‘ಮೂಲ ಪಠ್ಯದಲ್ಲಿನ ಗಹನತೆಯನ್ನು ಅನುವಾದದಲ್ಲಿತರುವಾಗ ಸಂವಹನವನ್ನೂ ಸಾಧಿಸುವುದು ಅನುವಾದಕರಿಗೆ ದೊಡ್ಡ ಸವಾಲಾಗಿದೆ ಎಂದು ಸಾಂಸ್ಕೃತಿಕ ಚಿಂತಕ ಕೆ.ವಿ.ಅಕ್ಷರ ಅಭಿಪ್ರಾಯಪಟ್ಟರು.ಇನ್ ಸ್ಟಿಟ್ಯೂಟ್ ಆಫ್ ಟ್ರಾನ್ಸ್ ಲೇಷನ್ ಸ್ಟಡೀಸ್ ಸಂಸ್ಥೆಯು ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದಲ್ಲಿಭಾನುವಾರ ಆಯೋಜಿಸಿದ್ದ ‘ಅನುವಾದದ ಸವಾಲುಗಳು’ ಕುರಿತ ವಿಚಾರ ಸಂಕಿರಣದಲ್ಲಿ‘ಅನುವಾದಕರ ಸವಾಲುಗಳು- ಅನುವಾದಕರ ನೆಲೆಯಿಂದ’ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಭಾಷಾಂತರ ಮತ್ತು ಅನುವಾದದ ವ್ಯತ್ಯಾಸಗಳ ಕುರಿತು ಮಾತನಾಡಿದ ಅವರು, ‘‘ರಂಗಭೂಮಿಯಿಂದ ಬಂದ ನನಗೆ ಪಠ್ಯ ಮಾತ್ರ ಮುಖ್ಯವಲ್ಲ, ಅದರ ಹಿಂದಿನ ಕ್ರಿಯೆ ಮುಖ್ಯ. ಅನುವಾದವಾಗಬೇಕಿರುವುದು ಈ ಕ್ರಿಯೆಯೇ ಹೊರತು ಪಠ್ಯವಲ್ಲ, ಆಗ ಮೂಲದ ಗಹನತೆಯನ್ನು ಗಮನಿಸಬೇಕಾಗುತ್ತದೆ. ಅದನ್ನು ಸಾಧಿಸುವುದು ಅಷ್ಟು ಸುಲಭವಲ್ಲ,’’ ಎಂದರು.
‘ಅನುವಾದದ ಸವಾಲುಗಳು-ಓದುಗರ ದೃಷ್ಟಿಯಿಂದ’ ಎನ್ನುವ ವಿಷಯ ಕುರಿತು ಮಾತನಾಡಿದ ವಿಮರ್ಶಕ ಟಿ.ಪಿ. ಅಶೋಕ್ , ‘‘ಪ್ರತಿ ಭಾಷೆಗೂ ತನ್ನದೇ ಆದ ಜಾಯಮಾನ ಇರುತ್ತದೆ. ಸೃಜನಶೀಲ ಕೃತಿಗಳಲ್ಲಿಒಂದೇ ಪದ ಹಲವು ಅರ್ಥಗಳಲ್ಲಿಬಳಕೆಯಾಗುತ್ತದೆ. ಅನುವಾದ ಎನ್ನುವುದು ಅನುಭವ ಗ್ರಹಿಸಿ ಇನ್ನೊಂದು ಭಾಷೆಗೆ ತೆಗೆದುಕೊಂಡು ಹೋಗುವ ಪ್ರಕ್ರಿಯೆ,’’ ಎಂದರು.
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ವಿಮರ್ಶಕ ಎಸ್ .ಆರ್ . ವಿಜಯಶಂಕರ್ ‘‘ಅನುವಾದದ ವ್ಯಾಪ್ತಿ ಬಹಳ ವಿಶಾಲವಾದದ್ದು. ಇಬ್ಬರೂ ಮಹತ್ವದ ಚಿಂತಕರು ಅದರ ವ್ಯಾಪ್ತಿ ಮತ್ತು ಗಹನತೆಯನ್ನು ಗುರುತಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಿ ನಡೆಯುವುದು ಇಂದಿನ ದಿನಗಳ ಅಗತ್ಯವಾಗಿದೆ,’’ ಎಂದರು.
ಇನ್ ಸ್ಟಿಟ್ಯೂಟ್ ಆಫ್ ಟ್ರಾನ್ಸಲೇಷನ್ ಸ್ಟಡೀಸ್ ನ ಕೋಶಾಧ್ಯಕ್ಷ ಸಿ.ಎ. ಸೋಮದಾಸ್ , ಎನ್ .ಎಸ್ . ಶ್ರೀಧರ ಮೂರ್ತಿ ಉಪಸ್ಥಿತರಿದ್ದರು.