Dk Shivakumars Message The Importance Of Photography As A Symbol Of Memory
5555
Contributed by: DHANANJAYAGOWDA|Vijaya Karnataka•
ವಿಶ್ವ ಛಾಯಾಗ್ರಹಣ ಪ್ರಯುಕ್ತ ಛಾಯಾಗ್ರಾಹಕರ ಸಂಘ ಚಿತ್ರಕಲಾ ಪರಿಷತ್ ನಲ್ಲಿಆಯೋಜಿಸಿದ್ದ ‘ಫ್ರೋಝನ್ ಮೆಮೊರೀಸ್ ’ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿಪಾಲ್ಗೊಂಡು ಛಾಯಾಚಿತ್ರಗಳನ್ನು ವೀಕ್ಷಿಸಿದ ಸಿಎಂ ಡಿ.ಕೆ.ಶಿವಕುಮಾರ್ ಅವರು ಕ್ಯಾಮೆರಾ ಕ್ಲಿಕ್ಕಿಸಿದ್ದು ಹೀಗೆ ....
ಕ್ಕೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು.ಛಾಯಾಚಿತ್ರ ಇತಿಹಾಸ ದಾಖಲಿಸುವ ಸಾಕ್ಷಿ: ಸಿಎಂ ಪ್ರತಿಪಾದನೆ
ವಿಕ ಸುದ್ದಿಲೋಕ ಬೆಂಗಳೂರು
ಒಂದು ಛಾಯಾಚಿತ್ರ ಕೇವಲ ಚಿತ್ರವಲ್ಲ. ಅದು ವ್ಯಕ್ತಿಯ ಬದುಕು, ಸಮಾಜದ ಬೆಳವಣಿಗೆ ಹಾಗೂ ಕಾಲಘಟ್ಟದ ಇತಿಹಾಸವನ್ನು ದಾಖಲಿಸುವ ಮಹತ್ವದ ಸಾಕ್ಷಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿಛಾಯಾಗ್ರಾಹಕರ ಸಂಘ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ‘ಫ್ರೋಜನ್ ಮೆಮೊರೀಸ್ ’ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು.
‘‘ಒಬ್ಬ ವ್ಯಕ್ತಿಯ ಇತಿಹಾಸವನ್ನು ದಾಖಲಿಸುವಲ್ಲಿಛಾಯಾಚಿತ್ರದ ಪಾತ್ರ ಅತ್ಯಂತ ಮಹತ್ವದ್ದು. ಒಂದು ಚಿತ್ರ ವರ್ಷದ್ದಾಗಿರಬಹುದು ಅಥವಾ 50, 100 ವರ್ಷಕ್ಕಿಂತಲೂ ಹಳೆಯದಾಗಿರಬಹುದು. ಆದರೆ, ಅದು ಒಬ್ಬ ವ್ಯಕ್ತಿಯ ಇತಿಹಾಸವನ್ನು ಬರೆಯುವಂತಹ ಸಾಕ್ಷಿಯಾಗುತ್ತದೆ. ಒಂದು ಚಿತ್ರ ಸಣ್ಣದು ಎಂದು ಭಾವಿಸಬಾರದು. ನಮ್ಮ ಬದುಕಿನಲ್ಲಿನಡೆದ ಘಟನೆಗಳಿಗೆ ಸಾಕ್ಷಿ ಏನು ಎಂಬುದನ್ನು ತೋರಿಸುವಲ್ಲಿಛಾಯಾಚಿತ್ರದ ಪಾತ್ರ ಬಹಳ ದೊಡ್ಡದು,’’ ಎಂದು ಅಭಿಪ್ರಾಯಪಟ್ಟರು.
