ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ

Contributed bysathyabudikote@gmail.com|Vijaya Karnataka
mandatory insurance for livestock farmers have no choice but to comply
ವಿಕ ಸುದ್ದಿಲೋಕ ಬಂಗಾರಪೇಟೆ

ರಾಸುಗಳು ಅಕಸ್ಮಾತ್ ಮರಣ ಹೊಂದಿದಾಗ ಉಂಟಾಗುವ ಆರ್ಥಿಕ ನಷ್ಟವನ್ನು ತಪ್ಪಿಸಿಕೊಳ್ಳಲು ಪ್ರತಿಯೊಬ್ಬ ರೈತರೂ ಕಡ್ಡಾಯವಾಗಿ ರಾಸು ವಿಮೆ ಮಾಡಿಸಿಕೊಳ್ಳಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುದರ್ಶನ್ ವಿ. ಮನವಿ ಮಾಡಿದರು.
ನಗರದ ಪಶು ಆಸ್ಪತ್ರೆಯಲ್ಲಿಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿರೈತರಿಗೆ ಹೈನುಗಾರಿಕೆ ವರದಾನವಾಗಿ ಮಾರ್ಪಟ್ಟಿದ್ದು, ಬಹುತೇಕ ರೈತರು ಹೈನುಗಾರಿಕೆಯಲ್ಲಿತೊಡಗಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖರೀದಿಸಿದ ರಾಸುಗಳು ಅಕಸ್ಮಾತ್ ಮರಣ ಹೊಂದಿದರೆ ರೈತರಿಗೆ ತೀವ್ರ ಆರ್ಥಿಕ ನಷ್ಟ ಉಂಟಾಗಲಿದೆ ಎಂದು ತಿಳಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಪೂರೈಸುವ ರೈತರು ಒಕ್ಕೂಟದ ಮೂಲಕ ತಮ್ಮ ರಾಸುಗಳಿಗೆ ವಿಮೆ ಮಾಡಿಸಿಕೊಳ್ಳುತ್ತಿದ್ದು, ಇದರಿಂದ ಆರ್ಥಿಕ ನಷ್ಟದಿಂದ ಪಾರಾಗುತ್ತಿದ್ದಾರೆ. ಆದರೆ, ಇತರೆ ರೈತರು ಡೇರಿ ಅಥವಾ ಇತರೆ ಯಾವುದೇ ವ್ಯವಸ್ಥೆಯ ಮೂಲಕ ರಾಸುಗಳಿಗೆ ವಿಮೆ ಮಾಡಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಹೇಳಿದರು.

ಕೆಲವು ರೈತರು ಆರಂಭದಲ್ಲಿವಿಮೆ ಮಾಡಿಸಿಕೊಂಡಿದ್ದರೂ, ಪ್ರತಿ ವರ್ಷ ಅದನ್ನು ನವೀಕರಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿರಾಸು ಮರಣ ಹೊಂದಿದರೆ ವಿಮಾ ಕಂಪನಿಯಿಂದ ಪರಿಹಾರ ದೊರೆಯದೆ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಂಗಾರಪೇಟೆ ತಾಲೂಕಿನಲ್ಲಿಪ್ರತಿ ವರ್ಷ ವಿಮೆ ಮಾಡಿಸದ 80ಕ್ಕೂ ಹೆಚ್ಚು ರಾಸುಗಳು ಮರಣ ಹೊಂದುತ್ತಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದ್ದು, ನಂತರ ಸರಕಾರದಿಂದ ಪರಿಹಾರ ನೀಡುವಂತೆ ಮನವಿ ಸಲ್ಲಿಸುವುದು ಸಾಮಾನ್ಯವಾಗಿದೆ ಎಂದರು.

ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಖರೀದಿಸಿದ ರಾಸು ಮರಣ ಹೊಂದಿದರೆ ಸರಕಾರದಿಂದ ಕೇವಲ 15 ಸಾವಿರ ರೂಗಳ ಪರಿಹಾರ ಮಾತ್ರ ದೊರೆಯುತ್ತದೆ. ಮೂರು ತಿಂಗಳಿಂದ ಆರು ತಿಂಗಳ ಒಳಗಿನ ಕುರಿ ಸಾವನ್ನಪ್ಪಿದರೆ 5 ಸಾವಿರ ರೂ. ಹಾಗೂ ಆರು ತಿಂಗಳ ಮೇಲ್ಪಟ್ಟ ಕುರಿ ಸಾವನ್ನಪ್ಪಿದರೆ 7,500 ರೂ. ಪರಿಹಾರ ನೀಡಲಾಗುತ್ತಿದೆ. ಆದರೆ ಸರಕಾರದ ಪರಿಹಾರ ಮೊತ್ತ ಕಡಿಮೆಯಾಗಿರುವುದರಿಂದ ಮತ್ತೆ ರಾಸು ಅಥವಾ ಕುರಿಗಳನ್ನು ಖರೀದಿಸಿ ಸಾಕಲು ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ರಾಸುಗಳ ಮರಣದಿಂದಾಗುವ ಆರ್ಥಿಕ ನಷ್ಟದಿಂದ ಪಾರಾಗಲು ಪ್ರತಿಯೊಬ್ಬ ರೈತರೂ ತಮ್ಮ ರಾಸುಗಳು ಮತ್ತು ಕುರಿಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು. ಈಗಾಗಲೇ ವಿಮೆ ಮಾಡಿಸಿಕೊಂಡಿರುವವರು ಅದರ ಅವಧಿ ಮುಗಿಯುವ ಮುನ್ನವೇ ನವೀಕರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

24 ಬಂಗಾರಪೇಟೆ ಡಾ. ಸುದರ್ಶನ್ ವಿ.