-ತಾನು ಬೆಳೆದು ತನ್ನವರನ್ನೂ ಬೆಳೆಸುವ ಗುಣದ ಬಹುಮುಖ ವ್ಯಕ್ತಿತ್ವ, ಸುರೇಶಗೌಡ್ರ ಪಾಟೀಲ ಅವರದು ಎನ್ನುತ್ತಾರೆ, ವರ್ತಕರ ರತ್ನ ಪುರಸ್ಕೃತ ಮೆಣಸಿನಕಾಯಿ ವರ್ತಕ, ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಜಿಲ್ಲಾಉಪಾಧ್ಯಕ್ಷ ಶ್ರೀ ಬಸವರಾಜ ಛತ್ರದ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಎಂದರೆ ನನಗೆ ಕೇವಲ ಒಬ್ಬ ರಾಜಕಾರಣಿ ಅಥವಾ ಮಾಜಿ ಶಾಸಕರಲ್ಲ. ನನ್ನ ಬದುಕಿನ ರಾಜಕೀಯ ಪಯಣಕ್ಕೆ ದಾರಿ ತೋರಿದ ಗುರು, ಸಂಕಷ್ಟದ ಸಂದರ್ಭದಲ್ಲಿಬೆನ್ನುತಟ್ಟಿದ ಹಿರಿಯರು ಹಾಗೂ ತಾವು ಬೆಳೆದಂತೆ ತಮ್ಮೊಂದಿಗೆ ಇರುವವರನ್ನೂ ಬೆಳೆಸಬೇಕು ಎಂಬ ವಿಶಾಲ ಮನೋಭಾವ ಹೊಂದಿರುವ ಬಹುಮುಖ ವ್ಯಕ್ತಿತ್ವ.
ಅವರನ್ನು ನಾನು ಬಹಳ ಹತ್ತಿರದಿಂದ ಕಂಡಿದ್ದೇನೆ. ಅಧಿಕಾರ ಇದ್ದಾಗ ಒಂದು ರೀತಿ, ಅಧಿಕಾರ ಇಲ್ಲದಾಗ ಮತ್ತೊಂದು ರೀತಿ ವರ್ತಿಸುವ ವ್ಯಕ್ತಿತ್ವ ಅವರದ್ದಲ್ಲ. ಜನರೊಂದಿಗೆ ಬೆರೆಯುವ ಸರಳ ಗುಣ, ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡುವ ಮನೋಭಾವ ಹಾಗೂ ವ್ಯಾಪಾರಿಗಳು, ರೈತರು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಅವರಲ್ಲಿಮೊದಲಿನಿಂದಲೂ ಇದೆ. ಇದೇ ಕಾರಣಕ್ಕೆ ಸುರೇಶಗೌಡ್ರು ನನ್ನ ದೃಷ್ಟಿಯಲ್ಲಿವಿಭಿನ್ನ ನಾಯಕನಾಗಿ ಕಾಣುತ್ತಾರೆ.
ಮಾರುಕಟ್ಟೆ ಅಭಿವೃದ್ಧಿ , ಸ್ವಚ್ಛತೆಯ ಹರಿಕಾರ:
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ನಮ್ಮ ಹೆಮ್ಮೆ. ಈ ಮಾರುಕಟ್ಟೆಯ ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಸ್ವಚ್ಛತೆಯ ವಿಚಾರದಲ್ಲಿಸುರೇಶಗೌಡ್ರ ಪಾಟೀಲ ಅವರ ಕಾಳಜಿಯನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಮಾರುಕಟ್ಟೆ ಎಂದರೆ ಕೇವಲ ವ್ಯಾಪಾರ ನಡೆಯುವ ಜಾಗವಲ್ಲ; ರೈತ ಮತ್ತು ವರ್ತಕರ ಬದುಕಿನ ಕೇಂದ್ರ ಎಂಬುದು ಅವರ ನಿಲುವಾಗಿತ್ತು.
ಮಾರುಕಟ್ಟೆಯ ಸಮಸ್ಯೆಗಳ ಕುರಿತು ವರ್ತಕರೊಂದಿಗೆ ಚರ್ಚಿಸುವುದು, ಅಗತ್ಯ ಸಲಹೆಗಳನ್ನು ಪಡೆಯುವುದು ಹಾಗೂ ಅಭಿವೃದ್ಧಿಗೆ ಪೂರಕವಾದ ವಿಚಾರಗಳಿಗೆ ಸ್ಪಂದಿಸುವ ಅವರ ಗುಣ ನಮಗೆಲ್ಲವಿಶ್ವಾಸ ಮೂಡಿಸಿತ್ತು. ವಿಶೇಷವಾಗಿ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಮಾರುಕಟ್ಟೆಯ ಗೌರವ ಕಾಪಾಡಬೇಕೆಂಬ ಅವರ ಚಿಂತನೆ ಮೆಚ್ಚುವಂತಹದ್ದು.
