ಇಂಟ್ರೊಹಳೆಯ ಕಾಲದ ಸೊಗಸಿನೊಂದಿಗೆ ಹೊಸತನದ ಮೆರುಗು ಹೊತ್ತ ಜೀವನಶೈಲಿ ಉತ್ತೇಜಿಸುವ ಗ್ರ್ಯಾಂಡ್ ಮಿಲೇನಿಯಲ್ ಫ್ಯಾಷನ್ ಟ್ರೆಂಡ್ ಸದ್ಯಕ್ಕೆ ಯುವ ವಲಯದಲ್ಲಿಗಮನ ಸೆಳೆದಿದೆ.
ಶುಭಾ ವಿಕಾಸ್
ಉಡಲು ಅಜ್ಜಿಯ ಸೀರೆ ಬೇಕಿಲ್ಲ, ಧರಿಸಲು ಅಮ್ಮನ ರವಿಕೆಯೂ ಬೇಡ. ಆದರೆ ಅವೆರಡರ ಸಂಯೋಜನೆ ಒಳಗೊಂಡ ಹೊಸ ಸ್ಟೈಲ್ ಈಗಿನ ಯುವತಿಯರ ಫ್ಯಾಷನ್ ಸ್ಟೇಟ್ ಮೆಂಟ್ . ಹಳೆಯ ಕಾಲದ ವಿನ್ಯಾಸ ಹಾಗೂ ಹೊಸ ಕಾಲದ ಬೆಡಗಿನೊಂದಿಗೆ ಬೆರೆತ ಈ ಫ್ಯಾಷನ್ ಗ್ರ್ಯಾಂಡ್ ಮಿಲೇನಿಯಲ್ ಹೆಸರಿನಲ್ಲಿಯುವಜನತೆಯ ಗಮನ ಸೆಳೆದಿದೆ. ಹಳೆಯ ನೆನಪುಗಳು ಮತ್ತು ಆಧುನಿಕ ಆತ್ಮವಿಶ್ವಾಸದ ಸುಂದರ ಸಮ್ಮಿಲನವಿದು.
ಗ್ರ್ಯಾಂಡ್ ಮಿಲೇನಿಯಲ್ ಫ್ಯಾಷನ್
ಸಾಂಪ್ರದಾಯಿಕ ಉಡುಪುಗಳು ಮತ್ತು ಹಳೆಯ ಫ್ಯಾಷನ್ ವಿವರಗಳನ್ನು ಇಂದಿನ ಆಧುನಿಕ ಶೈಲಿಗೆ ತಕ್ಕಂತೆ ಮರುಸೃಷ್ಟಿಸುವುದನ್ನು ಗ್ರ್ಯಾಂಡ್ ಮಿಲೇನಿಯಲ್ ಫ್ಯಾಷನ್ ಎನ್ನಲಾಗುತ್ತದೆ. ಹಳೆಯದು ಅಂದರೆ ಆ ಕಾಲದ ಬಟ್ಟೆಯನ್ನೇ ತೊಡುವುದು ಅಂತಲ್ಲ, ಬದಲಿಗೆ ಹಳೆಯ ಕಾಲದ ಕಸೂತಿ ಕೆಲಸದ ಬ್ಲೌಸ್ , ಮುತ್ತಿನ ಹಾರ, ಟ್ವೀಡ್ ಜಾಕೆಟ್ , ಹೂವಿನ ವಿನ್ಯಾಸದ ಉಡುಪುಗಳನ್ನು ಈಗಿನ ಟ್ರೆಂಡಿ ಸೈಜ್ ಹಾಗೂ ಕಟ್ ಗಳಿಗೆ ತಕ್ಕಂತೆ ವಿನ್ಯಾಸಗೊಳಿಸಿ ಧರಿಸುವುದು. ಇದು ಕೇವಲ ವೇಷಭೂಷಣದಂತೆ ಕಾಣದೆ ಸೂಕ್ಷ್ಮ ಮತ್ತು ಕಣ್ಣಿಗೆ ತಂಪೆನಿಸುವ ನೋಟ ನೀಡುತ್ತದೆ. ಈ ಮೂಲಕ ಹೂವಿನ ವಿನ್ಯಾಸಗಳು, ಮುತ್ತುಗಳ ಆಭರಣಗಳು ಮತ್ತು ಸಾಂಪ್ರದಾಯಿಕ ಶೈಲಿಯ ಹೊಸ ಅವತಾರ ಆಧುನಿಕ ಉಡುಪುಗಳ ಜಗತ್ತನ್ನು ಗ್ರ್ಯಾಂಡ್ ಮಿಲೇನಿಯಲ್ ಹೆಸರಲ್ಲಿಆಳಲು ಹೊರಟಿದೆ.
