ಮುತ್ತತ್ತಿಯಲ್ಲಿಪಾರ್ಕಿಂಗ್ ಶುಲ್ಕ: ವಿವರಣೆ ಕೇಳಿದ ಹೈಕೋರ್ಟ್

Contributed bysrikanth.g@timesgroup.com|Vijaya Karnataka
Vijay Karnataka
ವಿಕ ಸುದ್ದಿಲೋಕ ಬೆಂಗಳೂರು

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಪ್ರಸಿದ್ಧ ಮುತ್ತತ್ತಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಂದ ವಾಹನ ನಿಲುಗಡೆ ಶುಲ್ಕ ವಸೂಲಿ ಮಾಡುತ್ತಿರುವ ‘ಪರಿಸರ ಅಭಿವೃದ್ಧಿ ಸಮಿತಿ’ ಕ್ರಮದ ಕುರಿತು ವಿವರಣೆ ನೀಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಅಲ್ಲದೆ, ಪರಿಸರ ಸೂಕ್ಷ್ಮ ವಲಯದಲ್ಲಿದೆ ಎಂಬ ಏಕೈಕ ಕಾರಣವೊಂದೇ ದೇವಸ್ಥಾನವನ್ನು ಇಕೋ-ಪ್ರವಾಸೋದ್ಯಮ ಯೋಜನೆಯೆಂದು ಪರಿಗಣಿಸಲು ಸಾಧ್ಯವಿಲ್ಲಎಂದು ಸ್ಪಷ್ಟಪಡಿಸಿದೆ.

ಪಾರ್ಕಿಂಗ್ ಶುಲ್ಕ ಸಂಗ್ರಹ ರದ್ದು ಕೋರಿ ಡಿ.ನಾಗರಾಜು ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್ . ಹೇಮಲೇಖಾ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ‘‘ಸಂಬಂಧಪಟ್ಟ ಪ್ರತಿವಾದಿಗಳು ಪಾರ್ಕಿಂಗ್ ಪ್ರದೇಶದ ಫೋಟೊಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಹಾಗೂ ಪಾರ್ಕಿಂಗ್ ಸೌಲಭ್ಯವನ್ನು ವಾಸ್ತವವಾಗಿ ಯಾರು ನಿರ್ವಹಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅಲ್ಲದೆ, ಪಾರ್ಕಿಂಗ್ ಸ್ಥಳವು ದೇವಸ್ಥಾನದ ಆವರಣದೊಳಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಪ್ರಮಾಣಪತ್ರ ಸಲ್ಲಿಸಲು ಸೂಚನೆ ನೀಡಬೇಕು,’’ ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಸೆ.3ಕ್ಕೆ ಮುಂದೂಡಿದೆ.

‘‘ಇಕೋ-ಪ್ರವಾಸೋದ್ಯಮ ತಾಣ ಎಂದರೇನು? ಅದಕ್ಕೊಂದು ನೀತಿ ಇರುತ್ತದೆ. ದೇವಸ್ಥಾನವೊಂದೇ ಇಕೋ-ಟೂರಿಸಂ ಪ್ರಾಜೆಕ್ಟ್ ಅಲ್ಲ. ನೀವು ಅಲ್ಲಿಗೆ ಹೋಗಿ ಕ್ಯಾಂಟೀನ್ ಅಥವಾ ಕೆಫೆಟೇರಿಯಾ ನಡೆಸಿದರೆ ಅದನ್ನು ಇಕೋ-ಟೂರಿಸಂ ಎನ್ನಬಹುದು. ಶುಲ್ಕ ಪಡೆಯಬಹುದು. ಆದರೆ, ದೇವಸ್ಥಾನವಿರುವುದು ಕೇವಲ ಪರಿಸರ ಸೂಕ್ಷ್ಮ ವಲಯದಲ್ಲಿಅಷ್ಟೇ,’’ ಎಂದು ನ್ಯಾಯಪೀಠ ತಿಳಿಸಿದೆ.

