್ಟಿಕತೆ
ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರಜಂತುಹುಳುಗಳು ಮಕ್ಕಳ ದೇಹದ ಪೋಷಕಾಂಶಗಳನ್ನು ಹೀರಿಕೊಳ್ಳುವ ಮೂಲಕ ರಕ್ತಹೀನತೆ, ಅಪೌಷ್ಟಿಕತೆ, ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಗಬಹುದು. ಹೀಗಾಗಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ನಿಯಮಿತವಾಗಿ ಜಂತುಹುಳು ನಿವಾರಣೆಯ ಮಾತ್ರೆ ಸೇವಿಸುವುದು ಮುಖ್ಯ ಎಂದು ಜಿಲ್ಲಾಆರೋಗ್ಯಾಧಿಕಾರಿ ಡಾ. ಚೇತನ್ ತಿಳಿಸಿದರು.
ನಗರದ ಸಂತ ಜೋಸೆಫರ ಕಾನ್ವೆಂಟ್ ಶಾಲೆ ಮತ್ತು ಕಾಲೇಜಿನಲ್ಲಿಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮದಲ್ಲಿಮಕ್ಕಳಿಗೆ ಆಲ್ಬೆಂಡಜೋಲ್ ಮಾತ್ರೆ ವಿತರಿಸಿ, ಅವರು ಮಾತನಾಡಿದರು.
ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಗೆ ಕಾಡುವ ಜಂತುಹುಳುಗಳ ಸಮಸ್ಯೆಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ. ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಜಿಲ್ಲೆಯ 1ರಿಂದ 19 ವರ್ಷದೊಳಗಿನ ಎಲ್ಲಮಕ್ಕಳಿಗೆ ಉಚಿತವಾಗಿ ಆಲ್ಬೆಂಡಜೋಲ್ ಮಾತ್ರೆಗಳನ್ನು ವಿತರಿಸುವ ಅಭಿಯಾನ ಆರಂಭಿಸಲಾಗಿದೆ ಎಂದರು.
ಆರೋಗ್ಯಕ್ಕೆ ಮೊದಲ ಆದ್ಯತೆ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು, ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಶೇಷ ಕಾಳಜಿ ವಹಿಸುತ್ತಿವೆ. ಮಗುವಿನ ಜನನಕ್ಕೂ ಮುನ್ನ ಹಾಗೂ ಜನನದ ನಂತರ ಆರೋಗ್ಯ, ಪೌಷ್ಟಿಕ ಆಹಾರ, ಚಿಕಿತ್ಸೆ, ಲಸಿಕೆ, ಶಿಕ್ಷಣ ಸೇರಿದಂತೆ ಹಲವು ಅಗತ್ಯ ಸೇವೆಗಳನ್ನು ಸರಕಾರ ಉಚಿತವಾಗಿ ಒದಗಿಸುತ್ತಿದೆ ಎಂದು ಹೇಳಿದರು.
ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಗೆ ಪೂರಕವಾಗಿ ಆರೋಗ್ಯ ಇಲಾಖೆ ವಿವಿಧ ಲಸಿಕೆ, ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ. ಇದರ ಭಾಗವಾಗಿ ಪ್ರತಿ ವರ್ಷ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಆಚರಿಸಲಾಗುತ್ತಿದ್ದು, ಮಕ್ಕಳಲ್ಲಿಜಂತುಹುಳು ಸೋಂಕಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಅಂಗನವಾಡಿಯಿಂದ ಪಿಯು ಕಾಲೇಜಿನವರೆಗೆ: ಜಿಲ್ಲೆಯ ಅಂಗನವಾಡಿ ಕೇಂದ್ರಗಳು, ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿವ್ಯಾಸಂಗ ಮಾಡುತ್ತಿರುವ 1ರಿಂದ 19 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಆಲ್ಬೆಂಡಜೋಲ್ ಮಾತ್ರೆಗಳನ್ನು ನೀಡಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮಕ್ಕಳಿರುವ ಸ್ಥಳಗಳಿಗೆ ಭೇಟಿ ನೀಡಿ, ಜಂತುಹುಳು ಸೋಂಕಿನ ಕುರಿತು ಅರಿವು ಮೂಡಿಸುವ ಜತೆಗೆ ಮಾತ್ರೆಗಳನ್ನು ವಿತರಿಸಲಿದ್ದಾರೆ.
ವೈಯಕ್ತಿಕ ಸ್ವಚ್ಛತೆಯ ಕೊರತೆ, ಅಶುದ್ಧ ನೀರು ಹಾಗೂ ಅಶುಚಿತ್ವದ ವಾತಾವರಣದಿಂದ ಜಂತುಹುಳು ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಮಕ್ಕಳಲ್ಲಿಸಾಮಾನ್ಯವಾಗಿ ಕಂಡುಬರುವ ಈ ಸೋಂಕು ವಯಸ್ಕರನ್ನೂ ಬಾಧಿಸಬಹುದು. ಆದ್ದರಿಂದ ಕೈಗಳನ್ನು ಸ್ವಚ್ಛವಾಗಿ ತೊಳೆಯುವುದು, ಶುದ್ಧ ನೀರು ಕುಡಿಯುವುದು, ಆಹಾರವನ್ನು ಸ್ವಚ್ಛವಾಗಿ ಸೇವಿಸುವುದು ಸೇರಿದಂತೆ ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದು ತಿಳಿಸಿದರು.
ಜಂತುಹುಳು ನಿವಾರಣಾ ಮಾತ್ರೆ ವಿತರಣೆ ಅಭಿಯಾನವು ಮಕ್ಕಳ ಆರೋಗ್ಯ, ಪೌಷ್ಟಿಕತೆ, ಶಾಲಾ ಹಾಜರಾತಿ ಹಾಗೂ ಜೀವನ ಗುಣಮಟ್ಟ ಸುಧಾರಿಸುವ ಪ್ರಮುಖ ಆರೋಗ್ಯ ಕ್ರಮವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿಜಿಲ್ಲಾಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಕಾಶ್ , ಜಿಲ್ಲಾಆರ್ ಸಿಎಚ್ ಅಧಿಕಾರಿ ಡಾ. ಸಂತೋಷ್ ಬಾಬು, ಜಿಲ್ಲಾಶಿಕ್ಷಣಾಧಿಕಾರಿ ಜಿ. ಹರೀಶ್ ಸೇರಿದಂತೆ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
11ಸಿಬಿಪಿ ಪೋಟೋ 1 ಮತ್ತು 2
ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮ ನಡೆಯಿತು.