ಕಲ್ಮೇಶ ಪಟ್ಟಣದವರ ಹುಬ್ಬಳ್ಳಿಅಸಹಕಾರ ಚಳವಳಿ ಮೂಲಕ ದೇಶವ್ಯಾಪಿ ಹೋರಾಟದ ಕಿಚ್ಚು ಹೊತ್ತಿಸಿದ ಮಹಾತ್ಮ ಗಾಂಧೀಜಿ ಅವರು, ದೇಶದ ಜನಮಾನಸದಲ್ಲಿಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅಂತಹ ಮಹಾನ್ ಚೇತನರ ಚಿಂತನೆಯ ಪರಿಕಲ್ಪನೆಯೊಂದಿಗೆ ಹುಬ್ಬಳ್ಳಿಯಲ್ಲಿಉದಯಿಸಿದ ರಾಜ್ಯದ ಮೊದಲ ಮಹಿಳಾ ಸಂಸ್ಥೆಯಲ್ಲಿಅವರ ಸವಿನೆನಪಿಗಾಗಿ ಚಿತಾಭಸ್ಮ ಕೂಡ ಇರಿಸಲಾಗಿದೆಯಲ್ಲದೇ, ಪ್ರತಿ ಕಾರ್ಯಕ್ರಮಕ್ಕೂ ಪೂರ್ವ ಮತ್ತು ನಿತ್ಯ ಇಲ್ಲಿಪೂಜೆ ಹಾಗೂ ಗಾಂಧೀಜಿ ಅವರ ಸ್ಮರಣೆ ನಿರಂತರವಾಗಿದೆ.
ಮಹಾತ್ಮ ಗಾಂಧೀಜಿ ಅವರ ಪ್ರೇರಣೆಯಿಂದ ಇಲ್ಲಿನ ವಿದ್ಯಾನಗರದಲ್ಲಿಸರದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾಪೀಠ ಸ್ಥಾಪನೆಯಾಗಿದೆ. ಸರದಾರ ವೀರನಗೌಡ ಪಾಟೀಲ ಹಾಗೂ ಅವರ ಪತ್ನಿ ನಾಗಮ್ಮ್ಮ ಈ ಪೀಠದ ಸಂಸ್ಥಾಪಕರು. ಸಂಸ್ಥೆಯು ಇದೀಗ ರಾಜ್ಯದ ಮೊದಲ ಮಹಿಳಾ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದಿದೆ.
ಸರದಾರ ವೀರನಗೌಡರು ಮಹಾತ್ಮ ಗಾಂಧೀಜಿ ಅವರ ಕಟ್ಟಾ ಅನುಯಾಯಿ ಆಗಿದ್ದರು. ಹೀಗಾಗಿ ಗಾಂಧೀಜಿ ಅವರ ಮರಣಾನಂತರ ಅವರ ಚಿತಾಭಸ್ಮವನ್ನು ತ್ರಿವೇಣಿ ಸಂಗಮ ಹಗೂ ಇನ್ನಿತರ ಸಂಗಮಗಳಲ್ಲಿವಿಸರ್ಜಿಸಿದರು. ಆ ಸಂದರ್ಭದಲ್ಲಿಸರದಾರ ವೀರನಗೌಡರು ಅವರ ಅನುಯಾಯಿ ಆಗಿದ್ದರಿಂದ ಅಲಹಾಬಾದ್ ಗೆ ಹೋಗಿ ಗಾಂಧೀಜಿ ಅವರ ಚಿತಾಭಸ್ಮವನ್ನು ತಂದು ಮನೆಯಲ್ಲಿಇಟ್ಟುಕೊಂಡು ಪೂಜಿಸುತ್ತಿದ್ದರು.
