ಲೀಡ್

Contributed byshubha.hegde@timesgroup.com|Vijaya Karnataka
bendre and shravana a stream of joy
ಶ್ರಾವಣ ಸಡಗರದ ಬೇಂದ್ರೆಗೀತ

ಕಿಕ್ಕರ್ : ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ...
---

ಇಂಟ್ರೊ: ಪ್ರಕೃತಿಯ ಸೌಂದರ್ಯ, ಮಳೆಯ ಬೆರಗಿನ ನಡುವೆ ಶ್ರಾವಣ ಸಂಭ್ರಮ ಶುರುವಾಗಿದೆ. ಶ್ರಾವಣದ ನಾದಮಯ ವಾತಾವರಣವು ಬೇಂದ್ರೆಯವರ ಸಾಹಿತ್ಯದೊಂದಿಗೆ ಬೆಸೆದುಕೊಂಡಿತ್ತು. ಶ್ರಾವಣದ ಕುರಿತಾಗಿಯೇ 11 ಕವನಗಳನ್ನು ರಚಿಸಿದ ಬೇಂದ್ರೆಯವರಂತೆ ಈ ಹಬ್ಬಗಳ ಮಾಸವನ್ನು ಸಡಗರಿಸಿದ ಕವಿ ಮತ್ತೊಬ್ಬರಿಲ್ಲ. ಅದಕ್ಕಾಗಿಯೇ ಇರಬೇಕು, ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರು ಬೇಂದ್ರೆಯವರನ್ನು ‘ಶ್ರಾವಣ ಪ್ರತಿಭೆ’ ಎಂದು ಕರೆದರು. ಈಗ ಮತ್ತೆ ಶ್ರಾವಣ ಬಂದಿದೆ. ಬೇಂದ್ರೆಯವರ ಪದ್ಯಗಳೂ ನೆನಪಾಗಿವೆ.

---

ಸ್ಲಗ್ : ಶ್ರಾವಣ ಸಡಗರ

---

ಜಿ.ಬಿ. ಹರೀಶ

---

ಬೇಂದ್ರೆ ಎಂಬ ಪದದ ಅರ್ಥವೇ ವೇದ ಎಂದು. ವೇದಗಳನ್ನು ಅಭ್ಯಾಸ ಮಾಡಿದ ಜನರಿಗೆ ಪಾಠ ಹೇಳುತ್ತಿದ್ದ ಮನೆತನದಿಂದ ಬಂದ ಬೇಂದ್ರೆಯವರು ಸ್ವತಃ ವೇದಗಳ ಉಪಾಸಕರು. ವೇದದಲ್ಲಿನಾದಕ್ಕೆ, ಗಾಯತ್ರಿ ಮಂತ್ರಕ್ಕೆ ಮತ್ತು ಶ್ರುತಿಗೆ ಬಹಳ ಮಹತ್ವ. ಈ ಶ್ರುತಿಯ ಕಲ್ಪನೆ ಅವರ ಗರಿಯಿಂದ ಹಿಡಿದು ನಾಕುತಂತಿ ಮತ್ತು ಮುಂದಿನ ಕವನ ಸಂಕಲನಗಳಲ್ಲೂವ್ಯಾಪಿಸಿದೆ. ಶ್ರುತಿ ಎಂದರೆ 22 ಮನೆಗಳ ಸಂಗೀತದ ಸ್ವರಗಳು ಮಾತ್ರವಲ್ಲ, ಅದನ್ನು ಮೀರಿದಂತೆ ಕಾವ್ಯಲಯ, ಅದಕ್ಕಿಂತ ಆಳವಾಗಿರುವ ಜೀವನವನ್ನು ಸದಾ ಕೇಳಿಸಿಕೊಳ್ಳುವ ಪ್ರತಿಭೆಯ ಶಕ್ತಿ.

