---ಐದು ದಶಕಗಳ ಹೊರತಾಗಿಯೂ ಹಸಿರಾಗಿರುವ ಪುಟ್ಟಣ್ಣ ಕಣಗಾಲ್ ಅವರ ಕ್ಲಾಸಿಕ್ ಪಯಣ
---
ಪ್ರದೀಪ್ ಬೇಲೂರು
---
ಕನ್ನಡ ಚಿತ್ರರಂಗದ ಇತಿಹಾಸದಲ್ಲಿಕೆಲವು ಸಿನಿಮಾಗಳು ಕಾಲದ ಗಡಿಯನ್ನು ಮೀರಿ ನೆನಪಿನಲ್ಲಿಉಳಿದುಬಿಡುತ್ತವೆ. ಅಂತಹ ಅದ್ಭುತ ಕಲಾಕೃತಿಗಳಲ್ಲಿ‘ಶುಭಮಂಗಳ’ (1975) ಪ್ರಮುಖವಾದುದು. ದರ್ಶಕರತ್ನ ಎಸ್ .ಆರ್ . ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿಮೂಡಿಬಂದ ಈ ಸಿನಿಮಾ ತೆರೆಕಂಡು ಈಗ 50 ವರ್ಷಗಳನ್ನು (ಅರ್ಧ ಶತಮಾನ) ಪೂರೈಸಿದೆ. ಪ್ರಖ್ಯಾತ ಲೇಖಕಿ ವಾಣಿ ಅವರ ಕಾದಂಬರಿಯನ್ನು ಆಧರಿಸಿ ಮಾಡಲಾದ ಈ ಸಿನಿಮಾ ಇಂದಿಗೂ ತನ್ನ ಪಾತ್ರವರ್ಗ, ತಾಂತ್ರಿಕ ಮೆರುಗು, ಕಡಲ ತೀರದ ಸೌಂದರ್ಯ ಹಾಗೂ ಸಾರ್ವಕಾಲಿಕ ಸಂಗೀತದಿಂದ ಕನ್ನಡಿಗರ ಮನಸ್ಸಿನಲ್ಲಿಜೀವಂತವಾಗಿದೆ.
ಪುಟ್ಟಣ್ಣ ಕಣಗಾಲ್ ಎಂದರೆ ಬರಿ ನಿರ್ದೇಶಕರಲ್ಲ, ಅವರು ದೃಶ್ಯಕಾವ್ಯ ಬರೆಯುವ ಮಾಂತ್ರಿಕ. ಕಾದಂಬರಿಯನ್ನು ದೃಶ್ಯರೂಪಕ್ಕೆ ತರುವಲ್ಲಿಅವರದು ಸಿದ್ಧಹಸ್ತ. ‘ಶುಭಮಂಗಳ’ ಚಿತ್ರದಲ್ಲಿಸ್ವಾವಲಂಬಿಯಾಗಿ ಬದುಕಬೇಕೆಂಬ ಹೆಣ್ಣಿನ ಛಲ ಮತ್ತು ಪ್ರೀತಿಯ ನಡುವಿನ ಸೂಕ್ಷ್ಮ ಸಂಘರ್ಷವನ್ನು ಅವರು ಹೆಣೆದ ರೀತಿ ಅನನ್ಯ. ಪ್ರತಿಯೊಂದು ದೃಶ್ಯದಲ್ಲೂಪುಟ್ಟಣ್ಣ ಅವರ ಸಹಿ ಎದ್ದು ಕಾಣುತ್ತದೆ, ವಿಶೇಷವಾಗಿ ಪಾತ್ರಗಳ ಭಾವನೆಗಳನ್ನು ಬಿಂಬಿಸಲು ಕ್ಯಾಮೆರಾ ಕೋನಗಳು ಹಾಗೂ ಬೆಳಕಿನ ಸಂಯೋಜನೆಯನ್ನು ಬಳಸಿರುವ ರೀತಿ ಇಂದಿನ ಪೀಳಿಗೆಯ ನಿರ್ದೇಶಕರಿಗೂ ಪಠ್ಯಪುಸ್ತಕದಂತಿದೆ.
ಈ ಚಿತ್ರದ ನಿಜವಾದ ಬಲವೇ ಇದರಲ್ಲಿಜೀವಂತವಾಗಿ ಮೂಡಿಬಂದ ಪಾತ್ರಗಳು ಮತ್ತು ಅವುಗಳಿಗೆ ಜೀವ ತುಂಬಿದ ಕಲಾವಿದರು. ಮುಗ್ಧತೆಯಿಂದ ಛಲದ ಪ್ರತಿರೂಪವಾಗಿ ಬದಲಾಗುವ ‘ಹೇಮಾ’ ಪಾತ್ರದಲ್ಲಿನಟಿ ಆರತಿ ಅವರದ್ದು ಅವಿಸ್ಮರಣೀಯ ಅಭಿನಯ. ಅವರ ಕಣ್ಣಿನ ಭಾವುಕತೆ ಮತ್ತು ನಟನೆ ಪ್ರೇಕ್ಷಕರನ್ನು ಕಟ್ಟಿಹಾಕುತ್ತವೆ. ಅವರಿಗೆ ಎದುರಾಗಿ ‘ಪ್ರಣಯ ರಾಜ’ ಶ್ರೀನಾಥ್ ಅವರು ಪ್ರಭಾಕರ್ ಎಂಬ ಸೌಮ್ಯ, ಪ್ರಬುದ್ಧ ಪ್ರೇಮಿಯ ಪಾತ್ರದಲ್ಲಿಅತ್ಯಂತ ತನ್ಮಯತೆಯಿಂದ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಈ ಕಥೆಗೆ ಮತ್ತಷ್ಟು ಮೆರುಗು ನೀಡಿದ್ದು ಮನೆಯ ಆಳುಗಳಾಗಿ ಬರುವ ‘ಮೂಗ’ ಮತ್ತು ‘ತಿಮ್ಮ’ನ ಪಾತ್ರಗಳು. ಕೇವಲ ಕಣ್ಣಿನ ಸನ್ನೆಯಿಂದಲೇ, ಮಾತೇ ಇಲ್ಲದೆ ಅಪಾರ ಸೆಂಟಿಮೆಂಟ್ ಒದಗಿಸಿದ ಅಂಬರೀಶ್ ಅವರ ‘ಮೂಗ’ನ ಅಭಿನಯ ಹಾಗೂ ಹಾಸ್ಯದ ಜೊತೆಗಿನ ಭಾವುಕತೆಯನ್ನು ಮೇಳೈಸಿದ ಶಿವರಾಂ ಅವರ ‘ತಿಮ್ಮ’ನ ಪಾತ್ರಗಳು ಕಥೆಯ ಓಟಕ್ಕೆ ದೊಡ್ಡ ಶಕ್ತಿಯಾಗಿದ್ದವು. ಜೊತೆಗೆ ಹಾಸ್ಯಬ್ರಹ್ಮ ಬೀಚಿ ಹಾಗೂ ಯೋಗನರಸಿಂಹಮೂರ್ತಿ ಅವರ ಚುರುಕಾದ ಸಂಭಾಷಣೆಗಳು ಈ ಪಾತ್ರಗಳ ಜೀವಾಳವನ್ನು ಇನ್ನಷ್ಟು ಎತ್ತಿಹಿಡಿದಿದ್ದವು.
ಹೇಮಾ ತನ್ನ ಸಕಲ ಆಸ್ತಿಯನ್ನು ಕಳೆದುಕೊಂಡು ಪ್ರಭಾಕರ್ ಮನೆಗೆ ಬಂದಾಗ ನಡೆಯುವ ಸಂಘರ್ಷದ ದೃಶ್ಯಗಳು, ನಂತರ ಆಕೆ ಸ್ವಂತ ಕಾಲಿನ ಮೇಲೆ ನಿಲ್ಲಲು ನೌಕರಿಗೆ ಸೇರುವ ಸನ್ನಿವೇಶಗಳು ಅತ್ಯಂತ ಮನಮುಟ್ಟುವಂತೆ ಮೂಡಿಬಂದಿವೆ. ದ್ವೇಷಕ್ಕಿಂತ ಪ್ರೀತಿ ದೊಡ್ಡದು ಎಂಬುದನ್ನು ಯಾವುದೇ ಆರ್ಭಟವಿಲ್ಲದೆ ಸರಳವಾಗಿ ಹಾಗೂ ಶಕ್ತಿಯುತವಾಗಿ ತಲುಪಿಸಿದ ಶ್ರೇಷ್ಠ ಕ್ಲೆತ್ರೖಮ್ಯಾಕ್ಸ್ ಈ ಚಿತ್ರದ್ದಾಗಿದೆ.
‘ಶುಭಮಂಗಳ’ ಕೇವಲ ಒಂದು ಚಲನಚಿತ್ರವಲ್ಲ; ಅದು ಕನ್ನಡ ಚಿತ್ರರಂಗದ ತಾಂತ್ರಿಕ ಹಾಗೂ ಸಾಹಿತ್ಯಿಕ ಶ್ರೀಮಂತಿಕೆಗೆ ಸಾಕ್ಷಿ. 50 ವರ್ಷಗಳು ಕಳೆದರೂ ಅದರ ಕಥಾವಸ್ತು, ಪಾತ್ರಚಿತ್ರಣ ಮತ್ತು ಸಂಗೀತ ಇಂದಿನ ಯುವ ಪೀಳಿಗೆಗೂ ಪ್ರಸ್ತುತವೆನಿಸುತ್ತದೆ. ಇಂತಹ ಅಪರೂಪದ ಕಲಾಕೃತಿಯನ್ನು ನೀಡಿದ ಪುಟ್ಟಣ್ಣ ಕಣಗಾಲ್ ಹಾಗೂ ಅವರ ತಂಡಕ್ಕೆ ಸುವರ್ಣ ಮಹೋತ್ಸವದ ಈ ಸುಸಂದರ್ಭದಲ್ಲಿನಮಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ.
ಬಾಕ್ಸ್ :
‘ಶುಭಮಂಗಳ’ ಚಿತ್ರದ ಹಾಡುಗಳನ್ನು ಹೊರತುಪಡಿಸಿ ಈ ಚಿತ್ರವನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ. ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಸಂಯೋಜಿಸಿದ ಪ್ರತಿಯೊಂದು ಹಾಡೂ ಸೂಪರ್ ಹಿಟ್ .
* ‘ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು...’ (ಸಾಹಿತ್ಯ: ಎಂ. ಎನ್ . ವ್ಯಾಸರಾವ್ )