ಮನೆ ಮದ್ದು

Contributed byShridevi Ambekallu|Vijaya Karnataka
sundekayi the health champion
ಏನಿದು ಸುಂಡೆಕಾಯಿ

ಔಷಧೀಯ ಬಳಕೆ ಹೇಗೆ?
-----

- ಡಾ. ಸತ್ಯನಾರಾಯಣ ಭಟ್

--------

ಸುಂಡೆಕಾಯಿಯಲ್ಲಿಅನೇಕ ಔಷಧೀಯ ಗುಣಗಳಿವೆ. ಅವುಗಳನ್ನು ಹೇಗೆಲ್ಲಾಬಳಸಬಹುದು? ಇಲ್ಲಿದೆ ಮಾಹಿತಿ.

-----------

‘ಚುಂಡೆ ಕಾಯಿ ಕಾಲ್ಪಣಂ ಮಸೈ ಕೂಲಿ ಮುಕ್ಕಾಲ್ಪಣಂ’ ಎಂಬ ತಮಿಳು ಆಡು ಮಾತಿನ ಭಾವಾರ್ಥ ಮಂಡೆಗಿಂತ ದೊಡ್ಡ ಮುಂಡಾಸು. ಸಂತೆಯಲ್ಲಿಬಿಕರಿಯಾಗುವ ಸುಂಡೆ ಕಾಯಿಯ ಬೆಲೆ ಕಾಲು ಪಣ (ಹಳೆ ಕಾಲದ ಚಲಾವಣೆಯ ಕಾಸು.) ಅಂದರೆ ಸುಂಡೆ ಕಾಯಿ ಅಗ್ಗವಾಗಿದೆ ಎಂಬ ಯಜಮಾನರಿಗೆ. ಒಂದು ಮೂಟೆಯಷ್ಟು ಮನೆಗೆ ತಂದರಂತೆ. ಹೊತ್ತು ತಂದ ಆಳು ಕೇಳಿದ್ದು ಮುಕ್ಕಾಲು ಕಾಸು ಕೂಲಿ. ಅರ್ಥಾತ್ ಸುಂಡೆಕಾಯಿಯ ಬಳಕೆ ಅಷ್ಟು ಚಾಲ್ತಿಯಲ್ಲಿತ್ತು ಎಂದು.

ಏನಿದು ಸುಂಡೆ ಕಾಯಿ? ಬಳಕೆ ಹೇಗೆ?

ಸುಂಡೆ ಕೊಪ್ಪವು ನೆಲಮಂಗಲದ ಪರಿಸರದಲ್ಲಿಒಂದು ಊರ ಹೆಸರು. ಕೊಂಚ ತಟ್ಟಾದ ಬಯಲು ಸೀಮೆಯ ನೆಲ. ಮಳೆಗಾಲದಲ್ಲಿಬೀಜ ಬಿದ್ದು ತಾನಾಗಿಯೇ ಹರಡಿಕೊಳ್ಳುವ ಬದನೆ ಕುಲದ ಆಳೆತ್ತರದ ಸಸ್ಯ. ಹೂವು ಎಲೆಗಳು ಬದನೆಯದೇ ತದ್ರೂಪ. ಗಿಡದ ನರಗಳ ಮೇಲೆ ಹೇರಳ ಮುಳ್ಳು. ಗೊಂಚಲು ಕಾಯಿಗಳು ಮಾತ್ರ ಬಟಾಣಿಗಿಂತ ಹಿರಿದು. ಅದನ್ನು ಆಹಾರ ರೂಪದಲ್ಲಿಬಳಸುತ್ತಾರೆ.

ಇಡೀ ಸಸ್ಯವನ್ನು ಆಯುರ್ವೇದದಲ್ಲಿಔಷಧವಾಗಿ ಬಳಸುತ್ತಾರೆ. ದಶಮೂಲ ಎಂದರೆ ಬೇರು ಬಳಕೆಯಾಗುವ ಹತ್ತು ಸಸ್ಯಗಳ ಗುಂಪು. ತೈಲ,ಕಷಾಯ, ಅರಿಷ್ಟ ಇತ್ಯಾದಿ ಸಿದ್ಧ ಮದ್ದುಗಳು ಬಾಣಂತನದಿಂದ ಕೀಲು, ಗಂಟು, ವಾತ ನೋವುಗಳ ಪರಿಹಾರೋಪಾಯವಾಗಿ ಬಳಸುತ್ತಾರೆ. ಹಳೆ ತಲೆಮಾರಿನ ಮಂದಿಗೆ ಶೀತ, ಕೆಮ್ಮು ನೆಗಡಿ ಪ್ರತಿರೋಧಕ ಮದ್ದು ಇದು.

