ಬೀದರ್ ನ ಎಸ್ ಬಿಐ ಬ್ಯಾಂಕ್ ಎದುರಿನ ಎಟಿಎಂ ಬಳಿ ಶುಕ್ರವಾರ ಶೂಟೌಟ್ ಹಾಗೂ ಎಟಿಎಂ ದರೋಡೆ ಪ್ರಕರಣದ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು.* ಎಸ್ ಬಿಐ ಬ್ಯಾಂಕ್ ನ ಎಟಿಎಂ ಸೇರಿ ನಾನಾ ಕಡೆ ಸ್ಥಳ ಮಹಜರು
ಎಟಿಎಂ ದರೋಡೆ: 14 ದಿನ ಪೊಲೀಸ್ ವಶಕ್ಕೆ
ವಿಕ ಸುದ್ದಿಲೋಕ ಬೀದರ್
ಇಲ್ಲಿನ ಎಸ್ ಬಿಐ ಎಟಿಎಂ ದರೋಡೆ ಹಾಗೂ ಶೂಟೌಟ್ ಪ್ರಕರಣದ ಪ್ರಮುಖ ಆರೋಪಿಗಳಾದ ಅಮನ್ ಕುಮಾರ ರಾಜಕಿಶೋರ ಸಿಂಗ್ ಮತ್ತು ಅಲೋಕ್ ಕುಮಾರ ಅಲಿಯಾಸ್ ಅಶುತೋಷ್ ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ 14 ದಿನಗಳ ಕಾಲ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಕುರಿತು ಸುದ್ದಿಗಾರರಿಗೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಮಾಹಿತಿ ನೀಡಿದ್ದಾರೆ.
ಕಸ್ಟಡಿಗೆ ಪಡೆದ ಪೊಲೀಸರು ವಿಚಾರಣೆ ಆರಂಭಿಸಿದ್ದು, ಪ್ರಕರಣಕ್ಕೆ ಸಂಬಂಧಪಟ್ಟ ನಾನಾ ಸ್ಥಳಗಳಲ್ಲಿಮೊದಲ ಹಂತವಾಗಿ ಸ್ಥಳ ಮಹಜರು (ಪಂಚನಾಮೆ) ನಡೆಸಿದರು. ಶೂಟೌಟ್ ಹಾಗೂ ದರೋಡೆ ನಡೆಸಲಾಗಿದ್ದ ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿಯ ಬ್ಯಾಂಕ್ ಎದುರಿನ ಎಟಿಎಂಗೆ ಕರೆದೊಯ್ದು ಸ್ಥಳ ಮಹಜರು ಮಾಡಲಾಯಿತು. ಈ ವೇಳೆ ಬ್ಯಾಂಕ್ ಪರಿಸರದಲ್ಲಿಸಾರ್ವಜನಿಕರು ಜಮಾಯಿಸಿ, ಸ್ಥಳ ಮಹಜರು ಪ್ರಕ್ರಿಯೆನ್ನು ವೀಕ್ಷಿಸುತ್ತಿರುವುದು ಕಂಡುಬಂತು.
ಜತೆಗೆ, ಹಣ ಇದ್ದ ಟ್ರಂಕ್ ಅನ್ನು ದರೋಡೆ ಮಾಡಿ, ಬೈಕ್ ನಲ್ಲಿತೆಗೆದುಕೊಂಡು ಹೋಗಿರುವ ಮಾರ್ಗದಲ್ಲಿ, ಅಂದರೆ ತಾಲೂಕಿನ ಮಲ್ಕಾಪುರ ಗ್ರಾಮದ ಮಾರ್ಗದಲ್ಲಿತೆಲಂಗಾಣದ ಗಡಿಯಲ್ಲೂಮಹಜರು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ವೇಳೆ ಆರೋಪಿಗಳಿಂದ ಕೃತ್ಯವನ್ನು ಹೇಗೆ ನಡೆಸಿ, ಹೇಗೆ ಪರಾರಿಯಾದರು ಎಂಬ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದರು. ಮುಂದಿನ ಎರಡ್ಮೂರು ದಿನಗಳಲ್ಲಿಮತ್ತೆ ಆರೋಪಿಗಳನ್ನು ಬಿಹಾರಕ್ಕೆ ಕರೆದೊಯ್ದು, ಕೃತ್ಯಕ್ಕೆ ಬಳಸಿರುವ ಪಿಸ್ತೂಲು ಹಾಗೂ ಹಣವನ್ನು ಜಪ್ತಿ ಮಾಡಲಾಗುತ್ತದೆ ಎಂದು ಖಚಿತ ಮೂಲಗಳು ‘ವಿಜಯ ಕರ್ನಾಟಕ’ಕ್ಕೆ ತಿಳಿಸಿವೆ.
ಸ್ಥಳ ಮಹಜರು ವೇಳೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಪ್ರದೀಪ ಗುಂಟಿ, ಡಿವೈಎಸ್ಪಿ ದೂದ್ ಪೀರ್ ಹುಸೇನ್ ಮುಲ್ಲಾ, ಡಿವೈಎಸ್ಪಿ ಸನ್ನದಿ ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.