--------------------ಜೈನರಲ್ಲಿಜನಿವಾರ ಸಂಸ್ಕಾರ ಎಂದರೆ ಏನು? ಇದರ ತತ್ತ್ವ ಚಿಂತನೆ ಏನು?
----------------
ವೀರೇಂದ್ರ ಕುಮಾರ್ ಬೇಗೂರು
-----
ಜೈನ ಧರ್ಮವು ಮೋಕ್ಷ ಮಾರ್ಗ ನಿರೂಪಿತವಾದ ಧರ್ಮವಾಗಿದೆ. ಭವ ಬಂಧನವನ್ನು ಕಳಚಿ ಸಂಸಾರ ಚಕ್ರದಿಂದ ಹೊರಬಂದು, ಆತ್ಮನ ಅಹಿತಕ್ಕೆ ಕಾರಣವಾದ ಕರ್ಮಗಳನ್ನು ಕಳೆದು ಮೋಕ್ಷ ಎಂಬ ಶಾಶ್ವತ ಸುಖ ಸನ್ನಿಧಿಯನ್ನು ತಲುಪುವುದೇ ಜಿನ ಧರ್ಮದಲ್ಲಿಹುಟ್ಟಿದ ಪ್ರತಿಯೊಬ್ಬ ಶ್ರಾವಕನ ಕರ್ತವ್ಯವಾಗಿದೆ. ಅದಕ್ಕಾಗಿ ರತ್ನತ್ರಯ ಸ್ವರೂಪವಾದ ಧರ್ಮಮಾರ್ಗದಲ್ಲಿನಡೆದು ತತ್ತ್ವ ಚಿಂತನೆ, ಆತ್ಮ ಚಿಂತನೆ ತಪಃಸಾಧನೆ, ಅಹಿಂಸೆ, ಸತ್ಯ, ಅಪರಿಗ್ರಹ, ಅಸ್ತೇಯ, ಬ್ರಹ್ಮಚರ್ಯಗಳೆಂಬ ಅಣುವ್ರತಗಳ ನಿಯಮ ಪಾಲನೆ ಮುಖ್ಯವಾಗಿದೆ. ಜೈನದರ್ಮದಲ್ಲಿಗೃಹಸ್ಥರಾವರು ತನ್ನ ವ್ಯವಹಾರದಲ್ಲಿತೊಡಗಿದ್ದರೂ ಸಹ ಧರ್ಮದ ನಿಶ್ಚಯ ಮಾರ್ಗದಲ್ಲಿಸಾಗುವುದನ್ನು ಮರೆಯದಿರಲಿ ಎಚ್ಚರ ತಪ್ಪದಿರಲಿ ಎಂದೂ, ಸತ್ ಶಾವ್ರಕರಾಗಿ ಬದುಕನ್ನು ಸಾರ್ಥಕ ಮಾಡಿಕೊಳ್ಳಲು ಧರ್ಮ ಸಾಧನೆಯ ಆಶ್ರಯವಿರಲಿ ಎಂದೂ ಒಂದು ಸದ್ಧರ್ಮದ ಹೆಗ್ಗುರುತಾಗಿ ಎಲ್ಲಾಗೃಹಸ್ಥ ಪುರುಷರ ದೇಹದ ಮೇಲೆ ಧರಿಸುವ ಸದ್ಧರ್ಮ ಸಂಸ್ಕಾರ ಮಹಾ ಸಂಕೇತವೇ ಜನಿವಾರವಾಗಿದೆ.
ಯಜ್ಞೋಪವೀತ, ರತ್ನತ್ರಯ ಸೂತ್ರ, ಜಿನದಾರ ಎಂದೆಲ್ಲಾಬೇರೆ ಬೇರೆ ಉಪನಾಮದಿಂದ ಕರೆಸಿಕೊಳ್ಳುವ ಜನಿವಾರವು ಧಾರ್ಮಿಕ ಕಾರ್ಯಗಳಲ್ಲಿ, ಆರಾಧನೆ ಮತ್ತು ಪೂಜಾ ವಿಧಿಗಳಲ್ಲಿಧರ್ಮ ಸಂಸ್ಕಾರದ ಕ್ರಿಯೆಗಳ ಬಗ್ಗೆ ಶ್ರಾವಕರನ್ನು ಜಾಗೃತಗೊಳಿಸುವ ಧರ್ಮಸೂತ್ರವೇ ಜನಿವಾರವಾಗಿದೆ. ಇಂತಹ ಪವಿತ್ರ ದಾರವನ್ನು ಧರಿಸಿ ಧರ್ಮ ಸಂಸ್ಕಾರದಲ್ಲಿಸದಾ ನಿರತನಾದವರೇ ನೈಜ ಜೈನ ಶ್ರಾವಕರಂದೆನಿಸಿಕೊಳ್ಳುವರು.
ಧರ್ಮಕಾರ್ಯಗಳ ಸಂಸ್ಕಾರದ ಅರಿವನ್ನು ಉಂಟುಮಾಡುವ ಧರ್ಮಸೂತ್ರವೇ ಯಜ್ಞೋಪವೀತ. ಜೈನ ತೀರ್ಥಂಕರರ ಧರ್ಮೋಪದೇಶದಿಂದ ಉಲ್ಲೇಖಿಸಲ್ಪಟ್ಟ ತತ್ವಾರ್ಥಸೂತ್ರದ ತತ್ತ್ವಗಳಾದ ಸಮ್ಮಕ್ ದರ್ಶನ, ಜ್ಞಾನ, ಚಾರಿತ್ರ್ಯಯಗಳೆಂಬ ರತ್ನತ್ರಯ ಸ್ವರೂಪಿಯಾದ ರಕ್ಷಾ ಸೂತ್ರವೇ ಜನಿವಾರವೆಂಬ ರತ್ನತ್ರಯಸೂತ್ರ. ಧರ್ಮದಿಂದ ನಡೆದು ಧಾರ್ಮಿಕನಾಗು ಎಂದು ಧರ್ಮಪ್ರಜ್ಞೆಯನ್ನು ಉಂಟುಮಾಡುವ ಸಾಧನವೇ ಜಿನದಾರ ಅಥವಾ ಜನಿವಾರವಾಗಿದೆ.
ಹೇಗೆ ಮಾಡಿರುತ್ತಾರೆ?
ಈ ಜನಿವಾರವು ಶುಭ್ರವಾದ ಹತ್ತಿಯ ನೂಲುಗಳಿಂದ ಮಾಡಲ್ಪಟ್ಟಿದ್ದು ತತ್ತ್ವಬದ್ಧ ರಚನೆಯನ್ನು ಹೊಂದಿರುವುದು ವಿಶೇಷವಾಗಿದೆ. ಜನಿವಾರವು ಮೂರು ದಪ್ಪನಾದ ನೂಲಿನ ಎಳೆಗಳಿಂದ ಕೂಡಿದ್ದೂ ಅದನ್ನು ಸೂಕ್ಷ ್ಮವಾಗಿ ಅವಲೋಕಿಸಿ ಎಳೆ ಎಳೆಯಾಗಿ ಬಿಡಿಸಿದಾಗ 27 ಎಳೆಗಳಿಂದ ಕೂಡಿರುತ್ತದೆ. ಇವು ಜೈನ ಧರ್ಮದ ಪ್ರಧಾನ ತತ್ತ್ವಗಳಾದ ಪಂಚಾಸ್ತಿಕಾಯ, ಷಡ್ದ್ರವ್ಯ, ಸಪ್ತತತ್ತ್ವ, ನವ ಪದಾರ್ಥಗಳೆಂಬ 27 ತತ್ತ್ವಾರ್ಥಗಳಿಂದ ಕೂಡಿದ ಧರ್ಮ ಸಾಧನ ಚಿಹ್ನೆಯಾಗಿದೆ.
