ರಾಜ್ಯದಲ್ಲಿಸದ್ಯ ನಡೆದಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್ ) ಪ್ರಕ್ರಿಯೆಯಲ್ಲಿ2002ರ ಮತದಾರರ ಪಟ್ಟಿಯಲ್ಲಿವಿವರ ಇಲ್ಲದಿದ್ದರೂ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಎನ್ಯೂಮರೇಷನ್ ಅರ್ಜಿಯನ್ನು ಬಿಎಲ್ ಒಗಳಿಗೆ ಸಲ್ಲಿಸಬಹುದಾಗಿದೆ.
ರಾಜ್ಯ ಚುನಾವಣಾ ಆಯೋಗದಲ್ಲಿಬುಧವಾರ ಪತ್ರಿಕಾಗೋಷ್ಠಿಯಲ್ಲಿಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ,‘‘ರಾಜ್ಯದ 5.54 ಕೋಟಿ ಮತದಾರರ ಪೈಕಿ ಶೇ.91.61ರಷ್ಟು ಮಂದಿಯ ವಿವರಗಳನ್ನು, 2002ರ ಮತದಾರರ ಪಟ್ಟಿಯಲ್ಲಿನ ವಿವರಗಳಿಗೆ ಮ್ಯಾಪಿಂಗ್ ಮಾಡಲಾಗಿದೆ. ಒಂದೊಮ್ಮೆ ಮ್ಯಾಪಿಂಗ್ ಆಗದೇ ಇದ್ದವರು, ಎನ್ಯೂಮರೇಷನ್ ಅರ್ಜಿಯ ಕೊನೆಯ ಕಾಲಂನಲ್ಲಿತಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು. ಅಂತಹವರ ಹೆಸರು ಮುಂದಿನ ಆಗಸ್ಟ್ 8ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಲ್ಲಿಉಳಿದುಕೊಳ್ಳಲಿದೆ,’’ ಎಂದು ಹೇಳಿದರು.
‘‘ಈವರೆಗೆ 17.19 ಲಕ್ಷ ಮತದಾರರು 2002ರ ವಿವರಗಳನ್ನು ಭರ್ತಿ ಮಾಡದೆಯೇ ಅರ್ಜಿಗಳನ್ನು ಹಿಂದಿರುಗಿಸಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿಅವರ ಹೆಸರು ಉಳಿದುಕೊಳ್ಳಲಿದೆ. ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಮತದಾರರ ನೋಂದಣಾಧಿಕಾರಿಯು (ಇಆರ್ ಒ) ಆ ಮತದಾರರಿಗೆ ನೋಟಿಸ್ ನೀಡುತ್ತಾರೆ. ಅಂತಹ ಮತದಾರರು ಅಗತ್ಯ ದಾಖಲೆ ಪತ್ರಗಳೊಂದಿಗೆ ನೋಟಿಸ್ ಗೆ ಉತ್ತರ ನೀಡಬೇಕಾಗುತ್ತದೆ,’’ ಎಂದು ವಿವರಿಸಿದರು.
‘‘ಎನ್ಯೂಮರೇಷನ್ ಅರ್ಜಿ ವಿತರಣೆ ಮತ್ತು ಸಂಗ್ರಹದ ಹಂತದಲ್ಲಿಮತದಾರರು ಯಾವುದೇ ದಾಖಲೆ ಸಲ್ಲಿಸುವ ಅಗತ್ಯವಿಲ್ಲ. ನೋಟಿಸ್ ಬಂದರಷ್ಟೇ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. 2002ರ ಮತದಾರರ ವಿವರ ಭರ್ತಿ ಮಾಡದೆ, ಅರ್ಜಿಗಳನ್ನು ಸಲ್ಲಿಸಿರುವವರು ಅಗತ್ಯ ದಾಖಲೆ ಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಬಹುದು,’’ ಎಂದು ಹೇಳಿದರು.
