ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಕೆ | 25 ಗುಂಟೆ ಪ್ರದೇಶದಲ್ಲಿ27 ಕ್ವಿಂಟಾಲ್ ಇಳುವರಿ ಪಡೆದ ಯುವ ರೈತ ಪರಶುರಾಮ ಬಂಬಲವಾಡ
ಶಶಾಂಕ ಮಾಳಿ ಸಂಕೇಶ್ವರ (ಬೆಳಗಾವಿ)ಯುವಕರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ, ಸುಧಾರಿತ ಕೃಷಿ ತಂತ್ರಜ್ಞಾನ ಅಳವಡಿಕೆಯಲ್ಲಿರೈತರು ಹಿಂದೇಟು ಹಾಕುತ್ತಿದ್ದಾರೆ ಎಂಬ ಅಭಿಪ್ರಾಯಗಳ ನಡುವೆಯೇ ಚಿಕ್ಕೋಡಿ ತಾಲೂಕಿನ ಕಬ್ಬೂರ ಸಮೀಪದ ಹಂಚಿನಾಳ ಕೆ.ಕೆ. ಗ್ರಾಮದ ಯುವ ರೈತ ಪರಶುರಾಮ ಬಂಬಲವಾಡ ಅರಿಶಿಣ ಬೆಳೆಯಲ್ಲಿಗಮನಾರ್ಹ ಸಾಧನೆ ಮಾಡಿ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿಉದ್ಯೋಗದಲ್ಲಿರುವ ಪರಶುರಾಮ, ಬಿಡುವಿನ ವೇಳೆಯನ್ನು ಸಂಪೂರ್ಣವಾಗಿ ಕೃಷಿಗೆ ಮೀಸಲಿಟ್ಟು ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಕೃಷಿಯ ಮೇಲಿನ ಆಸಕ್ತಿ, ಹೊಸ ತಂತ್ರಜ್ಞಾನಗಳ ಅಳವಡಿಕೆ ಹಾಗೂ ನಿರಂತರ ಶ್ರಮದ ಫಲವಾಗಿ ಕಳೆದ ವರ್ಷ ಕೇವಲ 25 ಗುಂಟೆ ಪ್ರದೇಶದಲ್ಲಿ27 ಕ್ವಿಂಟಾಲ್ ಅರಿಶಿಣ ಇಳುವರಿ ಪಡೆದು ಉತ್ತಮ ಆದಾಯ ಗಳಿಸಿದ್ದರು.
ವೈಜ್ಞಾನಿಕ ಕೃಷಿಯ ಫಲ: ಸಾಮಾನ್ಯವಾಗಿ ಎಕರೆಗೆ 25ರಿಂದ 26 ಕ್ವಿಂಟಾಲ್ ಇಳುವರಿ ಪಡೆಯುವುದೇ ಸವಾಲಾಗಿರುವ ಸಂದರ್ಭದಲ್ಲಿ, ಕಡಿಮೆ ವಿಸ್ತೀರ್ಣದಲ್ಲೇ ದಾಖಲೆಯ ಉತ್ಪಾದನೆ ಸಾಧಿಸಿರುವುದು ಸುತ್ತಮುತ್ತಲಿನ ರೈತರ ಗಮನ ಸೆಳೆದಿದೆ. ಪರಿಶುದ್ಧ ಬಿತ್ತನೆ ಬೀಜ, ಸಮಗ್ರ ಬೆಳೆ ನಿರ್ವಹಣೆ, ಸಕಾಲಿಕ ಪೋಷಕಾಂಶ ಪೂರೈಕೆ ಹಾಗೂ ಸಮರ್ಪಕ ನೀರಾವರಿಯೇ ಈ ಯಶಸ್ಸಿನ ಪ್ರಮುಖ ಕಾರಣಗಳಾಗಿವೆ.