ವರಕವಿ ಬೇಂದ್ರೆಯವರು ಶ್ರಾವಣವನ್ನು ಹಲವು ಬಗೆಗಳಲ್ಲಿಧ್ಯಾನಿಸಿದ್ದಾರೆ. ಅವರ ಅರವತ್ತು ವರ್ಷಗಳ ಕಾವ್ಯದ ಅನುಸಂಧಾನದಲ್ಲಿಶ್ರಾವಣ ಅವರಿಗೆ ಬಗೆಬಗೆಯಲ್ಲಿಗೋಚರಿಸಿದೆ. ಹಾಗೆ ನೋಡಿದರೆ, ವಸಂತ ಋುತುವಿಗಿಂತ ಶ್ರಾವಣ ಮಾಸವೇ ಬೇಂದ್ರೆಯವರಿಗೆ ಇಷ್ಟ.

ಗುಳ್ಳಗಂಜಿ ತೊಡವ ತೊಟ್ಟು

ಹಾವಸೆಯಾ ಉಡುಪನುಟ್ಟು

ನಗುವ ತುಟಿಯ ನನೆದ ಎದೆಯ

ತರಳ ನೀನು ಶ್ರಾವಣಾ,

ಅಳಲು ನಗಲು ತಡವೆ ಇಲ್ಲ

ಇದುವೆ ನಿನಗೆ ಆಟವೆಲ್ಲ

ಬಾರೊ ದಿವ್ಯ ಚಾರಣಾ

ತುಂಟ ಹುಡುಗ ಶ್ರಾವಣಾ.

ಈ ಕವನದಲ್ಲಿಅವರು ಶ್ರಾವಣವನ್ನು ತುಂಟ ಹುಡುಗನಿಗೆ ಹೋಲಿಸುತ್ತಾರೆ. ಪ್ರಕೃತಿಯಲ್ಲಿಮಳೆ ಬಂದು ನಿಂತು, ಪಾಚಿ ಕಟ್ಟಿರುವ ಸಂದರ್ಭ, ಇಡೀ ಪ್ರಕೃತಿಯು ನಗುತ್ತಿರುವಂತೆ ಕಾಣುವ ದೃಶ್ಯ, ಅದರಲ್ಲಿಒಂದು ಹುಡುಗಾಟಿಕೆ ಇವುಗಳು ಬೇಂದ್ರೆ ಅವರಿಗೆ ಶ್ರಾವಣ ಮಾಸದಲ್ಲಿಕಂಡುಬರುತ್ತವೆ. ಅಂದರೆ ಶ್ರಾವಣ ಎಂಬ ಪ್ರಾಕೃತಿಕ ಘಟನೆಯು ಅವರಿಗೆ ಒಂದು ವ್ಯಕ್ತಿಯ ರೂಪದಲ್ಲಿ, ವ್ಯಕ್ತಿತ್ವದ ಆಕೃತಿಯಲ್ಲಿಕಂಡುಬರುವುದು ವಿಶೇಷ.