ಕಲ್ಯಾಂಟೆ, ಕಲ್ಯೊಟ್ಟೆ ಎಂಬ ತುಳು ಹೆಸರಡಿ ಸುಂಡೆ ಕಾಯಿ ಗುರುತಿಸುವರು. ಕರಾಡ ಮತ್ತು ಕೊಂಕಣಿ ಭಾಷಿಕರು ಕಲ್ಲಾಂಟ, ಕಲ್ಯಾಂಟ, ರಣ್ ಬೇಂಗನ್ ಎಂದೂ ಕರೆಯುತ್ತಾರೆ. ಚಿತ್ಪಾವನಿ ಸಮಾಜದವರು ಒಂದು ವಿಶಿಷ್ಟ ಬಳಕೆಗೆ ಕಲ್ಯಾಂಟೆ ಸಸ್ಯ ಬಳಸುವರು. ಶವ ದಹನದ ಅನಂತರ ಚಿತೆಯ ಅಸ್ಥಿ ಸಂಚಯನಕ್ಕೆ ಸೊಂಡೆ ಸಸ್ಯದ ಕಡ್ಡಿಗಳನ್ನು ಬಳಸುತ್ತಾರೆ. ಅಲ್ಲದೇ ಸಹದೇವೀ, ಬಲಾ ಎಂಬಿತ್ಯಾದಿ ಸಸ್ಯಗಳು ವೈದಿಕ, ಉಪನಿಷದ್ ಕಾಲದ ಬಳಕೆಯವು. ಜಾತ ಕರ್ಮದಿಂದ ಅಪರ ಕಾರ್ಯ ಪರ್ಯಂತ ಅವುಗಳ ಬಳಕೆಯ ದೃಷ್ಟಾಂತಗಳಿವೆ. ಇವು ಕೇವಲ ತಾಂತ್ರಿಕ ವಿಧಿಗಳಲ್ಲ.

ಮುಲಕ, ತೆಲ್ಲಮುಲಕ ಎಂಬ ಹೆಸರಡಿ ತೆಲುಗರು ಮುಳ್ಳುಸುಂಡೆಯನ್ನು ಗುರುತಿಸುತ್ತಾರೆ. ಮುಳುಕ ಎಂದರೆ ಬದನೆ. ಇದು ಕಾಡಿನದು ಅಥವಾ ನಾಡಿನದು ಎಂಬ ಭೇದ ಮಾತ್ರ. ಈ ಸಸ್ಯಕ್ಕೆ ಆದಿಮ ಆಯುರ್ವೇದ ಗ್ರಂಥಗಳಲ್ಲಿಬೃಹತೀ, ಮಹತೀ, ಕುಲೀ, ಸಿಂಹೀ, ರಾಷ್ಟಿ್ರಕಾ, ಮಹೋಷ್ಟ್ರೀ ಎಂಬ ಹೆಸರುಗಳ ದೊಡ್ಡ ಪಟ್ಟಿಯೇ ಇದೆ.

ಇದರ ಪ್ರಧಾನ ಗುಣ ಕಂಠ್ಯ. ಅಂದರೆ ಸ್ವರವಷ್ಟೆ ಅಲ್ಲ, ಗಂಟಲಿನ ಆರೈಕೆಗೆ ಪೂರಕ. ಉಪ್ಪಿನ ಕಾಯಿ, ಪಲ್ಯ, ಹುಳಿಗೊಜ್ಜು, ಸಾರು ಮೊದಲಾದ ಅಡುಗೆಯ ಎಲ್ಲಬಗೆಯ ವ್ಯಂಜನಗಳಿಗೆ ಚನ್ನೈ ನಿವಾಸಿಗಳು ಚುಂಡೆಕಾಯಿ ಬಳಸುತ್ತಾರೆ. ಲಭ್ಯವಿರುವಾಗ ಮಜ್ಜಿಗೆ ಹಾಕಿ ನೆನೆಸಿ ಒಣಗಿದ ಸಂಡಿಗೆ ರೂಪದಲ್ಲಿಮೌಲ್ಯವರ್ಧನೆ ಮಾಡಿಕೊಳ್ಳುತ್ತಾರೆ. ಬೇಕಾದಾಗ ಬಳಸುವ ಆಹಾರವಿದು.