‘‘ಒಂದು ಚಿತ್ರ ನೂರಾರು ಅರ್ಥಗಳನ್ನು ನೀಡಬಲ್ಲದು. ಕಾಲ ಕಳೆದಂತೆ ಅದರ ಮೌಲ್ಯ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ, ಛಾಯಾಗ್ರಾಹಕರು ಸೆರೆಹಿಡಿಯುವ ಪ್ರತಿಯೊಂದು ದೃಶ್ಯವೂ ಭವಿಷ್ಯದ ಪೀಳಿಗೆಗೆ ದಾಖಲೆಯಾಗಬಹುದು. ಛಾಯಾ ಚಿತ್ರಗಳು ಕಿವಿಯಿಂದ ಕೇಳುವ ಸುದ್ದಿ ಮತ್ತು ಕಣ್ಣಿನಿಂದ ಕಾಣುವ ಸತ್ಯದ ನಡುವಿನ ವ್ಯತ್ಯಾಸದ ಸಂಕೇತವಾಗಿದೆ. ಜನರು ಕಣ್ಣಾರೆ ಕಂಡ ದೃಶ್ಯದಲ್ಲಿಹೆಚ್ಚಿನ ನಂಬಿಕೆ ಇಡುತ್ತಾರೆ. ಇನ್ನು ಪತ್ರಿಕೆಯಲ್ಲಿಎಷ್ಟೇ ಆಳವಾದ ವಾಸ್ತವಾಂಶಗಳನ್ನು ಪ್ರಕಟಿಸಿದರೂ, ಅದರೊಂದಿಗೆ ಸೂಕ್ತ ಚಿತ್ರವಿಲ್ಲದಿದ್ದರೆ ಓದುಗರ ಮೇಲೆ ಸುದ್ದಿಯ ಪರಿಣಾಮ ಕಡಿಮೆಯಾಗುತ್ತದೆ. ಹಾಗಾಗಿ, ಮಾಧ್ಯಮ ಕ್ಷೇತ್ರದಲ್ಲಿಚಿತ್ರಕ್ಕೆ ಬಹಳ ಮಹತ್ವವಿದೆ,’’ ಎಂದರು.
‘‘ಮೊಬೈಲ್ ಫೋನ್ ಗಳಲ್ಲೇ ಅತ್ಯಾಧುನಿಕ ಕ್ಯಾಮೆರಾಗಳು ಲಭ್ಯವಾಗುತ್ತಿರುವುದರಿಂದ ವೃತ್ತಿಪರ ಛಾಯಾಗ್ರಾಹಕರ ನಡುವೆ ಸ್ಪರ್ಧೆ ಹೆಚ್ಚಾಗಿದೆ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬೆಳೆಯುತ್ತಿರುವ ಹಿನ್ನೆಲೆಯಲ್ಲಿನೈಜ ಹಾಗೂ ಕೃತಕವಾಗಿ ಸೃಷ್ಟಿಸಲಾದ ಚಿತ್ರಗಳ ನಡುವಿನ ವ್ಯತ್ಯಾಸ ಗುರುತಿಸುವುದು ದೊಡ್ಡ ಸವಾಲಾಗಲಿದೆ. ತಂತ್ರಜ್ಞಾನದಿಂದ ಸವಾಲುಗಳು ಹೆಚ್ಚಾದರೂ ನಂಬಿಕೆಗೆ ಅರ್ಹವಾದ ಪತ್ರಿಕೋದ್ಯಮ ಮತ್ತು ವೃತ್ತಿಪರ ಛಾಯಾಗ್ರಹಣದ ಮಹತ್ವ ಎಂದಿಗೂ ಕಡಿಮೆಯಾಗುವುದಿಲ್ಲ,’’ ಎಂದು ಹೇಳಿದರು.
ನೆರವಿನ ಭರವಸೆ:
‘‘ಮಾಧ್ಯಮವು ರಾಜಕೀಯ ವ್ಯವಸ್ಥೆಯ ಸಮಾನಾಂತರ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ, ನಿಮ್ಮ ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಅರಿವಿದೆ. ಈಗಾಗಲೇ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ನಿಮ್ಮ ಬೇಡಿಕೆಗಳ ಬಗ್ಗೆ ತಿಳಿಸಿದ್ದಾರೆ. ನೀವು ಕೂಡ ನನ್ನನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಗಳನ್ನು ಹೇಳಿದ್ದೀರಿ. ಪತ್ರಿಕೋದ್ಯಮ ಕ್ಷೇತ್ರದಲ್ಲಿರುವ ಎಲ್ಲರಿಗೂ ಒಂದೇ ರೀತಿಯಲ್ಲಿನೆರವಾಗುವ ಬಗ್ಗೆ ನಾನು ಖಂಡಿತವಾಗಿಯೂ ಆಲೋಚಿಸುತ್ತೇನೆ. ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಕಾನೂನು ಚೌಕಟ್ಟಿನೊಳಗೆ ನೆರವಾಗುವ ಕೆಲಸ ಮಾಡಲಾಗುವುದು,’’ ಎಂದು ಭರವಸೆ ನೀಡಿದರು.