ಇಆರ್ ಒ ವಿವೇಚನೆಯಂತೆ ನಿರ್ಧಾರ
‘‘2002ರ ಮತದಾರರ ಪಟ್ಟಿಯ ವಿವರಗಳನ್ನು ಭರ್ತಿ ಮಾಡದೆ ಎನ್ಯೂಮರೇಷನ್ ಅರ್ಜಿ ಸಲ್ಲಿಸಿದವರು ದಾಖಲೆ ಪತ್ರಗಳೊಂದಿಗೆ ಉತ್ತರ ನೀಡಿದರೆ, ಅವರನ್ನು ಅಂತಿಮ ಮತದಾರರ ಪಟ್ಟಿಯಲ್ಲಿಉಳಿಸುವ ಅಥವಾ ಹೊರಗಿಡುವ ಅಧಿಕಾರ ಇಆರ್ ಒಗಳಿಗೆ ಇದೆ. ದಾಖಲೆ ಪರಿಶೀಲನೆ ಬಳಿಕ ಇಆರ್ ಒಗಳು ತಮ್ಮ ವಿವೇಚನಾಧಿಕಾರ ಬಳಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ,’’ ಎಂದು ವಿವರಿಸಿದರು.
‘‘ಇಆರ್ ಒಗಳು ತಮ್ಮ ವಿವೇಚನಾಧಿಕಾರವನ್ನು ಎಸ್ ಐಆರ್ ನಿಯಮದ ಚೌಕಟ್ಟಿನಲ್ಲಿಯೇ ಕೈಗೊಳ್ಳಬೇಕು. ಆ ಚೌಕಟ್ಟನ್ನು ಮೀರಿ ನಿರ್ಧಾರ ತೆಗೆದುಕೊಳ್ಳಬಾರದು. ಇಂತಹ ಪ್ರಕರಣಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಇಆರ್ ಒಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಮತ್ತೊಮ್ಮೆ ತರಬೇತಿ ನೀಡಲಾಗುವುದು. ಯಾವುದೇ ಮತದಾರರ ಅರ್ಜಿ ಡಿಜಿಟಲೀಕರಣದಲ್ಲಿಲೋಪ ಆಗಬಾರದು ಎಂಬ ಕಾರಣಕ್ಕೆ ಎಚ್ಚರಿಕೆ ವಹಿಸಲಾಗುತ್ತಿದೆ,’’ ಎಂದು ಮಾಹಿತಿ ನೀಡಿದರು.
ರಾಜ್ಯ ಸರಕಾರವು ನೀಡಲು ಮುಂದಾಗಿರುವ ‘ಶಾಶ್ವತ ನಿವಾಸ ಪ್ರಮಾಣಪತ್ರ’ವನ್ನು (ಪಿಆರ್ ಸಿ) ಎಸ್ ಐಆರ್ ನಡಿ ಪರಿಗಣಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅನ್ಬುಕುಮಾರ್ , ‘‘12 ದಾಖಲೆ ಪತ್ರಗಳನ್ನು ಎಸ್ ಐಆರ್ ನಡಿ ಪರಿಗಣಿಸಲಾಗುತ್ತದೆ ಎಂದು ಚುನಾವಣಾ ಆಯೋಗವು ಈಗಾಗಲೇ ಸ್ಪಷ್ಟಪಡಿಸಿದೆ. ಮತದಾರರಿಗೆ ವಿತರಿಸಲಾಗಿರುವ ಎನ್ಯುಮರೇಷನ್ ಅರ್ಜಿಯ ಹಿಂಭಾಗದಲ್ಲಿಈ ದಾಖಲೆ ಪತ್ರಗಳ ಪಟ್ಟಿ ಇದ್ದು, ಗಮನಿಸಬಹುದಾಗಿದೆ,’’ ಎಂದಷ್ಟೇ ಹೇಳಿದರು.