ವರ್ತಕರ ಸಮನ್ವಯತೆಯ ಬಂಧು:
ವರ್ತಕರ ನಡುವೆ ಸಮನ್ವಯತೆ ಬಹಳ ಮುಖ್ಯ. ವ್ಯಾಪಾರದಲ್ಲಿಸಮಸ್ಯೆಗಳು, ಭಿನ್ನಾಭಿಪ್ರಾಯಗಳು ಸಹಜ. ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಮುನ್ನಡೆಯುವಂತೆ ಮಾರ್ಗದರ್ಶನ ನೀಡುವ ಗುಣ ಸುರೇಶಗೌಡ್ರಲ್ಲಿದೆ. ಅವರು ವರ್ತಕರನ್ನು ಕೇವಲ ವ್ಯಾಪಾರಿಗಳಾಗಿ ನೋಡಲಿಲ್ಲ. ಬ್ಯಾಡಗಿ ಆರ್ಥಿಕ ವ್ಯವಸ್ಥೆಯ ಪ್ರಮುಖ ಶಕ್ತಿ ಎಂಬ ಗೌರವದಿಂದ ಕಾಣುತ್ತಿದ್ದರು. ವರ್ತಕರ ಸಮಸ್ಯೆ ಬಂದಾಗ ಚರ್ಚೆ ಮೂಲಕ ಪರಿಹಾರದ ದಾರಿ ಹುಡುಕುವ ಅವರ ಮನೋಭಾವದಿಂದಲೇ ಅವರು ವರ್ತಕ ಸಮುದಾಯದ ಆತ್ಮೀಯ ಬಂಧುವಾಗಿ ಗುರುತಿಸಿಕೊಂಡಿದ್ದಾರೆ.
ಮೆಣಸಿನಕಾಯಿ ವ್ಯಾಪಾರದ ಮಾರ್ಗದರ್ಶಕ:
ಮೆಣಸಿನಕಾಯಿ ವ್ಯಾಪಾರದಲ್ಲಿನನಗೂ ಹಲವು ವರ್ಷಗಳ ಅನುಭವವಿದೆ. ಆದರೂ ಕಾಲಕ್ಕೆ ತಕ್ಕಂತೆ ವ್ಯಾಪಾರದಲ್ಲಿಎದುರಾಗುವ ಸವಾಲುಗಳು ವಿಭಿನ್ನ. ಇಂತಹ ಸಂದರ್ಭದಲ್ಲಿಸುರೇಶಗೌಡ್ರ ಸಲಹೆ ಮತ್ತು ಮಾರ್ಗದರ್ಶನ ಹಲವು ಬಾರಿ ಉಪಯುಕ್ತವಾಗಿದೆ. ರೈತ ಮತ್ತು ವರ್ತಕರ ನಡುವಿನ ವಿಶ್ವಾಸ ಉಳಿಯಬೇಕು, ಬ್ಯಾಡಗಿ ಮಾರುಕಟ್ಟೆಯ ಹೆಸರು ಹಾಗೂ ಘನತೆ ಮತ್ತಷ್ಟು ಬೆಳೆಯಬೇಕು ಎಂಬುದು ಅವರ ಆಶಯ. ವ್ಯಾಪಾರದ ಬೆಳವಣಿಗೆ ಎಂದರೆ ಒಬ್ಬ ವ್ಯಕ್ತಿಯ ಬೆಳವಣಿಗೆಯಲ್ಲ; ಅದರೊಂದಿಗೆ ರೈತ, ಕಾರ್ಮಿಕ, ವರ್ತಕ ಹಾಗೂ ಇಡೀ ಪಟ್ಟಣದ ಆರ್ಥಿಕತೆ ಬೆಳೆಯುತ್ತದೆ ಎಂಬ ದೂರದೃಷ್ಟಿ ಅವರಲ್ಲಿದೆ.
