Contributed by: Ishwar S Hanagandi|Vijaya Karnataka•
ಬಸವ-ಭೀಮ ಸಂಗಮ ಕಾರ್ಯಕ್ರಮ | ಸಚಿವ ಸತೀಶ ಜಾರಕಿಹೊಳಿ ಸಲಹೆ
ಇತಿಹಾಸ ಮರೆಮಾಚಲು ಅವಕಾಶ ಕೊಡಬೇಡಿವಿಕ ಸುದ್ದಿಲೋಕ ಜಮಖಂಡಿ
‘‘ಇತಿಹಾಸ ಮರೆಮಾಚುವ ಕಾರ್ಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಶಿವಾಜಿ ಮಹಾರಾಜರ ಇತಿಹಾಸವನ್ನು ಮರೆಮಾಚಿದವರೇ ಇಂದು ಶಿವಾಜಿಯನ್ನು ತಲೆ ಮೇಲೆ ಹೊತ್ತುಕೊಂಡಿದ್ದಾರೆ,’’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಗೋಠೆ ಗ್ರಾಮದಲ್ಲಿಸತ್ಯಶೋಧಕ ಸಂಘ ಭಾನುವಾರ ಹಮ್ಮಿಕೊಂಡಿದ್ದ ಜಾತ್ಯತೀತ ಬಹುತ್ವ ಕರ್ನಾಟಕ ಸಂಕಲ್ಪದ ಸರ್ವ ಜಾತಿ ಸರ್ವಧರ್ಮ, ಸಹೋದರತ್ವ ಸಮಾವೇಶ, ಬಸವ-ಭೀಮ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘‘ಬಸವಣ್ಣನವರನ್ನು ಇತಿಹಾಸದಿಂದ ಅಳಿಸಿ ಹಾಕಲು ಅವರ ವಚನಗಳನ್ನೇ ಸುಟ್ಟು ಹಾಕಿದರು. ಬಹುಮನಿ ಸುಲ್ತಾನರು ಬರದೆ ಇದ್ದಿದ್ದರೆ ಬಸವಣ್ಣವರ ಇತಿಹಾಸ ಹೊರಗೆ ಬರುತ್ತಿರಲಿಲ್ಲ. ಜ್ಯೋತಿಬಾ ಫುಲೆ ಅವರು ಬರದೆ ಇದ್ದಿದ್ದರೆ ಶಿವಾಜಿ ಮಹಾರಾಜರ ಇತಿಹಾಸ ಹೊರಗೆ ಬರುತ್ತಿರಲಿಲ್ಲ. ಈಗ ಸಂವಿಧಾನ ಬದಲಿಸಿ ಅಂಬೇಡ್ಕರ್ ಅವರನ್ನು ಇತಿಹಾಸದಿಂದ ಮರೆಮಾಚುವ ಷಡ್ಯಂತ್ರ ನಡೆದಿದೆ. ಅದಕ್ಕೆ ತಾವೆಲ್ಲರೂ ವಿರೋಧಿಸಬೇಕು, ತಾವೆಲ್ಲರೂ ಸಮಾವೇಶದಲ್ಲಿಭಾಗವಹಿಸಬೇಕು,’’ ಎಂದರು.
‘‘ಬಸವಣ್ಣ, ಅಂಬೇಡ್ಕರ್ ತತ್ವಾದರ್ಶಗಳ ವಿರುದ್ಧ ಮನುಸ್ಮೃತಿ ಕೆಲಸ ಮಾಡುತ್ತಿದೆ. ಬಸವಣ್ಣನವರ ವಚನಗಳಲ್ಲಿಇರುವ ತತ್ವಗಳನ್ನೇ ಅಂಬೇಡ್ಕರ್ ಅವರು ಸಂವಿಧಾನದಲ್ಲಿ100ಕ್ಕೆ 100 ರಷ್ಟು ಅಳವಡಿಸಿದ್ದಾರೆ. ಬಸವಣ್ಣವರ ವಿರುದ್ಧ ಸ್ವಾಮೀಜಿಯೊಬ್ಬರು ಮಾತನಾಡುತ್ತಿದ್ದಾರೆ. ಅದಕ್ಕೆ ಸಮಾಜ ವಿರೋಧ ಮಾಡಬೇಕು. ಇಲ್ಲದಿದ್ದರೆ ಇತಿಹಾಸ ಅಳಿಸಿ ಹಾಕುತ್ತಾರೆ,’’ ಎಂದರು.