----------------------
ಎಎಸ್ ಡಿಡಿಒ ಅಡಿ 47.02 ಲಕ್ಷ ಮತದಾರರು
‘‘ರಾಜ್ಯದಲ್ಲಿಈವರೆಗೆ ಎಸ್ ಐಆರ್ ಪ್ರಕ್ರಿಯೆಯಡಿ 47.02 ಲಕ್ಷ ಮತದಾರರನ್ನು ಪತ್ತೆಯಾಗದವರು (ಆ್ಯಬ್ಸೆಂಟ್ ), ಶಾಶ್ವತವಾಗಿ ಸ್ಥಳಾಂತರಗೊಂಡವರು (ಶಿಫ್ಟೆಡ್ ), ಮೃತಪಟ್ಟವರು (ಡೈಡ್ ), ಒಂದಕ್ಕಿಂತ ಹೆಚ್ಚು ಕಡೆ ನೋಂದಣಿ ಮಾಡಿಸಿರುವವರು (ಡೂಪ್ಲಿಕೇಟ್ ) ಮತ್ತು ಇತರೆ ಎಂಬುದಾಗಿ ವರ್ಗೀಕರಿಸಿ ಗುರುತಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿಈ ಮತದಾರರ ಹೆಸರನ್ನು ಇರುವುದಿಲ್ಲ,’’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಹೇಳಿದರು.
‘‘ಒಂದೊಮ್ಮೆ ಅರ್ಹ ಮತದಾರರ ಹೆಸರೂ ಈ ರೀತಿ ಬಿಟ್ಟುಹೋಗಿದ್ದರೆ, ಕ್ಲೇಮು ಮತ್ತು ಆಕ್ಷೇಪಣೆ ಸಲ್ಲಿಕೆ ಹಂತದಲ್ಲಿಅವರು ಆಕ್ಷೇಪಣೆಗಳನ್ನು ದಾಖಲಿಸಬಹುದು. ಇಲ್ಲವೇ ಅರ್ಜಿ ನಮೂನೆ-6 ಸಲ್ಲಿಸಿ, ಮತದಾರರ ಪಟ್ಟಿಗೆ ಸೇರಬಹುದು,’’ ಎಂದು ತಿಳಿಸಿದರು.
‘‘ಮರಣ ಪ್ರಮಾಣ ಪತ್ರ ಇಲ್ಲವೇ ಸ್ಥಳ ಮಹಜರು ನಡೆಸಿದ ಬಳಿಕವಷ್ಟೇ ಮೃತಪಟ್ಟ ಮತದಾರರ ವಿವರ ದೃಡೀಕರಿಸಿಕೊಳ್ಳಲು ಸೂಚಿಸಲಾಗಿದೆ. ಹಾಗಾಗಿ ಗೊಂದಲಕ್ಕೆ ಅವಕಾಶವಿಲ್ಲ,’’ ಎಂದು ಸ್ಪಷ್ಟಪಡಿಸಿದರು.
-----
ಶೇ.99.96ರಷ್ಟು ಅರ್ಜಿ ವಿತರಣೆ
ರಾಜ್ಯದಲ್ಲಿಸದ್ಯ ನಡೆದಿರುವ ಎಸ್ ಐಆರ್ ಪ್ರಕ್ರಿಯೆಯಡಿ ಎನ್ಯುಮರೇಷನ್ ಅರ್ಜಿ ವಿತರಣೆಯು ಸದ್ಯದಲ್ಲೇ ಶೇ.100ರಷ್ಟು ಗುರಿ ಸಾಧಿಸುವ ಹಂತದಲ್ಲಿದೆ. ಈವರೆಗೆ 5.54 ಕೋಟಿ ಎನ್ಯುಮರೇಷನ್ ಅರ್ಜಿಗಳನ್ನು ವಿತರಿಸಲಾಗಿದ್ದು, ಶೇ.99.96ರಷ್ಟು ಗುರಿ ಸಾಧನೆಯಾಗಿದೆ.