ನನ್ನ ರಾಜಕೀಯ ಗುರು:
ನನ್ನ ರಾಜಕೀಯ ಜೀವನದಲ್ಲಿಸುರೇಶಗೌಡ್ರ ಪಾಟೀಲ ಅವರ ಪಾತ್ರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ರಾಜಕೀಯದ ಅನುಭವವೇ ಇಲ್ಲದ ನನಗೆ 2013ರಲ್ಲಿಮೊದಲ ಬಾರಿಗೆ ಪುರಸಭೆ ಚುನಾವಣೆಗೆ ಸ್ಪರ್ಧಿಸಲು 7ನೇ ವಾರ್ಡ್ ಸೂಚಿಸಿ, ನನ್ನ ಮೇಲೆ ವಿಶ್ವಾಸವಿಟ್ಟು, ಗೆಲುವಿಗೆ ಸಂಪೂರ್ಣ ಸಹಕಾರ ನೀಡಿದವರು ಸುರೇಶಗೌಡ್ರು. ನನ್ನೊಳಗಿನ ಸಾಮರ್ಥ್ಯವನ್ನು ಗುರುತಿಸಿ ಅವಕಾಶ ನೀಡಿದರು. ರಾಜಕೀಯದಲ್ಲಿಹೇಗೆ ನಡೆದುಕೊಳ್ಳಬೇಕು, ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು, ಅಧಿಕಾರವನ್ನು ಜನಸೇವೆಗೆ ಹೇಗೆ ಬಳಸಬೇಕು ಎಂಬುದನ್ನು ಅವರ ಮಾರ್ಗದರ್ಶನದಲ್ಲಿಕಲಿತಿದ್ದೇನೆ.
ಅವರ ಸಹಕಾರ ಮತ್ತು ಮಾರ್ಗದರ್ಶನದಿಂದ 2 ಬಾರಿ ಪುರಸಭೆ ಸದಸ್ಯನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ಬಳಿಕ ಪುರಸಭೆ ಅಧ್ಯಕ್ಷನಾಗಿಯೂ ಜನರ ಸೇವೆ ಮಾಡುವ ಭಾಗ್ಯ ನನಗೆ ಸಿಕ್ಕಿತು. ನಾನು ಮಾಡಿದ ಜನಸೇವೆಯಲ್ಲಿನನಗೆ ತೃಪ್ತಿ ಇದೆ. ಈ ರಾಜಕೀಯ ಪಯಣದ ಹಿಂದೆ ಸುರೇಶಗೌಡ್ರು ನೀಡಿದ ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ನಾನು ಸದಾ ಸ್ಮರಿಸುತ್ತೇನೆ.
ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣವಂತ:
ತಾನು ಮಾತ್ರ ಬೆಳೆಯಬೇಕು ಎನ್ನುವ ನಾಯಕರು ಹಲವರು ಸಿಗಬಹುದು. ಆದರೆ ತಾನು ಬೆಳೆದು, ತನ್ನೊಂದಿಗೆ ಇರುವವರನ್ನೂ ಗುರುತಿಸಿ, ಅವರಿಗೆ ಅವಕಾಶ ನೀಡಿ ಬೆಳೆಸುವ ನಾಯಕರು ಅಪರೂಪ. ಅಂತಹ ಅಪರೂಪದ ಗುಣ ಹೊಂದಿರುವ ನಾಯಕ ಸುರೇಶಗೌಡ್ರ ಪಾಟೀಲ.
ನನ್ನ ಪಾಲಿಗೆ ಅವರು ರಾಜಕೀಯ ಗುರು, ಮಾರ್ಗದರ್ಶಕ ಹಾಗೂ ಸಹಕಾರ ಮೂರ್ತಿ. ನಾನು ಕಂಡಂತೆ ಸುರೇಶಗೌಡ್ರ ಪಾಟೀಲ ಅವರದು ಜನರೊಂದಿಗೆ ಬೆರೆತು, ತನ್ನವರನ್ನು ಬೆಳೆಸಿ, ಸಮಾಜದ ಅಭಿವೃದ್ಧಿಗಾಗಿ ಚಿಂತಿಸುವ ಬಹುಮುಖ ವ್ಯಕ್ತಿತ್ವ. ಅವರೊಂದಿಗಿನ ನನ್ನ ಒಡನಾಟ ಮತ್ತು ಮಾರ್ಗದರ್ಶನ ನನ್ನ ಸಾರ್ವಜನಿಕ ಜೀವನದ ಅಮೂಲ್ಯ ಅಧ್ಯಾಯವಾಗಿದೆ.
ಜನಮನದಲ್ಲಿಶಾಶ್ವತ:
ವರ್ತಕರ ಸಂಘಕ್ಕೆ ಸತತ 43 ವರ್ಷಗಳ ಕಾಲ ಅವಿರೋಧವಾಗಿ ಅಧ್ಯಕ್ಷರಾಗಿ ಮುಂದುವರಿಯುವುದು ಸುಲಭದ ಮಾತಲ್ಲ. ಅಂತಹ ಅಪರೂಪದ ಗೌರವ ಎಲ್ಲರಿಗೂ ಸಿಗುವುದಿಲ್ಲ. ಅರ್ಹತೆ, ಸ್ವಚ್ಛ ಚಾರಿತ್ರ್ಯ, ದೂರದೃಷ್ಟಿ ಹಾಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸುವ ನಾಯಕತ್ವ ಗುಣ ಹೊಂದಿದವರಿಗೆ ಮಾತ್ರ ಇದು ಸಾಧ್ಯ.
