ಒಳ ಮೀಸಲು: ಬಲಗೈ ಸಮುದಾಯ ಆಕ್ರೋಶ

Contributed byphalalochanaradhya.ks@timesofindia.com|Vijaya Karnataka

The Balagai community staged a massive protest in Chamarajanagar, demanding the government rectify injustices caused by internal reservation. Thousands gathered, marching through the city and submitting a memorandum to the Chief Secretary. Protesters voiced anger against the state government, Chief Minister Siddaramaiah, and the Social Welfare Minister.

righthand dalit communities erupt over internal reservation massive protest in chamarajanagar warning to lay siege to vidhana soudha on budget day

ಅನ್ಯಾಯ ಸರಿಪಡಿಸಲು ಆಗ್ರಹಿಸಿ ಸಮುದಾಯಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ, ಸರಕಾರ, ಸಿಎಂ, ಎಚ್ ಸಿಎಂ ವಿರುದ್ಧ ಕಿಡಿ

ವಿಕ ಸುದ್ದಿಲೋಕ ಚಾಮರಾಜನಗರ

ಒಳ ಮೀಸಲು ಜಾರಿಯಿಂದ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ತುಂಬಾ ಅನ್ಯಾಯವಾಗುತ್ತಿದ್ದು ಕೂಡಲೇ ಅದನ್ನು ಸರಿಪಡಿಸುವಂತೆ ಒತ್ತಾಯಿಸಿ ಬಲಗೈ ಸಮುದಾಯಗಳ ಒಕ್ಕೂಟ, ಡಾ.ಬಿ.ಆರ್ .ಅಂಬೇಡ್ಕರ್ ಮಹಾಸಭಾದ ವತಿಯಿಂದ ನಗರದಲ್ಲಿಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಡಾ.ಬಿ.ಅಂಬೇಡ್ಕರ್ ಭವನದ ಆವರಣದಲ್ಲಿ ಜಮಾಯಿಸಿದ ಸಮುದಾಯದ ಸಾವಿರಾರು ಜನರು, ಅಲ್ಲಿಂದ ಪ್ರವಾಸಿ ಮಂದಿರ ರಸ್ತೆ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತಕ್ಕೆ ಆಗಮಿಸಿ ಕೆಲಕಾಲ ರಸ್ತೆ ತಡೆ ನಡೆಸಿದ ಬಳಿಕ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಧರಣಿ ನಡೆಸಿ ಆಹಾರ ಇಲಾಖೆ ಉಪ ನಿರ್ದೇಶಕಿ ವಸುಂಧರಾ ಹೆಗೆಡೆ ಅವರ ಮೂಲಕ ಸರಕಾರದ ಮುಖ್ಯ ಕಾರ ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.

ಮೆರವಣಿಗೆ ಉದ್ದಕ್ಕೂ ಪ್ರತಿಭಟನಾಕಾರರು, ರಾಜ್ಯ ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘‘ರಾಜ್ಯ ಸರಕಾರವು ಒಳ ಮೀಸಲನ್ನು ತನ್ನ ಪಕ್ಷದ ಪ್ರಣಾಳಿಕೆಯಲ್ಲಿಜಾರಿ ಮಾಡಲು ಹೇಳಿರುವ ಕಾರಣಕ್ಕೆ ಜಾರಿ ಮಾಡಲು ಮುಂದಾಗಿರುವುದು ಪರಿಶಿಷ್ಟ ಜಾತಿಯ 101 ಜಾತಿಗೂ ಮಾಡುತ್ತಿರುವ ದ್ರೋಹವಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಬಹಳ ಕಾಳಜಿ ಇರುವ ಸರಕಾರ ಎಂದು ಪರಿಶಿಷ್ಟ ಜಾತಿಯ ದೊಡ್ಡ ಸಮುದಾಯು ನಂಬಿದ್ದು ಈ ನಂಬಿಕೆಗೆ ವಿರೋಧವಾಗಿ ಕಾಂಗ್ರೆಸ್ ಸರಕಾರ ನಡೆದುಕೊಳ್ಳುತ್ತಿದೆ,’’ ಎಂದು ಟೀಕಿಸಿದರು.

