ಜುಲೈ 24, 1911ಆಂಡೀಸ್ ಪರ್ವತ ಶ್ರೇಣಿಗಳ ದಟ್ಟವಾದ ಮೋಡಗಳ ಮರೆಯಲ್ಲಿಹಾಗೂ ಉರುಬಾಂಬ ನದಿಯ ತಟದಲ್ಲಿಅಡಗಿರುವ ಇಂಕಾ ನಾಗರಿಕತೆಯ ಅದ್ಭುತ ನಗರಿ ‘ಮಾಚು ಪಿಚು’ ಶತಮಾನಗಳ ಕಾಲ ಜಗತ್ತಿನ ಕಣ್ಣಿಗೆ ಬೀಳದೆ ನಿಗೂಢವಾಗಿಯೇ ಉಳಿದಿತ್ತು. ಹದಿನಾರನೇ ಶತಮಾನದಲ್ಲಿಸ್ಪಾನಿಷ್ ಆಕ್ರಮಣಕಾರರು ಪೆರು ದೇಶವನ್ನು ವಶಪಡಿಸಿಕೊಂಡಾಗ, ಇಂಕಾ ಸಾಮ್ರಾಜ್ಯದ ಅನೇಕ ಸುಂದರ ನಗರಗಳು ಹಾಗೂ ದೇವಾಲಯಗಳು ಧ್ವಂಸಗೊಂಡವು. ಆದರೆ, ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರದ ಕಡಿದಾದ ಬೆಟ್ಟದ ತುದಿಯಲ್ಲಿದ್ದ ಮಾಚು ಪಿಚು ಮಾತ್ರ ಅವರ ಕಣ್ಣಿಗೆ ಬೀಳದೆ ಸುರಕ್ಷಿತವಾಗಿ ಉಳಿಯಿತು. ಕಾಲಕ್ರಮೇಣ ಈ ನಗರವು ಜನವಾಸವಿಲ್ಲದೆ ಕಾಡಿನ ಸಸ್ಯವರ್ಗಗಳಿಂದ ಆವೃತವಾಗಿ, ಕೇವಲ ಸ್ಥಳೀಯ ನಿವಾಸಿಗಳ ನೆನಪಿನಲ್ಲಿಮಾತ್ರ ಜೀವಂತವಾಗಿದ್ದ ಒಂದು ಕಳೆದುಹೋದ ನಗರವಾಗಿ ಮಾರ್ಪಟ್ಟಿತು.
ಈ ಪೌರಾಣಿಕ ನಗರವನ್ನು ಜಗತ್ತಿನ ಮುನ್ನೆಲೆಗೆ ತಂದ ಕೀರ್ತಿ ಅಮೆರಿಕದ ಪ್ರಸಿದ್ಧ ಇತಿಹಾಸಕಾರ ಮತ್ತು ಶೋಧಕ ಹೈರಾಮ್ ಬಿಂಗ್ ಹ್ಯಾಮ್ ಅವರಿಗೆ ಸಲ್ಲುತ್ತದೆ. ಎಲ್ ವಿಶ್ವವಿದ್ಯಾಲಯದಲ್ಲಿದಕ್ಷಿಣ ಅಮೆರಿಕದ ಇತಿಹಾಸವನ್ನು ಬೋಧಿಸುತ್ತಿದ್ದ ಬಿಂಗ್ ಹ್ಯಾಮ್ ಅವರಿಗೆ ಇಂಕಾ ಸಾಮ್ರಾಜ್ಯದ ಕೊನೆಯ ರಾಜಧಾನಿಯಾದ ‘ವಿಲ್ಕಾಬಾಂಬಾ’ ಎಂಬ ಕಳೆದುಹೋದ ನಗರವನ್ನು ಹುಡುಕುವ ತೀವ್ರ ಆಸಕ್ತಿಯಿತ್ತು. ಈ ಉದ್ದೇಶದಿಂದ ಅವರು 1911ರಲ್ಲಿಪೆರು ದೇಶದ ಸಾಹಸಯಾತ್ರೆಯನ್ನು ಕೈಗೊಂಡರು. ಕಠಿಣವಾದ ಹವಾಮಾನ, ಅಪಾಯಕಾರಿ ಪರ್ವತ ದಾರಿಗಳು ಹಾಗೂ ದಟ್ಟ ಅರಣ್ಯಗಳನ್ನು ಹಾದುಹೋಗುತ್ತಿದ್ದ ಅವರಿಗೆ, ಸ್ಥಳೀಯ ಕೆಚುವಾ ಭಾಷೆಯ ರೈತನಾಗಿದ್ದ ಮೆಲ್ಚೋರ್ ಆರ್ಟೇಗಾ ಎಂಬುವವರು ಬೆಟ್ಟದ ತುದಿಯಲ್ಲಿಹಳೆಯ ಕಲ್ಲಿನ ಅವಶೇಷಗಳಿರುವ ಬಗ್ಗೆ ಮಾಹಿತಿ ನೀಡಿದರು.
1911ರ ಜುಲೈ 24ರಂದು, ಸಣ್ಣ ಬಾಲಕನೊಬ್ಬನ ಮಾರ್ಗದರ್ಶನದಲ್ಲಿಬಿಂಗ್ ಹ್ಯಾಮ್ ಅವರು ದಟ್ಟ ಅಡವಿಯ ನಡುವೆ ಸಾಗಿ ಬೆಟ್ಟದ ತುದಿಯನ್ನು ತಲುಪಿದರು. ಅಲ್ಲಿಅವರ ಕಣ್ಣಮುಂದೆ ಅನಾವರಣಗೊಂಡ ವಾಸ್ತುಶಿಲ್ಪದ ವೈಭವವನ್ನು ಕಂಡು ಬಿಂಗ್ ಹ್ಯಾಮ್ ಬೆರಗಾದರು. ತಾವು ಹುಡುಕುತ್ತಿದ್ದ ವಿಲ್ಕಾಬಾಂಬಾ ನಗರ ಇದೇ ಇರಬಹುದೆಂದು ಅವರು ಭಾವಿಸಿದ್ದರು. ಈ ಮಹತ್ವದ ಶೋಧನೆಯ ನಂತರ ಬಿಂಗ್ ಹ್ಯಾಮ್ ಅವರು ಮಾಚು ಪಿಚುವಿನ ಸಂಪೂರ್ಣ ಅಧ್ಯಯನವನ್ನು ಕೈಗೊಂಡರು. 1913ರಲ್ಲಿ‘ನ್ಯಾಷನಲ್ ಜಿಯೋಗ್ರಫಿಕ್ ’ ಈ ಶೋಧನೆಯ ಬಗ್ಗೆ ಪ್ರಕಟಿಸಿದ ವಿಶೇಷ ಸಂಚಿಕೆ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿತು. ಅಲ್ಲಿಯವರೆಗೆ ಇತಿಹಾಸದ ಪುಟಗಳಲ್ಲಿಮರೆಯಾಗಿದ್ದ ‘ಇಂಕಾಗಳ ಕಳೆದುಹೋದ ನಗರ’ವು ಏಕಾಏಕಿ ಜಾಗತಿಕ ಗಮನ ಸೆಳೆಯಿತು. ಈ ಆವಿಷ್ಕಾರವು ಆಧುನಿಕ ಪ್ರವಾಸೋದ್ಯಮ ಮತ್ತು ಪುರಾತತ್ವ ಶಾಸ್ತ್ರದ ಇತಿಹಾಸದಲ್ಲಿಹೊಸ ಅಧ್ಯಾಯವನ್ನು ಬರೆಯಿತು.