ಹಳೆ ಹಾಗೂ ಆಧುನಿಕತೆಯ ಸಮತೋಲನ
ಈ ಫ್ಯಾಷನ್ ನ ನಿಜ ಸೌಂದರ್ಯವಿರುವುದು ಹಳೆಯ ಮತ್ತು ಹೊಸ ವಿನ್ಯಾಸಗಳನ್ನು ಬ್ಯಾಲೆಸ್ಸ್ ಮಾಡುವುದರಲ್ಲಿ. ಸಾಂಪ್ರದಾಯಿಕ ಹೂವಿನ ಪ್ರಿಂಟೆಡ್ ಡ್ರೆಸ್ ಗೆ ಓವರ್ ಸೈಜ್ಡ್ ಬ್ಲೇಝರ್ ಜೋಡಿಸಿದಾಗ ಅದು ತಕ್ಷಣವೇ ಆಧುನಿಕ ರೂಪ ಪಡೆಯುತ್ತದೆ. ಪಫ್ ಸ್ಲೀವ್ ಮತ್ತು ಆ್ಯಂಟಿಕ್ ವಿನ್ಯಾಸಗಳನ್ನು ಸರಳವಾದ ಆ್ಯಕ್ಸೆಸರಿಗಳೊಂದಿಗೆ ಬಳಸಿದಾಗ ಇಂದಿನ ಕಾಲಕ್ಕೆ ಸೂಕ್ತವೆನಿಸುತ್ತವೆ. ಬಿಗಿ ಸ್ಕರ್ಟ್ ಗಳ ಬದಲಿಗೆ ಆರಾಮದಾಯಕ ಟ್ರೌಸರ್ , ಹಳೆಯ ಮಾದರಿಯ ಬಟ್ಟೆಗಳಿಗೆ ಕ್ರಾ±್ಡ… ಜಾಕೆಟ್ ಮತ್ತು ಓವರ್ ಸೈಜ್ ಶರ್ಟ್ ಗಳ ಕಾಂಬಿನೇಷನ್ ಇತ್ಯಾದಿಯಿಂದಾಗಿ ಕರಕುಶಲ ವಿನ್ಯಾಸಕ್ಕೆ ಸೀಮಿತವಾಗಿದ್ದ ಬಟ್ಟೆಗಳು ಪ್ರತಿದಿನ ಧರಿಸಲು ಸೂಕ್ತವೆನಿಸುವ ಕ್ಯಾಶುವಲ್ ಆಫೀಸ್ ಹಾಗೂ ಪಾರ್ಟಿ ವೇರ್ ಆಗಿ ಬದಲಾಗಿವೆ. ವಿಂಟೇಜ್ ಆಭರಣಗಳು ಮತ್ತು ಪರಿಕರಗಳಲ್ಲಿಬ್ರೂಚ್ , ಕನ್ನಡಕದ ಚೈನ್ , ಲಾಕೆಟ್ , ಓಲೆಗಳು ಮತ್ತೆ ಫ್ಯಾಷನ್ ಜಗತ್ತಿಗೆ ಹಿಂತಿರುಗಿವೆ. ಕ್ರೋಶಾ ಸ್ವೆಟರ್ , ಪೋಲ್ಕಾ ಡಾಟ್ , ಫ್ಲೋರಲ್ ಪ್ರಿಂಟ್ ಮತ್ತು ಕ್ಲಾಸಿಕ್ ಕಟ್ ನ ಉಡುಪುಗಳು ಆದ್ಯತೆ ಪಡೆಯುತ್ತಿವೆ.