ಉಪನಯನ ಸಂಸ್ಕಾರ
ಜಿನಧರ್ಮದಲ್ಲಿಹುಟ್ಟಿದ ಪ್ರತಿಯೊಂದು ಮಗುವಿಗೂ ಉಪನಯನ ಸಂಸ್ಕಾರ ಮಾಡಲಾಗುತ್ತದೆ. ಸಾಮಾನ್ಯವಾಗಿ 8ರಿಂದ 12 ವರ್ಷದ ಬಾಲಕನಿದ್ದಾಗ ಗುರುಗಳ ಉಪದೇಶ ಹಾಗೂ ಮಾರ್ಗದರ್ಶನದಲ್ಲಿವ್ರತೋಪದೇಶವೆಂಬ ಧರ್ಮ ಸಂಸ್ಕಾರ ನೀಡಿ ಜನಿವಾರವನ್ನು ಧಾರಣೆ ಮಾಡಿಸಲಾಗುತ್ತದೆ. ಇಲ್ಲಿಂದ ಮುಂದೆ ವ್ರತಸ್ವೀಕಾರ ಮಾಡಿದ ವಟುಗಳು ಪಂಚಾಣುವ್ರತಗಳನ್ನು ಪಾಲನೆ ಮಾಡುವುದರೊಂದಿಗೆ ಪಂಚ ಔದುಂಬರ ಫಲಗಳಾದ ಅತ್ತಿ, ಆಲ, ಅರಳಿ, ಗೋಣಿ ಫಲಗಳು. ಮದ್ಯ-ಮಾಂಸಗಳೆಂಬ ಅಭಕ್ಷ್ಯಗಳನ್ನು ವರ್ಜಿಸಿ,ಅಷ್ಟ ಮೂಲಗುಣಗಳನ್ನು ಧರಿಸಿ ಸಮ್ಯಕ್ತ್ವಶಾಲಿಯಾಗಿ ಧರ್ಮ ಪ್ರಭಾವನೆಯಲ್ಲಿತೊಡಗಬೇಕೆಂದು ಜಾಗೃತಗೊಳಿಸುವ ಧರ್ಮ ಸಂಸ್ಕಾರವಾಗಿದೆ.
ಆರಂಭ ಯಾವಾಗ?
ಜೈನ ಪುರಾಣಗಳ ಪ್ರಕಾರ ಈ ಜನಿವಾರ ಧಾರಣೆಯ ಪದ್ಧತಿಯು ಆರಂಭವಾಗಿದ್ದು ಜೈನರ ಪ್ರಥಮ ತೀರ್ಥಂಕರರಾದ ಋುಷಭದೇವರ ಪುತ್ರರಾದ ಭರತ ಚಕ್ರವರ್ತಿಯ ಕಾಲದಲ್ಲಿ. ಭರತ ಚಕ್ರವರ್ತಿಯು ಷಟ್ಖಂಡಗಳನ್ನು ಜಯಿಸಿ ತನ್ನ ಸಾಮ್ರಾಜ್ಯವಾದ ಅಯೋಧ್ಯೆಗೆ ಹಿಂತಿರುಗಿದ ನಂತರದಲ್ಲಿಒಂದುದಿನ ತನ್ನ ಸಾಮ್ರಾಜ್ಯದಲ್ಲಿರುವ ಪ್ರಜೆಗಳಲ್ಲಿಭೋಗವಿಲಾಸಿಗಳು ಹಾಗೂ ಧರ್ಮನಿಷ್ಠ ಜನರು ಯಾರು ಎಂಬ ಬಗ್ಗೆ ತಿಳಿಯಲು ತನ್ನ ಅರಮನೆಯಲ್ಲಿಭೋಜನಕೂಟವನ್ನು ಏರ್ಪಡಿಸಿ ಎಲ್ಲರನ್ನೂ ಆಹ್ವಾನಿಸಿದರು. ಜನರು ಪ್ರವೇಶಿಸುವ ಅರಮನೆಯ ಪ್ರವೇಶ ದ್ವಾರದಲ್ಲಿಮೊಳಕೆ ಬಂದ ಸಸ್ಯಗಳನ್ನು ಹಸಿರಾದ ಸಣ್ಣ ಜೀವ ಸಸ್ಯಗಳನ್ನು ಪರೀಕ್ಷಾರ್ಥವಾಗಿ ಹರಡಿಸಿದರು. ಅರಮನೆಗೆ ಬಂದ ಜನರಲ್ಲಿಭೋಗ ವಿಲಾಸಿಗಳು ಆ ಸಸ್ಯಗಳನ್ನೇ ತುಳಿದು ಅರಮನೆಗೆ ಪ್ರವೇಶ ಮಾಡಿದರು. ಆದರೆ ಅಹಿಂಸಾ ಧರ್ಮದ ಪಾಲನೆಯಲ್ಲಿನಿಷ್ಠರಾದ ಜನರು ಸಸ್ಯಗಳಿಗೂ ಜೀವವಿದೆ ಎಂದು ತಿಳಿದು ಅವುಗಳನ್ನು ತುಳಿಯದೆ ಪ್ರವೇಶ ದ್ವಾರದ ಅಂಚಿನಲ್ಲಿನಿಂತರು. ಇದನ್ನು ತಿಳಿದ ಭರತ ಚಕ್ರವರ್ತಿಯು ದಯಾಮಯಿಯಾದ ಧರ್ಮ ನಿಷ್ಠೆಯುಳ್ಳ ಜನರನ್ನು ಕಂಡು ಅವರನ್ನು ಗೌರವದಿಂದ ಇನ್ನೂಂದು ದ್ವಾರದಿಂದ ಬರಮಾಡಿಕೊಂಡು ಅವರಿಗೆ ಪುರಸ್ಕರಿಸಿ ಆಧ್ಯಾತ್ಮಿಕ ಹಾಗೂ ಸಂಯಮ ಶ್ರೇಷ್ಠತೆಯ ಸಂಕೇತವಾದ ಅಂದರೆ ಸಮ್ಯಕ್ ದರ್ಶನ, ಜ್ಞಾನ, ಚಾರಿತ್ರ್ಯಗಳೆಂಬ ರತ್ನತ್ರಯಗಳ ಸಂಕೇತವಾದ ಸತ್ ಚಿಂತನೆಯ ಸೂತ್ರವನ್ನು ಹಾಕಿ ಸನ್ಮಾರ್ಗದಲ್ಲಿಸಾಗಿ ಮೋಕ್ಷಗಾಮಿಯಾಗಿರೆಂದು ಹಾರೈಸಿದರು. ಅಂದಿನಿಂದ ರತ್ನತ್ರಯ ಸೂತ್ರವೆಂಬ ಜನಿವಾರ ಧಾರಣೆಯ ಪರ್ವವವು ಜೈನಧರ್ಮದಲ್ಲಿಆರಂಭವಾಯಿತು. ಆ ದಿನ ಶ್ರಾವಣ ಶುದ್ಧ ಪೂರ್ಣಿಮೆಯ ದಿನವಾಗಿದ್ದರಿಂದ ಈ ಪರ್ವವನ್ನು ಜೈನರು ಪ್ರತಿವರ್ಷ ಶ್ರಾವಣ ಶುದ್ಧ ಪೂರ್ಣಿಮೆಯಂದು ಶ್ರದ್ಧಾಭಕ್ತಿಗಳಿಂದ ನೂಲಹುಣ್ಣಿಮೆ ಅಥವಾ ಜನಿವಾರದ ಹಬ್ಬವಾಗಿ ಆಚರಿಸುತ್ತಾ ಬಂದಿದ್ದಾರೆ.
ಆಚರಣೆ ಹೇಗೆ?
ಜೈನ ಶ್ರಾವಕರಾದ ಪುರುಷರು ಶ್ರಾವಣದ ಹುಣ್ಣಿಮೆಯಂದು ಬಸದಿಗಳಿಗೆ ಹೋಗಿ ಅಲ್ಲಿಜೈನ ತೀರ್ಥಂಕರರಿಗೆ ಅಭಿಷೇಕ, ಪೂಜಾ ವಿಧಿಗಳನ್ನು ಪೂರ್ಣಗೊಳಿಸಿ ನಂತರ ಜಿನಮಂದಿರದಲ್ಲಿಜನಿವಾರಗಳನ್ನು ಇಟ್ಟು ಅಜ್ಯಾಹುತಿ, ಸಮೀದಾಹುತಿ ಮುಂತಾದ ಹೋಮ ಕಾರ್ಯಗಳನ್ನು ಮಾಡಿ ‘ಓಂ ನಮೋ ಅರ್ಹತೆ ಭಗವತೇ ಸಮ್ಮಕ್ ದರ್ಶನ ಜ್ಞಾನ ಚಾರಿತ್ರ್ಯರೂಪಿ ರತ್ನತ್ರಯ ಪವಿತ್ರಿ ಕೃತಂಗಾಯ ಯಜ್ಞೋಪವೀತ ಧಾರಣಂ ಕರೋಮಿ ಸ್ವಹಾಃ, ಕೇವಲ ಜ್ಞಾನ ಸಾಮ್ರಾಜ್ಯ ಪದ ಪ್ರಾಪ್ತಯೇ ರತ್ನತ್ರಯ ಮಹಾಸೂತ್ರಂ ಕಂಠಾಭರಣ ಮಸ್ತುಮೇ’ ಎಂಬ ಮಂತ್ರೋಚ್ಚಾರಣೆಯೊಂದಿಗೆ ಹಳೆಯ ಜನಿವಾರವನ್ನು ತೆಗೆದು ಹೊಸ ಜನಿವಾರವನ್ನು ಶ್ರಮಣ ಸಂಕಲ್ಪಪೂರ್ವಕವಾಗಿ ಧಾರಣೆ ಮಾಡುತ್ತಾರೆ. ವಿವಾಹಿತರಲ್ಲದವರು 3 ಎಳೆಯ ಒಂದು ಸೂತ್ರವನ್ನು, ವಿವಾಹಿತರಾದವರು ತನ್ನೊಂದಿಗೆ ತನ್ನ ಧರ್ಮಪತ್ನಿಯನ್ನು ಧರ್ಮ ಮಾರ್ಗದಲ್ಲಿನಡೆಸಿಕೊಂಡು ಹೋಗುವ ಹೊಣೆ ಹೊತ್ತು ಎರಡು ಸೂತ್ರಗಳನ್ನು ಧರಿಸುವುದು ರೂಢಿಯಲ್ಲಿದೆ. ಪ್ರತಿ ವ್ಯಕ್ತಿಯು ತಾನಾಗಲಿ ತನ್ನ ಪತ್ನಿಯಾಗಲಿ ಕುಟುಂಬದವರಾಗಲಿ ಧರ್ಮ ಮಾರ್ಗ ಬಿಟ್ಟು ನಡೆಯದಂತೆ ಸದಾ ಜಾಗೃತ ಗೊಳಿಸುವ ಧರ್ಮಸೂತ್ರವೇ ಜನಿವಾರವಾಗಿದೆ.
ಮಾನವ ಜನ್ಮದಲ್ಲಿಹುಟ್ಟಿದ ಎಲ್ಲರಿಗೂ ಸದ್ಗೃಹಸ್ಥರಾಗಿ ಬಾಳಲು ಪುಣ್ಯ ಬೇಕು. ಧರ್ಮಪ್ರಜ್ಞೆಯನ್ನು ಸದಾ ಮೂಡಿಸುವಂತ ಸದ್ಧರ್ಮ ಸೂಚಕ ಸೂತ್ರವಾದ ಜನಿವಾರವು ಧರ್ಮ ಸಂಸ್ಕಾರದ ಸಾಧನ ಸಂಕೇತವಾಗಿದೆ. ಧರ್ಮವೆಂಬ ಕಲ್ಪವೃಕ್ಷಕ್ಕೆ ಸಮ್ಯಕ್ ದರ್ಶನ, ಜ್ಞಾನ, ಚಾರಿತ್ರ್ಯಗಳೇ ಆಧಾರವಾದ ಜೈನಶ್ರಾವಕರ ಸಂಸ್ಕಾರದ ಸಾಧನವಾಗಿದೆ ಮತ್ತು ಜಿನತತ್ತ್ವಗಳೇ ಜನಿವಾರವಾಗಿದೆ.