‘‘ಸಂಗ್ರಹಿಸಲಾದ ಹಣವನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದು ಇಲ್ಲಿಮುಖ್ಯವಲ್ಲ. ಆ ಶುಲ್ಕ ವಸೂಲು ಮಾಡಲು ನಿಮಗೆ ಅಧಿಕಾರ ನೀಡಿದ ಮೂಲ ಯಾವುದು? ಪಾರ್ಕಿಂಗ್ ಶುಲ್ಕವೆಂದರೆ ತೆರಿಗೆಯಲ್ಲ, ನೀವು ನಿಜಕ್ಕೂ ಪಾರ್ಕಿಂಗ್ ಸೇವೆ ಒದಗಿಸುತ್ತಿದ್ದೀರಾ ಎಂಬುದನ್ನು ನಾವು ಪರಿಗಣಿಸಬೇಕಿದೆ,’’ ಎಂದು ನ್ಯಾಯಪೀಠ ಹೇಳಿದೆ.

................

ಅರ್ಜಿದಾರರ ಪರ ವಕೀಲರು, ‘‘ದೇವಸ್ಥಾನದ ಸುತ್ತಮುತ್ತಲಿನ ವಾಹನ ನಿಲುಗಡೆ ಜಾಗವನ್ನು ಅರಣ್ಯ ಇಲಾಖೆ ನಿರ್ವಹಿಸುತ್ತಿಲ್ಲ. ಬದಲಿಗೆ ಸ್ಥಳೀಯ ಆಡಳಿತ ಹಾಗೂ ತಹಸೀಲ್ದಾರ್ ವಲಯದ ವ್ಯಾಪ್ತಿಗೆ ಬರುತ್ತದೆ. ವಾಹನಗಳನ್ನು ದೇವಸ್ಥಾನದ ಆವರಣದ ಒಳಗೇ ನಿಲ್ಲಿಸಲಾಗುತ್ತದೆ. ಆದರೂ, ಅರಣ್ಯ ಇಲಾಖೆ ಅಧಿಕಾರಿಗಳು ಪರಿಸರ ಅಭಿವೃದ್ಧಿ ಸಮಿತಿ ಮೂಲಕ ನಿಲುಗಡೆ ಶುಲ್ಕ ಸಂಗ್ರಹ ಮಾಡುತ್ತಿದ್ದು, ಅದನ್ನು ರದ್ದುಪಡಿಸಬೇಕು,’’ ಎಂದು ಕೋರಿದರು.

ಅದಕ್ಕೆ ಆಕ್ಷೇಪಿಸಿದ ಸರಕಾರಿ ವಕೀಲರು, ‘‘ಈ ಸುತ್ತೋಲೆಯನ್ವಯ, ವಲಯ ಅರಣ್ಯ ಅಧಿಕಾರಿಗೆ ಮುತ್ತತ್ತಿ ದೇವಸ್ಥಾನದ ಬಳಿ ವಾಹನ ನಿಲುಗಡೆ ಶುಲ್ಕ ಸಂಗ್ರಹಿಸಲು ನಿರ್ದೇಶನ ನೀಡಲಾಗಿತ್ತು. ಅರಣ್ಯ ಇಲಾಖೆಯ ಇಕೋ-ಅಭಿವೃದ್ಧಿ ಸಮಿತಿಯ ಸಿಬ್ಬಂದಿಯೇ ಈ ಶುಲ್ಕವನ್ನು ವಸೂಲಿ ಮಾಡುತ್ತಿದ್ದು, ಸಂಗ್ರಹವಾದ ಹಣವನ್ನು ಪಾರ್ಕಿಂಗ್ ನಿರ್ವಹಣಾ ವೆಚ್ಚಕ್ಕೆ ಬಳಸಲಾಗುತ್ತಿದೆ,’’ ಎಂದು ಪೀಠಕ್ಕೆ ವಿವರಿಸಿದರು.

ಕಾವೇರಿ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು 2019ರ ಜ.17ರಂದು ಅಧಿಸೂಚನೆ ಹೊರಡಿಸಿ ಪಾರ್ಕಿಂಗ್ ಶುಲ್ಕ ವಸೂಲಿಗೆ ಆದೇಶಿಸಿದ್ದರು. ಅದನ್ನು ರದ್ದುಗೊಳಿಸುವಂತೆ ಅರ್ಜಿದಾರರು ಹೈಕೋರ್ಟ್ ನ ಮೊರೆ ಹೋಗಿದ್ದಾರೆ.