ಸರಿಪಡಿಸುವ ತನಕ ನೇಮಕ ಬೇಡ: ‘‘ರೋಸ್ಟರ್ ಬಿಂದುವಿನಲ್ಲಿಪರಿಶಿಷ್ಟ ಜಾತಿ ಬಲಗೈ ಸಮುದಾಯವು 9ನೇ ಸ್ಥಾನದಲ್ಲಿಇರುವುದನ್ನು ಹಿಂಪಡೆಯಬೇಕು. ಪರಿಶಿಷ್ಟ ಜಾತಿಯ ಜಾತಿ ಪ್ರಮಾಣ ಪತ್ರವನ್ನು ಮೊದಲಿನಂತೆ ನೀಡಬೇಕು. ಒಳ ಮೀಸಲಾತಿಯಲ್ಲಿರುವ ವ್ಯತ್ಯಾಸವನ್ನು ಸರಿಪಡಿಸುವ ತನಕ ಯಾವುದೇ ಸರಕಾರಿ ಹುದ್ದೆಗಳ ನೇಮಕವನ್ನು ಮಾಡಬಾರದು,’’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿಗಡಿಕಟ್ಟೆ ಯಜಮಾನರು, ಬಲಗೈ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು, ಡಾ.ಬಿ.ಆರ್ .ಅಂಬೇಡ್ಕರ್ ಮಹಾಸಭಾದ ಪದಾಧಿಕಾರಿಗಳಾದ ಸಿ.ಎಂ.ಕೃಷ್ಣಮೂರ್ತಿ, ಸಿ.ಕೆ.ಮಂಜುನಾಥ್ , ಉಮೇಶ್ ಕುದರ್ , ವಾಸು ಹೊಂಡರಬಾಳು, ಬಿಎಸ್ ಪಿ ಮಹೇಶ್ , ಪ್ರಕಾಶ್ ಮೂಡ್ನಾಕೂಡು, ಮಂಜುನಾಥಪ್ರಸನ್ನ, ಭಾನುಪ್ರಕಾಶ್ , ಸಿ.ಎಂ.ನರಸಿಂಹಮೂರ್ತಿ, ಕುಮುದಾ, ಕುಮಾರ್ , ಕಲಾವತಿ ಸೇರಿದಂತೆ ಜನಾಂಗದ ಮುಖಂಡರು ಪಾಲ್ಗೊಂಡಿದ್ದರು.

ಶಿಕ್ಷಣ, ಉದ್ಯೋಗದಲ್ಲಿಅನ್ಯಾಯ

ಒಳ ಮೀಸಲು ಜಾರಿಯಿಂದ ಬಲಗೈ ಸಮುದಾಯದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿಅನ್ಯಾಯವಾಗುತ್ತದೆ ಎಂದು ಮೈಸೂರು ವಿವಿ ಪ್ರಾಧ್ಯಾಪಕ ರಮೇಶ್ ಹೇಳಿದರು.

‘‘ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳಲು ಪ್ರವರ್ಗ ಬಿ ಸರ್ಟಿಫಿಕೇಟ್ ಸಲ್ಲಿಕೆ ಮಾಡದೇ ಇದ್ದರೆ ಅಂತಹವರಿಗೆ ಸಾಮಾನ್ಯ ಎಂದು ಬರುತ್ತದೆ. ಇದರಿಂದ ಉದ್ಯೋಗ ಸಿಗುವುದಿಲ್ಲ. ಅಲ್ಲದೇ ಶಿಕ್ಷಣಕ್ಕೂ ತೊಂದರೆಯಾಗುತ್ತದೆ. ಈ ಮೀಸಲಾತಿಯಿಂದ ಪ್ರವರ್ಗ ಎ ಗೆ ಎಲ್ಲಾಕೆಲಸಗಳನ್ನು ಕೊಡುತ್ತಿದ್ದು, ಬಿ ಮತ್ತು ಸಿ ವರ್ಗದವರು ಏನು ಮಾಡಬೇಕು. ಒಳ ಮೀಸಲಾತಿ ವಿರುದ್ಧ ನಮ್ಮ ತಕರಾರು ಇಲ್ಲ. ಅದರಲ್ಲಿರುವ ಅನ್ಯಾಯ, ತಾರತಮ್ಯದ ವಿರುದ್ಧವಷ್ಟೇ,’’ ಎಂದು ಸ್ಪಷ್ಟಪಡಿಸಿದರು.

‘‘ಅಲೆಮಾರಿಗಳು ಇದನ್ನು ಖಂಡಿಸಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ರಾಜ್ಯಪಾಲರು ಕೂಡಾ ತಿರಸ್ಕಾರ ಮಾಡಿದ್ದಾರೆ. ಆದರೂ, ಇದನ್ನು ಹೇಗೆ ಜಾರಿಗೆ ತಂದಿದ್ದೀರಾ,’’ ಎಂದು ಸರಕಾರವನ್ನು ಪ್ರಶ್ನಿಸಿದರು.

ಇದನ್ನು ರದ್ದು ಮಾಡದೇ ಇದ್ದರೆ ಬಜೆಟ್ ದಿನದಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

==

ಫೋಟೋ ಉತ್ತುವಳ್ಳಿ ಮಹೇಶ್