ಮಧ್ಯಾಹ್ನ 12.30ಕ್ಕೆ ದಿಲ್ಲಿಯಲ್ಲಿಸಚಿವರ ಜತೆ ಮಹತ್ವದ ಸಭೆ | ಶಿಕ್ಷಣ ವ್ಯವಸ್ಥೆ ಸುಧಾರಣೆ ಸೇರಿ ಹಲವು ವಿಚಾರಗಳ ಚರ್ಚೆ | ತಡರಾತ್ರಿ ವೇಳೆಗೆ ಸರಕಾರದ ಆಹ್ವಾನಕ್ಕೆ ಸಿಜೆಪಿ ಸಮ್ಮತಿ | ನೀಟ್ ವಿವಾದಕ್ಕೆ ಮೋದಿ ಚೊಚ್ಚಲ ಪ್ರತಿಕ್ರಿಯೆ |ಹೊಸದಿಲ್ಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದಿಲ್ಲಿಯಲ್ಲಿಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಾಗೂ ಕೇಂದ್ರ ಸರಕಾರದ ನಡುವೆ ಶುಕ್ರವಾರ ಸಂಧಾನ ಮಾತುಕತೆ ನಡೆಯುವ ಸಾಧ್ಯತೆಯಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಶಿಕ್ಷಣ ವ್ಯವಸ್ಥೆ ಸುಧಾರಣೆ ಕುರಿತು ಕಾಕ್ರೋಚ್ ಜನತಾ ಪಕ್ಷದ ಪ್ರತಿನಿಧಿಗಳ ಜತೆ ಕೇಂದ್ರ ಸಚಿವರು ಶುಕ್ರವಾರ ಮಧ್ಯಾಹ್ನ 12.30ಕ್ಕೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರತಿಭಟನಾನಿರತರ ಬೇಡಿಕೆಯಂತೆ ಸರಕಾರ ಸಭೆ ನಿಗದಿ ಮಾಡಿದೆ.
ಇದಕ್ಕೂ ಮುನ್ನ, ಗುರುವಾರ ಸರಕಾರ ಮಾತುಕತೆಗೆ ಆಹ್ವಾನಿಸಿದ ಸರಕಾರ, ಪ್ರತಿಭಟನಾಕಾರರು ಸೂಚಿಸಿದ ಸಮಯದಲ್ಲಿಚರ್ಚೆಗೆ ಸಿದ್ಧವೆಂದು ಘೋಷಿಸಿತು. ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರ ಮನೆ ಅಥವಾ ಕಚೇರಿಯಲ್ಲಿಮಾತುಕತೆಗೆ ಬರುವಂತೆ ನೀಡಿತ್ತು. ಆದರೆ, ಸಿಜೆಪಿ ಸಭೆಯ ಸ್ಥಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಜಂತರ್ ಮಂತರ್ ಅಥವಾ ಯಾವುದೇ ತಟಸ್ಥ ಸ್ಥಳದಲ್ಲಿಮಾತುಕತೆಗೆ ಬರಬೇಕು ಎಂದು ಷರತ್ತು ವಿಧಿಸಿತ್ತು. ಆದರೆ, ತಡರಾತ್ರಿ ಬೆಳವಣಿಗೆಯಲ್ಲಿಸರಕಾರದ ಜತೆ ಮಾತುಕತೆಗೆ ಸಿಜೆಪಿ ಸಮ್ಮತಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪ್ರಧಾನ್ ರಾಜೀನಾಮೆ ಸೇರಿದಂತೆ ಕೆಲವೊಂದು ಪೂರ್ವ ಷರತ್ತುಗಳೊಂದಿಗೆ ಸಭೆಯಲ್ಲಿಭಾಗಿಯಾಗಲು ಸಿಜೆಪಿ ನಿರ್ಧರಿಸಿದೆ.