ಅಂತಹ ವಿಶಿಷ್ಟ ವ್ಯಕ್ತಿತ್ವ ಸುರೇಶಗೌಡ್ರ ಪಾಟೀಲರದ್ದು. ಎಲ್ಲರನ್ನೂ ಸಮನ್ವಯತೆಯಿಂದ ನಡೆಸಿಕೊಂಡು, ಭಿನ್ನಾಭಿಪ್ರಾಯಗಳ ನಡುವೆಯೂ ಒಗ್ಗಟ್ಟು ಮೂಡಿಸಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸಿರುವುದು ಅವರ ನಾಯಕತ್ವದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಅಧಿಕಾರ ಇರಲಿ, ಇಲ್ಲದಿರಲಿ:
ಬ್ಯಾಡಗಿ ಕ್ಷೇತ್ರಕ್ಕೆ ಯಾರು ಶಾಸಕರಾಗಿ ಬರಲಿ, ಹೋಗಲಿ-ಸುರೇಶಗೌಡ್ರ ಪಾಟೀಲರು ಮಾತ್ರ ಜನರ ಹೃದಯದಲ್ಲಿಅಚ್ಚಳಿಯದೆ ಉಳಿದಿದ್ದಾರೆ. ಅವರು ಮಾಜಿ ಶಾಸಕರಾಗಿರಬಹುದು, ಆದರೆ ಬ್ಯಾಡಗಿ ಜನರ ಮನಸ್ಸಿನಲ್ಲಿಮಾತ್ರ ಎಂದೆಂದಿಗೂ ಶಾಶ್ವತ ಶಾಸಕರಾಗಿಯೇ ಉಳಿದಿದ್ದಾರೆ.
ಬ್ಯಾಡಗಿ ಪಾಲಿಗೆ ಸುರೇಶಗೌಡ್ರ ಪಾಟೀಲರು ಕೇವಲ ಒಬ್ಬ ವ್ಯಕ್ತಿಯಲ್ಲ; ಅವರು ಅಪರೂಪದ ನಕ್ಷತ್ರ. ಅವರಂತಹ ವ್ಯಕ್ತಿಯ ಪ್ರೀತಿ, ವಿಶ್ವಾಸ ಮತ್ತು ಮಾರ್ಗದರ್ಶನ ನನ್ನ ಬದುಕಿಗೆ ದೊರೆತಿರುವುದು ನನ್ನ ಸೌಭಾಗ್ಯ.
-
ಕೋಟ್
ನನ್ನ ಪಾಲಿಗೆ ಸುರೇಶಗೌಡ್ರ ಪಾಟೀಲ ತಂದೆ ಸಮಾನ
ನನ್ನ ತಂದೆಯವರ ಮರಣದ ನಂತರ, ನನ್ನ ಬದುಕಿನಲ್ಲಿತಂದೆಯ ಸ್ಥಾನ ತುಂಬಿದವರು ಸುರೇಶಗೌಡ್ರ ಪಾಟೀಲರು ಎಂದರೆ ತಪ್ಪಾಗಲಾರದು. ಕಷ್ಟ-ಸುಖದ ಪ್ರತಿಯೊಂದು ಸಂದರ್ಭದಲ್ಲೂನನ್ನ ಬೆನ್ನಿಗೆ ನಿಂತು, ಮಾರ್ಗದರ್ಶನ ನೀಡಿ, ನನ್ನನ್ನು ಮುನ್ನಡೆ ಸಿದ ಅವರು ನನ್ನ ಪಾಲಿಗೆ ಸರ್ವಸ್ವವಾಗಿದ್ದಾರೆ. ಸುರೇಶಗೌಡ್ರ ಪಾಟೀಲರ ವ್ಯಕ್ತಿತ್ವವೇ ಅಂಥದ್ದು. ಅವರ ಸರಳತೆ, ಪ್ರಾಮಾಣಿಕತೆ, ನಾಯಕತ್ವ ಹಾಗೂ ಜನರನ್ನು ಪ್ರೀತಿಯಿಂದ ತಮ್ಮವರನ್ನಾಗಿಸಿಕೊಳ್ಳುವ ಗುಣಕ್ಕೆ ಮನಸೋಲದವರೇ ಇಲ್ಲ. ವ್ಯಾಪಾರ, ರಾಜಕೀಯ, ಸಾಮಾಜಿಕ ಹಾಗೂ ಸಂಘಟನಾ ಕ್ಷೇತ್ರ ಹೀಗೆ ಯಾವುದೇ ರಂಗವಿರಲಿ, ತಮ್ಮದೇ ಆದ ಛಾಪು ಮೂಡಿಸಿದ ಅವರು ಎಲ್ಲರಂಗಗಳಲ್ಲಿಯೂ ಮಾಸ್ಟರ್ ಎಂಬುದು ಹೆಮ್ಮೆಯ ಸಂಗತಿ.