ಹಂಪನಕಟ್ಟೆ ಮಿಲಾಗ್ರಿಸ್ ಕಾಲೇಜಿನ ಗ್ರಂಥಾಲಯ ಸಂಘ, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಯೂಸ್ಡ್ ಬುಕ್ ಆರ್ ಇದರ ಸಹಯೋಗದೊಂದಿಗೆ ಒಂಬತ್ತು ದಿನಗಳ ಬೃಹತ್ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ ಕಾಲೇಜಿನ ಸಭಾಂಗಣದಲ್ಲಿಉದ್ಘಾಟನೆಗೊಂಡಿತು.ಅಧ್ಯಕ್ಷತೆ ವಹಿಸಿದ್ದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ.ಐವನ್ ಮೈಕೆಲ್ ರೋಡ್ರಿಗಸ್ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೈಯಕ್ತಿಕ ಬೆಳವಣಿಗೆಯಲ್ಲಿಪುಸ್ತಕಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಮತ್ತು ಗ್ರಂಥಾಲಯ ಹಾಗೂ ಅದರಲ್ಲಿರುವ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ, ರಾಕ್ಣೊವೀಕ್ಲಿಯ ವ್ಯವಸ್ಥಾಪಕ ಹಾಗೂ ಸಂಪಾದಕ ಫಾ.ರೂಪೇಶ್ ಅಶೋಕ್ ಮಾಡ್ತಾ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗಷ್ಟೇ ಸೀಮಿತವಾಗದೆ ನಾನಾ ವಿಷಯಗಳ ಪುಸ್ತಕಗಳನ್ನು ಓದುವ ಮೂಲಕ ತಮ್ಮ ದೃಷ್ಟಿಕೋನವನ್ನು ವಿಸ್ತರಿಸಿಕೊಳ್ಳಬೇಕು ಹಾಗೂ ಓದನ್ನು ಜೀವನಪರ್ಯಂತದ ಹವ್ಯಾಸವನ್ನಾಗಿಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಿನ್ಸಿಪಾಲ್ ಡಾ.ಆಲ್ವಿನ್ ಸೆರಾವೋ ಶುಭ ಹಾರೈಸಿದರು. ಆ.22ರಿಂದ ಆರಂಭಗೊಂಡು ಆ.30ರವರೆಗೆ ನಡೆಯಲಿರುವ ಈ ಪುಸ್ತಕ ಪ್ರದರ್ಶನವು ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಮಿಲಾಗ್ರಿಸ್ ಕಾಲೇಜಿನ ಗ್ರಂಥಾಲಯದಲ್ಲಿವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ.
ಆಡಳಿತ ಮಂಡಳಿ ಸದಸ್ಯರಾದ ಅಲ್ವಿನ್ ರೊಸಾರಿಯೊ, ಗ್ರಂಥಪಾಲಕಿ ಪ್ರಮೀಳಾ ಡಿಸೋಜ, ಉಪನ್ಯಾಸಕರಾದ ಡೆಂಝಿಲ್ ಡಿಕೊಸ್ತ, ಗ್ರಂಥಾಲಯದ ವಿದ್ಯಾರ್ಥಿ ಕಾರ್ಯದರ್ಶಿ ಸ್ಪೂರ್ತಿ ಉಪಸ್ಥಿತರಿದ್ದರು.
ವೈಸ್ ಪ್ರಿನ್ಸಿಪಾಲ್ ಗ್ಲಾನ್ಸಿಯಾ ಫರ್ನಾಂಡಿಸ್ ಸ್ವಾಗತಿಸಿದರು. ವಿದ್ಯಾರ್ಥಿ ನಿಕಲ್ ನಿರೂಪಿಸಿದರು. ಡಾ.ಆಶಾ ಜ್ಯೋತಿ ವಂದಿಸಿದರು.