ಯುವಜನತೆಗೆ ಇಷ್ಟ
ತ್ವರಿತವಾಗಿ ಬದಲಾಗುವ ಫ್ಯಾಷನ್ ಟ್ರೆಂಡ್ ಗಳಿಂದ ಬೇಸತ್ತಿರುವ ಯುವಜನರು ಈಗ ಹೆಚ್ಚು ಕಾಲ ಬಾಳಿಕೆ ಬರುವ ಮತ್ತು ತಮ್ಮ ವ್ಯಕ್ತಿತ್ವಕ್ಕೆ ಹೊಂದುವ ಉಡುಪುಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿಸಿಗುವ ಒಂದೇ ರೀತಿಯ ಬಟ್ಟೆಗಳಿಗಿಂತ ವಿಶಿಷ್ಟ ಇತಿಹಾಸ ಮತ್ತು ಕಥೆ ಹೊಂದಿರುವ ವಿಂಟೇಜ್ ವಸ್ತುಗಳು ಪ್ರತ್ಯೇಕ ಗುರುತು ನೀಡುತ್ತವೆ ಎಂಬ ಮನೋಭಾವ, ಹೊಸ ಬಟ್ಟೆಗಳನ್ನು ಕೊಳ್ಳುವ ಬದಲು ಹಳೆಯ ಬಟ್ಟೆಗಳನ್ನು ಮರುಬಳಕೆ ಮಾಡುವುದು ಮತ್ತು ಅಜ್ಜಿಯ ವಾರ್ಡ್ ರೋಬ್ ನಿಂದ ಉಡುಪುಗಳನ್ನು ಆಯ್ಕೆ ಮಾಡುವುದು ಪರಿಸರ ಸ್ನೇಹಿ ಫ್ಯಾಷನ್ ತತ್ವಕ್ಕೆ ಪೂರಕ ಎಂಬ ನಂಬಿಕೆಯೂ ಇದರಲ್ಲಿದೆ. ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿವಿಂಟೇಜ್ ಸ್ಟೈಲಿಂಗ್ ಡಿಜಿಟಲ್ ಇನ್ ಫ್ಲುಯೆನ್ಸರ್ ಗಳ ಮೂಲಕ ಈ ಟ್ರೆಂಡ್ ವೇಗವಾಗಿ ಹರಡುತ್ತಿದೆ. ಇವೆಲ್ಲವನ್ನೂ ಮೀರಿ ಹಳೆಯದರಲ್ಲಿಸಿಗುವ ನಿರಾಳತೆ ಇದರ ಹಿಂದಿದೆ.
