ವೈದ್ಯಾಧಿಕಾರಿ, ಶುಶ್ರೂಷಾಧಿಕಾರಿ ಅಮಾನತು

Contributed by: mahyurgh@gmail.com|Vijaya Karnataka•
officials suspended in hospital providing covid treatment
* ರೋಗಿಗಳಿಂದ ಮಲಗುಂಡಿ ಸ್ವಚ್ಛ

ವಿಕ ಸುದ್ದಿಲೋಕ ಬೆಂಗಳೂರು
ಹಾವೇರಿ ಜಿಲ್ಲೆಯ ಸವಣೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ ಇಬ್ಬರು ರೋಗಿಗಳಿಂದ ಆಸ್ಪತ್ರೆಯ ಮಲಗುಂಡಿಯನ್ನು ಸ್ವಚ್ಛಗೊಳಿಸಿರುವ ಆರೋಪದ ಮೇಲೆ ಆಡಳಿತ ವೈದ್ಯಾಧಿಕಾರಿ ಡಾ. ಶಂಕರ ಹಿರೇಗೌಡರ ಹಾಗೂ ಹಿರಿಯ ಶುಶ್ರೂಷಾಧಿಕಾರಿ ವನಿತಾ ಕುರುಂದವಾಡ ಅವರನ್ನು ಆರೋಗ್ಯ ಇಲಾಖೆ ಅಮಾನತು ಮಾಡಿದೆ.

ಈ ಪ್ರಕರಣದ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿಹರಿದಾಡಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅಧಿಕಾರಿಗಳ ವಿರುದ್ಧ ಸವಣೂರು ಪೊಲೀಸ್ ಠಾಣೆಯಲ್ಲಿಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

ಹಿರಿಯ ಶುಶ್ರೂಷಾಧಿಕಾರಿ ವನಿತಾ ಕುರುಂದವಾಡ ತಮಗೆ ಪರಿಚಯವಿರುವ ರೋಗಿ ಹಾಗೂ ಅವರ ಸಂಬಂಧಿಕರಿಂದ ಆಸ್ಪತ್ರೆಯ ಮಲಗುಂಡಿಯನ್ನು ಕೈಯಿಂದ ಸ್ವಚ್ಛಗೊಳಿಸಲು ಸೂಚಿಸಿರುವ ಹಾಗೂ ಆಡಳಿತಾಧಿಕಾರಿ ಡಾ. ಶಂಕರ ಹಿರೇಗೌಡರ ತಮ್ಮ ಆಸ್ಪತ್ರೆಯಲ್ಲಿಇಂತಹ ಘಟನೆ ನಡೆಯಲು ಕುಮ್ಮಕ್ಕು ನೀಡಿರುವುದು ಕಂಡು ಬಂದಿದೆ. ಸಾಂದರ್ಭಿಕ ಸಾಕ್ಷ್ಯಾಧಾರ ಪರಿಶೀಲಿಸಿದಾಗ ಇಬ್ಬರು ಅಧಿಕಾರಿಗಳು ಗಂಭೀರವಾದ ಕಾನೂನುಬಾಹಿರ ಕೃತ್ಯ ಹಾಗೂ ಕರ್ತವ್ಯಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಹೀಗಾಗಿ, ನ್ಯಾಯಸಮ್ಮತ ಇಲಾಖಾ ವಿಚಾರಣೆ ನಡೆಸಲು ಸಂಬಂಧಿತ ದಾಖಲೆಗಳನ್ನು ತಿದ್ದುವ, ನಾಶಪಡಿಸುವ ಅಥವಾ ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ತಡೆಯಲು ಅಮಾನತುಗೊಳಿಸುವುದು ಅಗತ್ಯವಾಗಿದೆ. ಜತೆಗೆ, ಜೀವನಾಂಶ ಭತ್ಯೆ ಪಡೆಯಲು ಡಾ. ಶಂಕರ ಹಿರೇಗೌಡರ್ ಅವರನ್ನು ಜೋಯಿಡಾ ಆಸ್ಪತ್ರೆಗೆ ಹಾಗೂ ವನಿತಾ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಗುರುದತ್ತ ಹೆಗಡೆ ಆದೇಶದಲ್ಲಿತಿಳಿಸಿದ್ದಾರೆ.