Remarkable Progress In Science Plants Signal Navigation Against Insects
ವಿಜ್ಞಾನ ಲೋಕ
Contributed by: Shrividya Rao|Vijaya Karnataka•
ಎಲೆ ಅಗಿಯುವ ಶಬ್ದಕ್ಕೆ ರಕ್ಷಣಾ ವ್ಯೂಹ
ಕೀಟಗಳು ತಮ್ಮ ಎಲೆಗಳನ್ನು ಅಗಿಯುವಾಗ ಉಂಟಾಗುವ ಕಂಪನಗಳನ್ನು ಸಸ್ಯಗಳು ಗುರುತಿಸಬಲ್ಲವು ಎಂಬುದನ್ನು ವಿಜ್ಞಾನಿಗಳು ಸಂಶೋಧನೆಯ ಮೂಲಕ ನಿರೂಪಿಸಿದ್ದಾರೆ. ಅಮೆರಿಕದ ಮಿಸೌರಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅರಾಬಿಡೊಪ್ಸಿಸ್ ಎಂಬ ಸಾಸಿವೆ ಕುಟುಂಬಕ್ಕೆ ಸೇರಿದ ಸಣ್ಣ ಸಸ್ಯದ ಮೇಲೆ ಈ ಅಧ್ಯಯನ ನಡೆಸಿದ್ದು, ಕೀಟಗಳು ಎಲೆಗಳನ್ನು ಜಗಿಯುವಾಗ ಉಂಟಾಗುವ ಸೂಕ್ಷ್ಮ ಶಬ್ದ ಮತ್ತು ಕಂಪನಗಳನ್ನು ಧ್ವನಿ ಮುದ್ರಿಸಿಕೊಳ್ಳಲು ವಿಶೇಷ ಲೇಸರ್ ಸಾಧನಗಳನ್ನು ಬಳಸಿದ್ದಾರೆ. ಅಧ್ಯಯನದ ಪ್ರಕಾರ ಗಾಳಿಯಿಂದ ಬರುವ ಕಂಪನ, ಇತರ ಕೀಟಗಳು ಹೊರಡಿಸುವ ಶಬ್ದ ಮತ್ತು ಎಲೆ ಅಗಿಯುವ ಕಂಪನಗಳಿಗಿರುವ ವ್ಯತ್ಯಾಸವನ್ನು ಸಸ್ಯಗಳು ನಿಖರವಾಗಿ ಗುರುತಿಸುತ್ತವೆ. ಅಲ್ಲದೆ ಕಂಪನವನ್ನು ಅನುಭವಿಸಿದ ತಕ್ಷಣ ಸಸ್ಯಗಳು ತಮ್ಮ ಗಿಡದ ಎಲೆಗಳಲ್ಲಿಕೀಟಗಳಿಗೆ ಹಿಡಿಸದ ಅಥವಾ ವಿಷಕಾರಿಯಾದ ಸಾಸಿವೆ ಎಣ್ಣೆಯಂತಹ ರಾಸಾಯನಿಕಗಳ ಉತ್ಪಾದಿಸುವ ಮೂಲಕ ಕೀಟಗಳು ಎಲೆಗಳನ್ನು ತಿನ್ನದಂತೆ ತಡೆಯುತ್ತವೆ ಎಂದು ತಿಳಿಸಿದೆ.ಫೈಲ್ ನೇಮ್ - ಕೀಟ
-----------------
ನಿಮ್ಮ ದೇಹ ಒಂದು ಜೀವಂತ ಪರಿಸರ ವ್ಯವಸ್ಥೆ
ನಿಮ್ಮ ಶರೀರವು ಕೇವಲ ಮಾನವ ಕೋಶಗಳಿಂದಷ್ಟೇ ಮಾಡಲ್ಪಟ್ಟಿಲ್ಲ. ಅದು ನಿಜಕ್ಕೂ ಒಂದು ಜೀವಂತ ಪರಿಸರ ವ್ಯವಸ್ಥೆಯಾಗಿದೆ. ನಮ್ಮ ದೇಹದಲ್ಲಿಬ್ಯಾಕ್ಟೀರಿಯಾ, ವೈರಸ್ , ಫಂಗಸ್ ಹಾಗೂ ಇತರ ಸೂಕ್ಷ್ಮಜೀವಿಗಳು ಕೋಟ್ಯಂತರ ಸಂಖ್ಯೆಯಲ್ಲಿವಾಸಿಸುತ್ತವೆ. ಇದನ್ನು ಮಾನವ ಮೈಕ್ರೋಬಯೋಮ್ ಎಂದು ಕರೆಯಲಾಗುತ್ತದೆ. ವಿಜ್ಞಾನಿಗಳ ಪ್ರಕಾರ, ನಮ್ಮ ದೇಹದಲ್ಲಿರುವ ಮಾನವ ಕೋಶಗಳ ಸಂಖ್ಯೆಗಿಂತ ಈ ಸೂಕ್ಷ್ಮಜೀವಿಗಳ ಸಂಖ್ಯೆಯೇ ಹೆಚ್ಚಾಗಿದೆ ಅಥವಾ ಸರಿಸುಮಾರು ಸಮನಾಗಿದೆ. ಅಂದರೆ ಸಾಂಕೇತಿಕವಾಗಿ ನೀವು 50% ಮಾನವ ಮತ್ತು 50% ಸೂಕ್ಷ್ಮಜೀವಿ. ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ಆಹಾರವನ್ನು ಜೀರ್ಣಿಸಲು, ವಿಟಮಿನ್ ಗಳನ್ನು ಉತ್ಪಾದಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯಗತ್ಯ. ಒಂದು ಕಾಡಿನಲ್ಲಿಗಿಡ-ಮರಗಳು ಮತ್ತು ಪ್ರಾಣಿಗಳು ಪರಸ್ಪರ ಅವಲಂಬಿತವಾಗಿ ಬಾಳುವಂತೆ, ನಮ್ಮ ದೇಹದ ಸೂಕ್ಷ್ಮಜೀವಿಗಳು ನಮ್ಮೊಂದಿಗೆ ಸಹಜೀವನ ನಡೆಸುತ್ತವೆ.
ಫೈಲ್ ನೇಮ್ - ಬಾಡಿ
-------------
ಪದಗಳ ಪರಂಪರೆ
ಇಂಗ್ಲಿಷ್ ಭಾಷೆಯಲ್ಲಿಕೆಲವು ಪ್ರಾಣಿ, ಪಕ್ಷಿ ಅಥವಾ ಕೀಟಗಳ ಗುಂಪನ್ನು ಸೂಚಿಸಲು ಅತ್ಯಂತ ಆಸಕ್ತಿದಾಯಕ ಮತ್ತು ವಿಚಿತ್ರವಾದ ಸಮೂಹವಾಚಕ ಪದಗಳನ್ನು ಬಳಸಲಾಗುತ್ತದೆ. ನೊಣಗಳು ಅಥವಾ ಕೀಟಗಳು ಒಟ್ಟಾಗಿ ದೊಡ್ಡ ಸಂಖ್ಯೆಯಲ್ಲಿಹಾರಾಡುವಾಗ ಅಥವಾ ಗುಂಪುಗೂಡಿದಾಗ ಸ್ವಮ್ ರ್ ಎಂದು ಕರೆಯಲಾಗುತ್ತದೆ. ನೊಣಗಳ ಮೊಟ್ಟೆಗಳು ಒಂದೇ ಬಾರಿಗೆ ಒಡೆದು, ದೊಡ್ಡ ಸಂಖ್ಯೆಯಲ್ಲಿ ಹೊರಬರುವ
ಸಂದರ್ಭಕ್ಕೆ ಅಥವಾ ಆ ನೊಣಗಳ ಸಮೂಹಕ್ಕೆ ಹ್ಯಾಚ್ ಎನ್ನಲಾಗುತ್ತದೆ. ನೊಣಗಳು ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿರುವ ಅಥವಾ ಒಂದೇ ಜಾಗದಲ್ಲಿಆಹಾರದ ಸುತ್ತ ಒಟ್ಟಿಗೆ ಸೇರಿ ಗಿಜಿಗುಡುತ್ತಿರುವ ಗುಂಪನ್ನು ಸೂಚಿಸಲು ಬಿಸ್ನೆಸ್ ಎಂದೂ ಕರೆಯುತ್ತಾರೆ. 15ನೇ ಶತಮಾನದಲ್ಲಿ ಮೇಲ್ವರ್ಗದ ಶಿಕಾರಿಗಳು ತಮ್ಮ ಭಾಷಾ ಜ್ಞಾನ ಮತ್ತು ಅಭಿರುಚಿಯನ್ನು ಪ್ರದರ್ಶಿಸಲು ಇಂತಹ ವಿಶಿಷ್ಟ ಪದಗಳನ್ನು ಸೃಷ್ಟಿಸುತ್ತಿದ್ದರು.