ಬಾಕ್ಸ್
ಉಡುಪಿನಿಂದ ಜೀವನಶೈಲಿಯತ್ತ
ಹಳೆಯ ಕಾಲದ ಸೌಂದರ್ಯವನ್ನು ಆಧುನಿಕ ಸ್ಪರ್ಶದೊಂದಿಗೆ ಮರುಜೀವಗೊಳಿಸುವ ಈ ಹೊಸ ಪ್ರವೃತ್ತಿ ಯುವಜನತೆಯಲ್ಲಿಹೊಸ ಕ್ರೇಜ್ ಹುಟ್ಟುಹಾಕಿದೆ. ಅವರಿಗೆ ತಮ್ಮ ತಾಯಿ ಹಾಗೂ ಅಜ್ಜಿ ಕಾಲದ ಸಾಂಪ್ರದಾಯಿಕ ಉಡುಪು, ಆಭರಣಗಳು ಮಾತ್ರ ಇಷ್ಟವಲ್ಲ. ಜೀವನಶೈಲಿ, ಮನೆ ಅಲಂಕಾರ, ಆಹಾರ ಪದ್ಧತಿಯೂ ಇಷ್ಟ. ಮನೆಯ ಅಲಂಕಾರದಲ್ಲಿಹಳೆಯ ಕಾಲದ ಲುಕ್ ನೀಡುವ ಹೂವಿನ ಡಿಸೈನ್ ನ ಟೇಬಲ್ ಬಟ್ಟೆ, ಆ್ಯಂಟಿಕ್ ಪಿಂಗಾಣಿ ಪಾತ್ರೆ, ಹಳೆಯ ಪುಸ್ತಕ, ಹಸ್ತಾಲಂಕಾರದ ಕುಶನ್ ಗಳು ಮನೆಗೆ ಸೌಂದರ್ಯ ನೀಡುತ್ತವೆ. ಕಸೂತಿ ಹಾಗೂ ವಿಂಟೇಜ್ ವಸ್ತುಗಳ ಸಂಗ್ರಹಣೆಯಂತಹ ಹವ್ಯಾಸಗಳು ಯುವಜನರಲ್ಲಿಜನಪ್ರಿಯವಾಗುತ್ತಿವೆ.
ಕೋಟ್
ಭಾರತೀಯ ಫ್ಯಾಷನ್ ನ ಸೌಂದರ್ಯ ವೈವಿಧ್ಯಮಯ ಪ್ರಿಂಟ್ , ಬಣ್ಣ, ಬಾರ್ಡರ್ ಮತ್ತು ಕೈಕೆಲಸಗಳಲ್ಲಿಅಡಗಿದೆ. ಈ ವಿನ್ಯಾಸಗಳನ್ನು ಯುವ ಪೀಳಿಗೆ ಸಮಕಾಲೀನ ಲುಕ್ ನೀಡುವ ರವಿಕೆ, ಡ್ರೆಸ್ , ಜಾಕೆಟ್ ಜೊತೆ ಜೋಡಿಸುತ್ತಿರುವುದು ಆಸಕ್ತಿದಾಯಕ. ಬಣ್ಣಗಳ ವಿಷಯದಲ್ಲಿಯೂ ಭಾರತೀಯ ಪರಂಪರೆ ಸಿರಿವಂತವಾಗಿದೆ. ಹಳದಿ, ಹಸಿರು, ಕೆಂಪು ಮತ್ತಿತರ ಬಣ್ಣಗಳು ನಮ್ಮ ಸಾಂಸ್ಕೃತಿಕ ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ. ಇವುಗಳನ್ನು ಆಧುನಿಕ ಸ್ಟೈಲಿಂಗ್ ಜೊತೆ ಬಳಸಿದಾಗ ಪರಂಪರೆ ಮತ್ತು ಸಮಕಾಲೀನ ಫ್ಯಾಷನ್ ನ ಸಮತೋಲನ ಸೃಷ್ಟಿಯಾಗುತ್ತದೆ. ಅಜ್ಜಿ ಕಾಲದ ವಿನ್ಯಾಸದ ಆತ್ಮವನ್ನು ಉಳಿಸಿ, ಇಂದಿನ ಪೀಳಿಗೆಯ ವ್ಯಕ್ತಿತ್ವ ಮತ್ತು ಜೀವನಶೈಲಿಗೆ ತಕ್ಕಂತೆ ಮರುಸೃಷ್ಟಿಸುವ ಇದು ನಮ್ಮ ಬೇರುಗಳನ್ನು ಗೌರವಿಸುತ್ತಾ, ಫ್ಯಾಷನ್ ಅನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಾರ್ಗ.