ಪ್ರತಿ ಕಾರ್ಯಕ್ಕೂ ಮೊದಲು ಪೂಜೆ
ಕೆಲವು ವರ್ಷಗಳ ನಂತರ ಆಗಿನ ಸರಕಾರ ಗಾಂಧೀಜಿ ಅವರ ಚಿತಾಭಸ್ಮವನ್ನು ಮನೆಯಲ್ಲಿಇಟ್ಟುಕೊಳ್ಳಬಾರದೆಂಬ ಆದೇಶ ಹೊರಡಿಸಿತು. ಈ ಹಿನ್ನೆಲೆಯಲ್ಲಿವಿದ್ಯಾನಗರದ ಮಹಿಳಾ ವಿದ್ಯಾಪೀಠದಲ್ಲಿರುವ ಗಾಂಧೀಜಿ ಪ್ರಾರ್ಥನಾ ಮಂದಿರದಲ್ಲಿಇರಿಸಿದರು. ಅಂದಿನಿಂದ ಇಂದಿನವರೆಗೂ ವಿದ್ಯಾನಗರದ ಮಹಿಳಾ ವಿದ್ಯಾಪೀಠದಲ್ಲಿರುವ ಗಾಂಧೀಜಿ ಪ್ರಾರ್ಥನಾ ಮಂದಿರದಲ್ಲಿಅವರ ಚಿತಾಭಸ್ಮ ಪೂಜೆಗೊಳ್ಳುತ್ತಿದೆ. ಹಾಗೆಯೇ ಮಹಿಳಾ ವಿದ್ಯಾಪೀಠದಲ್ಲಿನಡೆಯುವ ಪ್ರತಿ ಕಾರ್ಯಕ್ರಮಕ್ಕೂ ಪೂರ್ವದಲ್ಲಿಚಿತಾಭಸ್ಮ ಇರುವ ಸ್ಥಳಕ್ಕೆ ಪೂಜಿಸಿದ ನಂತರವೇ ಮುಂದಿನ ಕಾರ್ಯಕ್ರಮಕ್ಕೆ ಅಣಿಯಾಗುವುದು ಮಹಿಳಾ ವಿದ್ಯಾಪೀಠದ ಒಂದು ಸಂಪ್ರದಾಯವಾಗಿ ಬೆಳೆದಿದೆ.
ಪ್ರಮುಖವಾಗಿ ಮಹಿಳಾ ವಿದ್ಯಾಪೀಠ ಪ್ರತಿ ಕಾರ್ಯಕ್ರಮದ ಜತೆಗೆ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಎಲ್ಲರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿಗಾಂಧೀಜಿ ಅವರ ಚಿತಾಭಸ್ಮ ಇರುವ ಸ್ಥಳಕ್ಕೆ ಪೂಜೆ ಸಲ್ಲಿಸುವುದಷ್ಟೇಯಲ್ಲ, ಎಲ್ಲಕಾರ್ಯಕ್ರಮಗಳನ್ನು ಪ್ರಾರ್ಥನಾ ಮಂದಿರದಲ್ಲಿನಡೆಸಲಾಗುತ್ತದೆ. ಆ ಮೂಲಕ ಅವರನ್ನು ಸ್ಮರಿಸುವ ಕೆಲಸ ಸರದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾಪೀಠದಲ್ಲಿಇಂದಿಗೂ ಮುಂದುವರಿದಿದೆ. ಸದ್ಯ ಮಹಿಳಾ ವಿದ್ಯಾಪೀಠದ ಅಧ್ಯಕ್ಷರಾಗಿ ಬಸಂತಕುಮಾರ ಪಾಟೀಲ ಅವರ ಕಾರ್ಯನಿರ್ವಹಿಸುತ್ತಿದ್ದು, ಅವರು ಕೂಡ ಸರದಾರ ವೀರನಗೌಡ ಪಾಟೀಲ ಅವರಂತೆಯೇ ಮಹಾತ್ಮ ಗಾಂಧೀಜಿ ಅವರ ಆರಾಧಕರಾಗಿದ್ದಾರೆ. ಹೀಗಾಗಿ ಈ ಪದ್ಧತಿಗೆ ಯಾವುದೇ ಚ್ಯುತಿಯಾಗದಂತೆ ನೋಡಿಕೊಂಡು ಹೊರಟಿರುವುದು ವಿಶೇಷ.
ಬಾಕ್ಸ್ ...
ಸ್ಥಾಪನೆಯಾಗಿದ್ದು ಹೇಗೆ?
