80ನೇ ಸ್ವಾತಂತ್ರ್ಯೋತ್ಸವದಲ್ಲಿಮೇಳೈಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು

Contributed bymahyurgh@gmail.com|Vijaya Karnataka
cultural programs of the 80th independence day celebrations
ವಿಕ ಸುದ್ದಿಲೋಕ ಬೆಂಗಳೂರು

ದೇಶಭಕ್ತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮದೊಂದಿಗೆ ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ80ನೇ ಸ್ವಾತಂತ್ರ್ಯೋತ್ಸವ ಅದ್ಧೂರಿಯಾಗಿ ನಡೆಯಿತು.
ಬೆಳಗ್ಗೆ 8.55ರ ಸುಮಾರಿಗೆ ಆಗಮಿಸಿದ ಸಿಎಂ ಅವರನ್ನು ಬರಮಾಡಿಕೊಳ್ಳಲಾಯಿತು. ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಅನ್ನು ಪ್ರಸ್ತುತ ಪಡಿಸಲಾಯಿತು. 9 ಗಂಟೆಗೆ ಸಿಎಂ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸಿತು. ಬಳಿಕ, ಪರೇಡ್ ಕಮಾಂಡರ್ ವಿನಂತಿ ಮೇರೆಗೆ ತೆರೆದ ಜೀಪಿನಲ್ಲಿಪರೇಡ್ ಪರಿವೀಕ್ಷಣೆ ನಡೆಸಿ ಸಿಎಂ ಡಿ.ಕೆ.ಶಿವಕುಮಾರ್ ಗೌರವ ವಂದನೆಯನ್ನು ಸ್ವೀಕರಿಸಿದರು. ಕೆಸ್ ಆರ್ ಪಿ, ಸಿಆರ್ ಪಿಎಫ್ , ಬಿಎಸ್ ಎಫ್ , ಸಿಎಆರ್ , ತೆಲಂಗಾಣ ಪೊಲೀಸ್ , ಸಂಚಾರಿ ಪೊಲೀಸರು, ಶ್ವಾನಪಡೆ, ಸ್ಕೌಟ್ ಆ್ಯಂಡ್ ಗೈಡ್ಸ್ , ಎನ್ ಎಸ್ ಎಸ್ ಸೇರಿ ಒಟ್ಟು 37 ತುಕಡಿಗಳಲ್ಲಿಸುಮಾರು 1360 ಮಂದಿ ಪರೇಡ್ ಕವಾಯತಿನಲ್ಲಿಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ:

ಬಳಿಕ ಥಣಿಸಂದ್ರ ಸರಕಾರಿ ಪ್ರೌಢಶಾಲೆಯ 800 ವಿದ್ಯಾರ್ಥಿಗಳು ಪ್ರದರ್ಶಿಸಿದ ‘ವಂದೇ ಮಾತರಂ’ ಶಾಂತಿಮಂತ್ರ ನೃತ್ಯ ರೂಪಕ ದೇಶಭಕ್ತಿಯನ್ನು ಇಮ್ಮಡಿಗೊಳಿಸಿತು. ಹಾಗೆಯೇ ಪಿಳ್ಳಣ್ಣ ಗಾರ್ಡನ್ ಪ.ಪೂರ್ವ ಕಾಲೇಜಿನ 750 ವಿದ್ಯಾರ್ಥಿಗಳಿಂದ ‘ಸ್ವಾತಂತ್ರ್ಯ ಸಂಗ್ರಾಮದ ವೈಭವ’ದ ನೃತ್ಯವೂ ಪ್ರೇಕ್ಷಕರ ಗಮನ ಸೆಳೆಯಿತು. ರಾಜ್ಯದಲ್ಲಿಮಹಿಳೆಯರ ರಕ್ಷಣೆಗಾಗಿ ಪೊಲೀಸ್ ಇಲಾಖೆ ರೂಪಿಸಿದ ಅಕ್ಕ ಪಡೆಯ ಮಹಿಳಾ ಪೊಲೀಸರು ಅದ್ಭುತವಾಗಿ ಸಾಹಸ ಪ್ರದರ್ಶನ ನೀಡಿದರು. ಇದರಲ್ಲಿಬೀದರ್ ನ 70 ಹಾಗೂ ಬೆಂಗಳೂರು ನಗರದ 100 ಮಹಿಳಾ ಪೊಲೀಸ್ ಸಿಬ್ಬಂದಿ ಪ್ರದರ್ಶನದಲ್ಲಿದ್ದರು.

ಭಾರತ್ ಜೋಡೋ ಯುವ ಸಂಘ ಯೋಜನೆ ನೃತ್ಯ ರೂಪಕ ಪ್ರದರ್ಶನ ಪ್ರಥಮ ಬಹುಮಾನಕ್ಕೆ ಪಾತ್ರವಾಯಿತು. ಶೇಷಾದ್ರಿಪುರಂ, ರಾಜೀವ್ ಗಾಂಧಿ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ, ಬೆಂಗಳೂರು ಸಿಟಿ ಯೂನಿವರ್ಸಿಟಿ ಹಾಗೂ ವಿಟಿಯು ಕಾಲೇಜಿನ ಸುಮಾರು 600 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿಭಾಗವಹಿಸಿದ್ದರು. 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಪಥಸಂಚಲನ ಮತ್ತು ಸಾಂಸ್ಕತಿಕ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿಸಚಿವ ಕೃಷ್ಣಬೈರೇಗೌಡ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ , ಬೆಂಗಳೂರು ನಗರ ಜಿಲ್ಲೆಜಿಲ್ಲಾಧಿಕಾರಿ ಕಾಂತರಾಜು, ಜಿಬಿಎ ಆಯುಕ್ತ ಮಹೇಶ್ವರ್ ರಾವ್ , ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಉಪಸ್ಥಿತರಿದ್ದರು.

-------