ನಿರಶನ ಮುಂದುವರಿದರೆ ವಾಂಗ್ಚುಕ್ ರನ್ನು ಕಳೆದುಕೊಳ್ಳಬೇಕಾದೀತುವಿಕ ಸುದ್ದಿಲೋಕ ಶಿವಮೊಗ್ಗ
ಹೊಸದಿಲ್ಲಿಯ ಜಂತರ್ ಮಂತರ್ ನಲ್ಲಿನಡೆಸುತ್ತಿರುವ ನಿರಶನ ಇದೇ ರೀತಿ ಮುಂದುವರಿದರೆ ದೇಶ ಪರಿಸರ ಹೋರಾಟಗಾರ, ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರನ್ನು ಕಳೆದುಕೊಳ್ಳಬೇಕಾದೀತು ಎಂದು ಪರಿಸರ ತಜ್ಞ ಕೃಪಾಕರ ಸೇನಾನಿ ಕಳವಳ ವ್ಯಕ್ತಪಡಿಸಿದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿಶುಕ್ರವಾರ ‘ಕಾಡು ನಾಶ ಮತ್ತು ಮನುಷ್ಯನ ವಿನಾಶ’ ಸಂವಾದ ಹಾಗೂ ಸಂಚಲನ ಕನ್ನಡ ವಿಭಾಗದ ಭಿತ್ತಿಪತ್ರಿಕೆ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿಅವರು ಮಾತನಾಡಿದರು.
ಲೇಹ್ ಲಡಾಕ್ ನಲ್ಲಿವನ್ಯಜೀವಿಗಳ ಕುರಿತಾದ ಸಿನಿಮಾ ಚಿತ್ರೀಕರಣ ವೇಳೆ ವಾಂಗ್ಚುಕ್ ಅವರೊಂದಿಗೆ ಕೆಲವು ದಿನಗಳನ್ನು ಕಳೆದಿದ್ದೆ. ಆ ಭಾಗದಲ್ಲಿಗಣಿಗಾರಿಕೆ ಮಾಡಿದರೆ ಹಿಮಾಲಯ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಮಂಜುಗಡ್ಡೆ ಕರಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿ ಗಣಿ ಚಟುವಟಿಕೆಯನ್ನು ಪ್ರಬಲವಾಗಿ ವಿರೋಧಿಸಿದ್ದರು. ಅವರು ಹಿಮಾಲಯದಲ್ಲಿಹುಟ್ಟುವ ಭಾರತದ ಅರ್ಧದಷ್ಟು ನದಿಗಳು ಮತ್ತು ಅದನ್ನೇ ಅವಲಂಬಿಸಿರುವವರ ಹಿತಕ್ಕಾಗಿ ಹೋರಾಡಿದರು. ಆದರೆ ನಮ್ಮ ದೇಶ ಅವರನ್ನು ರಾಷ್ಟ್ರ ವಿರೋಧಿಯ ಪಟ್ಟ ಕಟ್ಟಿ ಜೈಲಿಗೆ ಅಟ್ಟಿತು. ದೇಶದಲ್ಲಿಯಾವುದೇ ರಾಜಕೀಯ ಪಕ್ಷಗಳು ಅಧಿಕಾರದಲ್ಲಿರಲಿ. ಆದರೆ, ವಿದ್ಯಾರ್ಥಿಗಳು ಆಗುಹೋಗುಗಳ ಬಗ್ಗೆ ತಿಳಿದುಕೊಂಡಿರಬೇಕು. ಸಾಮಾಜಿಕ ಹೋರಾಟಗಳಲ್ಲಿಪಾಲ್ಗೊಳ್ಳಬೇಕು. ನಾನು ವಿದ್ಯಾರ್ಥಿಯಾಗಿದ್ದಾಗ ರೈತ ಮತ್ತು ದಲಿತ ಹೋರಾಟಗಳಲ್ಲಿಭಾಗಿಯಾಗಿದ್ದೆ ಎಂದು ಸ್ಮರಿಸಿದರು.
ಹವಾಮಾನ ಬದಲಾವಣೆಯ ಬಗ್ಗೆ ಪರಿಸರ ಅನೇಕ ಸ್ಪಷ್ಟ ಚಿಹ್ನೆಗಳನ್ನು ನೀಡುತ್ತಿದೆ. ಆದರೆ, ಕೆಲವು ಉನ್ನತ ಹುದ್ದೆಯಲ್ಲಿಕುಳಿತವರು ಈ ವಿದ್ಯಮಾನವನ್ನು ಸುಳ್ಳೆಂದು ಪ್ರತಿಪಾದಿಸುತ್ತಿದ್ದಾರೆ. ಇದು ಅವರ ಸ್ವಾರ್ಥ, ದುರಾಸೆಯ ಜತೆಗೆ ಅಜ್ಞಾನವನ್ನು ಪ್ರದರ್ಶಿಸುತ್ತದೆ. ಭವಿಷ್ಯದ ಪೀಳಿಗೆ ಹೇಗೆ ಬದುಕುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಹೇಳಿದರು.
