ವಿಕ ಸುದ್ದಿಲೋಕ ಕೆಜಿಎಫ್ ನಗರದಲ್ಲಿಕಳೆದ ಸುಮಾರು 15 ದಿನಗಳಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆಯಲ್ಲಿಮಾತ್ರವಲ್ಲದೆ ಹಗಲಿನಲ್ಲಿಯೂ ಸೊಳ್ಳೆಗಳ ಕಾಟದಿಂದ ಮನೆಗಳಲ್ಲಿನೆಮ್ಮದಿಯಾಗಿರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವಾರದಿಂದ ಅಲ್ಪಸ್ವಲ್ಪ ಮಳೆಗೆ ನಗರದ ಹಲವು ಪ್ರದೇಶಗಳಲ್ಲಿಚರಂಡಿಗಳು ಕಸ ಮತ್ತು ತ್ಯಾಜ್ಯದ ನೀರಿನಿಂದ ತುಂಬಿಕೊಂಡಿದ್ದು, ತ್ಯಾಜ್ಯ ಹಾಗೂ ಕೊಳಚೆ ನೀರು ಸಂಗ್ರಹವಾಗಿರುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಸೊಳ್ಳೆಗಳ ಕಾಟ ಮತ್ತಷ್ಟು ಹೆಚ್ಚಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿನಗರಸಭೆ ಸಿಬ್ಬಂದಿ ಸೊಳ್ಳೆ ನಿಯಂತ್ರಣಕ್ಕಾಗಿ ಕೆಮಿಕಲ್ ಸಿಂಪಡಣೆ ಹಾಗೂ ಫಾಗಿಂಗ್ ಮೂಲಕ ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಈ ವರ್ಷ ಇದುವರೆಗೆ ನಿರೀಕ್ಷಿತ ರೀತಿಯಲ್ಲಿಸೊಳ್ಳೆ ನಿಯಂತ್ರಣ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಸೊಳ್ಳೆಗಳ ಹಾವಳಿಯಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿನಗರಸಭೆ ಅಧಿಕಾರಿಗಳು ತಕ್ಷಣ ನಗರಾದ್ಯಂತ ಫಾಗಿಂಗ್ ನಡೆಸಿ, ಚರಂಡಿ ಹಾಗೂ ಕೊಳಚೆ ಪ್ರದೇಶಗಳಲ್ಲಿಸೊಳ್ಳೆ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸೊಳ್ಳೆಗಳ ಕಡಿತದಿಂದ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆಗಳಿದು, ನಗರಸಭೆ ಆಧಿಕಾರಿಗಳು ಕೂಡಲೇ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಿ ಸೊಳ್ಳೆಗಳ ನಿಯಂತ್ರಣಕ್ಕೆ ಮುಂದಾಗಬೇಕೆಂದು ಹಿರಿಯ ನಾಗರಿಕ ನಾಗರಾಜ್ ಒತ್ತಾಯಿಸಿದ್ದಾರೆ.
ಚಿನ್ನದ ಗಣಿಗಳ ಪ್ರದೇಶದಲ್ಲಿಗಿಡಗಂಟೆಗಳಿಂದ ಕೂಡಿದ್ದು, ಬಹುತೇಕ ಪ್ರದೇಶವು ಹಸಿರಿನಿಂದ ಕೂಡಿದ್ದು ಜತೆಗೆ ಬಡಾವಣೆಗಳಲ್ಲಿತ್ಯಾಜ್ಯದಿಂದ ಕೂಡಿರುವ ಹಿನ್ನೆಲೆಯಲ್ಲಿಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಮನೆಯಲ್ಲಿರುವ ಮಕ್ಕಳಿಗೆ ಸೊಳ್ಳೆಗಳ ಕಡಿತದಿಂದ ಮಲೇರಿಯಾ ಬರುವ ಸಾಧ್ಯತೆ ಇರುವುದರಿಂದ ನಗರಸಭೆ ಅಧಿಕಾರಿಗಳು ಸೊಳ್ಳೆಗಳ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದು 13 ನೇ ವಾರ್ಡ್ ನ ನಿವಾಸಿ ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಕೋಟ್
ಸೊಳ್ಳೆಗಳ ಕಾಟ ಇರುವ ಕುರಿತು ಸಾರ್ವಜನಿಕರಿಂದ ನಗರಸಭೆಗೆ ದೂರುಗಳು ಬಂದಿದ್ದು, ಕೂಡಲೇ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು.