ವೇಲ್ಸ್ ವಿರುದ್ಧ ಭಾರತ ‘ಮಿಷನ್ ವಿಶ್ವಕಪ್ ’ ಆರಂಭ

Contributed bymanjunath.gowda@timesgroup.com|Vijaya Karnataka
indian hockey team prepared for intense battle against wales in mission world cup
ದೇಶದ 70ನೇ ಸ್ವಾತಂತ್ರ್ಯೋತ್ಸವಕ್ಕೆ ಗೆಲುವಿನ ಮೆರಗು ನೀಡುವ ವಿಶ್ವಾಸ

ಆಮ್ ಸ್ಟೇಲ್ವೀನ್ (ದಿ ನದೆರ್ಲೆಂಡ್ಸ್ ): ಭಾರತೀಯ ಪುರುಷರ ಹಾಕಿ ತಂಡವು 51 ವರ್ಷಗಳ ವಿಶ್ವಕಪ್ ಪ್ರಶಸ್ತಿ ಬರವನ್ನು ಅಂತ್ಯಗೊಳಿಸುವ ಗುರಿಯೊಂದಿಗೆ ಈ ಬಾರಿ ಎಫ್ ಐಎಚ್ ಹಾಕಿ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಶನಿವಾರ ನಡೆಯಲಿರುವ ‘ಡಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿಭಾರತ ವೇಲ್ಸ್ ತಂಡವನ್ನು ಎದುರಿಸಲಿದೆ.
ದೇಶದ 70ನೇ ಸ್ವಾತಂತ್ರ್ಯೋ ತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ನಿಟ್ಟಿನಲ್ಲಿವೇಲ್ಸ್ ವಿರುದ್ಧ ಗೆಲುವು ಸಾಧಿಸಿ ವಿಶ್ವಕಪ್ ಅಭಿಯಾನಕ್ಕೆ ಭರ್ಜರಿ ಚಾಲನೆ ನೀಡಲು ಹರ್ಮನ್ ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡ ಸಜ್ಜಾಗಿದೆ. ಭಾರತ ಕೊನೆಯ ಬಾರಿಗೆ ಹಾಗೂ ಏಕೈಕವಾಗಿ 1975ರಲ್ಲಿವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು. ಕೌಲಾಲಂಪುರದಲ್ಲಿನಡೆದ ಫೈನಲ್ ನಲ್ಲಿಅಜಿತ್ ಪಾಲ್ ಸಿಂಗ್ ನೇತೃತ್ವದ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಇದಕ್ಕೂ ಮೊದಲು ಭಾರತ, 1971ರಲ್ಲಿಕಂಚು ಹಾಗೂ 1973ರಲ್ಲಿಬೆಳ್ಳಿ ಪದಕ ಗೆದ್ದಿತ್ತು.

ಈಗ ಐದು ದಶಕಗಳ ಬಳಿಕ ಈಗ ಹರ್ಮನ್ ಪ್ರೀತ್ ನೇತೃತ್ವದ ಹೊಸ ಪೀಳಿಗೆಯ ತಂಡ ಇತಿಹಾಸ ಬದಲಿಸುವ ಆದಮ್ಯ ವಿಶ್ವಾಸದಲ್ಲಿದೆ. ‘‘ಭಾರತೀಯ ಹಾಕಿಯಲ್ಲಿನಮ್ಮದೇ ಆದ ಇತಿಹಾಸವನ್ನು ಬರೆಯಲು ನಾವು ಬಯಸುತ್ತೇವೆ,’’ ಎಂದು ಕೋಚ್ ಕ್ರೇಗ್ ಫುಲ್ಟನ್ ಹೇಳಿದ್ದಾರೆ. 1975ರ ಸಾಧನೆಯ ಒತ್ತಡವನ್ನು ಬದಿಗಿರಿಸಿ, ಆಟಗಾರರು ತಮ್ಮದೇ ಕಥೆಯನ್ನು ಬರೆಯಬೇಕು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ನಲ್ಲಿ41 ವರ್ಷಗಳ ಬಳಿಕ ಒಲಿಂಪಿಕ್ಸ್ ನಲ್ಲಿಕಂಚಿನ ಪದಕ ಗೆದ್ದ ಭಾರತ, ಪ್ಯಾರಿಸ್ ಒಲಿಂಪಿಕ್ಸ್ ನಲ್ಲೂಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತ್ತು. ಈಗ ಅದೇ ಸ್ಥಿರ ಪ್ರದರ್ಶನವನ್ನು ವಿಶ್ವಕಪ್ ವೇದಿಕೆಯಲ್ಲೂಮುಂದುವರಿಸುವುದು ತಂಡದ ಮುಂದಿರುವ ಪ್ರಮುಖ ಸವಾಲಾಗಿದೆ. ‘‘ನಾವು ಅದೇ ಉತ್ಸಾಹ, ಮನಸ್ಥಿತಿ ಮತ್ತು ಸಿದ್ಧತೆಯೊಂದಿಗೆ ಇಲ್ಲಿಗೆ ಬಂದಿದ್ದೇವೆ. ವಿಶ್ವಕಪ್ ನಲ್ಲಿಪದಕ ಗೆಲ್ಲಲೇಬೇಕು ಎಂಬ ಒತ್ತಡ ನಮ್ಮ ಮೇಲಿಲ್ಲ; ಬದಲಾಗಿ ಉತ್ತಮ ಪ್ರದರ್ಶನ ನೀಡುವುದು ನಮ್ಮ ಜವಾಬ್ದಾರಿ,’’ ಎಂದು ನಾಯಕ ಹರ್ಮನ್ ಪ್ರೀತ್ ಹೇಳಿದ್ದಾರೆ.