ಕುರುಡು ಪ್ರೀತಿಯ ಹಾಂಗ

ಕುರುಡು ಚಿತ್ತಿಯ ಮಳೆಯೆ

ಮುಗುಳು ನಗಿಸುತ್ತುರುಳಿಸಿ

ಸುರದತ್ತ ಸುರದಾವ || 1||

ಎತ್ತೇನೊ ಬಿತ್ತೇನೊ

ಮಿಂಚಿನ ಮುತ್ತೇನೊ

ಕಣ್ಮುಚ್ಚಿ ತೆರೆವುದರಾಗ

ಹರದಾರಿಗೆ ಹರದಾವ ||2||

ಧಾರಾಕಾರವಾಗಿ ಸುರಿಯುವ ಧಾರವಾಡದ ಮಳೆಯೂ ಬೇಂದ್ರೆಯವರ ಈ ಶ್ರಾವಣ ಕವನಕ್ಕೆ ಮುಖ್ಯ ಆಧಾರ. ಹುಚ್ಚು ಮನಸ್ಸಿನಂತೆ ಪ್ರೀತಿಯಂತೆ ಮಳೆಯು ಎತ್ತೆತ್ತಲೋ ಹರಿಯುತ್ತಿರುವ ಚಿತ್ರಣ ಇಲ್ಲಿಕಂಡುಬರುತ್ತದೆ. ಇನ್ನೊಂದು ಕವನದಲ್ಲಿ‘ಶ್ರಾವಣ ಕುಣಿದ್ಹಾಂಗ ರಾವಣ’ ಎಂದು ಅವರು ಹೇಳಿರುವುದು ಇಲ್ಲಿನೆನಪಿಗೆ ಬರುತ್ತಿದೆ. ಪ್ರತಿಯೊಂದು ಗುಡ್ಡ ಪರ್ವತಗಳಿಗೂ ಮಳೆಗಾಲವು ಎಣ್ಣೆ ನೀರಿನ ಸ್ನಾನವನ್ನು ಮಾಡಿಸುತ್ತಿರುವ ಉಪಮೆ ಆ ಕವನದಲ್ಲಿಕಂಡುಬರುತ್ತದೆ. ಯಾವುದೋ ಒಂದು ಮಾತು, ಒಂದು ರೂಪಕವನ್ನು ಸಾಹಿತ್ಯ ರಚನೆಯ ಆರಂಭ ಕಾಲದಲ್ಲೇ ಕಂಡುಕೊಂಡು ಜೀವನಪೂರ್ತಿ ಅದರ ಹಿಂದೆ ಬೀಳುವುದು ಕವಿತೆ ಬರೆಯುವವರಿಗೆ ಸುಖ ಕೊಡುವ ಕೆಲಸ. ಅಂತೆಯೇ ಬೇಂದ್ರೆ ಜೀವನವಿಡೀ ಅನುಸಂಧಾನ ಮಾಡಿದ ಸಾವಿರದ ರೂಪಕವೆಂದರೆ ಶ್ರಾವಣ.

‘ಬಂಧಮುಕ್ತಿಯ ದಿನವೆ ಬಂದೆಯಾ ಬಾ ಬಳಿಗೆ

ಎಂದು ಕರೆಯೋ ಶ್ರಾವಣಾ,

ದುಂದು-ಕಂಸನ ಕೊಂದು, ತಂದೆ-ತಾಯ್ಹೊರತಂದ

ಕಂದನ್ನ ಕರೆ ಶ್ರಾವಣಾ.

ಕೇದಗೆಯ ಹೊಡೆ ತೂರಿ ಊದು ನಿನ್ನ ತುತೂರಿ

ಮೋದ ಬೀರೋ ಶ್ರಾವಣಾ.

ನಾದವಿದು ಯಾವುದೋ ಅಗಾಧ ತಳದಿಂಬಂತು

ಊದೋದಿದೋ ಶ್ರಾವಣಾ’

ಈ ಕವನದಲ್ಲಿಅವರು ಸ್ವಾತಂತ್ರ್ಯ ದಿನಾಚರಣೆಯೂ ಆಗಸ್ವ್ ತಿಂಗಳಿನಲ್ಲಿಬಂದಿರುವುದನ್ನು, ಅದು ಶ್ರಾವಣ ಮಾಸವಾಗಿರುವುದನ್ನು ಒಟ್ಟಾಗಿ ಕಂಡಿದ್ದಾರೆ.