ಸಂವಾದ ವೇಳೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕೃಪಾಕರ ಮತ್ತು ಸೇನಾನಿ, ವನ್ಯಜೀವಿಗಳ ಛಾಯಾಗ್ರಹಣ ಮಾಡುವ ವೇಳೆ ನಮ್ಮ ಇರುವಿಕೆ ಅವುಗಳಿಗೆ ಗೊತ್ತಾಗಬಾರದು. ಜತೆಗೆ, ಈ ಉದ್ದೇಶಕ್ಕಾಗಿ ಕಾಡು ಪ್ರವೇಶಿಸಿದರೂ ಅಲ್ಲಿಯ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದೇವೆ. ಬಂಡಿಪುರ ಕಾಡಿನಲ್ಲಿ250 ಹಳ್ಳಿಗಳಿದ್ದು, ಸೌದೆಗಾಗಿ ಒಂದೂವರೆಯಿಂದ ಎರಡು ಕಿಮೀ ಕಾಡು ನಾಶವಾಗಿತ್ತು. ವಾರ್ಷಿಕ 3.50 ಲಕ್ಷ ಕೆ.ಜಿ ಸೌದೆ ತೆಗೆದುಕೊಳ್ಳುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನಾವು ನಮ್ಮ ಸಂಘದ ಮೂಲಕ 2004ರಿಂದ 40 ಸಾವಿರ ಕುಟುಂಬಗಳಿಗೆ ಎಲ್ ಪಿಜಿ ಸಂಪರ್ಕ ಕೊಡಿಸಿದ್ದೇವೆ. ಇದರಿಂದ ಕಾಡು ಕಡಿಯುವುದು ಕಡಿಮೆಯಾಗಿದೆ ಎಂದರು.
ಕಾಡುಗಳ್ಳ ವೀರಪ್ಪನ್ ಜತೆ ಕಳೆದ ದಿನಗಳ ಬಗ್ಗೆ ಕೇಳಿದ್ದಕ್ಕೆ, ‘ಅವನೊಬ್ಬ ಥರ್ಡ್ ರೇಟೆಡ್ ಕ್ರಿಮಿನಲ್ , ಅವನ ಬಗ್ಗೆ ಮಕ್ಕಳೊಂದಿಗೆ ಮಾತನಾಡುವುದು ಸರಿ ಎನಿಸಲ್ಲ’ ಎಂದು ಹೇಳಿದರು.
‘ಎಲಾನ್ ಮಸ್ಕ್ ನಂತವರು ನಿಮಗೆ ಆದರ್ಶ ವ್ಯಕ್ತಿಗಳಾಗಿ ಕಾಣಬಹುದು. ಆದರೆ, ನನಗೆ ಇಗ್ನೊರೆನ್ಸ್ ರೀತಿಯಲ್ಲಿಕಾಣ್ತಾರೆ. ಕಾಡಿನ ಸಮಸ್ಯೆಗಳು ಆಡಳಿತ ವರ್ಗಕ್ಕೆ ಅರ್ಥ ಆಗಲ್ಲ. ನಾವು ಯಾವುದೋ ಗ್ರಹದಿಂದ ಬಂದು ದೋಚಿಕೊಂಡು ಹೋಗುತ್ತೇವೆ ಎಂಬ ಕಲ್ಪನೆಯಲ್ಲಿದ್ದೇವೆ. ಎಷ್ಟೇ ಗಳಿಸಿದರೂ ಭವಿಷ್ಯದಲ್ಲಿನಮ್ಮ ಮಕ್ಕಳು ಬದುಕಬೇಕಿರುವುದು ಇದೇ ಭೂಮಿಯ ಮೇಲೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಯಾವುದಾದರೊಂದು ಕ್ಷೇತ್ರವನ್ನು ಹುಡುಕುತ್ತಾ ಹೋಗಬೇಕು. ಆಗದು ಇನ್ನಷ್ಟು ಕುತೂಹಲ ಹುಟ್ಟಿಸುತ್ತದೆ. ಸಂಶೋಧನೆ ವಿಸ್ತಾರ ಹೆಚ್ಚುತ್ತದೆ’ ಎಂದು ಸಲಹೆ ನೀಡಿದರು.
ಡಿವಿಎಸ್ ಅಧ್ಯಕ್ಷ ಕೆ. ಬಸಪ್ಪಗೌಡ, ಕಾರ್ಯದರ್ಶಿ ಎಸ್ .ಪಿ. ದಿನೇಶ್ , ನಿರ್ದೇಶಕ ಕೆ.ಎನ್ . ರುದ್ರಪ್ಪ ಕೊಳಲೆ, ಕಾಲೇಜು ಪ್ರಾಂಶುಪಾಲ ಪ್ರೊ.ಎಂ. ವೆಂಕಟೇಶ್ , ಪ್ರಮುಖರಾದ ಎಸ್ .ಕೆ. ಮಂಜುನಾಥ್ , ಎನ್ .ಕುಮಾರಸ್ವಾಮಿ ಇತರರಿದ್ದರು.
===
ಫೋಟೊ: 17ಎಸ್ ಎಂಜಿ1
ಶಿವಮೊಗ್ಗದ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿವಿದ್ಯಾರ್ಥಿಗಳೊಂದಿಗೆ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.