Demand For Appointment Of Hindi And Kannada Teachers In The State
ಹಿಂದಿ, ಕನ್ನಡ ಶಿಕ್ಷಕರ ನೇಮಕಕ್ಕೂ ಆಗ್ರಹ
Contributed by: Keerthi Prasad|Vijaya Karnataka•
ವಿಕ ಸುದ್ದಿಲೋಕ ಬೆಂಗಳೂರು
ರಾಜ್ಯದಲ್ಲಿ800 ಉರ್ದು ಶಿಕ್ಷಕರು, 200 ಮರಾಠಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಅದಕ್ಕೆ ಬಿಜೆಪಿ ವಿರೋಧವಿಲ್ಲ. ಆದರೆ ಹಿಂದಿ, ಚಿತ್ರಕಲೆ, ಕನ್ನಡ, ಕ್ರಾಫ್ಟ್ ಶಿಕ್ಷಕರ ನೇಮಕಕ್ಕೆ ಸರಕಾರ ಮುಂದಾಗದಿರುವುದು ಸರಿಯಲ್ಲಎಂದು ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್ .ರವಿಕುಮಾರ್ ಆಕ್ಷೇಪಿಸಿದರು.ರಾಜ್ಯ ಬಿಜೆಪಿ ಕಚೇರಿಯಲ್ಲಿಶನಿವಾರ ಮಾತನಾಡಿದ ಅವರು, ‘‘ಹಿಂದಿ ಶಿಕ್ಷಕರನ್ನು ಸರಕಾರ ನೇಮಿಸಿಕೊಳ್ಳದಿರಲು ಕಾರಣವೇನು? ನಮ್ಮ ಮಕ್ಕಳು ರಾಷ್ಟ್ರ ಭಾಷೆ ಕಲಿಯಬಾರದೆ? ಉರ್ದು ಮತ್ತು ಮರಾಠಿ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಿದ ರೀತಿಯಲ್ಲೇ ಹಿಂದಿ ಹಾಗೂ ಇತರೆ ಶಿಕ್ಷಕರ ನೇಮಕಕ್ಕೂ ಸರಕಾರ ಕ್ರಮ ವಹಿಸಬೇಕು,’’ ಎಂದು ಆಗ್ರಹಿಸಿದರು.
‘‘ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ನಾವು ಆಗ್ರಹಿಸುತ್ತಿದ್ದರೆ ಸರಕಾರ ಅವರ ಪರ ನಿಂತು ಅವರಿಗೆ ಹೆಚ್ಚುವರಿಯಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೊಣೆಯನ್ನೂ ವಹಿಸಿರುವುದು ಖಂಡನೀಯ. ಮುಖ್ಯಮಂತ್ರಿಗಳು ಕೂಡಲೇ ನಾಗೇಂದ್ರ ರಾಜೀನಾಮೆ ಪಡೆಯಬೇಕು,’’ ಎಂದು ಒತ್ತಾಯಿಸಿದರು.
ಎಕರೆಗೆ 50 ಸಾವಿರ ರೂ. ಪರಿಹಾರ ಕೊಡಿ:
‘‘ತೀವ್ರ ಬರದಿಂದಾಗಿ ಮುಂಗಾರು ಕೃಷಿ ಬೆಳೆ ನಾಶವಾಗಿದ್ದು, ಜಾನುವಾರುಗಳಿಗೆ ಮೇವು, ನೀರು ಇಲ್ಲವಾಗಿದೆ. ರೈತರು ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಇಷ್ಟೆಲ್ಲಆದರೂ ರೈತರ ಪರವಾಗಿ ಒಂದೂ ಕ್ರಮವನ್ನು ಸರಕಾರ ಕೈಗೊಂಡಿಲ್ಲ. ಸರಕಾರ ಕೂಡಲೇ ಬರ ಘೋಷಿಸಿ ಎಕರೆಗೆ 50,000 ರೂ. ಪರಿಹಾರ ನೀಡಬೇಕು. ರೈತರ ನೆರವಿಗಾಗಿ 10,000 ಕೋಟಿ ರೂ. ಪ್ಯಾಕೇಜ್ ಬಿಡುಗಡೆ ಮಾಡಬೇಕು,’’ ಎಂದು ಆಗ್ರಹಿಸಿದರು.