Successful Celebration Of Independence Day At Bjp Office
ಬಿಜೆಪಿ ಕಚೇರಿಯಲ್ಲಿಸ್ವಾತಂತ್ರ್ಯೋತ್ಸವ ಆಚರಣೆ
Contributed by: Keerthi Prasad|Vijaya Karnataka•
ವಿಕ ಸುದ್ದಿಲೋಕ ಬೆಂಗಳೂರು
ರಾಜ್ಯ ಬಿಜೆಪಿ ಕಚೇರಿಯಲ್ಲಿಶನಿವಾರ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ .ಸಂತೋಷ್ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ‘‘ಪ್ರಧಾನಿ ಮೋದಿಯವರ ಆಡಳಿತದಲ್ಲಿಇಡೀ ವಿಶ್ವವೇ ಭಾರತದತ್ತ ದಿಟ್ಟಿಸಿ ನೋಡುವಂತೆ ಬೆಳೆದಿದೆ. ಮೊದಲು ಚಿನ್ನವನ್ನು ಅಡವಿಟ್ಟು ದೇಶ ನಡೆಸಬೇಕಾದ ಸ್ಥಿತಿ ಇತ್ತು. ಇಂದು ಭಾರತ ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ,’’ ಎಂದು ಹೇಳಿದರು.
‘‘ದೇಶದಲ್ಲಿಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರಕಿದ್ದು, 2047ಕ್ಕೆ ವಿಶ್ವದಲ್ಲೇ ಮೊದಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಇಂದು ದೇಶದಲ್ಲಿಮೋದಿಯವರಿಗೆ ಸರಿಸಾಟಿಯಾದ ನಾಯಕ ಇಲ್ಲ. ಕೆಲವರು ತಾವೆಲ್ಲಾಒಂದಾಗಿಬಿಟ್ಟರೆ ಮೋದಿ ಅವರನ್ನು ಮಣಿಸಬಹುದು ಎಂಬ ಚಿಂತನೆಯಲ್ಲಿದ್ದಾರೆ. ಕಳಂಕ ರಹಿತ, ದೂರದೃಷ್ಟಿತ್ವದ ನಾಯಕ ಮೋದಿ ಎಲ್ಲರನ್ನೂ ಸಮನಾಗಿ ಕಾಣುವ, ಭಾರತ ದೇಶವೇ ತಮ್ಮ ಅಸ್ಮಿತೆ ಎಂದು ನೋಡುವ, ಎಲ್ಲರನ್ನೂ ಒಂದುಗೂಡಿಸುವ ನಾಯಕ,’’ ಎಂದು ಬಣ್ಣಿಸಿದರು.
ನಾಯಿಗಳಿಗೆ ಹೋಲಿಸಿದ ಖರ್ಗೆ
‘‘ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು, ಪರಿಶ್ರಮ ಪಟ್ಟವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಯಿಗಳಿಗೆ ಹೋಲಿಸಿದ್ದರು. ಹಾಗಾದರೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ನಾಯಿಗಳೇ? ಇದಕ್ಕೆ ಖರ್ಗೆ ಅವರ ಉತ್ತರವಿದೆಯೇ? ಇದು ಅವರ ಕೆಟ್ಟ ಸಂಸ್ಕೃತಿ,’’ ಎಂದು ಕಿಡಿ ಕಾರಿದರು.
‘‘ಕಾಂಗ್ರೆಸ್ ನವರಿಗೆ ಆರ್ ಎಸ್ ಎಸ್ ಟೀಕಿಸುವುದೇ ಚಪಲ. ಆರ್ ಎಸ್ ಎಸ್ ಗೆ ಯಾರೂ ಇಷ್ಟು ಪ್ರಚಾರ ನೀಡಿರಲಿಲ್ಲ. ಆರ್ ಎಸ್ ಎಸ್ ಇಲ್ಲದ ದಿನವನ್ನು ಊಹಿಸಲು ಸಾಧ್ಯವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ. ಸಾಕಷ್ಟು ಜನರ ಪರಿಶ್ರಮ, ತ್ಯಾಗ ಬಲಿದಾನದಿಂದ ಪಡೆದಿದ್ದು. ಇದಕ್ಕೆ ತನ್ನದೇ ಆದ ಗೌರವ, ಬೆಲೆ ಇದೆ. ಎಂಬತ್ತು ವರ್ಷಗಳಲ್ಲಿಈ ದೇಶ ಎತ್ತ ಸಾಗಿದೆ ಎಂದು ನೋಡಬೇಕಾಗಿದೆ,’’ ಎಂದು ಹೆಳಿದರು.
ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್ . ರವಿಕುಮಾರ್ , ಎಂಎಲ್ಸಿ ಕೇಶವ ಪ್ರಸಾದ್ , ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಇತರರು ಪಾಲ್ಗೊಂಡಿದ್ದರು.