ಮಿಶ್ರ ಬೆಳೆಗಳಿಂದ ಹೆಚ್ಚುವರಿ ಲಾಭ: ಅರಿಶಿಣದ ಜತೆಗೆ ಮಿಶ್ರ ಬೆಳೆಯಾಗಿ ಕೊತ್ತಂಬರಿ ಹಾಗೂ ಗೋವಿನ ಜೋಳ ಬೆಳೆದಿದ್ದರು. ಮಾರುಕಟ್ಟೆಯಲ್ಲಿಸೂಕ್ತ ಬೆಲೆ ಸಿಗದ ಕಾರಣ ಕೊತ್ತಂಬರಿಯನ್ನು ಹಸಿಗೊಬ್ಬರವಾಗಿ ಬಳಸಿಕೊಂಡರೆ, ಗೋವಿನ ಜೋಳವನ್ನು ಸೈಲೇಜ್ ಮೇವಾಗಿ ಪರಿವರ್ತಿಸಿ ಹೈನುಗಾರಿಕೆಗೆ ಉಪಯೋಗಿಸಿಕೊಂಡಿದ್ದಾರೆ. ಇದರಿಂದ ಹೆಚ್ಚುವರಿ ವೆಚ್ಚ ತಗ್ಗಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಎರಡು ಎಕರೆಯಲ್ಲಿಅರಿಶಿಣ ವಿಸ್ತರಣೆ: ಕಳೆದ ವರ್ಷ ಉಳಿದ ಪ್ರದೇಶದಲ್ಲಿಗೋವಿನ ಜೋಳ ಹಾಗೂ ಗೋಧಿ ಬೆಳೆದಿದ್ದ ಪರಶುರಾಮ, ಅರಿಶಿಣದಿಂದ ದೊರೆತ ಲಾಭದಿಂದ ಪ್ರೇರಿತರಾಗಿ ಈ ಬಾರಿ ತಮ್ಮ ಎರಡು ಎಕರೆ ಜಮೀನಿನಲ್ಲೇ ಸಂಪೂರ್ಣವಾಗಿ ಅರಿಶಿಣ ಬೆಳೆಯ ವಿಸ್ತರಣೆ ಮಾಡಿದ್ದಾರೆ. ಎರಡು ತಿಂಗಳ ಬೆಳೆ ಈಗ ಹಚ್ಚಹಸಿರಾಗಿ ಕಂಗೊಳಿಸುತ್ತಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿಕುಟುಂಬ ಸಮೇತರಾಗಿ ಶ್ರಮಿಸುತ್ತಿದ್ದಾರೆ.
ಕಬ್ಬಿಗಿಂತ ಅರಿಶಿಣ ಬೆಳೆ ಹೆಚ್ಚು ನಿಗಾ, ನಿರ್ವಹಣೆ ಮತ್ತು ಶ್ರಮ ಬೇಡುತ್ತದೆ. 7-8 ತಿಂಗಳ ಕಾಲ ನಿರಂತರವಾಗಿ ಬೆಳೆ ಕಡೆ ಗಮನ ಹರಿಸಬೇಕಾಗುತ್ತದೆ. ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಉತ್ತಮ ಇಳುವರಿ ಮತ್ತು ಲಾಭ ಸಾಧ್ಯ ಎಂದು ಬಂಬಲವಾಡ ಕುಟುಂಬಸ್ಥರು ಹೇಳುತ್ತಾರೆ.
ಹನಿ ನೀರಾವರಿ ವ್ಯವಸ್ಥೆ: ಎರಡು ಎಕರೆ ಜಮೀನಿಗೆ ಒಂದು ಬಾವಿ ಹಾಗೂ ಕೊಳವೆಬಾವಿಯಿಂದ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿರುವ ಅವರು, ನೀರಿನ ಸಮರ್ಪಕ ಬಳಕೆಯೊಂದಿಗೆ ಬೆಳೆ ನಿರ್ವಹಣೆ ಮಾಡುತ್ತಿದ್ದಾರೆ. ತಂದೆ-ತಾಯಿ, ಸಹೋದರ ಹಾಗೂ ಕುಟುಂಬದ ಇತರ ಸದಸ್ಯರೂ ಕೃಷಿ ಕಾರ್ಯದಲ್ಲಿಕೈಜೋಡಿಸಿರುವುದು ಯಶಸ್ಸಿಗೆ ಮತ್ತಷ್ಟು ಬಲ ನೀಡಿದೆ.
