ವಿಕ ಸುದ್ದಿಲೋಕ ಉಜಿರೆ
ಸಾವಿರ ವರ್ಷಗಳ ಇತಿಹಾಸವಿರುವ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾ.3ರಿಂದ 11ರವರೆಗೆ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.
ಉಜಿರೆ ಕೃಷ್ಣಾನುಗ್ರಹ ಸಭಾಭವನದಲ್ಲಿಸೋಮವಾರ ಪತ್ರಿಕಾಗೋಷ್ಠಿಯಲ್ಲಿವಿವರ ನೀಡಿದರು.
ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ಕೀರ್ತಿಶೇಷ ಯು.ವಿಜಯರಾಘವ ಪಡುವೆಟ್ನಾಯರ ಕನಸು ಮತ್ತು ಸಂಕಲ್ಪದಂತೆ ಭಕ್ತರ ಸಹಕಾರದಿಂದ ನೂತನ ರಾಜಗೋಪುರ ‘ವಿಜಯಗೋಪುರ’ ನಿರ್ಮಾಣವಾಗಿದೆ. ಇದರ ಲೋಕಾರ್ಪಣೆ ನಡೆಯಲಿದೆ.
ಮಾ.2ರಂದು ಬ್ರಹ್ಮಕಲಶೋತ್ಸವದ ಕಾರ್ಯಾಲಯ ಉದ್ಘಾಟನೆಗೊಳ್ಳಲಿದ್ದು, ಹಂಗಾರಕಟ್ಟೆಯ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಾ.4ರಂದು ಎಡನೀರು ಶ್ರೀಗಳ ಸಮ್ಮುಖ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ವಿಜಯಗೋಪುರ ಲೋಕಾರ್ಪಣೆಗೊಳಿಸಲಿದ್ದಾರೆ. ಉಜಿರೆಯ ಕಿರಣ್ ರಾವ್ ಮತ್ತು ಕುಟುಂಬದವರಿಂದ ದೇವರಿಗೆ ನೂತನ ಬ್ರಹ್ಮರಥ ಸಮರ್ಪಣೆ ಮತ್ತು ಬೆನಕ ಕನ್ ಸ್ಟ್ರಕ್ಷನ್ಸ್ ನ ಗಣೇಶ್ ಗೌಡ ಮತ್ತು ಕುಟುಂಬದವರಿಂದ ದೇವರಿಗೆ ನೂತನ ಪುಷ್ಪರಥದ ಸಮರ್ಪಣೆ ಮಾ.8ರಂದು ಉಡುಪಿ ಪುತ್ತಿಗೆ ಮಠದ ಉಭಯ ಶ್ರೀಗಳಿಂದ ನಡೆಯಲಿದೆ.
ಮಾ.11ರಂದು ಕುಕೆ ್ಕಸುಬ್ರಹ್ಮಣ್ಯ ಶ್ರೀಗಳು, ಉಡುಪಿಯ ಸೋದೆ ಶ್ರೀಗಳು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರುಗಲಿದೆ. ತಂತ್ರಿವರೇಣ್ಯರಾದ ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿ ನೇತೃತ್ವದಲ್ಲಿವೈದಿಕ ಕಾರ್ಯಕ್ರಮ ನೆರವೇರಲಿವೆ.
9 ದಿನಗಳ ಕಾಲ ನಡೆಯುವ ಸಭಾ ಕಾರ್ಯಕ್ರಮದಲ್ಲಿಮೂಡುಬಿದಿರೆ ಡಾ.ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ, ಮಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಡಾ.ಎಂ.ಮೋಹನ ಆಳ್ವ ನೆರವೇರಿಸಲಿದ್ದಾರೆ. ಸುನಾದ ಭಜನಾ ಕುಟೀರದಲ್ಲಿನಿರಂತರ ಸುಮಾರು 160ಕ್ಕೂ ಮಿಕ್ಕಿ ತಂಡಗಳಿಂದ ಭಜನಾ ಸೇವೆ ನಡೆಯಲಿದೆ. ಸಂಘ ಸಂಸ್ಥೆಯವರು ಮತ್ತು ಭಕ್ತರು ಹೊರೆಕಾಣಿಕೆ ಸಮರ್ಪಿಸಲಿದ್ದಾರೆ. ಈ ಎಲ್ಲಕಾರ್ಯಗಳು ವ್ಯವಸ್ಥಿತವಾಗಿ ನಡೆಯುವ ದೃಷ್ಟಿಯಿಂದ ಅನೇಕ ಸಮಿತಿಗಳನ್ನು ರಚಿಸಲಾಗಿದೆ. ವಿಶೇಷ ಭೋಜನ ಶಾಲೆ ನಿರ್ಮಾಣವಾಗಿದೆ.
ರಾಜಗೋಪುರ ನಿರ್ಮಾಣ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಮಾರ್ಗದರ್ಶನದಲ್ಲಿಊರವರ ಮತ್ತು ಭಕ್ತರ ಸಂಪೂರ್ಣ ಸಹಕಾರದಿಂದ ಬ್ರಹ್ಮಕಲಶೋತ್ಸವ ವಿಶೇಷ ರೀತಿಯಲ್ಲಿನಡೆಯಲಿದೆ. ಪ್ರತಿನಿತ್ಯ ಭಕ್ತರು ಶ್ರಮದಾನದಲ್ಲಿಭಾಗವಹಿಸಿ ಸಹಕರಿಸುತ್ತಿದ್ದಾರೆ. ಬೆಂಗಳೂರು ಸಮಿತಿಯ ಮೂಲಕ ಅತಿ ಹೆಚ್ಚಿನ ಸಹಾಯಧನ, ಹೊರೆಕಾಣಿಕೆ ವ್ಯವಸ್ಥೆ ಮಾಡಿದ್ದಾರೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಇಲ್ಲಿಯ ಬ್ರಹ್ಮಕಲಶೋತ್ಸವ ಕೆಲಸ ಕಾರ್ಯಗಳು ಕಲ್ಪನೆಗೂ ಮೀರಿದ ರೀತಿಯಲ್ಲಿಆಗುತ್ತಿವೆ. ಮನೆ ಮನೆಗೆ ಆಮಂತ್ರಣ ಪತ್ರಿಕೆ ತಲುಪಿಸಲಾಗಿದೆ. ಶ್ರಮದಾನದಲ್ಲಿಭಕ್ತರು ಹೆಚ್ಚಿನ ಸಂಖ್ಯೆಯಲ್ಲಿತೊಡಗಿಸಿಕೊಂಡಿದ್ದಾರೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಕೆ.ಮೋಹನ್ ಕುಮಾರ್ , ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಸಪಲ್ಯ, ಕೋಶಾಧಿಕಾರಿ ಪ್ರಕಾಶ್ ಕುದ್ದಣ್ಣಾಯ, ಮಾಧ್ಯಮ ಸಂಚಾಲಕ ಭಾಸ್ಕರ ಹೆಗಡೆ, ಸಂಚಾಲಕ ಮೋಹನ ಶೆಟ್ಟಿಗಾರ್ , ಕಾರ್ಯದರ್ಶಿ ರವೀಂದ್ರ ಶೆಟ್ಟಿ ಸುರಭಿ, ಸಲಹೆಗಾರ ವೆಂಕಟ್ರಮಣ ಶೆಟ್ಟಿ ಉಪಸ್ಥಿತರಿದ್ದರು.
ಫೊಟೋ: 23ಎಂಜೆ ಜನಾರ್ದನ