ಚರಕ ಸಂಹಿತೆಯು ಅಂಗಮರ್ದನ(ಮೈಕೈ ನೋವು) ಪ್ರಶಾಮಕ ಎಂಬ ಗಣದಲ್ಲಿಬೃಹತೀ(ಮುಳ್ಳುಚುಂಡೆ) ಸಸ್ಯವನ್ನು ಗುರುತಿಸಿದೆ. ಗಾಯದ ಕೀವು ಕಳೆಯಲು ಸುಶ್ರುತರು ಬಳಸಿದರು. ಬದನೆಯ ಹೂವಿನಂತೆ, ನಕ್ಷತ್ರಾಕಾರದ ಬಿಳಿಯ ಹೂವಿನಿಂದ ಕಾಡಿಗೆ ತಯಾರಿಸಬಹುದು, ಪದೇ ಪದೆ ಗರ್ಭಸ್ರಾವ ತಡೆಗೆ ಸಸ್ಯದ ಬಳಕೆ ಉಲ್ಲೇಖವು ಸುಶ್ರುತ ಸಂಹಿತೆಯದು. ಕಫ, ವಾತ ರೋಗ, ಚರ್ಮಕಾಯಿಲೆ, ಹೃದಯದ ರೋಗ, ಕೆಮ್ಮು ದಮ್ಮು, ಗಂಟಲು ಬೇನೆ, ಹೊಟ್ಟೆ ಶೂಲೆ, ವಾಂತಿ, ಬಾಯಿ ರುಚಿ ಇಲ್ಲದಿರುವುದು ಮತ್ತು ಹಸಿವೆಯಂತಹ ತೊಂದರೆ ತಡೆ ಮತ್ತು ಪರಿಹಾರಕ್ಕೆ ಈ ಗಿಡವನ್ನು ಬಳಸಬಹುದು ಎಂಬ ಮಾಹಿತಿ ಆರ್ಷ ಸಂಹಿತೆಗಳಲ್ಲಿದೆ.

ಹಲವು ಪ್ರಯೋಜನಗಳು

* ಎಲೆ ಲೇಪಿಸಿದರೆ ಚರ್ಮದ ನವೆ, ಗಾದರಿ, ತುರಿಗಜ್ಜಿ ಉಪಶಮನವಾಗುವುದು.

* ವಾಂತಿ ನಿಲುಗಡೆಗೆ ಎಲೆ ಮತ್ತು ಹಸಿ ಶುಂಠಿ ರಸದ ಸಂಗಡ ಜೇನು ಕೂಡಿಸಿ ನೆಕ್ಕಿಸುವುದು.

* ಜ್ವರ ಇದ್ದರೆ ಇದರ ಬೇರು ಕಷಾಯ ಮಾಡಿ ಕುಡಿಯಬಹುದು.

* ಮೂತ್ರ ಕಟ್ಟು ಪರಿಹಾರಕ್ಕೆ ಸಸ್ಯದ ಕಷಾಯ ಒಳ್ಳೆಯದು.

* ತಲೆ ಶೂಲೆಗೆ ಕಾಯಿ ರಸ ಲೇಪನ ಮಾಡಿದರಯಾಯಿತು.

* ತರಕಾರಿಯಂತೆ ಕಾಯಿ ಬಳಸಿರಿ. ಹೊಟ್ಟೆ ಹಸಿವೆ ಹೆಚ್ಚಲು ಸಹಕಾರಿ. ಸುಖ ನಿದ್ದೆಗೆ ಸಹಕಾರಿ.

* ಕಾಮಾಲೆ ವಾಸಿಯಾದಾಗ ಬಿಳಿಚಿದ ಮೈ ಬಣ್ಣ ಮತ್ತೆ ಸರಿಯಾಗಲು ಜೀರಿಗೆ, ದನಿಯಾ ಸಂಗಡ ಬೇರು ಕಷಾಯ ಪಾನ ಮಾಡಬಹುದು (ಪಾಣಾಜೆ ವೈದ್ಯರ ಅನುಭವ).