ಜಿಲ್ಲಾಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘‘ ಸಮಾನತೆ ಮೇಲೆ ಸಮಾಜ ಕಟ್ಟಬೇಕು. ನಮ್ಮ ಸ್ವಾರ್ಥಕ್ಕೆ ಸಮಾಜ ಬಲಿಕೊಡಬಾರದು,’’ ಎಂದರು.
ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ‘‘ಬಸವಣ್ಣನವರ ತತ್ವಕ್ಕೆ ತಿಲಾಂಜಲಿ ನೀಡಿ ತದ್ವಿರುದ್ಧವಾಗಿ ನಡೆಯುತ್ತಿದ್ದೇವೆ. ಕೆಲವರು ಸಂವಿಧಾನ ಹಾಳು ಮಾಡಲು ಹೊರಟಿದ್ದಾರೆ. ಅದನ್ನು ರಕ್ಷಿಸುವ ಕಾರ್ಯ ನಡೆಯಬೇಕು,’’ ಎಂದರು.
ಸತ್ಯಶೋಧಕ ಸಂಘದ ಅಧ್ಯಕ್ಷ ಪರಶುರಾಮ ಮಹಾರಾಜನವರ ಮಾತನಾಡಿ, ‘‘ಲಿಂಗಾಯತ ಜಾತಿಯಲ್ಲ. ಲಿಂಗಾಯತರು ಅಸ್ಪೃಶ್ಯತೆ ವಿರೋಧಿಸುತ್ತಾರೆ. ಬಸವಣ್ಣನವರ ವಚನಗಳು ಸಾರ್ವಕಾಲಿಕ,’’ ಎಂದರು.
ಗಂಗಾ ಅನಂತಪೂರ ಮಾತನಾಡಿದರು. ಮುಖಂಡರಾದ ಬಿ.ಎಸ್ .ಸಿಂಧೂರ, ನಜೀರ ಕಂಗನೊಳ್ಳಿ, ಸಿದ್ದು ಕೊಣ್ಣೂರ, ಸುಶೀಲಕುಮಾರ ಬೆಳಗಲಿ, ಸಮೀರ ಕಂಗನೊಳ್ಳಿ, ಬಿ.ಜಿ.ಪಾಟೀಲ ಇತರರು ಇದ್ದರು.
ಸಂತೋಷ ತಳಕೇರಿ ಸ್ವಾಗತಿಸಿ, ನಿರೂಪಿಸಿದರು.
-------
ಓದದೆ ಇತಿಹಾಸ ತಿಳಿದುಕೊಳ್ಳಲು ಸಾಧ್ಯವಿಲ್ಲ. ನಮಗೆ ಆಗಿರುವ ಅವಮಾನಗಳನ್ನು ನಾವು ಅರ್ಥೈಸಿಕೊಳ್ಳಬೇಕು. ಅದು ಪಠ್ಯ ಪುಸ್ತಕ, ಕಂಪ್ಯೂಟರ್ ನಲ್ಲಿಸಿಗುವುದಿಲ್ಲ.
ಸತೀಶ ಜಾರಕಿಹೊಳಿ ಸಚಿವರು
ಫೋಟೋ:
ಜೆಕೆಡಿ 23-2
ಜಮಖಂಡಿ ತಾಲೂಕಿನ ಗೋಠೆ ಗ್ರಾಮದಲ್ಲಿಹಮ್ಮಿಕೊಂಡಿದ್ದ ಬಸವ-ಭೀಮ ಸಂಗಮ ಕಾರ್ಯಕ್ರಮವನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು.