ತಾಳ್ಮೆ ಮತ್ತು ಸಹನೆ ಮನುಷ್ಯನ ಬದುಕಿನ ಅತ್ಯಂತ ಪ್ರಮುಖ ಗುಣಗಳಾಗಿದ್ದು, ಧರ್ಮಾಚರಣೆ ಹಾಗೂ ಆಧ್ಯಾತ್ಮಿಕ ಸಾಧನೆಯ ಮೂಲಕ ಅವುಗಳನ್ನು ಬೆಳೆಸಿಕೊಳ್ಳಬಹುದು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಸ್ವರ್ಣವಲ್ಲೀ ಸಂಸ್ಥಾನದಲ್ಲಿಉಭಯ ಶ್ರೀಗಳ ಚಾತುರ್ಮಾಸ್ಯದ ಅಂಗವಾಗಿ ಶಿರಸಿ ಸೀಮೆಯ ತೋರಣಸಿ ಭಾಗಿ, ತೆರಕಕನಹಳ್ಳಿ ಭಾಗಿ ಮತ್ತು ತುಂಡುಗ್ರಾಮದ ಶಿಷ್ಯರು ಹಾಗೂ ಮಾತೆಯರು ಸಲ್ಲಿಸಿದ ಪಾದುಕಾಪೂಜೆ, ಭಿಕ್ಷಾಸೇವೆ ಸ್ವೀಕರಿಸಿ ಅವರು ಆಶೀರ್ವಚನ ನುಡಿದರು.
ಮನಸ್ಸು ಕೊಟ್ಟು ತೊಡಗಿಸಿಕೊಳ್ಳಿ
ತಾಳ್ಮೆಯಿಂದ ಬದುಕಲು ಯಾರು ಕಲಿತಿರುತ್ತಾನೋ ಅವನು ದೀರ್ಘವಾದ ಆಯುಸ್ಸು ಮತ್ತು ಶ್ರೇಷ್ಠವಾದ ಬದುಕನ್ನು ಕಾಣುತ್ತಾನೆ. ತಾಳ್ಮೆ ಎಂದರೆ ಸಹಿಸಿಕೊಳ್ಳುವಿಕೆ, ಸಹನೆ ಎಂದರ್ಥ. ಧರ್ಮಾಚರಣೆಯಲ್ಲಿ, ವ್ರತದಲ್ಲಿಮನಸ್ಸು ಕೊಟ್ಟು ನಮ್ಮನ್ನು ನಾವು ತೊಡಗಿಸಿಕೊಂಡರೆ ನಮಗೆ ಅರಿವಿಲ್ಲದೆಯೇ ತಾಳ್ಮೆಯ ಅಭ್ಯಾಸ ಆಗಿರುತ್ತದೆ. ಬೇಸರ, ಸಿಟ್ಟು, ದುಃಖ ಮೊದಲಾದ ಮಾನಸಿಕ ಆಧಿಗಳು ಬಹುತೇಕ ಎಲ್ಲವೂ ಇದರಿಂದ ಕಡಿಮೆಯಾಗುತ್ತದೆ. ಎಂದರು.
ಹಸಿವು, ಬಾಯಾರಿಕೆ, ನಿದ್ರೆಯಂತಹ ಶಾರೀರಿಕ ಉದ್ವೇಗ ತಡೆಯಬಾರದು. ಇದನ್ನು ಸಹಿಸಿಕೊಳ್ಳಲು ಹೋದರೆ ಆರೋಗ್ಯಕ್ಕೆ ಹಾನಿಯಾಗುತ್ತದೆ. ಆದರೆ ಲೋಭ, ಈರ್ಷ್ಯೆ, ದ್ವೇಷ, ಮಾತ್ಸರ್ಯ ಮತ್ತು ಅತಿಯಾದ ರಾಗದಂತಹ ಉದ್ವೇಗ ನಿಯಂತ್ರಿಸುವುದು ಅತ್ಯಂತ ಅಗತ್ಯ. ಇವುಗಳನ್ನು ಅವಶ್ಯವಾಗಿ ಪ್ರಯತ್ನಪಟ್ಟು ತಡೆಯಲೇಬೇಕು. ಇದು ಮನಸ್ಸಿಗೆ ಹಾಗೂ ದೇಹಕ್ಕೆ ಒಳ್ಳೆಯದು. ಇದೇ ನಿಜವಾದ ತಾಳ್ಮೆ ಎಂದರು.
