ವಿಕ ಸುದ್ದಿಲೋಕ ಮಂಡ್ಯಕಾವೇರಿ ಕಣಿವೆಯಲ್ಲಿಬೆಂಗಳೂರು ಮತ್ತು ಅದರ ಉಪ ನಗರಕ್ಕೆ ಕುಡಿಯುವ ನೀರು ಹಂಚಿಕೆಯಾಗಿರುವ ಪ್ರಮಾಣದ ಮಿತಿಯಲ್ಲಿಯೇ ಬಳಸಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಶಾಸಕ ಮಧು ಜಿ.ಮಾದೇಗೌಡ ಅವರು ಕೃಷಿ ಚಟುವಟಿಕೆಗಳಿಗೆಂದೇ ನಿರ್ಮಾಣವಾಗಿದ್ದ ಕೆಆರ್ ಎಸ್ ಜಲಾಶಯದ ಮೇಲೆ ಅವಲಂಬಿತವಾಗಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ನಾನಾ ಹಂತದ ಯೋಜನೆಗಳನ್ನು ಜಾರಿ ಮಾಡುತ್ತಿರುವುದರಿಂದ ದಿನೇ ದಿನೆ ಕೃಷಿಗೆ ನೀರಿನ ಲಭ್ಯತೆ ಕಡಿಮೆಯಾಗುತ್ತಿದ್ದು, ಕೃಷಿಗೆ ಮಾರಕವಾಗುತ್ತಿದೆ ಎನ್ನುವ ರೈತರ ಆಂತಕ ಕುರಿತು ಕೇಳಿದ ಪ್ರಶ್ನೆಗೆ ವಿಧಾನ ಪರಿಷತ್ತಿನಲ್ಲಿಸಚಿವರು ಉತ್ತರಿಸಿದ್ದಾರೆ.
‘‘ಕಾವೇರಿ 1ರಿಂದ 5ನೇ ಹಂತದವರೆಗೆ ಮಳವಳ್ಳಿಯ ತೊರೆಕಾಡನಹಳ್ಳಿಯಿಂದ ನೀರು ಪೂರೈಸಲಾಗುತ್ತಿದೆ. ಸದರಿ ಕಾರಿಡಾರ್ ಅಡಿಯಲ್ಲಿಹೆಚ್ಚುವರಿ ಕೊಳವೆಗಳನ್ನು ಅಳವಡಿಸಲು ಜಾಗದ ಅಭಾವವಿರುತ್ತದೆ. ಹಾಗಾಗಿ, ಕಾವೇರಿ 6ನೇ ಹಂತದ ಯೋಜನೆಯಡಿಯಲ್ಲಿಕಟ್ಟೇರಿಯಿಂದ ನೀರು ಪೂರೈಸಲು ಯೋಜಿಸಲಾಗಿರುತ್ತದೆ. ಈ ಯೋಜನೆಯ ಅಂದಾಜು ವೆಚ್ಚ 6,939 ಕೋಟಿ ರೂ.ಗಳಾಗಿದೆ,’’ ಎಂದಿದ್ದಾರೆ.
‘‘ಬೆಂಗಳೂರು ನಗರದ ಪ್ರಸ್ತುತ ನೀರಿನ ಅವಶ್ಯಕತೆಯನ್ನು ಪೂರೈಸಲು ಕೆಆರ್ ಎಸ್ ಅಣೆಕಟ್ಟೆಯಿಂದ ಪ್ರತಿದಿನ ಸುಮಾರು 900ಕ್ಯುಸೆಕ್ ನೀರನ್ನು ಪಡೆಯಬೇಕಿರುತ್ತದೆ. ಆದರೆ, ಅಣೆಕಟ್ಟೆಯಿಂದ ಬಿಡುಗಡೆ ಮಾಡಿದ ನೀರು ಬೆಂಗಳೂರು ತಲುಪುವ ಮಾರ್ಗದಲ್ಲಿಉಂಟಾಗುವ ನಷ್ಟ ಹಾಗೂ ಇತರೆ ಕಾರಣಗಳಿಂದಾಗಿ ಶಿವ ಅಣೆಕಟ್ಟಿನ ರೀಚ್ ಗೆ ಅಗತ್ಯ ಪ್ರಮಾಣದ ನೀರು ತಲುಪಿಸಲು ಕೆಆರ್ ಎಸ್ ಜಲಾಶಯದಿಂದ ಸುಮಾರು 1800 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಬೇಕಿರುತ್ತದೆ. ಕಾವೇರಿ 6ನೇ ಹಂತದ ಯೋಜನೆಯಲ್ಲಿಪ್ರತಿನಿತ್ಯ ಜಲಾಶಯದಿಂದ 200ಕುಸೆಕ್ ನೀರನ್ನು ಸರಬರಾಜು ಮಾಡಲು ಸುಮಾರು 400 ಕ್ಯುಸೆಕ್ ನೀರಿನ ಅವಶ್ಯಕತೆ ಇದೆ,’’ ಎಂದು ಮಾಹಿತಿ ನೀಡಿದ್ದಾರೆ.
...........................
ವಾರ್ಷಿಕ 25.6 ಟಿಎಂಸಿ ನೀರು
ಕಾವೇರಿ ನದಿ ಪಾತ್ರಗಳ ಕೃಷ್ಣರಾಜಸಾಗರ, ಕಬಿನಿ ಜಲಾಶಯಗಳಿಂದ ಕಾವೇರಿ ನೀರು ಸರಬರಾಜು ಯೋಜನೆಯಡಿ ಬೆಂಗಳೂರು ನಗರಕ್ಕೆ ಪ್ರತಿನಿತ್ಯ ಸುಮಾರು ಒಟ್ಟು 1,935 ದಶಲಕ್ಷ ಲೀಟರ್ ನೀರನ್ನು ಹಾಗೂ ವಾರ್ಷಿಕ ಅಂದಾಜು 25.6 ಟಿಎಂಸಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸದರಿ ನೀರನ್ನು ಮಳವಳ್ಳಿ ಬಳಿಯ ಶಿವ ಸಮತೋಲನ ಜಲಾಶಯದಿಂದ ಪಡೆಯಲಾಗುತ್ತಿದೆ. ಒಟ್ಟು 5 ಹಂತದ ಯೋಜನೆಗಳಿಂದ ಸುಮಾರು 1.40 ಕೋಟಿ ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
..................................
ಬೆಂಗಳೂರು ನಗರಕ್ಕೆ ಮುಂದಿನ ದಿನಗಳಲ್ಲಿನೀರಿನ ಅಗತ್ಯತೆ ಪೂರೈಸುವ ಉದ್ದೇಶದಿಂದ ಹೊಸ ಜಲಮೂಲಗಳನ್ನು ಗುರುತಿಸಲು ಬೆಂಗಳೂರು ಜಲಮಂಡಳಿಯ ಮಾಜಿ ಅಧ್ಯಕ್ಷ ಬಿ.ಎನ್ .ತ್ಯಾಗರಾಜ ಅಧ್ಯಕ್ಷತೆಯಲ್ಲಿಸಮಿತಿ ರಚಿಸಲಾಗಿತ್ತು. ಈ ಸಮಿತಿಯ ವರದಿಯನ್ವಯ ಎತ್ತಿನಹೊಳೆ ಯೋಜನೆಯಲ್ಲಿಬೆಂಗಳೂರು ನಗರಕ್ಕೆ 2.50 ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡಲಾಗಿರುತ್ತದೆ.