ಮಧುಸೂದನ ಸಾಯಿ (ಲೀಡ್ ಪು.6)

Contributed byShridevi Ambekallu|Vijaya Karnataka
wisdom and detachment the guiding light of self realization
ಆಧ್ಯಾತ್ಮಿಕ ಬದುಕಿನ ದಿಕ್ಸೂಚಿ

-------
ವಿವೇಕ ಮತ್ತ ವೈರಾಗ್ಯ ಅಂದರೇನು? ಇವುಗಳ ಸಮನ್ವಯವನ್ನು ಸಾಧಿಸುವುದು ಹೇಗೆ?

------

- ಸದ್ಗುರು ಶ್ರೀ ಮಧುಸೂದನ ಸಾಯಿ

ಶ್ರೀ ಸತ್ಯಸಾಯಿ ಗ್ರಾಮ ಮುದ್ದೇನಹಳ್ಳಿ

------

ಮಾನವನನ್ನು ಇತರ ಜೀವಿಗಳಿಗಿಂತ ಶ್ರೇಷ್ಠನನ್ನಾಗಿಸುವ ಶಕ್ತಿ ಅವನ ವಿವೇಕ. ಯಾವುದು ನಿತ್ಯ, ಯಾವುದು ಅನಿತ್ಯ, ಯಾವುದು ಸತ್ಯ, ಯಾವುದು ಮಿಥ್ಯ, ಯಾವುದು ಆತ್ಮೋನ್ನತಿಗೆ ದಾರಿ, ಯಾವುದು ಬಂಧನಕ್ಕೆ ಕಾರಣ ಎಂಬುದನ್ನು ಅರಿತುಕೊಳ್ಳುವ ಸಾಮರ್ಥ್ಯವೇ ವಿವೇಕ. ಈ ದಿವ್ಯಶಕ್ತಿಯನ್ನು ಸಮರ್ಪಕವಾಗಿ ಬಳಸಿದಾಗ ಜೀವನವು ಧರ್ಮ, ಶಾಂತಿ ಮತ್ತು ಆತ್ಮಸಾಕ್ಷಾತ್ಕಾರದತ್ತ ಸಾಗುತ್ತದೆ. ಅದನ್ನು ನಿರ್ಲಕ್ಷಿಸಿದಾಗ ಮನುಷ್ಯನು ಅಜ್ಞಾನ, ಆಸೆ ಮತ್ತು ದುಃಖದ ಚಕ್ರದಲ್ಲಿಸಿಲುಕಿಕೊಳ್ಳುತ್ತಾನೆ.

ಮಾನವನಿಗೆ ದೇವರು ನೀಡಿರುವ ಈ ಉನ್ನತ ಬುದ್ಧಿಶಕ್ತಿಯನ್ನು ಉದ್ದೇಶ ಕೇವಲ ಭೌತಿಕ, ಲೌಕಿಕ ಕಾರ್ಯಗಳಿಗಾಗಿ ನೀಡಿಲ್ಲ. ಪ್ರತಿಯೊಂದು ಆಲೋಚನೆ, ಮಾತು ಮತ್ತು ಕರ್ಮವು ನಮ್ಮನ್ನು ಭಗವಂತನ ಸಮೀಪಕ್ಕೆ ಕರೆದೊಯ್ಯುತ್ತಿದೆಯೇ ಅಥವಾ ಪ್ರಾಪಂಚಿಕ ಮೋಹದತ್ತ ಎಳೆಯುತ್ತಿದೆಯೇ ಎಂಬುದನ್ನು ನಿರಂತರವಾಗಿ ಪರಿಶೀಲಿಸುವುದೇ ನಿಜವಾದ ಆಧ್ಯಾತ್ಮಿಕ ಜೀವನ. ಈ ಆತ್ಮಪರಿಶೀಲನೆಯೇ ಸಾಧನೆಯ ಮೊದಲ ಮೆಟ್ಟಿಲು.