* ಅಂಗೈ, ಅಂಗಾಲು ಬಿರಿತ, ಸೀಳುಗಾಯ ಪರಿಹಾರಕ್ಕೆ ಬೇರು ಕಷಾಯ ಸೇವನೆ( ತಿಂಗಳ ಏಳು ದಿನ- ಮೂರು ಬಾರಿ)ಒಳ್ಳೆಯದು.

* ಎಲೆ ರಸ ಸಂಗಡ ತೆಂಗಿನ/ಎಳ್ಳಿನ ಎಣ್ಣೆ ಕಾಯಿಸಿಕೊಂಡು ಅಂಗೈ ಅಂಗಾಲು ಚರ್ಮದ ನವೆ, ಬಿರಿಯುವಿಕೆಗೆ ಹಚ್ಚಬಹುದು.

ಪೊದರು ಸಸ್ಯದಲ್ಲಿಕೆಲವು ಉಪಕಾರಿ ಕ್ಷಾರ ತತ್ತ್ವಗಳಿವೆ. ಹೀಮೋಗ್ಲೋಬಿನ್ ಅಂಶ ಹೆಚ್ಚಳ, ರಕ್ತದ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅಂಶ ಕಡಿವಾಣಕ್ಕೆ ಈ ಸಸ್ಯದ ಪ್ರಯೋಗಗಳು ಉಪಕಾರಿ ಎಂಬ ಸಂಶೋಧನೆಗಳಿವೆ. ಕಹಿ ಅಂಶವು ಲಿವರ್ ಕೆಲಸ ಹೆಚ್ಚಿಸಲು ಸಹಕಾರಿ. ಸುಸ್ತು, ಬಳಲಿಕೆ ಇದ್ದವರು ಈ ಸಸ್ಯವನ್ನು ಬಳಸಬಹುದು. ಸೊಲಾನಂ ಟೋರುವಂ, ಟರ್ಕಿ ಬೆರಿ, ಡೆವಿಲ್ ಫಿಗ್ , ಪೀ ಎಗ್ ಪ್ಲಾಂಟ್ (ಎಗ್ ಪ್ಲಾಂಟ್ ಅಂದರೆ ಬದನೆ, ಇದು ಕುದನೆ) ಹೆಸರುಗಳಿಂದ ವಿಶ್ವಾದ್ಯಂತ ಉಷ್ಣ ವಲಯದ ದೇಶಗಳಲ್ಲಿಈ ಸಸ್ಯವು ಸಹಜವಾಗಿ ಬೆಳೆಯುತ್ತದೆ. ಆದರೆ ನಮ್ಮಷ್ಟು ವ್ಯಾಪಕ ಸಾಂಸ್ಕೃತಿಕ ಮತ್ತು ಮದ್ದಿನ ಬಳಕೆಗಳ ಕಣಜಗಳು ಅಲ್ಲಿಖಂಡಿತ ಇಲ್ಲ! ನೆಟ್ಟ ಸಸ್ಯವು ಹಲವು ವರುಷ ಬಾಳುತ್ತದೆ. ಕೀಟ ನಿರೋಧಕ, ರಣ ಬಿಸಿಲು, ಬಿರು ಮಳೆ ತಡೆಯುವ ಶಕ್ತಿ ಈ ಪದರು ಗಿಡಕ್ಕಿದೆ. ಇದರ ಆಹಾರ ಬಳಕೆ ಮತ್ತು ಸೋಲಸಿಡಿನ್ ಎಂಬ ಸಹಜ ಸ್ಟೀರಾಯಿಡ್ ತಯಾರಿಕೆಗಾಗಿ ಇದನ್ನು ಬೆಳೆಯುತ್ತಾರೆ. ಸುಮಾರು ಆರಡಿ ಎತ್ತರ ಬೆಳೆಯುವ ಈ ಸಸ್ಯಕ್ಕೆ ಬದನೆ ಸಸಿಯ ಕಸಿ ವಿಧಾನ ಮತ್ತು ಹೆಚ್ಚು ಬದನೆ ಇಳುವರಿ ತೋಟಗಾರಿಕೆ ಕ್ರಮಗಳು ವಿಶ್ವದೆಲ್ಲೆಡೆ ಪ್ರಚಲಿತದಲ್ಲಿದೆ.