ಈ ಹಿಂದೆ ಪರಶುರಾಮ ಅವರ ಪೋಷಕರು ಇತರರ ಜಮೀನಿನಲ್ಲಿಕೃಷಿ ಕೆಲಸ ಮಾಡುತ್ತಿದ್ದರು. ಇಂದು ತಮ್ಮದೇ ಜಮೀನಿನಲ್ಲಿಉತ್ತಮ ಇಳುವರಿ ಮತ್ತು ಆದಾಯ ಗಳಿಸುತ್ತಿರುವುದನ್ನು ಕಂಡು ಕುಟುಂಬ ಸದಸ್ಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕೃಷಿಯನ್ನು ವೈಜ್ಞಾನಿಕವಾಗಿ ಕೈಗೊಂಡರೆ ಸಣ್ಣ ರೈತರೂ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ಪರಶುರಾಮ ಬಂಬಲವಾಡ ಅವರ ಸಾಧನೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಬಾಕ್ಸ್
25 ಗುಂಟೆಯಲ್ಲಿ3.97 ಲಕ್ಷ ಆದಾಯ
ಮನೆಯಲ್ಲೇ ಉಳಿಸಿಕೊಂಡಿದ್ದ ಬೀಜ ಬಳಸಿದ್ದರಿಂದ ಬೀಜದ ವೆಚ್ಚ ಉಳಿದಿತ್ತು. ಗೊಬ್ಬರ ಹಾಗೂ ಕೆಲವು ಕೃಷಿ ಪರಿಕರಗಳೂ ಸ್ವಂತದ್ದೇ ಆಗಿದ್ದವು. ಕಳೆ ತೆಗೆಯುವ ಕಾರ್ಮಿಕರ ಕೂಲಿ, ಔಷಧ, ನಿರ್ವಹಣೆ ಹಾಗೂ ಕಟಾವು ಸೇರಿ ಒಟ್ಟು ಸುಮಾರು 45 ಸಾವಿರ ವೆಚ್ಚವಾಗಿದೆ. 27 ಕ್ವಿಂಟಾಲ್ ಅರಿಶಿಣವನ್ನು ಸಾಂಗ್ಲಿಮಾರುಕಟ್ಟೆಯಲ್ಲಿಮಾರಾಟ ಮಾಡಿ 3,97,156 ರೂ. ಆದಾಯ ಗಳಿಸಿದ್ದಾರೆ. ಕೇವಲ 25 ಗುಂಟೆ ಜಮೀನಿನಲ್ಲಿಕಬ್ಬು ಬೆಳೆಗಿಂತ ಸುಮಾರು ಎರಡು ಪಟ್ಟು ಹೆಚ್ಚು ಆದಾಯ ದೊರೆತಿರುವುದು ವಿಶೇಷ.
ಕೋಟ್
ಅರಿಶಿಣ ಬೆಳೆ ಹೆಚ್ಚು ಶ್ರಮ ಬೇಡುತ್ತದೆ. ಆದರೆ ಅದಕ್ಕೆ ತಕ್ಕ ಪ್ರತಿಫಲವೂ ಸಿಗುತ್ತದೆ. ನೌಕರಿಯ ಜತೆಗೆ ಕೃಷಿಗೂ ಸಮಾನ ಆದ್ಯತೆ ನೀಡಿದ್ದರಿಂದ ಉತ್ತಮ ಫಲಿತಾಂಶ ದೊರೆತಿದೆ. ಕಳೆದ ವರ್ಷದಂತೆ ಈ ಬಾರಿಯೂ ಹೆಚ್ಚಿನ ಇಳುವರಿ ಮತ್ತು ಲಾಭದ ನಿರೀಕ್ಷೆಯಿದೆ.