ಶ್ರಾವಣ ಮಾಸವು ಬೇಂದ್ರೆ ಅವರಿಗೆ ಇಷ್ಟವಾಗಲು ಮೂರು ಕಾರಣಗಳು. ಒಂದು ಶ್ರಾವಣ ಮಾಸದಲ್ಲಿಕೃಷ್ಣನ ಜನ್ಮದಿನ ಅಂದರೆ ಗೋಕುಲಾಷ್ಟಮಿಯು ಬರುತ್ತದೆ. ಭಾರತೀಯ ಸಂಸ್ಕೃತಿಯ ಶ್ರೇಷ್ಠ ಪ್ರತೀಕಗಳಲ್ಲಿಒಂದಾಗಿ ಕೃಷ್ಣನನ್ನು ಕೂಡ ಬೇಂದ್ರೆಯವರು ಕಂಡಿದ್ದರು. ಅವರ ಹಲವು ಕವನಗಳು ಕೃಷ್ಣನನ್ನು ಕುರಿತು ಇವೆ. ಭಗವದ್ಗೀತೆಯನ್ನು ಅವರು ಶಂಕರ, ರಾಮಾನುಜ, ಮಧ್ವರ ನೆಲೆಗಿಂತಲೂ ಭಿನ್ನವಾಗಿ ಅರವಿಂದರ ಪೂರ್ಣಯೋಗ ಮತ್ತು ಲೋಕಮಾನ್ಯ ತಿಲಕರ ಕರ್ಮಯೋಗದ ನೆಲೆಯಲ್ಲಿಕಂಡುಕೊಂಡಿದ್ದರು. ಈ ಇಬ್ಬರೂ ಚಿಂತಕರು ಕವಿ ಲೇಖಕರನ್ನು ಪ್ರಭಾವಿಸಿದ್ದ ಕೃಷ್ಣನು ಸೆರೆವಾಸದಲ್ಲಿಜನಿಸಿ ಜಗತ್ತಿನ ಜನಗಳನ್ನು ಮುಕ್ತಿಯ ಕಡೆಗೆ ಕೊಂಡೊಯ್ದ ಘಟನೆಯು ಅವರನ್ನು ಆಳವಾಗಿ ಪ್ರಭಾವಿಸಿತ್ತು. ಹೀಗಾಗಿ ಕೃಷ್ಣನು ಆತ್ಮ ಸ್ವಾತಂತ್ರ್ಯ ಸಂಕೇತವಾಗಿ ಇಲ್ಲಿಗೋಚರಿಸುತ್ತಾನೆ. ಕೃಷ್ಣನು ಕೊಳಲನ್ನು ಊದುವ, ಆ ಕೊಳಲಿನಿಂದ ಸ್ವರದ ಹಂತವನ್ನು ಮೀರಿ ನಾದವು ಉತ್ಪತ್ತಿಯಾಗುವುದನ್ನು ಅವರು ತತ್ವಕ್ಕೆ ಸಮೀಕರಿಸಿಕೊಂಡು ಕವನಗಳನ್ನು ರಚಿಸಿದ್ದಾರೆ.

ಕೃಷ್ಣನು ಸೆರೆಮನೆಯಲ್ಲಿಹುಟ್ಟಿ ಜಗತ್ತಿನ ಜನರನ್ನು ಭವಬಂಧನದಿಂದ ಬಿಡಿಸಿದ ಘಟನೆ ಭಾರತದ ಸ್ವಾತಂತ್ರ್ಯ ಪ್ರಾಪ್ತಿಗೆ ಸಂಘರ್ಷವು ನಡೆಯುತ್ತಿದ್ದ ದಶಕಗಳಲ್ಲಿಸಾಂಕೇತಿಕ ಮಹತ್ವವನ್ನು ಪಡೆದುಕೊಂಡಿತ್ತು. ತದನಂತರದ ಪೀಳಿಗೆಯವರಿಗೆ ಗೀತೆ, ಶ್ರೀಕೃಷ್ಣ, ಅರವಿಂದರು ಕೇವಲ ಅಧ್ಯಾತ್ಮದ ನೆಲೆಯಲ್ಲಿಕಂಡುಬಂದರೆ, ಬೇಂದ್ರೆ ಪೀಳಿಗೆಯ ಕುವೆಂಪು, ಆಲೂರ ವೆಂಕಟರಾಯರು, ಪುತಿನ ಅವರಿಗೆ ರಾಷ್ಟ್ರೀಯತೆ ಮತ್ತು ಅಧ್ಯಾತ್ಮಗಳ ನೆಲೆಗಳಲ್ಲಿಕಂಡುಬಂದಿದ್ದರು.