ಭಾರತ ಫೇವರಿಟ್ : ವಿಶ್ವ ರಾರ ಯಂಕಿಂಗ್ ನಲ್ಲಿ8ನೇ ಸ್ಥಾನದಲ್ಲಿರುವ ಭಾರತಕ್ಕೆ 15ನೇ ಸ್ಥಾನದಲ್ಲಿರುವ ವೇಲ್ಸ್ ವಿರುದ್ಧದ ಆರಂಭಿಕ ಪಂದ್ಯ ಕಾಗದದ ಮೇಲೆ ಸುಲಭವೆನಿಸಿದರೂ ಉತ್ತಮ ಆರಂಭ ಪಡೆಯುವುದು ಅತ್ಯಂತ ಮಹತ್ವದ್ದಾಗಿದೆ. ಮೊದಲ ಪಂದ್ಯದ ನಂತರ ಭಾರತ 3ನೇ ರಾರ ಯಂಕ್ ನ ಇಂಗ್ಲೆಂಡ್ ಹಾಗೂ 12ನೇ ರಾರ ಯಂಕ್ ನ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.ಕಳೆದ ಪ್ರೊ ಲೀಗ್ ಋುತುವಿನಲ್ಲಿಒಂಬತ್ತು ತಂಡಗಳ ಪೈಕಿ 8ನೇ ಸ್ಥಾನಕ್ಕೆ ಕುಸಿದಿದ್ದ ಭಾರತ, ಯುರೋಪ್ ಹಂತದ ಕೊನೆಯಲ್ಲಿಉತ್ತಮ ಲಯ ಕಂಡುಕೊಂಡಿದೆ. ವಿಶ್ವ ಮತ್ತು ಯುರೋಪಿಯನ್ ಚಾಂಪಿಯನ್ ಜರ್ಮನಿ ಹಾಗೂ ಒಲಿಂಪಿಕ್ ಚಾಂಪಿಯನ್ ನೆದರ್ಲೆಂಡ್ಸ್ ವಿರುದ್ಧ ಭಾರತ ಗಮನಾರ್ಹ ಗೆಲುವು ದಾಖಲಿಸಿತ್ತು. ರಾಜಗಿರ್ ನಲ್ಲಿನಡೆದ ಏಷ್ಯಾ ಕಪ್ ಪ್ರಶಸ್ತಿ ಕೂಡ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಸಮತೋಲನ ತಂಡ: 2025-26ರ ಪ್ರೊ ಲೀಗ್ ಋುತುವಿನಲ್ಲಿ33 ಆಟಗಾರರನ್ನು ಪರೀಕ್ಷಿಸಿದ ಬಳಿಕ ಫುಲ್ಟನ್ ಅನುಭವ ಮತ್ತು ಯುವ ಪ್ರತಿಭೆಗಳ ಸಮತೋಲನದ ತಂಡವನ್ನು ಆಯ್ಕೆ ಮಾಡಿದ್ದಾರೆ. ಭಾರತದ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ಆಟಗಾರನಾಗಿರುವ ಅನುಭವಿ ಮಿಡ್ ಫೀಲ್ಡರ್ ಮನ್ ಪ್ರೀತ್ ಸಿಂಗ್ 417 ಅಂತಾರಾಷ್ಟ್ರೀಯ ಪಂದ್ಯಗಳ ಅನುಭವದೊಂದಿಗೆ ತಂಡಕ್ಕೆ ನಾಯಕತ್ವ ಮತ್ತು ಸ್ಥಿರತೆ ನೀಡಲಿದ್ದಾರೆ. ಇದೇ ವೇಳೆ 8 ಆಟಗಾರರು ಇದೇ ಮೊದಲ ಬಾರಿಗೆ ವಿಶ್ವಕಪ್ ನಲ್ಲಿಆಡಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಪಿ.ಆರ್ . ಶ್ರೀಜೇಶ್ ನಿವೃತ್ತರಾಗಿರುವ ಹಿನ್ನೆಲೆಯಲ್ಲಿಗೋಲ್ ಪೋಸ್ಟ್ ನ ಜವಾಬ್ದಾರಿ ಯುವ ಗೋಲ್ ಕೀಪರ್ ಗಳಾದ ಮೋಹಿತ್ ಎಚ್ .ಎಸ್ . ಮತ್ತು ಸೂರಜ್ ಕರ್ಕೆರಾ ಅವರ ಮೇಲಿದೆ.