1933ರಲ್ಲಿಮಹಾತ್ಮ ಗಾಂಧೀಜಿ ಅವರು ದಕ್ಷಿಣ ಭಾರತ ಪ್ರವಾಸ ಕೈಗೊಂಡ ಸಂದರ್ಭದಲ್ಲಿಸರದಾರ ವೀರನಗೌಡರು, ಗಾಂಧೀಜಿ ಅವರು ಸ್ಥಾಪಿಸಿದ ಹರಿಜನ ಸೇವಕ ಸಂಘ ಎಂಬ ಸಂಸ್ಥೆಗೆ ಕರ್ನಾಟಕ ಭಾಗದ ಅಧ್ಯಕ್ಷರಾಗಿದ್ದರು. ಹೀಗಾಗಿ ಗಾಂಧೀಜಿ ಅವರ ಪ್ರವಾಸದ ವ್ಯವಸ್ಥೆಯನ್ನು ಅವರೇ ಮಾಡಿದ್ದರು. ಹೀಗಾಗಿ ಅವರೊಂದಿಗೆ ಪ್ರವಾಸಕ್ಕೆ ಹೊರಟ ಮಾರ್ಗದಲ್ಲಿಯೇ ಬ್ಯಾಡಗಿಯಲ್ಲಿಅವರು ನಡೆಸುತ್ತಿದ್ದ ಹರಿಜನ ಹುಡುಗರ ಆಶ್ರಮ ಮತ್ತು ಮೋಟೆಬೆನ್ನೂರಿನಲ್ಲಿಹುಡಗರ ಆಶ್ರಮ ಕೂಡ ಇತ್ತು. ಅಲ್ಲಿನ ಹುಡುಗರನ್ನು ನಾಗಮ್ಮ ಅವರು ನೋಡಿಕೊಳ್ಳುತ್ತಿದ್ದರು. ಅದನ್ನು ವೀಕ್ಷಿಸಿದ ಗಾಂಧೀಜಿ ಅವರು, ತಾವು ಇಬ್ಬರು ಹರಿಜನ ಹೆಣ್ಣು ಮಕ್ಕಳನ್ನು ತಂದು ಸ್ವಂತ ಮಕ್ಕಳಂತೆ ಸಾಕು ಎಂದು ಹೇಳಿದರು. ಆಗ ನಾಗಮ್ಮ ಆ ಮಾತನ್ನು ವೇದವಾಕ್ಯವಾಗಿ ಪಾಲಿಸಿದರು. ಅದೇ ಮುಂದೆ ಹರಿಜನ ಬಾಲಿಕಾಶ್ರಮ ಆಗಿ ತಲೆ ಎತ್ತಿ ನಿಂತಿತು. ಅಲ್ಲದೇ, ಭಾರತದ 2ನೇ ಹರಿಜನ ಬಾಲಿಕಾಶ್ರಮ ಎಂಬ ಹೆಗ್ಗಳಿಕೆ ಪಾತ್ರವಾಯಿತು. ಅದೇ ಈಗ ಮಹಿಳಾ ವಿದ್ಯಾಪೀಠವಾಗಿ ರಾಜ್ಯದ ಮೊದಲ ಮಹಿಳಾ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಕೋಟ್
ವಿದ್ಯಾನಗರದ ಸರದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾಪೀಠದಲ್ಲಿನಡೆಯುವ ಪ್ರತಿ ಕಾರ್ಯಕ್ರಮಕ್ಕೂ ಮೊದಲ ಪೂಜೆ ಸಲ್ಲಿಕೆಯಾಗುವುದು ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮ ಇರುವ ಸ್ಥಳಕ್ಕೆ. ನಂತರವೇ ಉಳಿದೆಲ್ಲಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷ ಎಂದರೆ, ಚಿತಾಭಸ್ಮ ಇರುವ ಪ್ರಾರ್ಥನಾ ಮಂದಿರದಲ್ಲಿಯೇ ಎಲ್ಲಕಾರ್ಯಕ್ರಮಗಳು ನಡೆಯುತ್ತವೆ. ಇದು ಇಲ್ಲಿನ ಸಂಪ್ರದಾಯ ಕೂಡ ಹೌದು.
- ಗದಗ ಎಸ್ .ಜಿ., ಆಡಳಿತಾಧಿಕಾರಿ, ಮಹಿಳಾ ವಿದ್ಯಾಪೀಠ, ಹುಬ್ಬಳ್ಳಿ.
ಫೋಟೋ: 14 ಸಂತೋಷ ಚಿತಾಭಸ್ಮ
ಹುಬ್ಬಳ್ಳಿಯ ವಿದ್ಯಾನಗರದ ಮಹಿಳಾ ವಿದ್ಯಾಪೀಠದಲ್ಲಿರುವ ಗಾಂಧೀಜಿ ಅವರ ಚಿತಾಭಸ್ಮ ಇರುವ ಸ್ಥಳ.