ಆದಿ ಶಂಕರಾಚಾರ್ಯರು ಆಧ್ಯಾತ್ಮಿಕ ಸಾಧನೆಗೆ ವಿವೇಕ ಮತ್ತು ವೈರಾಗ್ಯ ಎಂಬ ಎರಡು ಮಹತ್ವದ ಆಧಾರಸ್ತಂಭಗಳನ್ನು ಬೋಧಿಸಿದ್ದಾರೆ. ವಿವೇಕವು ಸರಿ-ತಪ್ಪಿನ ನಡುವಿನ ವ್ಯತ್ಯಾಸವನ್ನು ತಿಳಿಸುತ್ತದೆ. ಯಾವುದು ಗ್ರಾಹ್ಯ, ಯಾವುದು ವಜ್ರ್ಯ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ವೈರಾಗ್ಯದ ಸಹಕಾರ ಅಗತ್ಯ. ವಿವೇಕ ಮತ್ತು ವೈರಾಗ್ಯಗಳು ಸಾಧಕನ ಜೀವನದಲ್ಲಿಪರಸ್ಪರ ಪೂರಕವಾದ ಎರಡು ಶಕ್ತಿಗಳಾಗಿವೆ.

ವಿವೇಕದ ಪರೀಕ್ಷೆ

ಜೀವನದಲ್ಲಿಎದುರಾಗುವ ಪ್ರತಿಯೊಂದು ಸಂದರ್ಭಗಳಲ್ಲಿಯೂ ನಾವು ತೆಗೆದುಕೊಳ್ಳುವ ನಿರ್ಧಾರಗಳು ವಿವೇಕದ ಪರೀಕ್ಷೆಯೇ ಆಗಿರುತ್ತವೆ. ಒಮ್ಮೊಮ್ಮೆ ಆಸೆ, ಅಹಂಕಾರ ಅಥವಾ ಭಾವೋದ್ವೇಗವು ಸರಿಯಾದ ಮಾರ್ಗದಿಂದ ನಮ್ಮನ್ನು ದೂರವಾಗಿಸಲು ಪ್ರಯತ್ನಿಸುತ್ತದೆ. ಅಂತಹ ಸಂದರ್ಭಗಳಲ್ಲಿವಿವೇಕವು ದಿಕ್ಕು ತೋರಿದರೆ, ವೈರಾಗ್ಯವು ಆ ದಾರಿಯಲ್ಲಿಸ್ಥಿರವಾಗಿ ನಡೆಯುವ ಧೈರ್ಯವನ್ನು ನೀಡುತ್ತದೆ. ಈ ಎರಡರ ಸಮನ್ವಯವೇ ವ್ಯಕ್ತಿತ್ವವನ್ನು ಶುದ್ಧಗೊಳಿಸಿ ಆತ್ಮೋನ್ನತಿಯತ್ತ ಕೊಂಡೊಯ್ಯುತ್ತದೆ.

ಆತ್ಮೋನ್ನತಿಗೆ ಬೇಕು ವಿವೇಕ

ಈ ಸತ್ಯವನ್ನು ವೈದ್ಯ ಮತ್ತು ದಾದಿಯ ಉದಾಹರಣೆಯ ಮೂಲಕ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ವೈದ್ಯರು ರೋಗಕ್ಕೆ ಸೂಕ್ತವಾದ ಔಷಧವನ್ನು ಸೂಚಿಸುತ್ತಾರೆ. ದಾದಿಯು ಅದನ್ನು ನಿಷ್ಠೆಯಿಂದ ನೀಡುತ್ತಾಳೆ. ಅದೇ ರೀತಿಯಲ್ಲಿವಿವೇಕವು ಜೀವನಕ್ಕೆ ಸರಿಯಾದ ಮಾರ್ಗವನ್ನು ಸೂಚಿಸಿದರೆ, ವೈರಾಗ್ಯವು ಯಾವುದೇ ಹಿಂಜರಿಕೆಯಿಲ್ಲದೆ ಅದನ್ನು ಅನುಷ್ಠಾನಗೊಳಿಸಬೇಕು. ಆದರೆ ಅಂತಿಮ ನಿರ್ಧಾರ ವ್ಯಕ್ತಿಯದೇ. ವೈದ್ಯರ ಸಲಹೆಯನ್ನು ಪಾಲಿಸದ ರೋಗಿಯು ಗುಣಮುಖನಾಗಲಾರನು; ಹಾಗೆಯೇ ವಿವೇಕದ ಧ್ವನಿಯನ್ನು ನಿರ್ಲಕ್ಷಿಸಿದ ಸಾಧಕನು ಆತ್ಮೋನ್ನತಿಯ ಗುರಿಯನ್ನು ತಲುಪಲಾರ.