ಅಷ್ಟಮಿಯ ದಿನ ಮಧ್ಯರಾತ್ರಿ ಜನರಿಗೆ ಜಾತ್ರಿ

ಇಷ್ಟದವನಿಷ್ಟರಲ್ಲಿ

ಹುಟ್ಟಿ ಬರುವನೊ ಚಂದ್ರ ಕುಟ್ಟಿ ಬಂದಂತೆ ತಮ

ದಿಟ್ಟಿ ದಿಟವಾಗುವಲ್ಲಿ.

‘ಕತ್ತಲೆಯ ತುಟ್ಟತುದಿ ಹತ್ತಿರುವೆ ಬೆಳಕು ಬದಿ’

ಎಂದು ಸಾರೋ ಶ್ರಾವಣಾ,

ಮುಂದೆ ಬರುವ ಸ್ವತಂತ್ರ ವಂದಿಮಾಗಧ ನೀನು

ಬಂಧುರಾಂಗಾ ಶ್ರಾವಣಾ

ಅವರ ಇನ್ನೊಂದು ಕವನದಲ್ಲಿಸ್ವಾತಂತ್ರ್ಯ ಚಳವಳಿ ಇನ್ನೂ ನಡೆಯುತ್ತಿರುವಾಗ ರಚಿಸಿರುವ ಕವನದಲ್ಲಿಮುಂದೆ ಸ್ವಾತಂತ್ರ್ಯವು ಇದೇ ತಿಂಗಳಲ್ಲಿಬರುತ್ತದೆ ಎನ್ನುವ ಭವಿಷ್ಯವಾಣಿಯನ್ನು ಅವರು ಕಂಡಿದ್ದರು. ಏಕೆಂದರೆ ಕೃಷ್ಣನು ಶ್ರಾವಣ ಮಾಸದಲ್ಲಿಜನಿಸಿರುವಾಗ ಅದು ಸ್ವಾತಂತ್ರ್ಯದ ಸಂಕೇತವಾಗಿರುವಾಗ ಆಗ ಬರುವುದೇ ಸ್ವಾತಂತ್ರ್ಯ ದಿನಾಚರಣೆ ಎಂಬ ಕವಿಯ ಕಾಣ್ಕೆ ಇಲ್ಲಿಕಂಡುಬರುತ್ತದೆ. ಇನ್ನೊಂದು ದೃಷ್ಟಿಯಿಂದಲೂ ಬೇಂದ್ರೆ ಅವರಿಗೆ ಶ್ರಾವಣ ಬಹಳ ಪ್ರಿಯವಾದ ತಿಂಗಳು. ಏಕೆಂದರೆ ಅದು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ತಿಂಗಳ ಜೊತೆಗೆ ಅವರ ಅಧ್ಯಾತ್ಮ ಗುರುಗಳಾದ ಮಹಾಯೋಗಿ ಶ್ರೀ ಅರವಿಂದರು ಜನಿಸಿದ ಮಾಸವೂ ಹೌದು. ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು ಆಗಸ್ವ್ 15ರಂದು. ಯೋಗಿ ಅರವಿಂದರು ಜನಿಸಿದ್ದು ಸಹ ಆಗಸ್ವ್ 15ರಂದು. ಶ್ರೀಕೃಷ್ಣನು ಜನಿಸಿದ್ದು ಇದೇ ಶ್ರಾವಣ ಮಾಸದಲ್ಲಿ. ಹೀಗೆ ಶ್ರೀಕೃಷ್ಣ -ಸ್ವಾತಂತ್ರ್ಯ ದಿನಾಚರಣೆ-ಯೋಗಿ ಅರವಿಂದರ ಜನ್ಮದಿನ ಇವು ಮುಪ್ಪರಿಗೊಂಡು ಬೇಂದ್ರೆಯವರಿಗೆ ಆನಂದದ ಸಂಕೇತವಾಗಿ, ನಾದದ ಸಂಕೇತವಾಗಿ, ಶ್ರಾವಣ ಕಂಡುಬಂದಿದೆ. ಇದಲ್ಲದೆ ಅವರು ಕವಿ ಆಗಿರುವುದರಿಂದ ಕಿವಿಗೆ ಬಹಳ ಮಹತ್ವ ಕೊಡುತ್ತಾರೆ. ಕಿವಿ ಎಂದರೆ ‘ಶ್ರುತಿ’ ಪರಂಪರೆ ಆಲಿಸುವುದು, ಕೇಳಿಸಿಕೊಳ್ಳುವುದು. ಭಾರತದಲ್ಲಿಬರೆಯುವ ಪರಂಪರೆಗಿಂತಲೂ ಹೆಚ್ಚು ಆಳವಾಗಿ ಜನಪದರ ನಡುವೆ ಇರುವುದು ಕೇಳಿಸಿಕೊಳ್ಳುವ ಸಂಸ್ಕೃತಿ. ಕುಮಾರವ್ಯಾಸನ ಮಹಾಭಾರತದಲ್ಲಂತೂ ‘ಕೇಳು ಜನಮೇಜಯ’ ಎಂಬ ವಾಣಿ ನೂರಾರು ಸಲ ಮೊಳಗಿದೆ. ಕುಮಾರವ್ಯಾಸ ಕೂಡ ಲಕ್ಷ್ಮೇಶ, ರತ್ನಾಕರವರ್ಣಿಯಂತೆ ಬೇಂದ್ರೆ ಅವರಿಗೆ ಬಲು ಇಷ್ಟದ ಕವಿ.

