ವಿಕ ಸುದ್ದಿಲೋಕ ಕೊಳ್ಳೇಗಾಲ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ಸಾಧನೆ ಮಾಡುವುದು ಮುಖ್ಯವಲ್ಲ. ಬದುಕು ಹಸನಾಗಿಸಿ ಕೊಳ್ಳಬೇಕು ಎಂದು ಲೇಖಕ ಪ್ರೊ.ಶಂಕರ್ ಬೆಳ್ಳೂರ್ ಹೇಳಿದರು.ಪಟ್ಟಣದಲ್ಲಿವಿಶ್ವಕರ್ಮ ಸಮಾಜ ಸೇವಾ ಸಮಿತಿ ಹಾಗೂ ಚಿನ್ನ, ಬೆಳ್ಳಿ ಕೆಲಸಗಾರರ ಸಂಘದ ಆಶ್ರಯದಲ್ಲಿನಡೆದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ -2026 ಕಾರ್ಯಕ್ರಮದಲ್ಲಿಮಾತನಾಡಿದರು.‘‘ವಿದ್ಯಾರ್ಥಿಗಳು ಜೀವನದಲ್ಲಿಗೆಲ್ಲಲೇ ಬೇಕೆಂದರೆ ಒಂದು ಕಂಪನಿಗೆ ನೀವು ಪಡೆದ ಅಂಕಗಳು ಮುಖ್ಯವಾಗುವುದಿಲ್ಲ. ಆ ಕಂಪನಿಯ ಸಾಧನೆಗೆ ನಿಮ್ಮ ಪ್ರತಿಭೆ ಬಹಳ ಮುಖ್ಯ. ಕ್ರಿಯಾಶೀಲ ನೌಕರರನ್ನು ಕಂಪನಿಗಳು ಕೈ ಬಿಡುವುದಿಲ್ಲ. ಹಾಗಾಗಿ ಕ್ರಿಯಾಶೀಲತೆ ಜೀವನಕ್ಕೆ ದೊಡ್ಡ ಸಾಧನೆ ಮಾಡಲು ಸಹಕರಿಸುತ್ತದೆ,’’ಎಂದರು.ಕೆಪಿಟಿಸಿಎಲ್ ಸಹಾಯಕ ಲೆಕ್ಕಾಧಿಕಾರಿ ಉಷಾಕಿರಣ್ ಮಾತನಾಡಿ,‘‘ಕಲೆ, ಸಂಸ್ಕೃತಿ, ಧಾರ್ಮಿಕ, ಇತಿಹಾಸ ಸೇರಿದಂತೆ ವಿಶ್ವಕರ್ಮ ಸಮುದಾಯದ ಪ್ರತಿಭೆಗಳು ಉತ್ತಮ ಸಾಧನೆ ಮಾಡಿದ್ದಾರೆ. ಇಂದಿನ ಸಮಾಜದಲ್ಲಿಅಗತ್ಯವಾಗಿ ಕುಲಕಸುಬುಗಳಲ್ಲಿತಮ್ಮ ಕೈಚಳಕದಿಂದ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲೂಉತ್ತಮ ಸಾಧನೆ ಮಾಡಲು ಸಬಲರಿದ್ದಾರೆ,’’ ಎಂದು ಹೇಳಿದರು.ಕಾನೂನು ಸಲಹೆಗಾರ ಹಾಗೂ ಆರ್ಥಿಕ ತಜ್ಞ ಸಿ.ಎ. ನಾಗರಾಜ ಆಚಾರ್ ಮಾತನಾಡಿ,‘‘ಕೊಳ್ಳೇಗಾಲ ವಿಶ್ವಕರ್ಮ ಸಮಾಜದಲ್ಲಿಸತತವಾಗಿ ಐದು ವರ್ಷಗಳಿಂದಲೂ ವಿಶ್ವಕರ್ಮ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ,’’ ಎಂದರು. ಡಾ.ಕೇಶವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೇಖಕರಾದ ಬಿ. ದಿವ್ಯಾನಂದ ಮೂರ್ತಿ, ಗುಂಡ್ಲುಪೇಟೆ ಆದರ್ಶ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಜಿ.ಎಸ್ . ನಾಗೇಶ್ , ಬೆಂಗಳೂರು ಸಹಾಯಕ ವಾಣಿಜ್ಯ ತೆರಿಗೆ ಅಧಿಕಾರಿ ವಿನಾಯಕ ಆಚಾರ್ , ಪತ್ತಾರ್ , ಸಿದ್ದಪ್ಪಾಜಿ, ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ನವೀನ್ ಕುಮಾರ್ , ಕಾರ್ಯದರ್ಶಿ ಕಿರಣ್ , ಚಿನ್ನ, ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.