ಆಕ್ರಮಣಕಾರಿ ಶೈಲಿಯ ಪ್ರಮುಖ ಅಸ್ತ್ರವಾಗಿರುವ ನಾಯಕ ಹರ್ಮನ್ ಪ್ರೀತ್ ಅವರ ಪೆನಾಲ್ಟಿ ಕಾರ್ನರ್ ಸಾಮರ್ಥ್ಯದ ಮೇಲೆ ಭಾರತ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಅನುಭವಿ ಡಿಫೆಂಡರ್ ಅಮಿತ್ ರೋಹಿದಾಸ್ ಅವರೊಂದಿಗೆ ಅವರು ರಕ್ಷಣಾ ವಿಭಾಗಕ್ಕೂ ಬಲ ತುಂಬಲಿದ್ದಾರೆ. ಮಿಡ್ ಫೀಲ್ಡ್ ನಲ್ಲಿಮನ್ ಪ್ರೀತ್ ಸಿಂಗ್ ಮತ್ತು ಹಾರ್ದಿಕ್ ಸಿಂಗ್ ಪ್ರಮುಖ ಪಾತ್ರ ವಹಿಸಲಿದ್ದು, ದಾಳಿಯಲ್ಲಿಅಭಿಷೇಕ್ ಮತ್ತು ಮಂದೀಪ್ ಸಿಂಗ್ ಮೇಲೆ ತಂಡ ಸಾಕಷ್ಟು ನಿರೀಕ್ಷೆ ನಿರೀಕ್ಷೆ ಹೊಂದಿದೆ. ಮಂದೀಪ್ ಸಿಂಗ್ 300 ಅಂತಾರಾಷ್ಟ್ರೀಯ ಪಂದ್ಯಗಳ ಮೈಲಿಗಲ್ಲುತಲುಪಲು ಇನ್ನೂ 12 ಪಂದ್ಯಗಳ ದೂರದಲ್ಲಿದ್ದಾರೆ.

ಇತ್ತ ಸತತ ಎರಡನೇ ವಿಶ್ವಕಪ್ ಆಡುತ್ತಿರುವ ವೇಲ್ಸ್ ತಂಡವು ಇಂಗ್ಲೆಂಡ್ , ಆಸ್ಪ್ರೇಲಿಯಾ ಮತ್ತು ಸ್ಪೇನ್ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಿ ಸಜ್ಜುಗೊಂಡಿದ್ದು, ಭಾರತಕ್ಕೆ ಆಘಾತ ನೀಡುವ ನಿರೀಕ್ಷೆಯಲ್ಲಿದೆ. ವೇಲ್ಸ್ ವಿರುದ್ಧದ ಗೆಲುವು ಭಾರತಕ್ಕೆ ಉತ್ತಮ ಆರಂಭ ನೀಡಲಿದ್ದು, ಆಗಸ್ಟ್ 17ರಂದು ಇಂಗ್ಲೆಂಡ್ ಹಾಗೂ ಆಗಸ್ಟ್ 19ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಕಠಿಣ ಪಂದ್ಯಗಳಿಗೆ ಆತ್ಮವಿಶ್ವಾಸ ಹೆಚ್ಚಿಸಲಿದೆ. ಇದರ ಜತೆಗೆ, ಮುಂದಿನ ತಿಂಗಳು ನಡೆಯಲಿರುವ ಏಷ್ಯನ್ ಗೇಮ್ಸ್ ನಲ್ಲೂಭಾರತ ಚಿನ್ನದ ಪದಕದ ಜತೆಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವ ಗುರಿ ಹೊಂದಿದೆ.

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್; ಪಂದ್ಯ ಆರಂಭ: ಸಂಜೆ 4:30ಕ್ಕೆ.