ಬಂದಿಯೊಳಗಿದ್ದವರ ಬಂಧನವ ಬಿಡಿಸುವಾ

ಬಂದಿಕಾರಾ ಶ್ರಾವಣಾ

ಬಂಧನದೊಳಿಹರೊ ಜಗವಂದಿತರ ನಿಂದಿತರು

ಬಂದೆ ಬಿಡಿಸೈ ಶ್ರಾವಣಾ

ಅಂಧಕಾರವಿದಲ್ಲಮಂದೇಹ ಸಂಘವಿದೆ

ಸಂದೇಹವೇ ಶ್ರಾವಣಾ?

ಅಂದು ಗಾಯತ್ರಿ ಮನದಂದು ಕಿವಿ ತುಂಬಿಸಿದೆ

ಇಂದಾವದೊ ಶ್ರಾವಣಾ?

ವೇದದಲ್ಲಿಇರುವ ಛಂದಸ್ಸನ್ನು ಸಾಮಛಂದಸ್ಸು ಎಂದು ಬೇಂದ್ರೆಯವರು ಗುರುತಿಸಿದ್ದಾರೆ. ಆ ಸಾಮಛಂದಸ್ಸಿನಲ್ಲಿಅವರಿಗೆ ಜ್ಞಾನಪೀಠವನ್ನು ತಂದುಕೊಟ್ಟ ‘ನಾಕುತಂತಿ’ಯ ಕೆಲವು ಕವನಗಳು ಕೂಡ ಇವೆ. ಮನುಷ್ಯ ಬೆಳೆಯುತ್ತಾ ಹೋದಂತೆ ಅವನ ದೇಹದ ಒಳಗೆ ಸೂಕ್ಷ್ಮವಾಗಿ ಉಪಸ್ಥಿತವಿರುವ ಆರು ಚಕ್ರಗಳ ಅನುಭವ ಅವನಿಗೆ ಬರುತ್ತದೆ. ಇವುಗಳಿಗೆ ಪದ್ಮಗಳು ಅಥವಾ ಚಕ್ರಗಳು ಎಂದು ಯೋಗ ಮತ್ತು ತಂತ್ರಗಳಲ್ಲಿಹೇಳಲಾಗಿದೆ. ಇವುಗಳ ಅಪಾರವಾದ ಅಧ್ಯಯನ ಮತ್ತು ಅನುಭವ ಬೇಂದ್ರೆ ಅವರಿಗೆ ಇತ್ತು. ನಾಭಿಮೂಲದಲ್ಲಿಓಂಕಾರವು ಜನಿಸುತ್ತದೆ, ಅದು ಹೃದಯದಲ್ಲಿಬಂದಾಗ ಅನಾಹತ ಚಕ್ರದಲ್ಲಿಅದು ಹೆಚ್ಚು ಸ್ಪಷ್ಟಗೊಳ್ಳುತ್ತದೆ ಎನ್ನುವುದು ಅವರ ಶ್ರಾವಣ ಪ್ರತಿಭೆಯ ಭಾಗವೇ ಆಗಿದೆ.