ವೈರಾಗ್ಯದ ಸಾರ

ಇಂದಿನ ಸಮಾಜದಲ್ಲಿವೈರಾಗ್ಯದ ಅರ್ಥವನ್ನು ಅನೇಕರು ತಪ್ಪಾಗಿ ಗ್ರಹಿಸುತ್ತಾರೆ. ಮನೆ, ಕುಟುಂಬ, ಉದ್ಯೋಗ ಅಥವಾ ಸಮಾಜವನ್ನು ತ್ಯಜಿಸುವುದೇ ವೈರಾಗ್ಯ ಎಂದು ಭಾವಿಸುವುದು ಆಧ್ಯಾತ್ಮಿಕತೆಯ ಅಪೂರ್ಣ ಅರಿವು. ನಿಜವಾದ ವೈರಾಗ್ಯ ಎಂದರೆ ಜವಾಬ್ದಾರಿಗಳನ್ನು ಬಿಟ್ಟು ಓಡಿಹೋಗುವುದಲ್ಲ; ಅವುಗಳನ್ನು ಭಗವಂತನ ಸೇವೆಯೆಂದು ಸ್ವೀಕರಿಸಿ, ಫಲಾಪೇಕ್ಷೆ ಮತ್ತು ಮಮಕಾರವಿಲ್ಲದೆ ನಿರ್ವಹಿಸುವುದು. ಸಂಸಾರವನ್ನು ತ್ಯಜಿಸುವುದಲ್ಲ, ಸಂಸಾರದ ಮೇಲಿನ ಮಮಕಾರವನ್ನು ತ್ಯಜಿಸುವುದೇ ವೈರಾಗ್ಯದ ಸಾರ.

ತಂದೆ, ತಾಯಿ, ಪತಿ, ಪತ್ನಿ, ಮಗ, ಮಗಳು ಅಥವಾ ಸಮಾಜಸೇವಕ ಎಂಬ ಯಾವುದೇ ಪಾತ್ರ ನಮಗೆ ದೊರೆತಿದ್ದರೂ, ಅದನ್ನು ದೇವರು ನೀಡಿದ ಪವಿತ್ರ ಜವಾಬ್ದಾರಿಯೆಂದು ಭಾವಿಸಿ ನಿಷ್ಕಾಮಭಾವದಿಂದ ನಿರ್ವಹಿಸಿದಾಗ ಜೀವನವೇ ಯೋಗವಾಗುತ್ತದೆ. ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವುದರ ಜೊತೆಗೆ ಅದರ ಫಲದ ಮೇಲಿನ ಆಸಕ್ತಿಯನ್ನು ತ್ಯಜಿಸಿದಾಗ ಮನಸ್ಸು ಶುದ್ಧಗೊಳ್ಳುತ್ತದೆ ಮತ್ತು ಅಂತರಂಗದಲ್ಲಿಶಾಂತಿ ನೆಲೆಸುತ್ತದೆ.

ವಿವೇಕ ಮತ್ತು ವೈರಾಗ್ಯ

ಇವುಗಳ ಸಮನ್ವಯವೇ ಆಧ್ಯಾತ್ಮಿಕ ಜೀವನದ ನಿಜವಾದ ದಿಕ್ಸೂಚಿ. ಇವುಗಳ ಬೆಳಕಿನಲ್ಲಿಬದುಕುವ ವ್ಯಕ್ತಿಯ ನಿರ್ಧಾರಗಳು ಸತ್ಯದತ್ತ ಸಾಗುತ್ತವೆ, ಮನಸ್ಸು ಸ್ಥಿರಗೊಳ್ಳುತ್ತದೆ ಮತ್ತು ಜೀವನವು ಭಗವಂತನ ಅನುಭವದತ್ತ ಪಯಣಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ಎರಡು ದಿವ್ಯಗುಣಗಳನ್ನು ತಮ್ಮ ಜೀವನದ ನಿತ್ಯ ಸಂಗಾತಿಗಳನ್ನಾಗಿ ಮಾಡಿಕೊಂಡಾಗ ಮಾತ್ರ ಆತ್ಮೋನ್ನತಿಯ ಮಾರ್ಗ ಸುಗಮವಾಗುತ್ತದೆ ಮತ್ತು ಮಾನವ ಜನ್ಮದ ಸಾರ್ಥಕತೆ ಅರಿವಾಗುತ್ತದೆ.