ಜಪತಪ ಮಾಡಿ
ಇಂದಿನ ಜೀವನಶೈಲಿಯಲ್ಲಿಅತಿಯಾದ ಆಸೆ, ಒತ್ತಡ ಹಾಗೂ ಧರ್ಮಾಚರಣೆಯ ಕೊರತೆಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಸಾತ್ವಿಕ ಆಹಾರ, ನಿತ್ಯ ಅನುಷ್ಠಾನ, ನಿಯಮಿತ ಜಪ, ಪೂಜೆ ಹಾಗೂ ಧರ್ಮಾಚರಣೆಯಿಂದ ಮಾನಸಿಕ ನೆಮ್ಮದಿ ಮತ್ತು ಉತ್ತಮ ಆರೋಗ್ಯ ಪಡೆಯಬಹುದು ಎಂದರು.
ರಾಜಸಿಕ ಆಹಾರವು ಮನಸ್ಸಿನಲ್ಲಿಕಾಮ, ಕ್ರೋಧ, ಚಾಂಚಲ್ಯ ಮತ್ತು ಉದ್ವೇಗ ಹೆಚ್ಚಿಸುತ್ತದೆ, ಮನಸ್ಸನ್ನು ಶಾಂತವಾಗಿರಲು ಬಿಡುವುದಿಲ್ಲ. ಅತಿಯಾದ ಆತುರ, ಸಿಟ್ಟು ಮತ್ತು ಆತಂಕಕ್ಕೆ ಕಾರಣವಾಗುತ್ತದೆ. ಸಾತ್ವಿಕ ಆಹಾರವು ಮನಸ್ಸಿಗೆ ಶಾಂತಿ, ತಾಳ್ಮೆ, ಸ್ಪಷ್ಟತೆ ಮತ್ತು ಏಕಾಗ್ರತೆ ನೀಡುತ್ತದೆ. ಇದು ದೇಹದಲ್ಲಿಸುಲಭವಾಗಿ ಜೀರ್ಣವಾಗಿ, ಮನಸ್ಸಿನಲ್ಲಿಸತ್ವಗುಣಗಳನ್ನು ಬೆಳೆಸುತ್ತದೆ ಎಂದರು.
ಮಠದ ಕಿರಿಯ ಶ್ರೀಗಳಾದ ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ನೀಡಿದ್ದರು.
ಸೀಮೆಯ ಗುರುಪಾದ ಹೆಗಡೆ, ಜಿ. ಟಿ ಹೆಗಡೆ ಹೊಸಬಾಳೆ, ಜಿ ಆರ್ ಹೆಗಡೆ ಮೆಣಸಿಕೇರಿ, ಉದಯ ಹೆಗಡೆ, ಶ್ರೀಧರ ಹೆಗಡೆ, ಗಿರೀಶ ಗಣಪತಿ ಹೆಗಡೆ ಇತರರು ಇದ್ದರು. ವಿ.ಎನ್ . ಹೆಗಡೆ ಬೊಮ್ಮನಳ್ಳಿ ನಿರೂಪಿಸಿದರು.
ಕೋಟ್
ಡಿಸೆಂಬರ್ 19 ಮತ್ತು 20ರಂದು ಹೊಸಪೇಟೆಯಲ್ಲಿನಡೆಯಲಿರುವ ಗೀತಾ ಜಯಂತಿ ಕಾರ್ಯಕ್ರಮದಲ್ಲಿಶಿಷ್ಯರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಬೇಕು. ದೇವಸ್ಥಾನ ಹಾಗೂ ಶಾಲೆಗಳಲ್ಲಿಭಗವದ್ಗೀತೆಯ ಎರಡನೇ ಅಧ್ಯಾಯ ಕಲಿಸುವ ಕಾರ್ಯ ನಡೆಯಬೇಕು.
-ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಸ್ವರ್ಣವಲ್ಲೀ
*ಪೋಟೋ 14ಎಸ್ಸಾರೆಸ್ 5
ಸ್ವರ್ಣವಲ್ಲೀಯಲ್ಲಿಶಿರಸಿ ಸೀಮೆಯ ತೋರಣಸಿ ಭಾಗಿ, ತೆರಕಕನಹಳ್ಳಿ ಭಾಗಿ ಮತ್ತು ತುಂಡುಗ್ರಾಮದ ಶಿಷ್ಯರು ಹಾಗೂ ಮಾತೆಯರು ಸಲ್ಲಿಸಿದ ಪಾದುಕಾಪೂಜೆ, ಭಿಕ್ಷಾಸೇವೆ ಸ್ವೀಕರಿಸಿ ಶ್ರೀಗಳು ಆಶೀರ್ವದಿಸಿದರು.