(ಲೇಖಕರು ವಿಮರ್ಶಕರು, ಕಾದಂಬರಿಕಾರರು)

ಬಾಕ್ಸ್

ಆನಂದದ ಮಾಸ

ಪರಾ, ಪಶ್ಯಂತಿ, ಮಧ್ಯಮಾ, ವೈಖರಿ ಈ ನಾಲ್ಕು ನೆಲೆಗಳಲ್ಲಿಬೇಂದ್ರೆಯವರ ಶ್ರಾವಣ ಪ್ರತಿಭೆ ಕಂಡುಬರುತ್ತದೆ. ಅವರಿಗೆ ಶ್ರಾವಣವೆಂದರೆ ಮುಗಿದು ಮೋಡಗಟ್ಟಿ ಮಳೆ ಸುರಿಸುವ ಆನಂದದ ಒಂದು ಮಾಸ; ಜೊತೆಗೆ ಪೈರು ಪಚ್ಚೆಗಳು ಬೆಳೆದು ನಿಂತು ಗಾಳಿಯ ಓಘಕ್ಕೆ ತಲೆದೋಗುವ ಸೌಂದರ್ಯದ ಸ್ಥಾನವೂ ಹೌದು. ಜೊತೆಗೆ ಅವರು ನಂಬಿದ್ದ, ಉಪಾಸಿಸುತ್ತಿದ್ದ ತತ್ವಗಳು ಭೂಮಿಯಲ್ಲಿಕಾಣಿಸಿಕೊಂಡ ಮಾಸವೂ ಹೌದು. ಎಲ್ಲಕ್ಕಿಂತ ಮುಖ್ಯವಾಗಿ ಜನಮಾನಸದಲ್ಲಿರುವ ನೋವು ನಲಿವುಗಳನ್ನು ಕವಿಯು ಸದಾ ಕೇಳುತ್ತಲೇ ಇರಬೇಕು, ಅದಕ್ಕೆ ತಕ್ಕಂತೆ ತನ್ನ ಭಾವವನ್ನು, ಭಾಷೆಯನ್ನು ಮಾರ್ಪಡಿಸಿಕೊಳ್ಳುತ್ತಾ ಹೋಗಬೇಕು. ಆಗ ಅವರೇ ಹೇಳುವಂತೆ ಶಬ್ದ ಶ್ರುತಿಯಾದಾಗ ಮಾತು ಕೃತಿಯಾಗುತ್ತದೆ. ಈ ಮಾತು ಮತ್ತು ಧಾತು, ಮಾತು ಮತ್ತು ಕೃತಿ ಇವುಗಳ ನಡುವಿನ ಅವಿಭಕ್ತ ಭಕ್ತಿ ಅಥವಾ ಅದ್ವೈತವೇ ಬೇಂದ್ರೆಯವರ ಶ್ರಾವಣ ಪ್ರತಿಭೆಯ ದಾರ್ಶನಿಕ ನೆಲೆ.